ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ !

ವಿಜಯ ದರ್ಪಣ ನ್ಯೂಸ್

ಹಿರಿಯೂರು 

ರಾಜ್ಯದ ಬಿಜೆಪಿ ನಾಯಕರಿಗೆ ಬೃಹತ್ ಶಾಕ್ ನೀಡಿದ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ .


ಇಂದಿನ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬುದು ಕಾಲ ಕಾಲಕ್ಕೆ ಸಾಬೀತಾಗುತ್ತಾ ಬಂದಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಜಿದ್ದಾಜಿದ್ದಿ ರಾಜಕಾರಣ ನಡೆಸಿದ್ದ, ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಸ್ತಲಾಘವಕ್ಕೆ ಮುಂದಾಗಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ  ಪೂರ್ಣಿಮಾರವರ ತಂದೆ ದಿವಂಗತ ಎ.ಕೃಷ್ಣಪ್ಪನವರು ಜೆಡಿಎಸ್ ನಿಂದ ಸ್ಪರ್ಧಿಸಿ ತನ್ನ ಎದುರಾಳಿ ಹಾಲಿ ಸಚಿವ ಡಿ.ಸುಧಾಕರ್ ಅವರ ವಿರುದ್ಧ ಸೆಣಸಿದ್ದು, ಇದೀಗ ಇತಿಹಾಸ. ಆನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ  ಪೂರ್ಣಿಮಾ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷದ ಡಿ.ಸುಧಾಕರ್ ರನ್ನು ಸೋಲಿಸಿ ಆಯ್ಕೆಯಾಗಿದ್ದರು.

ಬಿಜೆಪಿಯಿಂದ ಗೆಲುವು ಸಾಧಿಸಿ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆ ಪಡೆದಿದ್ದ ಮಹಿಳಾ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಿ.ಎಸ್.ಯಡಿಯೂರಪ್ಪರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಲು ಮಾತುಕತೆ ನಡೆದಿತ್ತಾದರೂ ಹಿರಿಯೂರು ಟಿಕೆಟ್ ಖಾತ್ರಿಯಾಗದ ಕಾರಣ ಬಿ.ಎಸ್.ವೈ ಹಾಗೂ ಬೊಮ್ಮಾಯಿ ಮಾತಿಗೆ ಮನ್ನಣೆ ನೀಡಿ ಕಮಲ ಪಾಳಯದಲ್ಲೇ ಉಳಿದಿದ್ದರು.

ಆದರೆ ಕಳೆದ ಎಪ್ರಿಲ್ ನಲ್ಲಿ ನಡೆದ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಪೂರ್ಣಿಮಾ ಶ್ರೀನಿವಾಸ್ ರವರನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಸುಧಾಕರ್ ರವರು ಹೆಚ್ಚು ಮತಗಳಿಂದ ಸೋಲಿಸಿ, ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಲ್ಲದೆ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವಸ್ಥಾನ ಪಡೆದುಕೊಂಡರು.

ಆದರೆ ಬೆಂಗಳೂರಿನಲ್ಲಿರುವ ಪೂರ್ಣಿಮಾ ನಿವಾಸದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಕಾರ್ಯದಲ್ಲಿ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಾಗಲೇ ಪೂರ್ಣಿಮಾರವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿ ರಾಜ್ಯದಲ್ಲಿ ಹರಿದಾಡಿತ್ತು. ಆದರೆ ಬಿಜೆಪಿ ತೊರೆಯುವ ಕಾಂಗ್ರೆಸ್ ಸೇರುವ ಕುರಿತು ಕಳೆದ ಆರು ತಿಂಗಳ ತಾಕಲಾಟದಲ್ಲಿದ್ದ ಪೂರ್ಣಿಮಾಶ್ರೀನಿವಾಸ್ ಕುಟುಂಬದ ಅಪೇಕ್ಷೆ, ಹಿತೈಷಿಗಳ ಒತ್ತಾಸೆಗೆ ಮನ್ನಣೆ ನೀಡಿ, ಕೊನೆಗೂ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. 

ಪೂರ್ಣಿಮಾಶ್ರೀನಿವಾಸ್ ರವರ ಪತಿ ಡಿ.ಟಿ.ಶ್ರೀನಿವಾಸ್ ಅವರ ರಾಜಕೀಯ ಭವಿಷ್ಯ ಹಾಗೂ ಕಾಂಗ್ರೆಸ್ ಆಫರ್ ಜೊತೆಗೆ ಬಿಜೆಪಿಯಲ್ಲಿ ನಡೆದಿದ್ದ ಒಂದಷ್ಟು ಘಟನೆಗಳು ಪಕ್ಷ ನಿಷ್ಠರಾಗಿದ್ದ ಪೂರ್ಣಿಮಾಗೆ ಸರಿ ಬರಲಿಲ್ಲ ಎನ್ನಲಾಗಿದ್ದು, ಪಕ್ಷದಲ್ಲಿ ತಮ್ಮ ಅಭಿಪ್ರಾಯಗಳಿಗೆ ಬೆಲೆ ನೀಡಲಿಲ್ಲ ಎಂಬ ಅಸಮಾಧಾನ, ಪರಿಷತ್ ಚುನಾವಣೆಯಲ್ಲಿ ಪತಿಗೆ ಅವಕಾಶ ನೀಡದ ಬೇಸರ, ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಸಿಕ್ಕೇ ಬಿಟ್ಟಿತೆ ಎಂಬ ಹಂತದಲ್ಲಿ ಕೈ ತಪ್ಪಿದ ನಿರಾಸೆ, ಈ ಎಲ್ಲಾ ಕಾರಣಗಳಿಂದ ಪೂರ್ಣಿಮಾ ಬಿಜೆಪಿಗೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನಲಾಗಿದೆ.