ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ

ವಿಜಯ ದರ್ಪಣ ನ್ಯೂಸ್

ಮೈಸೂರು; ನಾಡನ್ನು ಆವರಿಸಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ, ನಗರದ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಉದ್ಘಾಟನೆಗೊಂಡ ಸಂಭ್ರಮದ ದಸರಾ ಉತ್ಸವಕ್ಕೆ, ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಯ ಆಶಯ ಮುನ್ನುಡಿ ಬರೆಯಿತು.

‘ಬರಗಾಲ ಕಳೆದು ಹಿಂಗಾರು ಮಳೆ ಚೆನ್ನಾಗಿ ಆಗಲಿ, ರೈತರಿಗೆ ಉತ್ತಮ ಬೆಳೆ‌ ಸಿಕ್ಕಲಿ’ ಎಂಬ ಪ್ರಾರ್ಥನೆಯೂ ಮೂಡಿಬಂತು. ಹತ್ತು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೀಗೆ ಶುಭಾರಂಭವೂ ದೊರಕಿತು.

ಉತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ, ‘ಕನ್ನಡ, ಕರ್ನಾಟಕದ ಅಭಿವೃದ್ಧಿಗೆ ದಸರಾ ಮುನ್ನುಡಿ ಬರೆಯಲಿ. ಕನ್ನಡ ಶೃತಿಯಾಗಲಿ, ಅಭಿವೃದ್ಧಿ ಕೃತಿಯಾಗಲಿ’ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸಿದ ಚಾಮುಂಡೇಶ್ವರಿ ಪುತ್ಥಳಿಗೆ ಗಣ್ಯರೊಂದಿಗೆ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ನೆರೆದ ಸಭಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

‘ಕರ್ನಾಟಕವೆಂದು ಹೆಸರಾಗಿ ಐದಶ (ಐದು ದಶಕ), ನನ್ನ ಕಲಾ ಕಾಯಕಕ್ಕೂ ಐದಶ. ಸಾಮಾನ್ಯ ವ್ಯಕ್ತಿಯಾಗಿ ನಾನು ಕನ್ನಡ ದೀಪವನ್ನು ಹಚ್ಚಿದ್ದರೂ, ನನ್ನ ಕೈಯಲ್ಲಿದ್ದ ಚೈತನ್ಯ ಈ ನಾಡಿನದ್ದು, ಎಲ್ಲ ಹಿರಿಯರದ್ದು’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕನ್ನಡ ದೀಪ, ಶೃತಿ, ಅಭಿವೃದ್ಧಿ, ಶಾಂತಿ, ಸಮೃದ್ಧಿ..

’ಕನ್ನಡ ದೀಪ, ಶೃತಿ, ಅಭಿವೃದ್ಧಿ, ಶಾಂತಿ, ಸಮೃದ್ಧಿ- ಇದು ಇವತ್ತಿನ ಉದ್ಘಾಟನೆಯ ಮುನ್ನುಡಿ. ಕನ್ನಡ ಶೃತಿಯಾಗಬೇಕು.‌ಅಭಿವೃದ್ಧಿ ಕೃತಿಯಾಗಬೇಕು. ನಮ್ಮ ಕಾವೇರಿಗೆ ನಿಧಿ ಇದೆ. ಕಾರುಣ್ಯಕ್ಕೆ ಎಲ್ಲಿ ನಿಧಿ ಇದೆ? ಕನ್ನಡಕ್ಕೆ ಮಿತಿ ಇದೆ.‌ ಅದರ ಭಾವಕ್ಕೆ ಎಲ್ಲಿ ಮಿತಿ ಇದೆ? ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗ ಮಾತ್ರ ನಮ್ಮ ರಾಷ್ಟ್ರ ಮತ್ತು ಕನ್ನಡ ಒಟ್ಟಿಗೇ ಮೆರೆಯಲು ಸಾಧ್ಯ’ ಎಂದು ಹಂಸಲೇಖ ಪ್ರತಿಪಾದಿಸಿದರು.

ದಸರಾ ಉತ್ಸವವನ್ನು ಉದ್ಘಾಟಿಸಿದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಶಾಸಕರಾದ ದರ್ಶನ್‌ ಧ್ರುವನಾರಾಯಣ, ಜಿ.ಡಿ.ಹರೀಶ್‌ಗೌಡ, ಅನಿಲ್ ಚಿಕ್ಕಮಾದು, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಶಿವರಾಜ ತಂಗಡಗಿ, ಮೇಯರ್‌ ಶಿವಕುಮಾರ್‌ ಮತ್ತು ಶಾಸಕ ತನ್ವೀರ್‌ ಸೇಠ್‌ ಇದ್ದಾರೆ.

