ಶೂಟೌಟ್ ಅಟ್ ಆಸ್ಟ್ರೇಲಿಯಾ……

ವಿಜಯ ದರ್ಪಣ ನ್ಯೂಸ್…

ಶೂಟೌಟ್ ಅಟ್ ಆಸ್ಟ್ರೇಲಿಯಾ……

ಶೂಟೌಟ್ ಗಳೆಂಬ ಹೊಸ ಬ್ರೇಕಿಂಗ್ ನ್ಯೂಸ್ ಗಳ ಜಗತ್ತಿನಲ್ಲಿ ಬದುಕುತ್ತಿರುವ ನಾವು ನೀವು…..

ಆಫ್ರಿಕಾದ ಕೆಲವು ದೇಶಗಳಲ್ಲಿ ದಿನನಿತ್ಯ ಈ ರೀತಿಯ ಶೂಟೌಟ್ ಗಳು ನಡೆಯುತ್ತಲೇ ಇರುತ್ತದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಈ ಶೂಟ್ ಔಟ್ ಪ್ರತಿ ಕ್ಷಣದ ಘಟನೆಗಳು. ಅಮೆರಿಕಾದಲ್ಲಂತೂ ಇತ್ತೀಚೆಗೆ ಶೂಟ್ ಔಟ್ ಗಳೆಂಬುದು ಅತ್ಯಂತ ಸಹಜವಾಗುತ್ತಿದೆ. ಭಾರತದ ಪುಲ್ವಾಮಾ, ಪೆಹಲ್ಗಾವ್ ಗಳಂತೆ ಬಾಂಬು ಬಂದೂಕುಗಳ
ಶಬ್ದ ಆಗಾಗ ಕೇಳಿ ಬರುತ್ತಲೇ ಇದೆ. ಫ್ರಾನ್ಸ್, ಇಂಗ್ಲೆಂಡ್ ಗಳಲ್ಲಿ ಶೂಟ್ ಔಟ್ ಗಳು, ಮೊನ್ನೆ ತಾನೆ ಆಸ್ಟ್ರೇಲಿಯಾದ ಆ ಸಮುದ್ರ ತೀರದಲ್ಲಿ 16 ಜನರ ಸಾವಿನ ಶೂಟ್ ಔಟ್ ಕಣ್ಣಮುಂದೆಯೇ ಇದೆ.

ಇಸ್ರೇಲ್ ಹಮಾಸ್ ಬಿಡಿ, ಉಕ್ರೇನ್ ರಷ್ಯಾ ಇರಲಿ, ಕಾಂಬೋಡಿಯ ಥೈಲ್ಯಾಂಡ್ ನಂತ ಸಣ್ಣ ದೇಶಗಳೇ ಯುದ್ಧ ಮಾಡಿಕೊಳ್ಳುತ್ತಿವೆ.

ವಿಶ್ವ ಇತಿಹಾಸವನ್ನು ಒಮ್ಮೆ ಅವಲೋಕಿಸಿ ನೋಡಿ. ಕ್ರಿಸ್ತಪೂರ್ವದಿಂದ ಇಲ್ಲಿಯವರೆಗೂ ಪ್ರಾಂತ್ಯಗಳ ನಡುವೆ, ರಾಜ್ಯಗಳ ನಡುವೆ, ದೇಶಗಳ ನಡುವೆ, ಸಂಸ್ಥಾನಗಳ ನಡುವೆ ಯುದ್ಧಗಳು ನಡೆಯುತ್ತಲೇ ಇದೆ. ಎರಡು ಭೀಕರ ವಿಶ್ವ ಮಹಾಯುದ್ಧಗಳು ನಡೆದವು. ಇಷ್ಟೆಲ್ಲಾ ಆದ ನಂತರವೂ ಸುಮಾರು 3000 ವರ್ಷಗಳ ಮಾನವನ ಈ ರಕ್ತ ಸಿಕ್ತ ಇತಿಹಾಸದ ನಂತರವೂ, ಇಷ್ಟೆಲ್ಲಾ ಆಧುನಿಕತೆ ಬಂದ ನಂತರವೂ, ಯೇಸು, ಬುದ್ಧ, ಪೈಗಂಬರ್ ರಂತ ದಾರ್ಶನಿಕರು ಶಾಂತಿಯ ಮಹತ್ವವನ್ನು ಸಾರಿ ಸಾರಿ ಹೇಳಿದ ನಂತರವೂ, ಖುರಾನ್, ಬೈಬಲ್, ಭಗವದ್ಗೀತೆಗಳ ಬೃಹತ್ ಧಾರ್ಮಿಕ ಗ್ರಂಥಗಳ ನಡುವೆಯೂ ಇಷ್ಟೊಂದು ಹಿಂಸೆಯಾಗುತ್ತಿದೆ ಎಂದರೆ ನಾವು ಕಲಿತ ಪಾಠವೇನು..

