ನಾಡಪ್ರಭು ಕೆಂಪೇಗೌಡ ರಾಜ್ಯ ಮಟ್ಟದ ಪ್ರಶಸ್ತಿಗೆ ಮೇಲೂರು ಬಿ.ಎನ್.ಸಚಿನ್ ಆಯ್ಕೆ.
ವಿಜಯ ದರ್ಪಣ ನ್ಯೂಸ್…..
ನಾಡಪ್ರಭು ಕೆಂಪೇಗೌಡ ರಾಜ್ಯ ಮಟ್ಟದ ಪ್ರಶಸ್ತಿಗೆ ಮೇಲೂರು ಬಿ.ಎನ್.ಸಚಿನ್ ಆಯ್ಕೆ.
ಶಿಡ್ಲಘಟ್ಟ : ನಾಡಪ್ರಭು ಕೆಂಪೇಗೌಡ ಫೌಂಡೇಷನ್‌ನಿಂದ ನೀಡುವ ಈ ವರ್ಷದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ರಾಜ್ಯ ಮಟ್ಟದ ಪ್ರಶಸ್ತಿಗೆ ತಾಲ್ಲೂಕಿನ ಮೇಲೂರು ಗ್ರಾಮದ ಮಾದರಿ ಯುವ ರೈತರಾದ ಬಿ.ಎನ್.ಸಚಿನ್ ಆಯ್ಕೆಯಾಗಿದ್ದಾರೆ.
ಬಿ.ಎನ್.ಸಚಿನ್ ಸಾಧನೆ :
ಸಚಿನ್ ಅವರದ್ದು ಕೂಡು ಕುಟುಂಬ ಕುಟುಂಬದ ೪೦ ಎಕರೆ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದು ವ್ಯವಸಾಯವನ್ನು ಬರೀ ವ್ಯವಸಾಯದಂತೆ ನೋಡುತ್ತಿಲ್ಲ ಬದಲಿಗೆ ನೂತನ ತಂತ್ರಜ್ಞಾನ ಬಳಸಿಕೊಂಡು ವ್ಯವಸಾಯವನ್ನೆ ಬದುಕನ್ನಾಗಿಸಿಕೊಂಡಿದ್ದಾರೆ ಬೆಲೆಯ ಬಗ್ಗೆ ತಲೆ ಕಡಿಸಿಕೊಳ್ಳದ ಇವರು ಉತ್ತಮ ಇಳುವರಿ (ಕ್ವಾಲಿಟಿ) ಬರುವ ಹಾಗೇ ಅದಕ್ಕೆ ತಕ್ಕಂತೆ ಸಮಯಕ್ಕನುಗುಣವಾಗಿ ಗೊಬ್ಬರ , ಔಷಧಿಗಳನ್ನು ನೀಡುವ ಮೂಲಕ ವ್ಯವಸಾಯ ಮಾಡಲಿದ್ದಾರೆ ಹಾಗಾಗಿಯೆ ಇವರು ಬೆಳೆದ ದ್ರಾಕ್ಷಿ, ಆಲೂಗಡ್ಡೆ ಇರಲಿ, ದಾಳಿಂಬೆಯೆ ಆಗಲಿ, ಟೊಮೆಟೋ ಇರಲಿ ಸಗಟು ವ್ಯಾಪಾರಸ್ಥರು ಮುಗಿಬಿದ್ದು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಾರೆ.
ಇವರು ಬೆಳೆದ ಯಾವುದೇ ಫಸಲಿನ ಗುಣಮಟ್ಟ ಯಾವ ಮಟ್ಟಕ್ಕೆ ಇದೆಯೆಂದರೆ ಬಹುತೇಕ ಫಸಲು ಹಣ್ಣು ಹಂಪಲು ಹೊರ ರಾಜ್ಯದ ಸ್ಟಾರ್ ಹೋಟೆಲ್‌ಗಳಿಗೆ ಮಾರಾಟ ಮಾಡುವಷ್ಟು ಅಷ್ಟರ ಮಟ್ಟಿಗೆ ಗುಣಮಟ್ಟದ ಫಸಲು ಇವರ ತೋಟದಲ್ಲಿ ಬೆಳೆಯುವುದು ಇವರ ಹೆಗ್ಗಳಿಕೆ.
ರಾಜ್ಯದ ಉದ್ದಗಲಕ್ಕೂ ಎಲ್ಲಿಯೆ ಆಗಲಿ ಕೃಷಿಗೆ ಸಂಬಂಸಿದಂತೆ ಕೃಷಿ ಮೇಳ, ವಸ್ತು ಪ್ರದರ್ಶನ, ತರಬೇತಿ, ಕಾರ್ಯಾಗಾರಗಳು ನಡೆದರೆ ಅಲ್ಲಿಗೆ ತೆರಳಿ ಕೃಷಿಯಲ್ಲಿನ ನೂತನ ತಾಂತ್ರಿಕತೆ, ನೂತನ ತಳಿಗಳು, ಮಾರುಕಟ್ಟೆ ವ್ಯವಸ್ಥೆ, ಹವಾಮಾನ ಪದ್ದತಿಗನುಗುಣವಾಗಿ ಬೆಳೆಯುವ ಪದ್ದತಿಗಳನ್ನು ತಿಳಿದು ಅದನ್ನು ಅನುಷ್ಠಾನ ಮಾಡುವುದು ಸಚಿನ್ ಅವರ ಈ ಯಶಸ್ಸಿನ ಹಿಂದಿರುವ ಗುಟ್ಟು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವು ಕಡೆ ಕೃಷಿ ಪ್ರಾತ್ಯಕ್ಷಿತೆ, ತರಬೇತಿಗಳಿಗೂ ಸಚಿನ್ ಅವರನ್ನು ಆಹ್ವಾನಿಸುತ್ತಿದ್ದು ಅಲ್ಲಿ ರೈತರಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡು ಲಾಭದಾಯಕ ಕೃಷಿ ನಡೆಸುವ ಬಗ್ಗೆ ಉಪನ್ಯಾಸಗಳನ್ನ ನೀಡುವಷ್ಟರ ಮಟ್ಟಿಗೆ ಕೃಷಿಯಲ್ಲಿ ನಿಪುಣತೆ ಸಾಸಿದ್ದಾರೆ.
ಜಿಲ್ಲೆ ,ಅಕ್ಕ ಪಕ್ಕದ ಜಿಲ್ಲೆಯ ರೈತರು ಅವರು ಬೆಳೆಯುವ ರೋಗಗಳ ಬಗ್ಗೆ ಹಾಗು ಯಾವಾವ ಋತು ಮಾನದಲ್ಲಿ ಯಾವ ಬೆಳೆ ಇಡಬೇಕೆಂದು ತೋಟದ ಬಳಿ ಬಂದು ಹಾಗು ಮೊಭೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ.
ಸಮಗ್ರ ಕೃಷಿಗೆ ಒತ್ತು :-
ಪ್ರಮುಖವಾಗಿ ದ್ರಾಕ್ಷಿ, ದಾಳಿಂಬೆ ಜತೆಗೆ ಮಾವು, ಹಲಸು, ಬಾಳೆ, ಬಟರ್ ಫ್ರೂಟ್, ನೇರಳೆ, ತೆಂಗು ಇನ್ನಿತರೆ ಹಣ್ಣಿನ ಮರಗಳಿವೆ. ಹಳ್ಳಿ ಕಾರ್ ಜೋಡೆತ್ತುಗಳು, ನಾಟಿ ಹಸು, ಸೀಮೆ ಹಸು, ಎಮ್ಮೆ, ಲಕ್ಷ ಲಕ್ಷ ಬೆಲೆ ಬಾಳುವ ಡಾರ್ಪರ್ ಕುರಿ, ರ‍್ಯಾಂಬುಲೆಟ್ ಕುರಿಗಳಿವೆ ,ಮಳೆ ಕೋಯ್ಲು ವ್ಯವಸ್ಥೆ ಅಳವಡಿಸಿದ್ದು ದೊಡ್ಡ ನೀರಿನ ಸಂಪುಗೆ ನೀರು ತುಂಬಿಸಲಾಗುತ್ತಿದೆ.
