ಮಾಲಿನ್ಯ ಕೆರೆಗಳ ಸಮಸ್ಯೆ ಬಗೆಹರೆಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ: ಉಪ ಲೋಕಾಯುಕ್ತ ಬಿ.ವೀರಪ್ಪ ಖಡಕ್ ಎಚ್ಚರಿಕೆ
ವಿಜಯ ದರ್ಪಣ ನ್ಯೂಸ್…
ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ, ಪರಿಶೀಲನೆ
ಮಾಲಿನ್ಯ ಕೆರೆಗಳ ಸಮಸ್ಯೆ ಬಗೆಹರೆಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ: ಉಪ ಲೋಕಾಯುಕ್ತ ಬಿ.ವೀರಪ್ಪ ಖಡಕ್ ಎಚ್ಚರಿಕೆ

ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ.ಜ.20
ಕಾರ್ಖಾನೆಗಳಿಂದ ಕಲುಷಿತ ನೀರು ಕೆರೆಗಳಿಗೆ ನೇರವಾಗಿ ಹರಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದ್ದನ್ನು ಕೂಡಲೇ ತಡೆಯಲು ಸಂಬಂಧಪಟ್ಟ ಕಾರ್ಖಾನೆಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ ನೀಡಿದರು.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸೇರಿ ವಿವಿಧ ಕೆರೆಗಳಿಗೆ ಅನಿರೀಕ್ಷಿತ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತರು ನಗರಸಭೆಯ ಕಲುಷಿತ ನೀರು, ಕಾರ್ಖಾನೆ ತ್ಯಾಜ್ಯ ಸೇರಿ ಕುಡಿಯಲು ಬಳಸಲು ಯೋಗ್ಯವಲ್ಲದಂತ ನೀರು ಸರಬರಾಜು ನಿಲ್ಲಿಸಿ, ಗ್ರಾಮಸ್ಥರಿಗೆ ಕುಡಿಯಲು ಯೋಗ್ಯ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಮಾಲಿನ್ಯ ನೀರು ಹರಿಯುತ್ತಿರುವ ವಿವಿಧ ಕೆರೆಗಳು ಹಾಗೂ ಕಾರ್ಖಾನೆಗಳ ರಾಸಯನಿಕ ತ್ಯಾಜ್ಯಗಳು ಕೆರೆ ಸೇರಿ ಜನರ ಆರೋಗ್ಯದ ಮೇಲೆ ನಾನಾ ಪರಿಣಾಮ ಬೀರುತ್ತಿದೆ. ಮುಂಬರುವ ದಿನಗಳಲ್ಲಿ ಇದು ಇನ್ನು ಉಲ್ಬಣಿಸುವ ಸಾಧ್ಯತೆ ಹೆಚ್ಚಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಅಧಿಕಾರಿಗಳೇ ನೇರ ಹೊಣೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ತಾತ್ಕಾಲಿಕ ಕಟ್ಟಡ ನೀಡಿದರೂ ಸ್ಥಳಾಂತರ ಮಾಡಿಲ್ಲ ಎಂದು ಗ್ರಾಮಸ್ಥರು ಉಪಲೋಕಾಯುಕ್ತರಿಗೆ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು ಕಚೇರಿ ನೀಡಿದರು ಏಕೆ ಸ್ಥಳಾಂತರಿಸಿಲ್ಲ. ನೀವು ಮಾತ್ರ ಚೆನ್ನಾಗಿದ್ದರೆ ಸಾಕಾ, ಜನರಿಗೆ ಏನಾದರೂ ನಿಮಗೆ ಪರವಾಗಿಲ್ಲ ಅಲ್ವಾ? ಕೂಡಲೇ ಕಚೇರಿಯನ್ನು ಸ್ಥಳಾಂತರಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದರು.
ಗ್ರಾಮಸ್ಥರ ಅಳಲು
ಚಿಕ್ಕತುಮಕೂರು, ದೊಡ್ಡತುಮಕೂರು, ಮಜರಾಹೊಸಹಳ್ಳಿ ಭಾಗದ ಜನರು ವಿವಿಧ ಬಳಕೆಗಳಿಗೆ ಕೆರೆ ನೀರಿನ ಮೇಲೆ ಅವಲಂಬಿತರಾಗಿದ್ದು, ಪ್ರಾಣಿಗಳು ಸಹ ಅದೇ ನೀರು ಕುಡಿಯುವಂತಾಗಿದೆ. ಕಲುಷಿತಗೊಂಡ ಕೆರೆ ನೀರು ಬಳಸಿ ಇಲ್ಲಿನ ಗ್ರಾಮಸ್ಥರು ವಿವಿಧ ಖಾಯಿಲೆಗಳಿಗೆ ಗುರಿಯಾಗಿದ್ದಾರೆ. ಕುಡಿಯಲು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ಬಳಸಲು ಕೆರೆ ನೀರು ಯೋಗ್ಯವಿಲ್ಲದಂತಾಗಿದೆ. ಇದರ ವಿರುದ್ಧ ಪ್ರತಿಭಟನೆಗೆ ಮುಂದಾದವರ ಮೇಲೆ ಪ್ರಕರಣಗಳು ದಾಖಲಾಗಿವೆ. ಆದರೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮವಹಿಸಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಕೂಡ ಇಲ್ಲಿಗೆ ಸ್ಥಳಾಂತರ ಮಾಡಿಲ್ಲ ಎಂದು ಗ್ರಾಮಸ್ಥರು ಉಪಲೋಕಾಯುಕ್ತರಿಗೆ ತಮ್ಮ ಅಳಲು ತೋಡಿಕೊಂಡರು.
ಮಕ್ಕಳಿಂದ ವೃದ್ಧರವರೆಗೂ ಇದೇ ನೀರನ್ನು ಬಳಸುತ್ತಿರುವ ಕಾರಣದಿಂದ ಹಲವಾರು ಮಾರಣಾಂತಿಕ ಕಾಯಿಲೆಗೆ ಜನರು ತುತ್ತಾಗಿದ್ದಾರೆ. ಕ್ಯಾನ್ಸರ್, ಚರ್ಮರೋಗ, ಕಿಡ್ನಿ ವೈಫಲ್ಯ, ಕಣ್ಣಿನ ಸಮಸ್ಯೆ ಸೇರಿದಂತೆ ಗರ್ಭಕೋಶ ತೊಂದರೆಗಳು ಸಹ ಈಗಾಗಲೇ ಜನರಲ್ಲಿ ಕಂಡುಬಂದಿದೆ. ಇದೇ ರೀತಿ ಮುಂದುವರೆದರೆ ಇನ್ನೂ ಹಲವಾರು ಕಾಯಿಲೆಗಳಿಗೆ ತುತ್ತಾಗುವ ಭಯದಿಂದ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ಮಲ್ಲಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು, ರೈತರು ಉಪಸ್ಥಿತರಿದ್ದರು.
