ಏಪ್ರಿಲ್ 26 ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್

ವಿಜಯ ದರ್ಪಣ ನ್ಯೂಸ್

ಸಾರ್ವತ್ರಿಕ ಲೋಕಸಭಾ ಚುನಾವಣೆ-2024

ಜಿಲ್ಲೆಯಲ್ಲಿ 8,98,448 ಮತದಾರರು

ಏಪ್ರಿಲ್ 26 ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 24  :-ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆಯುವ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಹೇಳಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚುನಾವಣಾ ವೇಳಾಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ನಾಲ್ಕು ವಿಧಾನಸಭಾ ಮತಕ್ಷೇತ್ರ ಇದ್ದು ಚುನಾವಣಾ ಮತದಾರ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,98,448 ಮತದಾರರು ಇದ್ದಾರೆ. ಇದರಲ್ಲಿ 4,44,084 ಪುರುಷರು, 4,54,221 ಮಹಿಳೆಯರು ಹಾಗೂ 143 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 18 ರಿಂದ 19 ವರ್ಷದೊಳಗಿನ 23,819 ಯುವ ಮತದಾರರು, 85 ವರ್ಷ ಮೇಲ್ಪಟ್ಟ 10,009 ಹಿರಿಯ ಮತದಾರರು , 13,224 ಅಂಗವಿಕಲ ಮತದಾರರು ಹಾಗೂ 120 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,20,268 ಮತದಾರರಿದ್ದು, ಅದರಲ್ಲಿ 1,11,346 ಮಹಿಳಾ ಮತದಾರರು ಹಾಗೂ 1,08,921 ಪುರುಷ ಮತದಾರರಿದ್ದಾರೆ.

ಹೊಸಕೋಟೆಯಲ್ಲಿ ಒಟ್ಟು 2,39,157 ಮತದಾರರಿದ್ದು, ಅದರಲ್ಲಿ 1,20,474 ಮಹಿಳೆ ಹಾಗೂ 1,18,662 ಪುರುಷ ಮತದಾರರು ಇದ್ದಾರೆ.

ದೇವನಹಳ್ಳಿಯಲ್ಲಿ ಒಟ್ಟು 2,16,704 ಮತದಾರರಿದ್ದು, 1,09,443 ಮಹಿಳಾ ಹಾಗೂ 1,07,245 ಪುರುಷ ಮತದಾರರಿದ್ದಾರೆ.

ನೆಲಮಂಗಲದಲ್ಲಿ 2,22,319 ಮತದಾರರ ಪೈಕಿ 1,12,958 ಮಹಿಳೆ ಹಾಗೂ 1,09,256 ಪುರುಷ ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1023 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1022, ಹೊಸಕೋಟೆಯಲ್ಲಿ 1015, ದೇವನಹಳ್ಳಿ 1020 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1034 ಲಿಂಗಾನುಪಾತ ಕಂಡುಬಂದಿದೆ.

ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.

ಜಿಲ್ಲೆಯಲ್ಲಿ 1137 ಮತಗಟ್ಟೆಗಳ ಪೈಕಿ 960 ಸಾಮಾನ್ಯ ಮತಗಟ್ಟೆಗಳು,177 ಸೂಕ್ಷ್ಮ ಮತಗಟ್ಟೆಗಳು ಹಾಗೂ 13 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪ್ರತಿಯೊಬ್ಬ ಮತದಾರರು ಮತ ಚಲಾಯಿಸಲು ಜಿಲ್ಲಾಧಿಕಾರಿ ಮನವಿ

