ಹಿರಿಯರು ನಡೆದ ಮಾರ್ಗದಲ್ಲಿ ನಾವು ನಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ  ಭಾಗಿಯಾಗಬೇಕು:  ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ 

ವಿಜಯ ದರ್ಪಣ ನ್ಯೂಸ್…..

 ಹಿರಿಯರು ನಡೆದ ಮಾರ್ಗದಲ್ಲಿ ನಾವು ನಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ  ಭಾಗಿಯಾಗಬೇಕು:ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಶಿಡ್ಲಘಟ್ಟ : ಶಿಕ್ಷಣಕ್ಕೆ ನಮ್ಮೆಲ್ಲರ ಬದುಕನ್ನು ಬದಲಿಸಬಲ್ಲ ಶಕ್ತಿ ಇರುವುದು ಎನ್ನುವ ಮಂತ್ರವನ್ನು ಅರಿತು ಕಳೆದ ೪೦ ವರ್ಷಗಳ ಹಿಂದೆಯೆ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದ ಬಿ.ಎಂ.ಮೂರ್ತಿ ಮತ್ತು ಸ್ನೇಹಿತರ ದೂರದೃಷ್ಟಿ ಕಾರ್ಯ ಶ್ಲಾಘನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲೆಯಲ್ಲಿ ಗ್ರಾಮೀಣ ವಿದ್ಯಾಭಿವೃದ್ದಿ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ದಿ.ಬಿ.ಎಂ.ಮೂರ್ತಿ ಅವರ ೨೫ನೇ ವರ್ಷದ ಮಹಾಪ್ರಸ್ಥಾನದ ಅಂಗವಾಗಿ ಹಮ್ಮಿಕೊಂಡಿದ್ದ ಮೂರ್ತಿ ಅವರ ಪುತ್ಥಳಿ ಅನಾವರಣ, ಜೀವನ ಚರಿತ್ರೆ ಪುಸ್ತಕ ಬಿಡುಗಡೆ, ರಕ್ತದಾನ, ನೇತ್ರ ತಪಾಸಣೆ,ನೇತ್ರ ದಾನ ನೊಂದಣಿ ಶಿಬಿರಕ್ಕೆ ಚಾಲನೆ ಹಾಗು ಆಶೀರ್ವಚನ ನೀಡಿ ಅವರು ಮಾತನಾಡಿದರು.

ಜನ್ಮ ನೀಡಿದ ತಂದೆ ತಾಯಿ, ಅಕ್ಷರ ಕಲಿಸಿದ ಗುರುಗಳು, ಮಾರ್ಗದರ್ಶನ ನೀಡುವ ಹಿರಿಯರನ್ನು ಗೌರವಿಸುವಂತ ಮನೋಭಾವ ನಾವು ಇನ್ನಷ್ಟು ಬೆಳೆಸಿಕೊಳ್ಳಬೇಕು ನಮ್ಮ ಹಿರಿಯರು ನಡೆದ ಮಾರ್ಗದಲ್ಲಿ ನಾವು ನಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ನಾವೆಲ್ಲರೂ ಭಾಗಿ ಆಗಬೇಕಿದೆ ಎಂದು ಹೇಳಿದರು.

ಸಣ್ಣದೊಂದು ಬಾಡಿಗೆ ಶೆಡ್‌ನಲ್ಲಿ ಆರಂಭಿಸಿದ ಶಾಲೆ ಇಂದು ಬೃಹದಾಕಾರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಕೇಂದ್ರವಾಗಿದ್ದು ಈ ಶಿಕ್ಷಣ ಸಂಸ್ಥೆಯನ್ನು ಮುಂದುವರೆಸುತ್ತಿರುವ ಬಿ.ಎಂ.ಮೂರ್ತಿ ಅವರ ಪುತ್ರ ರಾಜೀವ್ ಕುಮಾರ್ ಮತ್ತು ಕುಟುಂಬ, ಟ್ರಸ್ಟಿಗಳ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಶಿಕ್ಷಣ ಸಂಸ್ಥೆಗೂ ನಮ್ಮ ಮಠಕ್ಕೂ ಅವಿನಾಭವ ಸಂಬಂಧವಿದೆ. ಮೂರು ದಶಕಗಳ ಹಿಂದೆಯೆ ಬಿ.ಎಂ.ಮೂರ್ತಿ ಮತ್ತು ಸ್ನೇಹಿತರು ಮಠಕ್ಕೆ ನೀಡಲು ಈ ಭಾಗದ ರೈತರು, ಮಠದ ಭಕ್ತರಿಂದ ಸಂಗ್ರಹಿಸಿದ ರಾಗಿಯನ್ನು ಮಠಕ್ಕೆ ನೀಡಬೇಕಾದರೆ ಶ್ರೀಗಳೆ ಬಂದು ಪಡೆದುಕೊಳ್ಳಬೇಕು ಎಂದು ಭಕ್ತಿ ಪೂರ್ವ ಷರತ್ತು ಹಾಕಿದ್ದರಿಂದ ಆಗ ಬಾಲಗಂಗಾಧರ ನಾಥ ಶ್ರೀಗಳೆ ಬಂದು ರಾಗಿ ಪಡೆದುಕೊಂಡು ಹೋಗಿದ್ದರಂತೆ ಎಂದು ಮಠಕ್ಕೂ ಮೂರ್ತಿ ಅವರಿಗೂ ಇದ್ದ ಅನುಬಂಧವನ್ನು ಸ್ಮರಿಸಿದರು.

ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ಶಿಕ್ಷಣವೇ ನಮ್ಮ ಬದುಕಿನ ಶಕ್ತಿ, ಬದುಕನ್ನು ಬದಲಿಸುವುದು ಕೂಡ ನಾವು ಪಡೆದ ಶಿಕ್ಷಣ ಮಾತ್ರ ,ನಾವು ಜ್ಞಾನ ಆಧಾರಿತ ಶತಮಾನದಲ್ಲಿದ್ದೇವೆ ಉತ್ತಮ ಜ್ಞಾನ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಪರಿಪೂರ್ಣ ಬದುಕು ನಡೆಸಲು ಸಾಧ್ಯವಾಗಲಿದೆ ಎಂದರು.

ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಈ ಭಾಗದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಾಗ ಗುರ್ತಿಸಿ ವಿಶ್ವ ವಿದ್ಯಾಲಯವನ್ನು ಆರಂಭಿಸಿದ್ದು ಈ ಭಾಗದ ಶೈಕ್ಷಣ ಪ್ರಗತಿಗೆ ಇದು ಪೂರಕವಾಗಲಿದೆ ,ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಉತ್ತಮ ಬದುಕಿಗೆ ನಾಂದಿ ಹಾಡಬೇಕು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೂ ಬುನಾದಿ ಹಾಕಬೇಕು ಎಂದು ಮನವಿ ಮಾಡಿದರು.

ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ,
ನಮ್ಮ ಮಕ್ಕಳನ್ನು ನಾವು ಜಾಗತಿಕವಾಗಿ ಸ್ಪರ್ಧೆ ಎದುರಿಸುವ ಎಐ ಶಿಕ್ಷಣ ವ್ಯವಸ್ಥೆಗೆ ಒಗ್ಗಿಕೊಳ್ಳುವ ರೀತಿಯಲ್ಲಿ ತರಬೇತಿ ನೀಡಬೇಕು, ಸನ್ನದ್ಧಗೊಳಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ ಎಂದರು.

ಇದೀಗ ನಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪುಸ್ತಕಗಳನ್ನು ಓದುವ ಜಮಾನ ಮುಗಿಯಿತು ಇನ್ನೇನಿದ್ದರೂ ಕೃತಕ ಬುದ್ದಿ ಮತ್ತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಜಮಾನ ನಮ್ಮ ಎದುರಿಗೆ ಇದೆ ಎಂದರು.

