ಡೆಂಗಿ ಜ್ವರ, ಚಿಕನ್ ಗುನ್ಯ ಬಗ್ಗೆ ಭಯಬೇಡ: ಡಾ.ಸುನೀಲ್ ಕುಮಾರ್

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 22 :- ಸೋಂಕಿತ ಈಡೀಸ್ ಸೊಳ್ಳೆಯು ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರವಾದ ಹೊಟ್ಟೆನೋವು, ಮೈ-ಕೈ-ನೋವು, ವಾಕರಿಕೆ, ವಾಂತಿ ಇವುಗಳ ಜೊತೆ ತೀವ್ರವಾದ ಹೊಟ್ಟೆನೋವು, ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಗಂಧೆಗಳು, ವಿಪರೀತ ಬಾಯಾರಿಕೆ, ಜ್ಞಾನ ತಪ್ಪುವುದು ಇನ್ನಿತರ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಯಾವುದೇ ಜ್ವರ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುನಿಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೆಂಗಿ ಜ್ವರವು ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿ ನೀರನ್ನು ಸಂಗ್ರಹಣೆ ಮಾಡುವ ತೊಟ್ಟಿಗಳು, ಡ್ರಂಗಳು, ಬ್ಯಾರಲ್‌ಗಳು, ಏರ್‌ಕೂಲರ್‌ಗಳು, ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಣೆಯಾಗುವ ನೀರನ್ನು ಕನಿಷ್ಠ ವಾರಕೊಮ್ಮೆ ಖಾಲಿ ಮಾಡಿ, ಉಜ್ಜಿ, ತೊಳೆದು, ಒಣಗಿಸಿ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು.

ಮನೆಯ ಸುತ್ತ ಮುತ್ತಲ ಪರಿಸರದಲ್ಲಿರುವ ಒಡೆದ ಬಾಟಲಿ, ಟಿನ್‌ಗಳು, ಟೈರ್‌ಗಳು, ತೆಂಗಿನಚಿಪ್ಪು, ಇನ್ನಿತರೆ ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಘನ ತ್ಯಾಜ್ಯ ವಸ್ತುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು ಒಳ್ಳೆಯದು.
ಹಗಲು ಹೊತ್ತಿನಲ್ಲಿ ನಿದ್ರಿಸುವ/ವಿಶ್ರಾಂತಿ ಪಡೆಯುವ ಗರ್ಭಿಣಿ ತಾಯಂದಿರು, ಮಕ್ಕಳು, ವಯಸ್ಸಾದವರು ತಪ್ಪದೇ ಸೊಳ್ಳೆಪರದೆಯನ್ನು ಬಳಸಬೇಕು ಅಲ್ಲದೇ ಡೆಂಗಿ ಜ್ವರ ಪೀಡಿತರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.

ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ವಿಶ್ರಾಂತಿಯನ್ನು ಪಡೆಯಬೇಕು.
ಯಾವುದೇ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಪಾಲಿಸದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಿರಿ. ಡೆಂಗಿ ಜ್ವರ ಲಕ್ಷಣವಿದ್ದಲ್ಲಿ ನೋವು ನಿವಾರಕಗಳು ಅಥವಾ ಬ್ರೂಫಿನ್ ನಂತಹ ಔಷಧಿಗಳನ್ನು ಸೇವಿಸಬಾರದು ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ.

ಈಡೀಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣಗಳ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ, ಸ್ವಯಂ ಸೇವಕರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

 

ಸೆಪ್ಟೆಂಬರ್ 30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ  ಸೆಪ್ಟೆಂಬರ್ 22: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ, ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳ ಕೆಲಸದ ಅವಧಿಯನ್ನು ಸೆಪ್ಟೆಂಬರ್ 23 ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲು ಕಛೇರಿ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ.

ಸೆಪ್ಟೆಂಬರ್ 23 ನಾಲ್ಕನೇ ಶನಿವಾರವದಂದೂ ಕೂಡ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು. ಈ ಕೆಲಸದ ಅವಧಿಯು ಸೆಪ್ಟೆಂಬರ್ 30 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಬಿ.ಆರ್.ಮಮತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

@@@@@@@@@@@@@@@@@@@@

ಜಿ ಪಂ ಸಿಇಓ ರವರಿಂದ ಕಾಮಗಾರಿ ಪರಿವೀಕ್ಷಣೆ

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾ ಪಂಚಾಯತ್ ಭವನದ‌ ನಿರ್ಮಾಣ ಹಂತದ ಕಾಮಗಾರಿಯ ಪ್ರಗತಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ ರವರು ಪರಿವೀಕ್ಷಣೆ ಮಾಡಿದರು.ಈ ವೇಳೆ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಮತ್ತು ಸಹಾಯಕ ಇಂಜಿನಿಯರ್‌ ಕೃಷ್ಣ ಕುಮಾರ್ ಜೊತೆ ಕಟ್ಟಡದ ನೀಲಿನಕ್ಷೆ ಬಗ್ಗೆ ಚರ್ಚಿಸಿದರು.