ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರ ಮತದಾರರ ಪಟ್ಟಿಗಳ ಕರಡು ಪ್ರತಿ ಪ್ರಕಟ,ಆಕ್ಷೇಪಣೆ ಸಲ್ಲಿಸಲು 2023 ರ ಡಿಸೆಂಬರ್ 09 ಕೊನೆ ದಿನ.

ವಿಜಯ ದರ್ಪಣ ನ್ಯೂಸ್ 

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 23 :- ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ವಿಧಾನ ಪರಿಷತ್ತಿನ ಚುನಾವಣೆ 2023ರ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಮತದಾರರ ಪಟ್ಟಿಗಳ ಕರಡು ಪ್ರತಿಯನ್ನು ಇಂದು (ನವೆಂಬರ್ 23) ಪ್ರಕಟಗೊಳಿಸಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಯಾವುದೇ ಹಕ್ಕು ಹಾಗೂ ಆಕ್ಷೇಪಣೆ ಇದ್ದಲ್ಲಿ ಲಿಖಿತ ಮೂಲಕ ಡಿಸೆಂಬರ್ 09 ರೊಳಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಶಿವಶಂಕರ ಎನ್ ಅವರು ತಿಳಿಸಿದರು.


ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ವಿಧಾನ ಪರಿಷತ್ತಿನ ಚುನಾವಣೆ-2023 ರ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬಗ್ಗೆ 2023 ರ ಸೆಪ್ಟೆಂಬರ್ 30ರಂದು ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಲಾಗಿತ್ತು. ನಮೂನೆ 19 ಹಾಗೂ ನಮೂನೆ 18ರಲ್ಲಿ ಮತದಾರರ ಪಟ್ಟಿ ಸೇರ್ಪಡೆಗೆ ಅಕ್ಟೋಬರ್ 01 ರಿಂದ ನವೆಂಬರ್ 06 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕರಡು ಮತದಾರರ ಪಟ್ಟಿಯನ್ನು ಇಂದು(2023 ರ ನವೆಂಬರ್ 23) ಜಿಲ್ಲೆ, ಉಪವಿಭಾಗ, ತಾಲೂಕು ಕಚೇರಿಗಳಲ್ಲಿ, ನಾಡಕಚೇರಿಗಳಲ್ಲಿ, ಪುರಸಭೆ, ನಗರಸಭೆ ಮತ್ತು ಎಲ್ಲಾ ಸಾರ್ವಜನಿಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಯಾವುದೇ ಹಕ್ಕು ಹಾಗೂ ಆಕ್ಷೇಪಣೆ ಇದ್ದಲ್ಲಿ ಲಿಖಿತ ಮೂಲಕ 2023ರ ಡಿಸೆಂಬರ್ 09ರೊಳಗಾಗಿ ಆಯಾ ತಾಲೂಕಿನ ತಾಹಶೀಲ್ದಾರ್ ಹಾಗೂ ಸಹಾಯಕ ಮತದಾನದ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಅಂತಿಮ ಮತದಾರರ ಪಟ್ಟಿಗಳನ್ನು ಡಿಸೆಂಬರ್ 30ರಂದು ಪ್ರಕಟಿಸಲಾಗುವುದು ಎಂದು ಹೇಳಿದರು.

ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯಂತೆ ಇದುವರೆಗೂ 855 ಪುರುಷ ಶಿಕ್ಷಕರು ಹಾಗೂ 266 ಮಹಿಳಾ ಶಿಕ್ಷಕಿಯರು ಸೇರಿ ಒಟ್ಟು 1721 ಶಿಕ್ಷಕರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ.
ಪದವೀಧರರ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿರುವಂತೆ ಇದುವರೆಗೆ 7509 ಪುರುಷ ಮತದಾರರು ಹಾಗೂ 6864 ಮಹಿಳಾ ಮತದಾರರು ಸೇರಿ 14375 ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಹಾಗೂ ಇಲಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಅರ್ಹ ಪದವೀಧರರು ಹಾಗೂ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ ಶಿವಶಂಕರ ಎನ್ ಅವರು ಮನವಿ ಮಾಡಿದರು.

ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ.