‘ಶಾಂತಿ ಮಂತ್ರ, ಕನ್ನಡದ ಅಭಿವೃದ್ಧಿ, ಶಾಂತಿ ಸಮೃದ್ಧಿಯೇ ಕನ್ನಡಿಗರಿಗೆ ಒಂದಂಶದ ಕಾರ್ಯಕ್ರಮವಾಗಬೇಕು. ಕರ್ನಾಟಕದಲ್ಲಿ ವಾಸವಿದ್ದು ಕನ್ನಡ ಬಾರದವರ ಕುರಿತ ಸಮೀಕ್ಷೆ ನಡೆಯಬೇಕು.ಅವರಿಗೆ ಕನ್ನಡ ಕಲಿಸಿ ಕನ್ನಡದ ಪಟ್ಟ ಕೊಡಬೇಕು. ಆ ಪಟ್ಟ ತೋರಿಸಿದರೆ, ಬಿಪಿಎಲ್‌, ಎಪಿಎಲ್‌ ಕಾರ್ಡ್‌ ಇಲ್ಲದಿದ್ದರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತಿರಬೇಕು’ ಎಂದು ಪ್ರತಿಪಾದಿಸಿದರು.

’ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕುರಿತು ಕಾರ್ಪೊರೆಟ್‌ ಕನ್ನಡಿಗರ ತಂಡ ಇಂಥ ಸಲಹೆ ನೀಡಿದೆ. 30 ದಿನದಲ್ಲಿ ಕನ್ನಡ ಕಲಿಸಬೇಕು. ಸರ್ವ ಸಾರ್ವಜನಿಕರು ಇದಕ್ಕೆ ಒತ್ತಾಸೆಯಾಗಬೇಕು’ ಎಂದರು.

‘ಪ್ರತಿಭೆ, ಉದ್ಯಮ ಮತ್ತು ಅಗತ್ಯಗಳನ್ನು ಆಧರಿಸಿ ಜಿಲ್ಲೆಗಳನ್ನು ಜೋಡಿಸಬೇಕು. ಹುಬ್ಬಳ್ಳಿ- ಬೆಳಗಾವಿ, ಮೈಸೂರು–ಮಂಗಳೂರು ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಜೋಡಿಸಿ ಪ್ರತಿಭೆ–ವ್ಯವಹಾರವನ್ನು ಒಂದುಗೂಡಿಸಬೇಕು. ಕನ್ನಡದ ಭಾಷಿಕ ಅಗತ್ಯಗಳನ್ನು ಪೂರೈಸಬೇಕು’ ಎಂದರು.

‘ಕೃಷಿಕ- ಕಾರ್ಪೊರೇಟ್ ಕನ್ನಡಿಗರ ಜೋಡಿಯಾಗಬೇಕು. ಇಬ್ಬರಿಗೂ ಪರಸ್ಪರರ ಸ್ಥಿತಿ–ಗತಿಯ ಕುರಿತು ಅರಿವಾಗಬೇಕು. ಜೋಡಿ ಕಲ್ಯಾಣವಾಗಬೇಕು. ಕನ್ನಡ ಸಂಘಟನೆಗಳು, ಕನ್ನಡಾಭಿಮಾನಿಗಳು ಕನ್ನಡದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಇದನ್ನು ನಾವೇ ಮುಂದಿನ ದಿನದಿಂದ ಆರಂಭಿಸುತ್ತೇವೆ’ ಎಂದರು.

‘ಪ್ರತಿ ತಾಯಿಯೂ ಮಕ್ಕಳಿಗೆ ಕನ್ನಡ ಪದ, ಜನಪದ, ಸಿನಿಮಾಪದ ಕಲಿಸಬೇಕು.‌ ಕನ್ನಡ ಸಮಾಜದಲ್ಲಿ ತಲೆ ಎತ್ತಿ ಬದುಕಲು ಅದೇ ನೈತಿಕ ಅರ್ಹತೆಯಾಗಬೇಕು. ಕನ್ನಡವನ್ನು ಶಾಂತಿ ಸಮೃದ್ಧಿಯಾಗಿ ಬೆಳೆಸಬೇಕು. ಮನುಜಮತ ವಿಶ್ವ ಪಥ ಮಾತಿನ ಮೂಲಕ ಕುವೆಂಪು ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಏರಿಸಿದ್ದಾರೆ’ ಎಂದರು.