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರು / ಅಹವಾಲುಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಕಛೇರಿ ಹಾಗೂ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿರವರ ಕಛೇರಿಗಳಲ್ಲಿ ದೂರು ನಿವಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.
ಒಟ್ಟಾರೆ ಈ ಚುನಾವಣೆಯು ಅತ್ಯಂತ ಶಾಂತ ರೀತಿಯಿಂದ ಮುಕ್ತವಾಗಿ, ನ್ಯಾಯ ಸಮ್ಮತವಾಗಿ ಹಾಗೂ ನಿಸ್ಪಕ್ಷಪಾತವಾಗಿ ಜರುಗುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂಧಿ ವರ್ಗದವರಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ಮತದಾರರು ಮೊಬೈಲ್/ಪೋನ್ ಗಳನ್ನು ತೆಗೆದುಕೊಂಡು ಹೋಗುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತದಾರರಲ್ಲಿ ಮನವಿ ಮಾಡಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ ಸಾರ್ವತ್ರಿಕ ಲೋಕಸಭಾ ಚುನಾವಣಾ ಸಂಬಂಧ ಮತದಾನ ಹೆಚ್ಚಿಸಲು ಜಿಲ್ಲೆಯಲ್ಲಿ ಸುಮಾರು 1600 ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪಂಜಿನ ಮೆರವಣಿಗೆ, ಯುವ ಮತದಾರರನ್ನು ಆಕರ್ಷಿಸಲು ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿ, ಸ್ವಚ್ಛತಾ ವಾಹಿನಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ, ನಗರ ಪ್ರದೇಶಗಳಲ್ಲಿನ ಮತದಾರರನ್ನು ಸೆಳೆಯಲು ಬೈಕ್ ಮತ್ತು ಸೈಕಲ್ ಜಾಥ, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲಾ ವರ್ಗದ ಮತದಾರರನ್ನು ಸೆಳೆಯಲು ವಿಕಲಚೇತನರಿಂದ ಬೈಕ್ ಜಾಥ, ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಕಿರುಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ.

ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತಗಟ್ಟೆವಾರು ಕಾರಣಗಳನ್ನು ವಿಮರ್ಶಿಸಿ ಮೈಕ್ರೋ ಪ್ಲಾನ್ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ನೆರಳು, ಕ್ಯೂ ಮ್ಯಾನೇಜ್ಮೆಂಟ್ (QUE MANAGEMENT) ಮಾಡಲು ಕ್ರಮವಹಿಸಲಾಗಿದೆ. 03 ಮತ್ತು ಹೆಚ್ಚು ಮತಗಟ್ಟೆಗಳಿರುವ ಕೇಂದ್ರಗಳಲ್ಲಿ ಓಟರ್ ಅಸಿಸ್ಟೆಂಟ್ ಬೂತ್ (VOTER ASSISTANCE BOOTH) ಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆ. ವಿಕಲಚೇತನರಿಗೆ ಹಾಗೂ ಅಶಕ್ತರಿಗೆ ವೀಲ್ ಚೇರ್ ಹಾಗೂ ರ್ಯಾಂಪ್ (RAMP) ಗಳ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಅಗತ್ಯವಿದ್ದಲ್ಲಿ ಎನ್ಕೊರ್ (ENCORE) ಹಾಗೂ ಸಕ್ಷಮ್ (SAKSHAM) ಅಪ್ಲಿಕೇಶನ್ ನಲ್ಲಿ ನೋಂದಣಿ ಮಾಡಬಹುದಾಗಿದೆ. ಒಟ್ಟು 1137 ಬೂತ್ ಗಳ ಪೈಕಿ 36 ವಿಶೇಷ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

20,97,500 ಲಕ್ಷ ರೂಪಾಯಿ ಗಳ ನಗದು ವಶ

ಮಾದರಿಯ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೂ ಅಬಕಾರಿ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 676 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 1,73,995 ಲೀಟರ್ ಗಳಷ್ಟು ಮಧ್ಯ ವಶಪಡಿಸಿಕೊಳ್ಳಲಾಗಿದೆ ಇದರ ಮೌಲ್ಯ ಸುಮಾರು 7,85,39,418 ಕೋಟಿ ರೂಪಾಯಿ ಗಳಾಗಿರುತ್ತದೆ.

ಜಿಲ್ಲೆಯಲ್ಲಿ ಒಟ್ಟು 20,97,500 ಲಕ್ಷ ರೂಪಾಯಿ ಗಳ ನಗದನ್ನು ವಶಪಡಿಸಿಕೊಳ್ಳಾಗಿದೆ. ಒಟ್ಟು 95,14,600 ಲಕ್ಷ ರೂಪಾಯಿ ಮೌಲ್ಯದ 16.90 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದುವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 3900 ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿ ಪಂ ಸಿಇಓ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.