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 24 :-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 56513 ಹೆಕ್ಟೇ‌ರ್ ಪ್ರದೇಶದಲ್ಲಿ ಆವರಿಸಿದ್ದು, ಬಹುತೇಕ ರಾಗಿ ಬೆಳೆಯು ಕಟಾವು ಹಂತದಲ್ಲಿದ್ದು,

ಕೆಲವೆಡೆ ಕಾಳು ತುಂಬುವ ಹಂತದಲ್ಲಿರುತ್ತದೆ. ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ (combined harvesters) ಮೂಲಕ ಕಟಾವು ಕೈಗೊಳ್ಳುತ್ತಿದ್ದು, ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲಿಕರು ರೈತರಿಂದ ಪ್ರತಿ ಗಂಟೆಗೆ ರೂ. 3500 ರಿಂದ ರೂ. 4000 ಗಳ ವರೆಗೆ ಬಾಡಿಗೆ ಹಣ ನಿಗದಿ ಪಡಿಸಿರುವ ಬಗ್ಗೆ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳ ರೈತರುಗಳಿಂದ ದೂರು ಬಂದಿರುತ್ತದೆ.

ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯುಂಟಾಗಿ ಬೆಳೆಯು ಹಾನಿಯಾಗಿರುವುದರಿಂದ ರೈತರಿಗೆ ತೀವ್ರ ಆರ್ಥಿಕ ಹೊರೆಯಾಗಲಿದೆ. ಆದುದರಿಂದ ದಿನಾಂಕ: 06.07.2022ರಂದು ಜಿಲ್ಲಾ ಸಮನ್ವಯ ಸಮಿತಿಯ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ಅಧ್ಯಕ್ಷತೆಯಲ್ಲಿ ಕೃಷಿ ಯಂತ್ರಧಾರೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ)ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿಪಡಿಸಲಾಗಿದೆ. ಇಂಧನ ವೆಚ್ಚ, ಕಾರ್ಮಿಕರ ಕೂಲಿ ಹಾಗೂ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಪ್ರತಿ ಗಂಟೆಗೆ ನ್ಯೂ ಹಾಲೆಂಡ್/ಜಾನ್‌ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ರೂ. 3350 ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತಕ್ಕೆ ರೂ. 2700 ಗೆ ಬಾಡಿಗೆ ನಿಗದಿಪಡಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ರಾಗಿ ಬೆಳೆ ಕಟಾವು ಮಾಡುತ್ತಿರುವ ನ್ಯೂ ಹಾಲೆಂಡ್/ ಜಾನ್‌ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ರೂ. 3350 ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ರೂ. 2700 ಗಳು ಮೀರದಂತೆ ಪ್ರತಿ ಗಂಟೆಗೆ ಬಾಡಿಗೆಯನ್ನು ನಿಗದಿಪಡಿಸಿದೆ. ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಜನರಿಗೆ ಉದ್ಯಮ ಶೀಲತ ತರಬೇತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ.

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ   ನವೆಂಬರ್ 24  :2023-24ನೇ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಸಿಡಾಕ್ ಸಂಸ್ಥೆಯ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಜನರಿಗೆ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ಆನ್ ಲೈನ್ ತಂತ್ರಾಂಶದ ಮೂಲಕ ಅರ್ಜಿಗಳನ್ನು 2023 ರ ನವೆಂಬರ್ 30 ರೊಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು https://www.scsptsp.karnataka.gov.in/HMS/CDOC/EDPRe gistrationForm.aspread ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವವರ ವಯೋಮಿತಿ ಕನಿಷ್ಟ 21 ವರ್ಷ ಗರಿಷ್ಟ 50 ವರ್ಷದೊಳಗಿರಬೇಕು. ಶೈಕ್ಷಣಿಕ ಅರ್ಹತೆಯು ಪಿ.ಯು.ಸಿ ಮತ್ತು ಮೇಲ್ಪಟ್ಟವರಾಗಿರಬೇಕು ತರಬೇತಿಗೆ ಹಾಜರಾಗಲು ಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ.1000/-ಗಳನ್ನು ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರ ಕಛೇರಿ. ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ನಂ.217. 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ -562110. ದೂರವಾಣಿ ಸಂಖ್ಯೆ-080-29787447, ಸಹಾಯಕ ನಿರ್ದೇಶಕರ ಕಚೇರಿ ದೇವನಹಳ್ಳಿ ತಾಲ್ಲೂಕು ದೂ.ಸಂ. 080-27681784, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂ. 080-27623681, ಹೊಸಕೋಟೆ ತಾಲ್ಲೂಕು ದೂ.ಸಂ. 080-27931528, ನೆಲಮಂಗಲ ತಾಲ್ಲೂಕು ದೂ.ಸಂ. 080-27723172. ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಟಿ.ಎಲ್.ಎಸ್ ಪ್ರೇಮ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.