ಚುನಾವಣಾ ರಾಜಕೀಯಕ್ಕೆ ಮಾಜಿ ಸಚಿವ ರಾಮದಾಸ್ ನಿವೃತ್ತಿ ಘೋಷಣೆ !

ವಿಜಯ ದರ್ಪಣ ನ್ಯೂಸ್….

ಚುನಾವಣಾ ರಾಜಕೀಯಕ್ಕೆ ಮಾಜಿ ಸಚಿವ ರಾಮದಾಸ್ ನಿವೃತ್ತಿ ಘೋಷಣೆ !

ಮೈಸೂರು ತಾಂಡವಪುರ ಜನವರಿ 2: ನಾನು ಬಿಜೆಪಿ ಬಿಡುವುದಿಲ್ಲ. ಆದರೆ,ಇನ್ನು ಎಂದೂ ಚುನಾವಣಾ ರಾಜಕೀಯ ಮಾಡುವುದಿಲ್ಲ. ಪರಿಸರ ಉಳಿಸುವ ನಿಟ್ಟಿನಲ್ಲಿ ಸಮಾಜ ಸೇವೆ ಮುಂದುವರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಶುಕ್ರವಾರ ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ವತಿಯಿಂದ ಹೊರತಂದಿರಿವ ನೂತನ ವರ್ಷದ ಕ್ಯಾಲೆಂಡ‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುತ್ತೂರು ಸ್ವಾಮೀಜಿ ಸೇರಿದಂತೆ ನನ್ನನ್ನು ಹತ್ತಿರದಿಂದ ಬಲ್ಲ ಅನೇಕರು ನೀವು ಮತ್ತೆ ಸಕ್ರಿಯವಾಗಿ ಸಮಾಜದ ಜತೆ ಇರಬೇಕು ಎಂದು ಹೇಳುತ್ತಿದ್ದಾರೆ. ನನಗೆ ಚುನಾವಣಾ ರಾಜಕೀಯ ಸಾಕಾಗಿದೆ ಎಂದರು.

ಶ್ರೀರಾಮನಿಗೆ ನಾಳೆ ಪಟ್ಟಾಭಿಷೇಕ ಆಗಬೇಕಿತ್ತು ಹಿಂದಿನ ರಾತ್ರಿ ದಶರಥನ ಮೂಲಕ ಕಾಡಿಗೆ ಹೋಗುವಂತೆ ಹೇಳಿಸಲಾಯಿತು. ಅಂತಹ ಶ್ರೀರಾಮಚಂದ್ರನೇ ಮರು ಮಾತನಾಡದೇ ಕಾಡಿಗೆ ಹೊರಟು ಹೋದ. ನಾನು ರಾಮದಾಸ, ನಾನೇನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಬಿಡಲ್ಲ: ಭಾರತೀಯ ಜನತಾ ಪಕ್ಷ ನನಗೆ ತಾಯಿ ಇದ್ದಂತೆ. ಯಾವುದೇ ಕಾರಣಕ್ಕೂ ತಾಯಿಗೆ ದ್ರೋಹ ಮಾಡುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಊಟಕ್ಕೆ ಕುಳಿತಿದ್ದೆ. ನನ್ನನ್ನು ಎಬ್ಬಿಸಿ ಬೇರೆಯವರನ್ನು ತಂದು ಕೂರಿಸಿದರು. ನಾನು ಎಲ್ಲರಿಗೂ ಊಟ ಬಡಿಸಿದ್ದೇನೆ. ಅದ್ಯಾವುದರ ಬಗ್ಗೆಯೂ ನನಗೆ ದುಃಖವಿಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆದ ಬೆಳವಣಿಗೆ ನೆನೆದರು.

ಕೈ, ರಕ್ತ ಅಶುದ್ಧ ಮಾಡಿಕೊಂಡಿಲ್ಲ: ನನ್ನ ತಂದೆ ಮಾಜಿಸೈನಿಕ. ನಾನೂ ಸೇನೆಗೆ ಸೇರಬೇಕು ಎಂದುಕೊಂಡಿದ್ದೆ. ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ನನಗಿನ್ನೂ ಚನ್ನಾಗಿ ನೆನಪಿದೆ. 1994ರ ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ರಾತ್ರಿ ಮನೆಗೆ ಬಂದೆ. ಒಂದೆ ಕಡೆ ತಂದೆ, ಮತ್ತೊಂದು ಕಡೆ ತಾಯಿ ನಿಂತಿದ್ದರು. ಇಬ್ಬರೂ ಹೆಗಲ ಮೇಲೆ ಕೈಹಾಕಿ ರಾಜಕೀಯ ತುಂಬಾ ಕೆಟ್ಟದ್ದು, ನಿನ್ನ ಕೈ ಕೆಸರು ಮಾಡಿಕೊಳ್ಳಬೇಡ, ರಕ್ತ ಅಶುದ್ಧ ಮಾಡಿಕೊಳ್ಳಬೇಡ. 30 ವರ್ಷ ರಾಜಕೀಯ ಮಾಡಿದ್ದೇನೆ.ಈಗಲೂ ನಾನು ಕೈ ಮತ್ತು ರಕ್ತವನ್ನು ಅಶುದ್ಧ ಮಾಡಿಕೊಂಡಿಲ್ಲ ಎಂದರು.

ನನ್ನ ಕುಟುಂಬದವರ ಆಸ್ತಿ ನನ್ನದಲ್ಲ: ರಾಮದಾಸ್‌
ಅವರಿಗೇನು ಕೊರತೆ, ಅರ್ಧ ಮೈಸೂರು ಅವರದ್ದು ಅಂತೆಲ್ಲ ಹೊರಗೆ ಜನ ಮಾತನಾಡುತ್ತಾರೆ. ನನ್ನ ಕುಟುಂಬದಲ್ಲಿ ಉದ್ಯಮಿಗಳಿದ್ದಾರೆ, ಅದರಲ್ಲಿ ತಪ್ಪೇನು? ಅವರ ಬಳಿ ಇರುವ ಯಾವುದೂ ನನ್ನದಲ್ಲ. 1.50 ಲಕ್ಷ ರೂ. ಪೆನ್ಶನ್ ಹಣ ಬರುತ್ತೆ, ನನ್ನ ಜೀವನಕ್ಕೆ ಅಷ್ಟು ಸಾಕು ಎಂದರು.

ನಾನು ಚುನಾವಣಾ ರಾಜಕೀಯ ಮಾಡುವುದಿಲ್ಲ. ರೋಗ ಬಂದಾಗ ಚಿಕಿತ್ಸೆ ಪಡೆಯುವುದು ಬೇರೆ, ಕಾಯಿಲೆಯೇ ಬಾರದ ರೀತಿಯಲ್ಲಿ ಪರಿಸರ ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಒಂದು ವರ್ಷದಿಂದ ಅಧ್ಯಯನ ಮಾಡುತ್ತಿದ್ದು, ಶೀರ್ಘದಲ್ಲೇ ಪರಿಸರ ಸಂರಕ್ಷಣಾ ಕಾರ್ಯದ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಕೆ ದೀಪಕ್ ಹಿರಿಯ ಪತ್ರಕರ್ತ ಹಾಗೂ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಅಂಶಿ ಪ್ರಸನ್ನಕಮಾರ್  ಹಾಗೂ ಪತ್ರಿಕಾ ವಿತರಕ ಸಂಘದ ಅಧ್ಯಕ್ಷರು ಸದಸ್ಯರುಗಳು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದು ಇದೆ ವೇಳೆ ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ಅಂಶಿ ಪ್ರಸನ್ನ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು