ಪರಿಶಿಷ್ಟರಿಗೆ ಮೀಸಲಿಟ್ಟ ಹಣಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದರೆ ಸುಮ್ಮನಿರಲ್ಲ: ಡಾ.ಚಿ.ನಾ.ರಾಮು

ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ

ಬೆಂಗಳೂರು ಗ್ರಾ ಜಿಲ್ಲೆ ಆಗಸ್ಟ್ 03

ದಲಿತರ ಪರ ಎಂದು ಬಿಂಬಿಸಿಕೊಳ್ಳಲು ಸದಾ ಹಾತೊರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಕೊನೆಗೂ ತಮ್ಮ ನಿಜರೂಪ ತೋರಿಸತೊಡಗಿದ್ದಾರೆ. ಕಾಂಗ್ರೆಸ್ ಎಂದೆಂದಿಗೂ ದಲಿತರನ್ನು ನಂಬಿಸಿ ವಂಚನೆ ಮಾಡುವ ಪಕ್ಷ ಎಂಬುದು ಅಧಿಕಾರಕ್ಕೆ ಬಂದ ಎರಡೂವರೆ ತಿಂಗಳಲ್ಲೇ ಎಲ್ಲರಿಗೂ ಗೊತ್ತಾಗತೊಡಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನವಾದ ಎಸ್ಸಿ ಎಸ್ಪಿ ಮತ್ತು ಟಿಎಸ್ಪಿಗೆ ಸೇರಿದ 11 ಸಾವಿರ ಕೋಟಿ ಹಣವನ್ನು “ಗ್ಯಾರಂಟಿ ಯೋಜನೆ” ಗಳಿಗೆ ಬಳಕೆ ಮಾಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಇದು ಅಕ್ಷ್ಯಮ್ಯ.
11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತೇವೆ ಇದರ ಮೂಲಕ ಪರಿಶಿಷ್ಟರಿಗೆ 5 ಯೋಜನೆಗಳನ್ನು ನೀಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹೇಳತೊಡಗಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ.‌ ಯಾವುದೇ ಕಾರಣಕ್ಕೂ ಪರಿಶಿಷ್ಟ ಸಮಾಜಗಳು ಈ ಟೋಪಿ ಹಾಕುವ ಕೆಲಸ ಸಹಿಸುವುದಿಲ್ಲ.
ನಾವ್ಯಾರೂ ಇವರಿಗೆ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಎಂದು ಹೇಳಿರಲಿಲ್ಲ. ಕಾಂಗ್ರೆಸ್ ಪಕ್ಷದವರು ರಾಜ್ಯದ ಸಮಸ್ತರಿಗೂ 5 ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದು ಹೇಳಿದ್ದರೇ ಹೊರತು ಈ ಯೋಜನೆಗಳಿಗೆ ಪರಿಶಿಷ್ಟರ ವಿಶೇಷ ಯೋಜನೆ ಹಣ ಬಳಸುತ್ತೇವೆ ಎಂದು ಹೇಳಿರಲಿಲ್ಲ. ಒಂದೊಮ್ಮೆ ಹಾಗೆ ಹೇಳಿದ್ದಾರೆ 50 ಸ್ಥಾನಗಳನ್ನೂ ಇವರು ಗೆಲ್ಲುತ್ತಿರಲಿಲ್ಲ. ಆಗ ನಯವಾಗಿ ಮಾತನಾಡಿ ನಂಬಿಸಿ ಘೋಷಣೆಗಳನ್ನು ಮಾಡಿ ಮತ ಪಡೆದು ಈಗ ಪರಿಶಿಷ್ಟರ ಬೆನ್ನಿಗೇ ಇರಿಯುವಂತೆ ವಿಶೇಷ ಘಟಕ ಯೋಜನೆಗಳ ಹಣ ಬಳಸಲು ಹೊರಟಿರುವುದು ವಿದ್ರೋಹ.
ವಿಶೇಷ ಘಟಕ ಯೋಜನೆಗಳ ಹಣ ದಲಿತರ ಏಳಿಗೆಗೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಬಳಕೆಯಾಗಬೇಕೇ ಹೊರತು ಅನ್ಯ ಯೋಜನೆಗೆ ಅಲ್ಲ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೀವು ಸಂಪನ್ಮೂಲ ಕ್ರೋಢಿಕರಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದಿರಿ. ಅದನ್ನು ಮಾಡಿ. ಕಾನೂನುಬಾಹಿರವಾಗಿ ಪರಿಶಿಷ್ಟರ ಹಣಕ್ಕೆ ಕೈಹಾಕಲು ಬರಬೇಡಿ.
ಕಾಯ್ದೆ ಉಲ್ಲಂಘಿಸಿ ಮೋಸದಾಟ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಚ್ಚೆತ್ತುಕೊಳ್ಳಿ.


ಡಾ.ಚಿ.ನಾ.ರಾಮು
ರಾಷ್ಟ್ರೀಯ ಅಧ್ಯಕ್ಷರು
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