ನೂರಾರು ಜೀವಗಳಿಗೆ ಆಶ್ರಯ ನೀಡಿದ್ದ ಜೀವಕ್ಕೆ ನುಡಿನಮನ…ಅನಿಲ್ ಎಚ್.ಟಿ.

ವಿಜಯ ದರ್ಪಣ ನ್ಯೂಸ್ 

ಮಡಿಕೇರಿ.

ಕೊಡಗು ಜಿಲ್ಲೆಯ ಎಲ್ಲೇ ಆಗಲಿ.. ನಿಗ೯ತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಓಡಾಡುತ್ತಾ ಜನರ ಗಮನಕ್ಕೆ ಬಂದು ಇವರನ್ನು ಎಲ್ಲಿಗೆ ಸಾಗಿಸುವುದು.. ಇವರಿಗೆ ಹೇಗೆ ಆಶ್ರಯ ಕೊಡುವುದು ಎಂಬ ಪ್ರಶ್ನೆ ಎದುರಾದರೆ.. ಇಂಥ ಪ್ರಶ್ನೆಗೆ ದೊರಕುತ್ತಿದ್ದ ಉತ್ತರವೇ..

ವಿಕಾಸ್ ಜನಸೇವಾ ಟ್ರಸ್ಟ್ ನ ರಮೇಶ್..

ಕೆಲವು ವಷ೯ಗಳ ಹಿಂದಿನವರೆಗೂ ಸುಂಟಿಕೊಪ್ಪದ ಗದ್ದೆಹಳ್ಳದ ರಸ್ತೆಬದಿಯಲ್ಲಿನ ಪುಟ್ಟ ಮನೆಯೊಂದರಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ಮೂಲಕ ನಿಗ೯ತಿಕರು, ಅನಾಥರ ಸೇವೆ ಮಾಡುತ್ತಿದ್ದ ರಮೇಶ್ ಎಂಬ ಸಹೖದಯಿ ನಂತರ ಎರಡು ವಷ೯ಗಳ ಹಿಂದೆ ಈ ಮನೆಯನ್ನು 7 ನೇ ಹೊಸಕೋಟೆಗೆ ಸ್ಥಳಾಂತರಿಸಿದರು.

ಇದೆಂಥಾ ಮನೆ.ಅಥವಾ ಆಶ್ರಮ…

ಇಲ್ಲಿ ನಿಗ೯ತಿಕರಿದ್ದರು, ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದು ನಂತರ ಈ ಆಶ್ರಮ ಸೇರಿ ಹಾಯಾಗಿದ್ದವರಿದ್ದರು. ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡ ಅನೇತ ಜೀವಿಗಳಿದ್ದರು.. ಒಂದು ಉದಾಹರಣೆ ಕೊಡುತ್ತೇನೆ..

ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯಿಂದ ಪ್ರತೀವಷ೯ದಂತೆ ಆ ವಷ೯ವೂ ನಾವು ವಿಕಾಸ್ ಜನಸೇವಾ ಟ್ರಸ್ಟ್ ನಲ್ಲಿದ್ದ ಜೀವಿಗಳಿಗೆ ಸಹಾಯ ಮಾಡಲೆಂದು ತೆರಳಿದ್ದೆವು. ಅಲ್ಲಿಗೆ ಬೇಕಾಗಿದ್ದ ವಾಟರ್ ಹೀಟರ್, ಕುಚಿ೯ ವಿತರಿಸಿದ್ದಾಯಿತು. ಅಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದವರನ್ನು ನಾವೊಂದಿಷ್ಟು ಜನ ಮಾತಿಗೆಳೆದೆವು.

ಅಲ್ಲಿದ್ದ ಹಿರಿಯ ಜೀವ ಯಾಕೋ ನನ್ನ ಗಮನ ಸೆಳೆಯಿತು. ಹತ್ತಿರ ಹೋಗಿ ಮಾತನಾಡಿಸಿದೆ. ಅವರು ಹೇಳತೊಡಗಿದರು..

ನಾನು ಭಟ್ ಅಂಥ.. ದಕ್ಷಿಣ ಕನ್ನಡದ ಹೆಸರಾಂತ ಚಾಕೋಲೇಟ್ ಫ್ಯಾಕ್ಟರಿ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೆ. ಲಕ್ಷ ಸ್ಯಾಲರಿ ದೊರಕುತ್ತಿತ್ತು. ನಿವೖತ್ತಿಯಾದ ಬಳಿಕ ನಾನು ಸಂಪಾದಿಸಿದ ಹಣವನ್ನೆಲ್ಲಾ ಮಗ ಕಸಿದುಕೊಂಡ. ನನ್ನ ಮನೆಯಿಂದ ಹೊರದಬ್ಬಿದ. ನಾನು ಬೀದಿಗೆ ಬಂದಿದ್ದೆ. ಮಾನಸಿಕವಾಗಿ ನೆಮ್ಮದಿಯನ್ನೇ ಕಳೆದುಕೊಂಡೆ, ಯಾರೋ ಪುಣ್ಯಾತ್ಮರು ನನ್ನ ಅಲ್ಲಿಂದ ಕರೆತಂದು ಇಲ್ಲಿಗೆ ಸೇರಿಸಿದರು. ಇಲ್ಲಿ ಊಟ, ತಿಂಡಿ ದೊರಕುತ್ತಿದೆ. ನನ್ನಂಥೆ ವೇದನೆ ಅನುಭವಿಸಿದ ಅನೇಕ ಗೆಳೆಯರಿದ್ದಾರೆ. ಸಮಯ ಹೇಗೋ ನೆಮ್ಮದಿಯಿಂದ ಹೋಗುತ್ತಿದೆ. ಇಲ್ಲಿಗೆ ಬಂದು ಎರಡೂವರೆ ವಷ೯ಗಳಾಯಿತು. ಒಮ್ಮೆ ಕೂಡ ಮಗ ನನ್ನ ಹುಡುಕಿದ ವಿಚಾರ ಗೊತ್ತಾಗಲಿಲ್ಲ. ಅವನ ಪಾಲಿಗೆ ನಾನು ಸತ್ತೇ ಹೋಗಿದ್ದೇನೆ. ನನ್ನ ಮಗನಾಗಿ ರಮೇಶ್ ಈಗ ಜತೆಯಾಗಿದ್ದಾರೆ.

ಅವರ ನೋವಿನ ಕಥೆ ಕೇಳಿ ಬರುತ್ತಿದ್ದ ಕಣ್ಣೀರನ್ನು ಹೇಗೋ ಹೊರಬಾರದಂತೆ ತಡೆದುಕೊಂಡೆ.

ಇದಾಗಿ ಕೆಲವಾರಗಳಾಯಿತು. ಅದೊಂದು ದಿನ ರಮೇಶ್ ಕರೆ ಮಾಡಿದರು.

ಸರ್.. ನೀವು ಅವತ್ತು ತುಂಬಾ ಹೊತ್ತು ಮಾತನಾಡಿಸಿದಿರಲ್ಲ.. ಅವರು ನಿನ್ನೆ ಸಂಜೆ ನಿಧನರಾದರು, ಅವರ ಕಡೆಯವರಿಗೆ ಫೋನ್ ಮಾಡಿ ವಿಚಾರ ತಿಳಿಸಿದೆ. ಯಾರೂ ಬರಲಿಲ್ಲ. ಹೀಗಾಗಿ ಮಗನ ಸ್ಥಾನದಲ್ಲಿ ನಿಂತು ನಾನೇ ಅಂತ್ಯಕ್ರಿಯೆ ಮಾಡಿದೆ.

ಈಗಂತೂ ಕಣ್ಣೀರನ್ನೂ ತಡೆಯಲೇ ಆಗಲಿಲ್ಲ.

ಇಂಥಹದ್ದು ಒಂದೇ. ಎರಡೇ..

ಇಲ್ಲಿ ಇನ್ನೊಬ್ಬರಿದ್ದರು. ಇವರ ಮಗ ಮತ್ತು ಸೊಸೆ, ವಿಕಾಸ್ ಜನಸೇವಾ ಟ್ರಸ್ಟ್ ಗೆ ಇವರನ್ನು ಕರೆತಂದು ಕೆಲವಾರ ನೋಡಿಕೊಳ್ಳಿ. ನಾವು ವಿದೇಶಕ್ಕೆ ಹೋಗುತ್ತಿದ್ದೇವೆ. ಅಲ್ಲಿಂದ ಬಂದ ಮೇಲೆ ವಾಪಾಸ್ ಕರೆದುಕೊಂಡು ಹೋಗುತ್ತೇವೆ ಎಂದು ಹಿರಿಯ ಜೀವಿಯನ್ನು ಬಿಟ್ಟುಹೋದರು.

ಈ ಹಿರಿಯರಿಗೆ ಮರೆವಿನ ಕಾಯಿಲೆ. ಹೀಗಾಗಿ ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಎಂದು ಮಗ, ಸೊಸೆ ಇಲ್ಲಿ ಸೇರಿಸಿದ್ದರು.
ಕೆಲವಾರವೇನು, ಕೆಲತಿಂಗಳೇ ಕಳೆಯಿತು. ಸೇರಿಸಿಹೋದವರ ಸುದ್ದಿಯೇ ಇಲ್ಲ.

ಇವರು ಕೊಟ್ಟ ಸಂಖ್ಯೆಗೆ ಕರೆ ಮಾಡಿದರೆ ಆ ಸಂಖ್ಯೆಯೇ ತಪ್ಪಾಗಿತ್ತು. ವಿಳಾಸ ಹುಡುಕಿದರೆ ಅಲ್ಲಿ ಯಾರೂ ಇರಲಿಲ್ಲ.

ಬೇಕೆಂದೇ ಮಗ, ಸೊಸೆ ಈ ಹಿರಿಯ ಜೀವಿಯನ್ನು ಇಲ್ಲಿ ಬಿಟ್ಟು ಹೋಗಿದ್ದರು.

ರಮೇಶ್ ಬೇಸರ ಮಾಡಿಕೊಳ್ಳಲಿಲ್ಲ. ಮಗನಿಗಿಂತ ಹೆಚ್ಚಾಗಿ ಇವರನ್ನು ನೋಡಿಕೊಳ್ಳುತ್ತಾ ಬಂದರು.

ಇಂಥ ನೂರಾರು ಪ್ರಕರಣಗಳಿದೆ.

ಪ್ರಸ್ತುತ ವಿಕಾಸ ಜನಸೇವಾ ಟ್ರಸ್ಟ್ ನಲ್ಲಿ 32 ಜೀವಗಳಿದೆ. ಈ ಜೀವಗಳು ರಮೇಶ್ ಮತ್ತು ಅವರ ಕುಟುಂಬವನ್ನೇ ಆಶ್ರಯಿಸಿಕೊಂಡಿತ್ತು.

ಉತ್ತಮ ಊಟೋಪಚಾರ, ಧ್ಯಾನ, ಭಜನೆ, ಮನರಂಜನೆ, ಹೀಗೆ ಇಲ್ಲಿರುವ ಜೀವಗಳನ್ನು ತಾವು ಒಬ್ಬಂಟಿಯಲ್ಲ.. ನೋವು ತಿನ್ನಬೇಕಿಲ್ಲ ಎಂಬಂಥೆ ಕುಟುಂಬದವನಂತೆ ನೋಡಿಕೊಳ್ಳುತ್ತಿದ್ದರು ರಮೇಶ್.