ಇದಕ್ಕೆಲ್ಲಾ ಜನರಲ್ಲಿ ಇರುವ ಅಜ್ಞಾನ ಮತ್ತು ಸಂಕುಚಿತ ಯೋಚನಾ ಶಕ್ತಿಯೇ ಕಾರಣ. ಆ ಕಾರಣಕ್ಕೆ ಇನ್ನೇನೋ ಕಾರಣ.

ಒಮ್ಮೆ ನಿಧಾನವಾಗಿ ಯೋಚಿಸಿ ನೋಡಿ. ಬೈಬಲ್ಲಿನಲ್ಲಿ ವಿಶ್ವದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಹೇಳಲಾಗುತ್ತದೆ. ಕೆಲವರು ಖುರಾನ್ ನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎನ್ನುತ್ತಾರೆ. ಇನ್ನೊಂದಷ್ಟು ಜನ ಭಾರತದ ವೇದ ಉಪನಿಷತ್ತು, ಭಗವದ್ಗೀತೆಗಳಲ್ಲಿ ಇಡೀ ಬದುಕಿನ ಸಾರಾ ಅಡಗಿದೆ ಎನ್ನುತ್ತಾರೆ. ಮತ್ತೊಂದಷ್ಟು ಜನ ಬುದ್ಧರನ್ನು, ಬಸವಣ್ಣನವರನ್ನು, ಮಹಾತ್ಮ ಗಾಂಧಿಯವರನ್ನು, ಸ್ವಾಮಿ ವಿವೇಕಾನಂದರನ್ನು, ಕಾರ್ಲ್ ಮಾರ್ಕ್ಸರನ್ನು, ಬಾಬಾ ಸಾಹೇಬ್ ಅಂಬೇಡ್ಕರವರನ್ನು, ಗುರುನಾನಕರನ್ನು ಹೀಗೆ ನಾನಾ ವ್ಯಕ್ತಿಗಳನ್ನು ಉದಾಹರಣೆ ನೀಡಿ ಸಾಕಷ್ಟು ಚರ್ಚೆ, ಪುಸ್ತಕಗಳು, ವ್ಯಾಖ್ಯಾನಗಳು ಬಂದಿವೆ. ಆದರೂ ಮನುಷ್ಯನಿಗೆ ಇನ್ನೂ ನೆಮ್ಮದಿಯಾಗಿ ಹೇಗೆ ಬದುಕಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಏಕೆಂದರೆ ಸೃಷ್ಟಿಯ ಸಹಜತೆಯನ್ನು ಈ ಮನುಷ್ಯರು ಒಪ್ಪಿಕೊಳ್ಳುತ್ತಲೇ ಇಲ್ಲ.

ಏಕೆಂದರೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳು ಮತ್ತು ಅದನ್ನು ಮೀರಿದ ಜೀವನ ಕ್ರಮ ಎಷ್ಟು ಸಹಜವಾಗಿರಬೇಕಿತ್ತೋ ಅದಕ್ಕೆ ವಿರುದ್ಧವಾಗಿ ಅನೇಕ ಬಂಧನಗಳಿಗೊಳಗಾಗಿ ಗೊಂದಲದಲ್ಲಿ ಮುಳುಗುತ್ತಿದ್ದಾನೆ. ಶ್ರೇಷ್ಠತೆಯ ವ್ಯಸನ ಅವನನ್ನು ಸಂಪೂರ್ಣ ಆವರಿಸಿಕೊಂಡಿದೆ.

