ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಂತೆ ಕಾಣುತ್ತಿಲ್ಲವೇ ಈಗಿನ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಶಾಸಕರ – ನಾಯಕರ – ಮಂತ್ರಿಗಳ ನಡವಳಿಕೆ….

ವಿಜಯ ದರ್ಪಣ ನ್ಯೂಸ್

ಬೆಂಗಳೂರು:ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದದ ವಿಷ ಬೀಜ ಬಿತ್ತುವ ಕ್ರಮಗಳು ಮುಂತಾದ ಆಡಳಿತಾತ್ಮಕ ವಿಫಲತೆಯಿಂದ ರೋಸಿ ಹೋದ ಕರ್ನಾಟಕದ ಮತದಾರರು ಬದಲಾವಣೆಯಾಗಿ ಕಾಂಗ್ರೇಸ್ ಪಕ್ಷಕ್ಕೆ ಅತ್ಯಂತ ಸ್ಪಷ್ಟ ಬಹುಮತ ನೀಡಿದರು.

ಈ ಸರ್ಕಾರ ಪ್ರಾರಂಭದಲ್ಲಿ ಸಾಮಾಜಿಕ ನ್ಯಾಯದ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿತು. ಅದಕ್ಕಾಗಿ ಅಭಿನಂದನೆಗಳು. ಆದರೆ ಇನ್ನೂ ಆರು ತಿಂಗಳು ಕಳೆಯುವ ಮೊದಲೇ ಅಧಿಕಾರಕ್ಕಾಗಿ ಭಿನ್ನಮತೀಯ ಚಟುವಟಿಕೆ ಪ್ರಾರಂಭಿಸಿರುವುದು ಸಾರ್ವಜನಿಕರಿಗೆ ಮಾಡುವ ಮೋಸವಲ್ಲವೇ…..

ಸ್ವಾರ್ಥಿ ಸಿದ್ದರಾಮಯ್ಯ,
ಅಹಂಕಾರಿ ಶಿವಕುಮಾರ್,
ಮೋಹದ ಬಲೆಯಲ್ಲಿ ಕೆಲವು ಪ್ರಭಾವಿ ಸಚಿವರುಗಳು,
ಜೊತೆಗೆ ಆಪರೇಷನ್ ಕಮಲದ ಪ್ರಯತ್ನ ಮಾಡುತ್ತಾ, ವಿದ್ರೋಹಿ ಬಿಜೆಪಿ ನಾಯಕರು,
ಇಡೀ ಕರ್ನಾಟಕದ ಜನತೆಯ ಬೆನ್ನಿಗೆ ಚೂರಿ ಇರಿಯುತ್ತಿದ್ದಾರೆ.

ಜನ ಎಷ್ಟೊಂದು ಪ್ರೀತಿಯಿಂದ, ಅಭಿಮಾನದಿಂದ, ಭರವಸೆಯಿಂದ ತಮ್ಮ ಅಮೂಲ್ಯ ಮತವನ್ನು ಕರ್ನಾಟಕದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನೀಡಿದ್ದಾರೆ. ಆ ಋಣ ಭಾರದ ನೆನಪು‌ ಸ್ವಲ್ಪವಾದರೂ ಬೇಡವೇ ಕಾಂಗ್ರೇಸ್ ನಾಯಕರೇ…..

ಮಾನ್ಯ ಸಿದ್ದರಾಮಯ್ಯನವರೇ ಎಷ್ಟೊಂದು ವರ್ಷದಿಂದ ನೀವು ಅಧಿಕಾರ ಅನುಭವಿಸುತ್ತಲೇ ಇದ್ದೀರಿ. ಹೊಸ ನಾಯಕರಿಗೆ ಅವಕಾಶ ಕಲ್ಪಿಸಬಹುದಲ್ಲವೇ, ಮಾನ್ಯ ಶಿವಕುಮಾರ್ ಅವರೇ ಉಪ ಮುಖ್ಯಮಂತ್ರಿಯಾಗಿ ತೃಪ್ತಿಪಡದೇ ಮತ್ತಷ್ಟು ಅಧಿಕಾರ ಬೇಕು ಎಂದು ಹಠ ಮಾಡಿ ಬಹಿರಂಗವಾಗಿ ರಾಜಕೀಯ ಮಾಡುವುದು ಸ್ವಾರ್ಥದ ಪರಮಾವಧಿ ಎನಿಸುವುದಿಲ್ಲವೇ, ಮಾನ್ಯ ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್, ಪರಮೇಶ್ವರ್ ಮುಂತಾದ ಘಟಾನುಘಟಿ ಮಂತ್ರಿಗಳೇ ಮತ್ತು ನಾಯಕರೇ ಇರುವ ಸಚಿವ ಸ್ಥಾನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವುದು ಬಿಟ್ಟು ಉಪ ಮುಖ್ಯಮಂತ್ರಿ, ಸಾಧ್ಯವಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ಹೊಂಚು ಹಾಕಿ ಅದನ್ನು ಪಡೆಯಲು ಭಿನ್ನಮತದ ಚಟುವಟಿಕೆ ನಡೆಸುವುದು ರಾಜದ್ರೋಹ ಆಗುವುದಿಲ್ಲವೇ.