ವಿಶೇಷ ಏನು ಗೊತ್ತೆ.. ಹೀಗೆಲ್ಲಾ ಇವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ರಮೇಶ್ ಬಳಿ ದುಡ್ಡೇ ಇರಲಿಲ್ಲ..ಆದರೂ ದೖತಿಗೆಡಲಿಲ್ಲ.

ದೇವರು ಇಟ್ಟಂಗಾಯಿತು ಎಂಬಂತೆ.. ಅದೆಷ್ಟೇ ಜನ ಆಶ್ರಯ ಕೋರಿ ಬರಲಿ ಅವರನ್ನು ಮನೆಗೆ ಸೇರಿಸಿಕೊಂಡು ಸಲಹುತ್ತಿದ್ದರು. ರಾತ್ರಿಯೋ, ಹಗಲೋ. ದೂರವಾಣಿ ಕರೆ ಎಲ್ಲಿಂದಲೇ ಬರಲಿ.. ಅಲ್ಲಿಗೆ ತೆರಳಿ.. ಅನಾಥರನ್ನು ಕರೆತರುತ್ತಿದ್ದರು.

ಮಾನಸಿಕ ಅಸ್ವಸ್ಥರು, ರೋಗಪೀಡಿತರಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿನನರೆಗೂ ತೆರಳಿ ಅಲ್ಲಿನ ಖಚು೯ ವೆಚ್ಚಗಳನ್ನೆಲ್ಲಾ ಭರಿಸುತ್ತಿದ್ದರು.

ತನ್ನ ಬಳಿಯೇ ಹಣ ಇಲ್ಲದಿರುವಾಗ ಇಂಥ ಸಾಹಸದ ಯೋಜನೆ ಮಾಡಲು ಖಂಡಿತಾ ಕೆಚ್ಚದೆಯ ಧೈಯ೯ ಬೇಕು.

ಕಳೆದ ವಷ೯ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮಗ ಡಾ.ಕಾಯ೯ಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಗೆ ಭೇಟಿ ನೀಡಿ ಇಲ್ಲಿನ ಜೀವಿಗಳಿಗೆ ಸಭಾಂಗಣ, ಬೋಜನದ ಹಾಲ್ ಸೇರಿದಂತೆ 1 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ,ನಿಮಿ೯ಸಲು ತಾವೇ ಹಣ ನೀಡುವ ಯೋಜನೆ ರೂಪಿಸಿದ್ದರು. ಇದರಿಂದಾಗಿ ರಮೇಶ್ ಅವರ ಅನೇಕ ಸಮಸ್ಯೆಗಳಿಗೆ ಅಂತ್ಯ ಕಾಣಲು ಸಾಧ್ಯವಿತ್ತ.

ನೂತನ ಶಾಸಕ ಡಾ.ಮಂಥರ್ ಗೌಡ ಅವರು ಕೂಡ ವಿಕಾಸ್ ಜನಸೇವಾ ಟ್ರಸ್ಟ್ ಗೆ ನೆರವಾಗುವ ಭರವಸೆ ನೀಡಿದ್ದರು. ಕೆಲವು ವಷ೯ಗಳ ಹಿಂದೆ ಪಬ್ಲಿಕ್ ಟಿವಿ ಇವರ ಸೇವೆ ಗುರುತಿಸಿ ಪಬ್ಲಿಕ್ ಹಿರೋ ಕಾಯ೯ಕ್ರಮದಲ್ಲಿ ಇವರನ್ನು ಬಿಂಬಿಸಿತ್ತು. ಬೆಳಕು ಕಾಯ೯ಕ್ರಮದಲ್ಲಿಯೂ ಈ ಆಶ್ರಮಯ ವಿಶೇಷ ಕಾಯ೯ಕ್ರಮ ಪ್ರಸಾರವಾಗಿತ್ತು.