ಯಾರೋ ನಾಯಕನಾಗಬೇಕು, ಇನ್ಯಾರೋ ಅಧಿಕಾರ ಹಿಡಿಯಬೇಕು,, ಮತ್ಯಾರೋ ಶ್ರೀಮಂತನಾಗಬೇಕು, ಮಗದೊಬ್ಬನ್ಯಾರೋ ಜನಪ್ರಿಯನಾಗಬೇಕು ಹೀಗೆ ಹಪಾಹಪಿಗೆ ಬಿದ್ದ ಕೆಲವೇ ವ್ಯಕ್ತಿಗಳು ಈ ಭ್ರಮೆಗಳನ್ನು ಸೃಷ್ಟಿಸಿ ಸಾಮಾನ್ಯ ಜನರ ಬದುಕನ್ನೇ ಬಲಿಕೊಡುತ್ತಿದ್ದಾರೆ.

ಸೃಷ್ಟಿಯಲ್ಲಿ ಮೊಳಕೆಯೊಡೆಯುವ ಮನುಷ್ಯ ಪ್ರಾಣಿ ಸುಮಾರು 80/90 ರ ವಯಸ್ಸಿಗೆ ಹಾಗೆಯೇ ಮುರುಟಿ ಪ್ರಕೃತಿಯಲ್ಲಿ ಲೀನವಾಗುತ್ತಾನೆ. ಹಾಗೆ ಮತ್ತೊಂದು ಬೀಜ ಇನ್ನೆಲ್ಲೋ ಮೊಳಕೆಯೊಡೆಯುತ್ತದೆ. ಇಷ್ಟು ಅತ್ಯಂತ ಸಹಜ ಸೃಷ್ಟಿಯ ನಿಯಮಕ್ಕೆ ಯಾರೋ ಜನ್ಮ, ಪುನರ್ಜನ್ಮ, ಸ್ವರ್ಗ, ನರಕ, ದೇವರು, ಧರ್ಮ ಮುಂತಾದ ಪರಿಕಲ್ಪನೆಗಳನ್ನು ಸೃಷ್ಟಿ ಮಾಡಿ ಅದರಿಂದ ಬದುಕಿನ ಗುಣಮಟ್ಟ ಹೆಚ್ಚಿಸುವುದಿರಲಿ, ಮನುಷ್ಯ ಸಂಕುಲವನ್ನೇ ಹಾಳು ಮಾಡುತ್ತಿದ್ದಾರೆ. ಇದರಲ್ಲಿ ಯಾರು ಹೆಚ್ಚೂ ಅಲ್ಲ ಯಾರು ಕಡಿಮೆಯೂ ಅಲ್ಲ. ಇಲ್ಲಿ ಮೂಲಭೂತವಾಗಿ ಈ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಇವುಗಳನ್ನು ಅಸ್ತ್ರ ಮಾಡಿಕೊಂಡು ಬದುಕುತ್ತಿದ್ದಾರೆ.

ತಮ್ಮ ಮಾತುಗಳಲ್ಲಿ, ಬರಹಗಳಲ್ಲಿ ಹೇಳುವುದೇನು ? ತಮ್ಮನ್ನು ಸಮರ್ಥಿಸಿಕೊಳ್ಳುವುದೇನು ? ಅವರವರ ಧರ್ಮ ಗ್ರಂಥಗಳನ್ನು ವ್ಯಾಖ್ಯಾನಿಸುವುದೇನು ? ಎಲ್ಲದರಲ್ಲೂ ಮನುಷ್ಯ ಪ್ರಜ್ಞೆ
ಹೊರತುಪಡಿಸಿದ ವಿಷ ಬೀಜಗಳೇ ಅವರ ಮಾತುಗಳಲ್ಲಿ ತುಂಬಿರುತ್ತವೆ. ಸಹಜತೆಯಿಂದ ಬಲು ದೂರ ಹೋಗಿ ದ್ವೇಷದ ವಿಷ ಕಾರುವುದನ್ನು ವೃತ್ತಿ ಮಾಡಿಕೊಂಡವರ ಈ ಹುಚ್ಚಾಟಗಳಿಂದಲೇ ಆಸ್ಟ್ರೇಲಿಯಾದ 16 ಜನ ಅಮಾಯಕರ ಸಾವು ಮತ್ತು ಇನ್ನು ಮುಂದೆಯೂ ಇದೆ ರೀತಿಯ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ…

