ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಿಂತನೆ ರೂಢಿಸಿಕೊಳ್ಳಿ: ಶಶಿಧರ ಕೋಸಂಬೆ
ವಿಜಯ ದರ್ಪಣ ನ್ಯೂಸ್….
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ
ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಿಂತನೆ ರೂಢಿಸಿಕೊಳ್ಳಿ: ಶಶಿಧರ ಕೋಸಂಬೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜ.21:
ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಸಮಾಜದ ಕುರಿತು ಚಿಂತನೆ, ಕಾಳಜಿ ವಹಿಸಬೇಕು. ಇದರಿಂದ ನಮ್ಮ ಸಮಾಜ ಹಾಗೂ ದೇಶ ಅಭಿವೃದ್ಧಿ ಸಾಧಿಸಲು ಪೂರಕಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳು, ಪೋಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರುಗಳೊಂದಿಗೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿರುವ ಅನಾಚಾರ, ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡುವಂತವರಾಗಬೇಕು.
ಸಮಾಜಕ್ಕೆ ಸತ್ಕಾರ್ಯಗಳನ್ನು ಮಾಡುವ ಗುಣವನ್ನು ವಿದ್ಯಾರ್ಥಿ ದೆಸೆಯಿಂದಲೆ ರೂಢಿಸಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ಆದರ್ಶವಾಗಿಟ್ಟುಕೊಂಡು,ಅವರಂತೆ ನೀವೂ ಕೂಡ ಸಮಾಜ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ರಕ್ಷಣೆಯ ಕೇಂದ್ರಗಳಾಗಬೇಕು. ಮಕ್ಕಳ ರಕ್ಷಣೆಗಾಗಿ ಕಾನೂನುಗಳು ಜಾರಿಗೆ ಬಂದಿದೆ. ರಾಜ್ಯ ಮಕ್ಕಳ ಆಯೋಗವು ಸಂವಿಧಾನ್ಮತವಾಗಿ ರಚಿತವಾಗಿದ್ದು, ಮಕ್ಕಳು ಅನುಭವಿಸುತ್ತಿರುವ ಕಿರುಕುಳ ನಾವು ಗಮನಿಸುತ್ತಿದ್ದೇವೆ. ಮಕ್ಕಳು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ, ಪರಿಹಾರ, ಮುಂಜಾಗ್ರತೆಯು ಆಯೋಗದ ಚಿಂತನೆಯಾಗಿದೆ. 18 ವರ್ಷದ ಕೆಳಗಿನ ಮಕ್ಕಳು ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು. ಮಕ್ಕಳ ಸೇವೆ ದೇವರ ಸೇವೆ ಎಂಬ ಚಿಂತನೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಮಕ್ಕಳು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮಕ್ಕಳಿಗೆ ಸಹಾಯವಾಣಿಗೆ ಕರೆ ಮಾಡಲು ಸೂಚಿಸಿದರು.
ಮಕ್ಕಳ ಅಹವಾಲು:
ದೂರದ ಊರುಗಳಿಂದ ಬರುವೆವು ಬಸ್ ವ್ಯವಸ್ಥೆ ಇರುವುದಿಲ್ಲ, ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೈಕಲ್ ನೀಡಿದರೆ ಅನುಕೂಲವಾಗಲಿದೆ ಎಂದು ಅನೇಕ ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿದರು. ಜೊತೆಗೆ ಶಿಕ್ಷಕರ ಕೊರತೆ, ಕಂಪ್ಯೂಟರ್ ವ್ಯವಸ್ಥೆ, ಶಾಲಾ ಕೊಠಡಿ ದುರಸ್ತಿ, ಮೂಲಭೂತ ಸೌಕರ್ಯಗಳು, ಬಾಶೆಟ್ಟಿಹಳ್ಳಿ ಬಳಿ ಸ್ಕೈವಾಕ್, ಶಾಲೆಯಿಂದ ಹೊರಗುಳಿದ ಮಕ್ಕಳ ರಕ್ಷಣೆ ಸೇರಿದಂತೆ ಇತರೆ ಸಮಸ್ಯೆಯ ಅಹವಾಲುಗಳನ್ನು ಸಲ್ಲಿಸಿದರು.

ತೆರೆದ ಮನೆ: ಜಾಗೃತಿ ಮೂಡಿಸಿ
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು, ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಜಾರಿಗೆ ತಂದ ‘ತೆರೆದ ಮನೆ’ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಇಲ್ಲದೇ ಇರುವುದು ಬೇಸರ ಸಂಗತಿ, ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಿಂದ ಪ್ರತಿ ಗುರುವಾರ ಸ್ಥಳೀಯ ಶಾಲಾ ಮಕ್ಕಳಿಗೆ ಠಾಣೆಗೆ ಕರೆಯಿಸಿ ಅಥವಾ ಶಾಲೆಗೆ ಪಿಎಸ್ಐ ನೇತೃತ್ವದ ಪೊಲೀಸರ ತಂಡ ತೆರಳಿ ಕಡ್ಡಾಯವಾಗಿ ತೆರೆದ ಮನೆ ಕಾರ್ಯಕ್ರಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಯನ್ನು ಬಿಟ್ಟ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಆ ವಿದ್ಯಾರ್ಥಿಯ ಮನೆ, ಅವರು ಕೆಲಸ ಮಾಡುವ
ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಲಕ್ಷ್ಮೀ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ರಾಜಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