ಮಡಿಕೇರಿಯ ಜನರಲ್ ತಿಮ್ಮಯ್ಯ ಸಕ೯ಲ್ ಬಳಿ ಮೈಸೂರು ರಸ್ತೆಯ ಬದಿಯಲ್ಲಿ ಪ್ರಯಾಣಿಕರ ತಂಗುದಾಣವಿದೆ. ಈ ತಾಣದಲ್ಲಿ ಸೈನಿಕರ ವೀರಶೂರತೆ ಬಿಂಬಿಸುವ ಆಕಷ೯ಕ ಚಿತ್ರಗಳಿದೆ. ಈ ಚಿತ್ರಗಳನ್ನು ರೂಪಿಸಲು ರಮೇಶ್ ಕಾರಣರಾಗಿದ್ದರು. ಪ್ರತೀ ವಷ೯ ತಮ್ಮ ಸಂಸ್ಥೆಯಲ್ಲಿ ಕಾಗಿ೯ಲ್ ವಿಜಯ್ ದಿವಸ್ ಆಚರಿಸುತ್ತಾ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದರು.

ರಮೇಶ್ ಅವರ ದೊಡ್ಡ ಗುಣ ಎಂದರೆ.. ಯಾವುದೇ ಕೆಲಸಕ್ಕೂ ತನ್ನಲ್ಲಿ ಹಣ ಇದೆಯೋ ಇಲ್ಲವೋ ಎಂದು ಯೋಚಿಸುತ್ತಿರಲಿಲ್ಲ. ಮೊದಲು ತಾನಂದುಕೊಂಡ ಕೆಲಸವನ್ನು ಮಾಡಲು ಮುಂದಾಗುತ್ತಿದ್ದರು. ನಂತರ ಹಣದ ಬಗ್ಗೆ ಚಿಂತಿಸುತ್ತಿದ್ದರು. ಇವರ ಮಾನವೀಯ ಕಾಯ೯ಕ್ಕೆ ಅನೇಕ ಸಂಘಸಂಸ್ಥೆಗಳು, ದಾನಿಗಳು ನೆರವು ನೀಡುತ್ತಿದ್ದರು.

ರಮೇಶ್ ಜತೆ ಅವರ ಪತ್ನಿ ರೂಪ, ಮಕ್ಕಳು ಕೂಡ ಕೈಜೋಡಿಸುತ್ತಿದ್ದರು. ಕುಟುಂಬದ ಸಹಕಾರವಿಲ್ಲದೇ ಹೋಗಿದ್ದರೆ ಈ ರೀತಿಯ ಕೆಲಸ ಸಾಧ್ಯವೇ ಇರುತ್ತಿರಲಿಲ್ಲ ಎಂದು ನನ್ನೊಂದಿಗೆ ರಮೇಶ್ ಅನೇಕ ಬಾರಿ ಹೇಳಿಕೊಂಡಿದ್ದರು.

ಹಿರಿಯ ಅಥವಾ ಅನಾಥ ಜೀವಗಳಿಗೆ ಆಶ್ರಯದಾತನಾಗಿಯೇ ರಮೇಶ್ ನೆಮ್ಮದಿ ಅನುಭವಿಸುತ್ತಿದ್ದರು. ರಮೇಶ್ ಮಾಡುತ್ತಿದ್ದ ಈ ರೀತಿಯ ಸೇವೆಯನ್ನು ಬೇರೆಯವರು ಮಾಡುವುದು ಹೋಗಲಿ, ಯೋಚಿಸುವುದೇ ಕಷ್ಟಸಾಧ್ಯವಾಗಿತ್ತು.

ಹೀಗಾಗಿ ಸಮಾಜದ ಅನೇಕರು ರಮೇಶ್ ಬೆಂಬಲಕ್ಕೆ ನಿಂತಿದ್ದರು.

