ಅರಿವು ಕೇಂದ್ರಗಳು ಓದುಗರ ಸ್ನೇಹಿಯಾಗಬೇಕು: ಸಿಇಓ ಡಾ.ಕೆ.ಎನ್.ಅನುರಾಧ
ವಿಜಯ ದರ್ಪಣ ನ್ಯೂಸ್….
ಅರಿವು ಕೇಂದ್ರಗಳು ಓದುಗರ ಸ್ನೇಹಿಯಾಗಬೇಕು: ಸಿಇಓ ಡಾ.ಕೆ.ಎನ್.ಅನುರಾಧ
ಅರಿವು ಕೇಂದ್ರಗಳಿಗೆ ಅಲೆಕ್ಸಾ ಮತ್ತು ಬುಕ್ಸ್ ಕಿಟ್ ವಿತರಣೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಆಗಸ್ಟ್19 : ಪ್ರತಿಯೊಬ್ಬರ ಜ್ಞಾನಾರ್ಜನೆಗೆ ಗ್ರಂಥಾಲಯ ಅವಶ್ಯಕವಾಗಿದೆ. ಇತಿಹಾಸ,ಕಲೆ,ವಿಜ್ಞಾನ,ಪ್ರಯೋಗ, ಹೊಸ ಹೊಸ ತಂತ್ರಜ್ಞಾನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ನೂರು ಪುಸ್ತಕಗಳಿರುವ ಕಿಟ್ ಮತ್ತು ದೃಷ್ಟಿ ಸವಾಲಿರುವವರಿಗೆ ಹೆಚ್ಚು ಉಪಯುಕ್ತವಾಗುವ ಅಲೆಕ್ಸಾವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಕೆ ಎನ್ ಅನುರಾಧ ಅವರು ಹೇಳಿದರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಮಯಕ್ಕೆ ಸರಿಯಾಗಿ ಗ್ರಂಥಾಲಯವನ್ನು ತೆರೆಯಬೇಕು. ಗ್ರಂಥಾಲಯದಲ್ಲಿ ಅಚ್ಚುಕಟ್ಟಾಗಿ ಪುಸ್ತಕಗಳ ಜೋಡಣೆ, ಸ್ವಚ್ಛತೆಯನ್ನು ಕಾಪಾಡಬೇಕು, ಸರ್ಕಾರದಿಂದ ಬರುವ ಎಲ್ಲಾ ಪುಸಕಗಳನ್ನು ಆಯಾ ಪಂಚಾಯಿತಿಯ ಪಿ.ಡಿ.ಒ ಗಳ ಬಳಿ ಗ್ರಂಥಾಲಯದ ಮೇಲ್ವಿಚಾರಕರು ಅಥವಾ ಪಾಲಕರು ನೋಂದಾಯಿಸಿಕೊಂಡು ಪಡೆದುಕೊಳ್ಳಬೇಕು. ಮಕ್ಕಳಿಗೆ ಓದುಗರಿಗೆ ಉತ್ತಮ ರೀತಿಯಲ್ಲಿ ಓದಲು ಪುಸ್ತಕ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿಎಸ್ಆರ್ ಅನುದಾನದಡಿ ಕ್ಯಾಟರ್ಪಿಲ್ಲರ್ ಸಂಸ್ಥೆ ವತಿಯಿಂದ ಅರಿವು ಕೇಂದ್ರಗಳಿಗೆ ಬುಕ್ಸ್ ಕಿಟ್ ವಿತರಣೆ ಮತ್ತು ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ ಅದಕ್ಕಾಗಿ ಅಲೆಕ್ಸಾ ಸಾಧನ ವಿತರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಜಯಲಕ್ಷ್ಮಿ ಅವರು ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ಪುಸ್ತಕಗಳ ಜೋಡಣೆ, ಮಕ್ಕಳ ಆಸಕ್ತಿ ತಿಳಿದು ಅವರಿಗೆ ಬೇಕಾದ ಪುಸ್ತಕ ವಿತರಣೆ, ಕಲಿಕೆ ಆಕರ್ಷಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಕಾರ್ಯಗಾರವನ್ನು ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಪ್ರಥಮ್ ಬುಕ್ ಅಸೋಸಿಯೇಟ್ ಅಧಿಕಾರಿ ಪ್ರದೀಪ್ ದೇವರಾಜ್, ಕ್ಯಾಟರ್ಪಿಲ್ಲರ್ ಸಂಸ್ಥೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.