ಸ್ಥಳೀಯರಲ್ಲದೆ ಜಪಾನ್, ಜರ್ಮನಿಯಿಂದಲೂ ರೈತರು, ಅಧಿಕಾರಿಗಳ ತಂಡ ಸಚಿನ್ ಅವರ ತೋಟಕ್ಕೆ ಭೇಟಿ ನೀಡಿ ಇವರ ಕೃಷಿಯ ಪರಿಯನ್ನು ವೀಕ್ಷಿಸಿದ್ದಾರೆ ಸಚಿನ್ ಅವರೊಂದಿಗೆ ಚರ್ಚಿಸಿ ಮಾಹಿತಿಯನ್ನು ಪರಸ್ಪರ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಸಿದ್ದ ಸುಬ್ರಮಣ್ಯ ಘಾಟಿಯ ಎತ್ತಿನ ಪರಿಷೆಗೆ ಪ್ರತಿ ವರ್ಷವೂ ಇವರು ಹಳ್ಳಿ ಕಾರ್ ಎತ್ತುಗಳನ್ನು ಪ್ರದರ್ಶಿಸಲಿದ್ದು ಹಲವು ವರ್ಷಗಳಿಂದಲೂ ಉತ್ತಮ ದೇಸೀ ತಳಿ ಹಳ್ಳಿಕಾರ್ ಎತ್ತುಗಳ ಮಾಲೀಕರಿಗೆ ನೀಡುವ ಮೊದಲ ಬಹುಮಾನ ಸಚಿನ್ ಅವರ ಕೊರಳಿಗೆ ಬೀಳುತ್ತಿದೆ.
ಕೃಷಿ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಫೌಂಡೇಷನ್‌ನಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ೩ ಅಂತರಾಷ್ಟ್ರೀಯ ೨೫ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರತಿ ವರ್ಷ ಕೆಂಪೇಗೌಡರ ಜಯಂತಿಯಂದು ನೀಡಲಾಗುತ್ತಿದೆ.
ಈ ಭಾರಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇಲೂರು ಯುವ ರೈತ ಬಿ.ಎನ್.ಸಚಿನ್ ಅವರಿಗೆ ಪ್ರಶಸ್ತಿ ದೊರೆತಿದ್ದು ಇಂದು ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು ಪ್ರಶಸ್ತಿಯು ೨೫ ಸಾವಿರ ರೂ.ನಗದು, ಬೆಳ್ಳಿ ಪದಕ, ಸ್ಮರಣ ಸಂಚಿಕೆ ಒಳಗೊಂಡಿರುತ್ತದೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇನ್ನಿತರೆ ಪ್ರಮುಖರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಮೇಲೂರು ಬಿಎನ್ ಸಚಿನ್ ಮಾತನಾಡಿ ಪ್ರಶಸ್ತಿ ಘೋಷಣೆ ಖುಷಿ ತಂದಿದೆ ಕೃಷಿಯಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆ ಆಗಲಿದೆ ಲಾಭದಾಯಕ ಕೃಷಿ ಬದಲಿಗೆ ಆರೋಗ್ಯದಾಯಕ ಕೃಷಿಯನ್ನು ನಾವು ಮಾಡಬೇಕು.ಕೃಷಿಯಲ್ಲಿನ ತಮ್ಮ ಅನುಭವವನ್ನು ಎಲ್ಲಾರೊಂದಿಗೂ ಹಂಚಿಕೊಂಡು ಎಲ್ಲಾ ರೈತರೂ ಯಶಸ್ವಿಯಾಗಬೇಕು ಕೃಷಿಯಷ್ಟೆ ಅಲ್ಲ ಏನೇ ಕೆಲಸವಾಗಿ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಮಾಡಿದರೆ ಅದರ ಪ್ರತಿಫಲ ಒಂದಲ್ಲ ಒಂದು ರೂಪದಲ್ಲಿ ನಮಗೆ ಸಿಕ್ಕೆ ಸಿಗುತ್ತದೆ.