ಸಂವಿಧಾನ ಜಾಗೃತಿಗಾಗಿ ಸೈಕಲ್ ಏರಿದ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್

ವಿಜಯ ದರ್ಪಣ ನ್ಯೂಸ್

ಸಂವಿಧಾನ ಜಾಗೃತಿಗಾಗಿ ಸೈಕಲ್ ಏರಿದ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 16 :- ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಸೈಕಲ್ ಏರುವ ಮೂಲಕ ವಿನೂತನವಾಗಿ ಸಾರ್ವಜನಿಕರಿಗೆ ಸಂವಿಧಾನ ಜಾಗೃತಿ ಮೂಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಸಮಾಜಕಲ್ಯಾಣ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇಂದು ನಡೆದ ಸಂವಿಧಾನ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ ಭಾರತ ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾವನ್ನು ಪ್ರತಿಯೊಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು, ಪ್ರತಿಯೊಂದು ಕಾಯ್ದೆಯ ಮೂಲ ಸಂವಿಧಾನ. ಸಂವಿಧಾನ ಅಡಿಯಲ್ಲಿ ದೇಶದ ಕಾನೂನು ನಡೆಯುತ್ತಿದೆ. ಯಾವುದು ಮಾತನಾಡಬೇಕು ಯಾವುದು ಮಾತನಾಡಬಾರದು ಎಂದು ವಾಕ್ ಸ್ವಾತಂತ್ರ್ಯ ಹೇಳುತ್ತದೆ. ಪ್ರತಿಯೊಬ್ಬ ಪ್ರಜೆಗೂ ಅಂತಹ ವಾಕ್ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸಮಾನತೆ, ಸ್ವಾತಂತ್ರ್ಯ ಕಲ್ಪಿಸುವ ಸಂವಿಧಾನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಸಂವಿಧಾನ ಜಾಗೃತಿ ಜಾಥಾ ದೇವನಹಳ್ಳಿ, ಹೊಸಕೋಟೆ ತಾಲ್ಲೂಕುಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗಿ ಜಾಥಾ ನಡೆಯುತ್ತಿದೆ, ಜಾಥಾ ಹೋಗುವ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಿ, ಸಂವಿಧಾನ ಮಹತ್ವ ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಮುಖಂಡರು, ವಿವಿಧ ಸಂಘಟನೆಗಳು ಸಂವಿಧಾನ ಜಾಗೃತಿ ಜಾಥಾ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿ, ಸಂವಿಧಾನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮಹಿಳೆಯರು ಕಳಶ ಹೊರುವ ಮೂಲಕ ಬರಮಾಡಿಕೊಂಡರು, ಸೈಕಲ್ ಜಾಥಾ, ಎತ್ತಿನ ಗಾಡಿ ಜಾಥಾ, ಬೈಕ್ ರ್ಯಾಲಿಯೊಂದಿಗೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕವಿತಾ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ದೊಡ್ಡಬಳ್ಳಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮಾಪತಿ, ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿ, ಉಪಾಧ್ಯಕ್ಷೆ  ಸೌಭಾಗ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯ, ನೋಡೆಲ್ ಅಧಿಕಾರಿ ರಾಜೇಶ್ವರಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಸದಸ್ಯರು, ಮುಖಂಡರು, ವಿವಿಧ ಸಂಘಟನೆಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

 

£££££££££££££££££

ಬಜೆಟ್ @ 2024 ಮುಂದುವರೆದ ಮಹಾಮೋಸ: ಆಂಜನೇಯ ರೆಡ್ಡಿ

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಬಯಲುಸೀಮೆಗೆ ಮೋಸದ ಪರಾಕಾಷ್ಠೆ , ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣ, ಬಜೆಟ್ ನಲ್ಲಿ ಕೆ ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ,
ಯಾವುದೇ ಲಾಭವಿಲ್ಲದ ಮುಂದುವರೆದ ಎತ್ತಿನಹೊಳೆ ಯೋಜನೆಯ ಜಪ, ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ, ಕೃಷ್ಣ-ಪೆನ್ನಾರ್ ನದಿ ಜೋಡಣೆ ಬಗ್ಗೆ ಚಕಾರವೆತ್ತಿಲ್ಲ

ಕುಡಿಯುವ ನೀರಿನಲ್ಲಿ ಯುರೇನಿಯಂ ಇರುವ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕನಿಕರವಿಲ್ಲ. ನೀರಿನ ಹೆಸರಲ್ಲಿ ಮುಂದುವರೆದ ತಾರತಮ್ಯ ಮಾಡಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಖಂಡಿಸಿದ್ದಾರೆ.