ಬಹುತೇಕ ಕರ್ನಾಟಕ ಬರದ ಛಾಯೆಯಲ್ಲಿ ಬಸವಳಿದಿದೆ. ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಅದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಕಾರ್ಯಯೋಜನೆ ರೂಪಿಸಿ ಅದನ್ನು ಜಾರಿಗೆ ತರಲು ಎಲ್ಲರೂ ಪ್ರಯತ್ನಿಸಬೇಕಾದ ಸಂದರ್ಭದಲ್ಲಿ ಇದೇನಿದು ಅಧಿಕಾರ ದೊರೆತ ಕೆಲವೇ ತಿಂಗಳುಗಳಲ್ಲಿ ಮತ್ತಷ್ಟು ಅಧಿಕಾರಕ್ಕಾಗಿ ನಿಮ್ಮ ಕಚ್ಚಾಟ. ಬದುಕೇನು ಶಾಶ್ವತವೇ. ಕರ್ನಾಟಕವೇನು ನಿಮ್ಮ ಪೂರ್ವಿಕರ ಆಸ್ತಿಯೇ……

ಬಹುತೇಕ ಎಲ್ಲರೂ 60/70 ವರ್ಷಗಳ ವಯಸ್ಸಿನ ಆಸುಪಾಸಿನಲ್ಲಿ ಇದ್ದೀರಿ. ಬದುಕಿನ ಇಳಿ ಸಂಜೆಯಲ್ಲಿ. ಜೀವನ ಸಾಕಷ್ಟು ನಿಮಗೆ ನೀಡಿದೆ. ನಿಮ್ಮೊಂದಿಗೆ ಈ ನೆಲದಲ್ಲಿ ಹುಟ್ಟಿದ ಎಷ್ಟೋ ಜನ ನಿಮ್ಮದೇ ವಯಸ್ಸಿನವರು ಬದುಕಿಲ್ಲ. ಬದುಕಿರುವವರು ಈಗಲೂ ಊಟ ವಸತಿ ಬಟ್ಟೆಗಾಗಿ ಶ್ರಮ ಪಡುತ್ತಲೇ ಇದ್ದಾರೆ. ಬಹಳಷ್ಟು ಜನ ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಎಷ್ಟೋ ಜನ ಅಜ್ಞಾತರಾಗಿಯೇ ಉಳಿದಿದ್ದಾರೆ. ನಿಮಗಿಂತ ಹೆಚ್ಚು ಶ್ರಮಪಟ್ಟವರು, ಪ್ರತಿಭಾವಂತರು ಏನೇನೋ ಕಾರಣದಿಂದ ಮೂಲೆಗುಂಪಾಗಿದ್ದಾರೆ. ಆದರೆ ನೀವು ರಾಜ್ಯದ ಅತ್ಯಂತ ಪ್ರಮುಖ 34 ಜನರಲ್ಲಿ ಒಬ್ಬರಾಗಿ ಹಣ ಅಧಿಕಾರ ಸುಖ ಸಂತೋಷ ಅನುಭವಿಸುತ್ತಿದ್ದೀರಿ. ಇಷ್ಟಕ್ಕೂ ತೃಪ್ತಿಯಾಗದೆ ಮತ್ತಷ್ಟು ಬಯಸುವುದು ಮತ್ತು ಅದೂ ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ನೀವು ನಂಬಿದ ದೇವರು ಧರ್ಮಗಳಿಗೆ ದ್ರೋಹ ಬಗೆದಂತಲ್ಲವೇ. ನಿಮ್ಮನ್ನು ಆತ್ಮಸಾಕ್ಷಿ ಚುಚ್ಚುವುದಿಲ್ಲವೇ……