ಇತ್ತೀಚಿನ ದಿನಗಳಲ್ಲಿ ಎಕರೆಗಳು ಹೋಗಿ ಗುಂಟೆಗಳ ಲೆಕ್ಕದಲ್ಲಿ ನಮಗೆ ಜಮೀನುಗಳು ಇವೆ ಇದು ಉತ್ತಮ ಬೆಳವಣಿಗೆಯಲ್ಲ, ಜಮೀನುಗಳನ್ನು ಉಳಿಸಿಕೊಂಡು ಬದುಕಬೇಕಿದೆ ಎಂದರು.
ಇಂದಿನ ದಿನಗಳಲ್ಲಿ ಜಾಗತಿಕ ಕಂಪನಿಗಳು ನಮ್ಮ ಮಕ್ಕಳ ಶಾಲಾ ಕಾಲೇಜುಗಳಲ್ಲಿ ಪಡೆದ ಅಂಕಗಳನ್ನು, ರ‍್ಯಾಂಕ್‌ಗಳನ್ನು ಕೇಳುವುದಿಲ್ಲ ಬದಲಿಗೆ ಪ್ರಾಮಾಣಿಕತೆ, ಕೌಶಲ್ಯವನ್ನಷ್ಟೆ ಕೇಳಲಿದ್ದು ಅದಕ್ಕೆ ತಕ್ಕಂತೆ ನಮ್ಮ ಮಕ್ಕಳನ್ನು ನಾವು ಬೆಳೆಸಬೇಕೆಂದರು.

ಮುಖ್ಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರದ ಜತೆಗೆ ಭೂಮಿಯನ್ನು ನೀಡಿ ಕೃಷಿಯನ್ನು ಮುಂದುವರೆಸುವತೆ ಮಾಡಬೇಕಿದೆ ಎಂದು ಮನವಿ ಮಾಡಿದರು.

ಈ ವೇಳೆ ದಿ.ಬಿ.ಎಂ.ಮೂರ್ತಿ ಅವರ ಪುತ್ಥಳಿ ಅನಾವರಣ ಮಾಡಲಾಯಿತು,ರಕ್ತದಾನ ಶಿಬಿರ, ನೇತ್ರ ತಪಾಸಣೆ ಮತ್ತು ನೇತ್ರದಾನ ನೋಂದಣಿ ಅಭಿಯಾನ ನಡೆಯಿತು. ಮೂರ್ತಿ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿ, ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು,ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಗ್ರಾಮೀಣ ವಿದ್ಯಾಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಕೆ.ಗುಡಿಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳಾನಂದನಾಥ ಸ್ವಾಮಿ, ಗ್ರಾಮೀಣ ವಿದ್ಯಾಭಿವೃದ್ದಿ ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಂ.ರಾಜೀವ್ ಕುಮಾರ್, ಬಿ.ಎಂ.ಮೂರ್ತಿ ಅವರ ಪತ್ನಿ ಟಿ.ಎಸ್.ವಿಜಯಲಕ್ಷ್ಮಿ, ಪ್ರಾಂಶುಪಾಲೆ ಮನುಶ್ರೀರಾಜೀವ್, ಮಾಜಿ ಶಾಸಕ ಎಂ.ರಾಜಣ್ಣ, ಕೆ.ಪಿ.ಬಚ್ಚೇಗೌಡ, ಟ್ರಸ್ಟಿ ಕೆ.ವಿ.ಶಂಕರಪ್ಪ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಯಲುವಳ್ಳಿ ರಮೇಶ್, ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಎಸ್‌.ಎನ್. ಕ್ರಿಯಾಟ್ರಸ್ಟ್ ಅದ್ಯಕ್ಷ ಆಂಜಿನಪ್ಪಬ(ಪುಟ್ಟು), ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಶ್ರೀನಿವಾಸ್‌ರಾಮಯ್ಯ, ಕಾಳನಾಯಕನಹಳ್ಳಿ ಭಿಮೇಶ್, ವಿ.ಸುಬ್ರಮಣಿ, ಎಂ.ಪಾಪಿರೆಡ್ಡಿ, ಬಿ.ವಿ.ಮುನೇಗೌಡ ಮತ್ತಿತರರು ಭಾಗವಹಿಸಿದ್ದರು.