’ಈ ಬಾರಿ ರಾಜ್ಯವನ್ನು ಹಸಿರು ಬರ ಆವರಿಸಿದೆ. 42 ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು ₹ 30 ಸಾವಿರ ಕೋಟಿಯಷ್ಟು ಬೆಳೆ ಹಾನಿಯಾಗಿದೆ. ಬರ ವೀಕ್ಷಿಸಿರುವ ಕೇಂದ್ರದಿಂದ ₹ 4,500 ಕೋಟಿ ನೆರವು ದೊರಕುವ ನಿರೀಕ್ಷೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕೇಂದ್ರವೊಂದೇ ಎಲ್ಲ ಪರಿಹಾರವನ್ನು ನೀಡಲು ಆಗುವುದಿಲ್ಲ. ನೀರು, ಉದ್ಯೋಗ, ಮೇವನ್ನು ರಾಜ್ಯ ಸರ್ಕಾರ ಪೂರೈಸುತ್ತದೆ’ ಎಂದರು.

‘ಬರಗಾಲವಿದ್ದರೂ ಈ ಬಾರಿ ದಸರ ನಿಲ್ಲಿಸಬಾರದು. ಆದರೆ ಸಾಂಪ್ರದಾಯಿಕವಾಗಿ‌‌‌‌ ಮಾಡಲೇಬೇಕು. ಮಹತ್ವವೂ ಕಡಿಮೆಯಾಗಬಾರದು ಎಂಬ ಆಶಯದಲ್ಲಿ ಉತ್ಸವವನ್ನು ಸರ್ಕಾರ ಹಮ್ಮಿಕೊಂಡಿದೆ’ ಎಂದು ಪ್ರತಿಪಾದಿಸಿದರು.

ಸಂವಿಧಾನ ಪೀಠಿಕೆ ಗಾಯನ‌

ದಸರಾ ಉದ್ಘಾಟನೆ ಕಾರ್ಯಕ್ರಮದ ಹೊಸ ಸೇರ್ಪಡೆಯಾಗಿ, ಸಂವಿಧಾನ ಪೀಠಿಕೆಯ ಗಾಯನವೂ ವಿಶೇಷ ಗಮನ ಸೆಳೆಯಿತು. ಉತ್ಸವವನ್ನು ಉದ್ಘಾಟಿಸಿದ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲೇ ಈ ಗಾಯನ ಮೂಡಿಬಂದಿದ್ದು ಇನ್ನೊಂದು ವಿಶೇಷವಾಗಿತ್ತು. ಗಾಯನ ನಡೆಯುತ್ತಿದ್ದಾಗ, ಹಂಸಲೇಖ ದನಿಗೂಡಿಸಿ, ಭಾವಾಭಿನಯ ಮಾಡಿದರು.

‘ಸಂವಿಧಾನವೇ ಇಲ್ಲದ ಸಮಯದಲ್ಲಿ ಮೀಸಲಾತಿ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸದಾ ಸ್ಮರಣೀಯ’ ಎಂದು ಸಚಿವ ಡಾ.ಮಹದೇವಪ್ಪ ಸ್ಮರಿಸಿದರು.

 ಕಾರ್ಯಕ್ರಮದ ನಡುವೆ, ಸನ್ಮಾನದ ಅಂಗವಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ  ಶಾಲು, ಸ್ಮರಣಿಕೆಯನ್ನಷ್ಟೇ ಪಡೆದರು.

ಹಂಸಲೇಖ‌ ಪತ್ನಿ ಲತಾ, ಸಂಸದ ಪ್ರತಾಪಸಿಂಹ, ಸಚಿವರಾದ ಕೆ.ವೆಂಕಟೇಶ್, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಕೆ.ಎಚ್.ಮುನಿಯಪ್ಪ, ಶಾಸಕರಾದ‌ ಜಿ.ಟಿ.ದೇವೇಗೌಡ, ಎ.ಆರ್‌.ಕೃಷ್ಣಮೂರ್ತಿ, ಜಿ.ಡಿ.ಹರೀಶ್ ಗೌಡ, ತನ್ವೀರ್ ಸೇಠ್, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಮರಿತಿಬ್ಬೇಗೌಡ, ಡಾ.ಟಿ.ತಿಮ್ಮಯ್ಯ, ಡಿ.ರವಿಶಂಕರ್, ಸಿ.ಎನ್.ಮಂಜೇಗೌಡ, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ಉಪಸ್ಥಿತರಿದ್ದರು.