ಇದೇ ಅಕ್ಟೋಬರ್ 4 ರಂದು ಸಂಜೆ ರಮೇಶ್ ಮತ್ತು ಪತ್ನಿ ಮನೆಗೆ ಹಿಂದಿರುಗಿದ್ದಾರೆ. ಗ್ಯಾಸ್ ಸಿಲಿಂಡರ್ ಲೀಕ್ ಆಗುತ್ತಿದ್ದ ಸೂಕ್ಷ್ಯ ತಿಳಿಯದೇ ಸ್ಟವ್ ಆನ್ ಮಾಡಿದ್ದಾರೆ. ಕೂಡಲೇ ಸಿಲಿಂಡರ್ ಗೆ ಬೆಂಕಿ ಸ್ಪಷ೯ವಾಗಿ ರೂಪ ಗಂಭೀರ ಗಾಯಗೊಂಡಿದ್ದಾರೆ. ಪಕ್ಕದಲ್ಲಿದ್ದ ರಮೇಶ್ ಕೂಡ ಗಾಯಗೊಂಡಿದ್ದಾರೆ. ಇವರೀವ೯ರನ್ನೂ ಕೂಡಲೇ ಮೈಸೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದೇ 8 ರಂದು ಮುಂಜಾನೆ ರಮೇಶ್ ಗೆ ಹೖದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಅಲ್ಲಿಗೆ ಜೀವರಕ್ಷಕನ ಜೀವನವೇ ಕೊನೆಯಾಗಿದೆ.

ನೊಂದ ಜೀವಗಳ ಆಪ್ತರಕ್ಷಕ, ಹಿರಿಯ ಜೀವಗಳ ಆಸರೆ.. ರಮೇಶ್ ಜೀವನ ಎಲ್ಲರಿಗೂ ಮಾದರಿ ಎನ್ನುವುದು ಸುಲಭ..

ಆದರೆ, ರಮೇಶ್ ನೋಡಿಕೊಂಡಂತೆ ಎಲ್ಲರಿಗೂ ನೊಂದ ಜೀವಿಗಳನ್ನು ನೋಡಿಕೊಂಡು ಸಲಹುವುದು ಸಾಧ್ಯವೇ.

ರಮೇಶ್ ಅವರನ್ನೇ ನಂಬಿಕೊಂಡಿದ್ದ 32 ಜೀವಿಗಳ ನೆರವಿಗೆ ಸಕಾ೯ರ ಕೂಡಲೇ ಮುಂದಾಗಬೇಕು. ರಮೇಶ್ ಕನಸಾದ ವಿಕಾಸ್ ಜನಸೇವಾ ಟ್ರಸ್ಟ್ ನ ಭವಿಷ್ಯ ಸುಗಮವಾಗಬೇಕು.

ಮಾದರಿಯಾಗಿದ್ದವರು ಕಣ್ಮರೆಯಾದೊಡನೇ ಅವರ ಚಿಂತನೆಗಳು ಕೂಡ ಅವರೊಂದಿಗೇ ಸತ್ತು ಹೋದವು ಎಂಬಂತಾಗಬಾರದು.

ನೂರಾರು ಜೀವಿಗಳ ಆಶ್ರಯದಾತ… ಬಡವಬಲ್ಲಿದರಿಗೆ ನೆರವಾದ ಕರುಣಾಮಯಿ… ಆದಶ೯ದ ಬದುಕು ಸವೆಸಿದ ಚಿಂತಕ..

ರಮೇಶ್.. ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ.. ಕೊಡಗಿನ ಜನತೆ ನಿಮ್ಮ ಮಾದರಿ ಸೇವೆಯನ್ನು ಸದಾ ಸ್ಮರಿಸಿಕೊಳ್ಳುತ್ತಾರೆ.

ಕೊಡಗಿನ ಜನತೆಯ ಪರವಾಗಿ ಈ ನುಡಿ ನಮನ..

ಓಂ ಶಾಂತಿ.