ಜನರಿಗೆ ಇಸ್ರೇಲಿನ ಶೌರ್ಯ ಕಾಣುವ ಜೊತೆಗೆ ಕ್ರೌರ್ಯವೂ ಕಾಣಬೇಕು. ಅದಿಲ್ಲದಿದ್ದಲ್ಲಿ ಈ ಶೂಟ್ ಔಟ್ ಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ.
ಅಮೆರಿಕಾದ ಬಲಿಷ್ಠತೆಯ ಜೊತೆಗೆ ಅದರ ಕುತಂತ್ರ ಬುದ್ಧಿಯೂ ಕಾಣಬೇಕು. ಭಾರತದ ಆಧ್ಯಾತ್ಮದ ಜೊತೆಗೆ ಇಲ್ಲಿನ ಅಸಮಾನತೆ ಮತ್ತು ಶೋಷಣೆಯೂ ಕಾಣಬೇಕು. ಚೀನಾದ ಅಭಿವೃದ್ಧಿಯ ಶ್ರಮದ ಜೊತೆಗೆ ಅದರ ಸರ್ವಾಧಿಕಾರವೂ ಕಾಣಬೇಕು.

ನಾವು ಧರ್ಮ, ದೇವರು ಮುಂತಾದ ವಿಷಯಗಳನ್ನು ಸಮಗ್ರವಾಗಿ ನೋಡದೆ ನಮಗೆ ಅನುಕೂಲಕರವಾದ ರೀತಿಯಲ್ಲಿ ವಿಮರ್ಶೆಗೆ ಒಳಪಡಿಸಿ ಅರ್ಥೈಸಿಕೊಳ್ಳುವುದರಿಂದ ಈ ಶೂಟ್ ಔಟ್ ಗಳ ಜಗತ್ತಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೇವಲ ಕೆಲವೇ ಸಮುದಾಯಗಳ ಮೇಲೆ ಆರೋಪ ಹೊರಿಸಿ ನಾವು ಕೂಪ ಮಂಡೂಕಗಳಂತೆ ವರ್ತಿಸುತ್ತಿದ್ದೇವೆ. ಮೂಲವನ್ನು, ಮೌಢ್ಯವನ್ನು ಪ್ರಶ್ನಿಸುತ್ತಲೇ ಇಲ್ಲ.

ಜಗತ್ತಿನ ಹಣ ಕೇಂದ್ರೀಕೃತ, ಧರ್ಮ ಕೇಂದ್ರೀಕೃತ ಕಾರ್ಪೊರೇಟ್ ಮತ್ತು ಮತಾಂಧ ಶಕ್ತಿಗಳು ನಮ್ಮ ಇಡೀ ಬದುಕಿನ ನಿಜವಾದ ಗುಣಮಟ್ಟವನ್ನೇ ಅಣಕಿಸುತ್ತಿವೆ. ಭದ್ರತೆಯನ್ನು ನಿರ್ಲಕ್ಷಿಸಿ ನಮ್ಮೊಳಗೆ ಸ್ಮಶಾನ ವೈರಾಗ್ಯವನ್ನು ತುಂಬಿ ಈ ಜೀವನ ಇನ್ನೆಷ್ಟು ದಿನವೂ ಎನ್ನುವ ಅಭದ್ರತೆ ಸೃಷ್ಟಿಸುತ್ತಿವೆ.

ಹೀಗಾಗಿ ಈ ಶೂಟ್ ಔಟ್ ಗಳು ಇಡೀ ಮಾನವ ಸಮಾಜದ ಮೇಲೆ ಕರಿನೆರಳನ್ನು ಬೀರಿ, ಬದುಕಿನ ಉತ್ಸಾಹವನ್ನೇ ನಾಶ ಮಾಡಿ ಮುಂದೊಂದು ದಿನ ಜಗತ್ತೇ ಹುಚ್ಚರ ಸಂತೆಯಂತೆ ಆಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ……..

ಧರ್ಮ ದೇವರುಗಳ ಅಪರಿಮಿತ ಶಕ್ತಿಯ ಬಗ್ಗೆ ಭ್ರಮಾತ್ಮಕವಾಗಿ ಮಾತನಾಡುವುದಕ್ಕಿಂತ ಅದರ ಮಿತಿಯ ಬಗ್ಗೆ ಹೆಚ್ಚು ಮಾತನಾಡಿ.
ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಮಾಧ್ಯಮಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಲ್ಲದಿದ್ದರೆ ಜನಸಾಮಾನ್ಯರ ಬದುಕು ನರಕ ಸದೃಶ ನಿಶ್ಚಿತ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068……l