ಮತದಾನ‌ ದಿನ ರಜೆ ಕಂಪನಿಗಳು ನೀಡದಿದ್ದರೆ ಕಠಿಣ ಕ್ರಮ : ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ವಿಜಯ ದರ್ಪಣ ನ್ಯೂಸ್

ಮತದಾನ‌ ದಿನ ರಜೆ ಕಂಪನಿಗಳು ನೀಡದಿದ್ದರೆ ಕಠಿಣ ಕ್ರಮ : ಮನೋಜ್ ಕುಮಾರ್ ಮೀನಾ

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. ಏಪ್ರಿಲ್​ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡೂ ದಿನ ಸರ್ಕಾರ ರಜೆ ಘೋಷಣೆ ಮಾಡಿದೆ. ಈ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ ಮತ್ತು ಮ್ಯಾನೇಜ್​ಮೆಂಟ್​ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ಖಾಸಗಿ ಕಂಪನಿಗಳ ಮಾಲಿಕರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಸಿಬ್ಬಂದಿಗಳಿಗೆ ಉತ್ತೇಜಿಸುವುದಲ್ಲದೆ, ಸಾಧ್ಯವಾದರೆ ಅವರಿಗೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೇವೆ. ವರ್ಕ್​ ಫ್ರಾಮ್​ ಹೋಮ್ ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.