ಇನ್ನು ಬಿಜೆಪಿ ಪಕ್ಷದ ಇದೇ ರೀತಿಯ ನಾಯಕರು ಪ್ರಜಾಪ್ರಭುತ್ವದ ಮೌಲ್ಯಗಳಿಗೇ ಅಪಮಾನ ಮಾಡುತ್ತಿದ್ದಾರೆ. 65 ಜನರಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದ ದುಸ್ಥಿತಿಯಲ್ಲಿ ಜನರ ಮತಕ್ಕೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ಬಗ್ಗೆ ಜೋರು ಜೋರಾಗಿ ಮಾತನಾಡುವ ಮಾನ್ಯ ನರೇಂದ್ರ ಮೋದಿಯವರು ಕರ್ನಾಟಕದ ಸೋಲಿನಿಂದ ಹತಾಶರಾಗಿ ರಾಜ್ಯದ ಜನರ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಅಲ್ಲಿಯೂ ಅಧಿಕಾರ ದಾಹಕ್ಕಾಗಿ ಒಳಜಗಳಗಳು ನಡೆಯುತ್ತಲೇ ಇವೆ. ಬಹುಮತದ ಈ ಕಾಂಗ್ರೇಸ್ ಸರ್ಕಾರವನ್ನು ತೆಗೆದು ತಾವು ಮತ್ತೆ ಅಧಿಕಾರ ಪಡೆಯಲು ಎಲ್ಲ ರೀತಿಯ ಅಧರ್ಮ ನಡೆಸಲು ಸದಾ ಪ್ರಯತ್ನಿಸುತ್ತಲೇ ಇದ್ದಾರೆ.

ಯಡಿಯೂರಪ್ಪ, ಅಶೋಕ್, ಬಸವರಾಜ ಬೊಮ್ಮಾಯಿ ಮುಂತಾದ ಎಲ್ಲರೂ ವರ್ಷಾನುಗಟ್ಟಲೆ ಅಧಿಕಾರ ಅನುಭವಿಸಿ ಈಗಲೂ ಮತ್ತೆ ಕುರ್ಚಿಗಾಗಿ ನಾಚಿಕೆ ಮಾನ ಮರ್ಯಾದಿ ಇಲ್ಲದೇ ಕೀಳು ಮಟ್ಟದ ರಾಜಕೀಯ ನಡೆಸುವುದು ಎಷ್ಟೊಂದು ನೀಚತನವಲ್ಲವೇ……

ಕೇವಲ ಭಾಷಣಗಳಲ್ಲಿ ಒಳ್ಳೆಯದನ್ನು ಹೇಳುತ್ತಾ, ನಡವಳಿಕೆಯಲ್ಲಿ ವಿದ್ರೋಹ ಮಾಡುತ್ತಾ ಇಡೀ ರಾಜ್ಯದ ಸಂಪನ್ಮೂಲಗಳನ್ನು ತಾವು ಮಾತ್ರ ಅನುಭವಿಸುತ್ತಾ ಸಾಗಿದರೆ ಇದನ್ನು ಗಮನಿಸುವ ಮುಂದಿನ ಪೀಳಿಗೆಯ ಮಕ್ಕಳ ಗತಿ ಏನು. ಅವರ ಮನಸ್ಥಿತಿ ಏನಾಗಬಹುದು. ಇದನ್ನು ನೋಡಿಕೊಂಡು ಸುಮ್ಮನೆ ಇರುವು ಮದ್ಯ ವಯಸ್ಸಿನ ಜನರ ಜವಾಬ್ದಾರಿ ಏನು.

ಈಗ ಸಾರ್ವಜನಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವ ಪ್ರತಿಯೊಬ್ಬ ಮತದಾರರ ಜವಾಬ್ದಾರಿ ಜಾಗೃತವಾಗಬೇಕಿದೆ. ಇಲ್ಲದಿದ್ದರೆ ಇವರ ಸ್ವಾರ್ಥಕ್ಕೆ ನಾವು ಬಲಿಯಾಗುವುದು ನಿಶ್ಚಿತ. ಎಚ್ಚರಗೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………