ನ್ಯಾಯಾಲಯದ ಆವರಣದಲ್ಲಿ ಇ – ಸೇವಾ ಕೇಂದ್ರ , ಅಂಚೆ ಕಛೇರಿ ಉದ್ಘಾಟನೆ
ಶಿಡ್ಲಘಟ್ಟ : ಇ – ಸೇವಾಕೇಂದ್ರ ,ಅಂಚೆ ಕಛೇರಿ ನ್ಯಾಯಾಲಯದ ಆವರಣದಲ್ಲಿ ಇರುವುದರಿಂದ ವಕೀಲರಿಗೆ ಮತ್ತು ದಾವೆದಾರರಿಗೆ (ಕಕ್ಷಿದಾರರಿಗೆ) ಡಿಜಿಟಲ್ ತಂತ್ರಜ್ಞಾನದ ಮೂಲಕ ನ್ಯಾಯಾಲಯದ ಸೇವೆಗಳನ್ನು ಸುಲಭವಾಗಿ, ಪಾರದರ್ಶಕವಾಗಿ ಮತ್ತು ವೇಗವಾಗಿ ಒದಗಿಸುವುದಾಗಿದೆ ಎಂದು ಉಚ್ಚನ್ಯಾಯಾಲಯ ಹಾಗೂ ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು, ಇ – ಸೇವಾ ಕೇಂದ್ರ ಮತ್ತು ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಪ್ರಕರಣಗಳ
ಸಂಖ್ಯೆ ಹೆಚ್ಚಿರುವುದರಿಂದ ವಾರದಲ್ಲಿ ಮೂರು ದಿನಗಳ ಕಾಲ ಅಪರ ಜಿಲ್ಲಾ ನ್ಯಾಯಾಲಯವನ್ನು ಶಿಡ್ಲಘಟ್ಟದಲ್ಲಿ ಮಧ್ಯಂತರವಾಗಿ ನ್ಯಾಯಪೀಠಾಸನ ಕಾರ್ಯನಿರ್ವಹಿಸುವಂತೆ ಮಾಡಿಕೊಡುವುದಾಗಿ ಹೇಳಿದರು.
ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ವಕೀಲರು ಚಿಂತಾಮಣಿಗೆ ಹೋಗಿ ಬರಲು ತೊಂದರೆ ಆಗುವುದರಿಂದ ಇಲ್ಲಿಯೇ ನ್ಯಾಯಪೀಠಾಸನ ಬಂದಾಗ ಅನುಕೂಲವಾಗುತ್ತದೆ ನ್ಯಾಯಾಲಯದ ಆವರಣದಲ್ಲಿ ಇ-ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಮುಖ್ಯ ಉದ್ದೇಶ,
ಎಲ್ಲರಿಗೂ ನ್ಯಾಯ ಲಭ್ಯವಾಗುವಂತೆ ಮಾಡುವ ಇ-ಕೋರ್ಟ್ಸ್ ಯೋಜನೆಯ ಒಂದು ಪ್ರಮುಖ ಭಾಗವಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು
ನುಡಿದರು.
ಗಿಡಗಳು ನಮ್ಮ ಜೀವನದ ಆಧಾರವಾಗಿವೆ ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ಮಳೆ ಹೆಚ್ಚಳ ಹಾಗ ಭೂಮಿಯ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಇಂದು ನಾವು ನೆಡುವ ಒಂದು ಗಿಡ ಭವಿಷ್ಯದ ಪೀಳಿಗೆಗೆ ಅಮೂಲ್ಯವಾದ ಕೊಡುಗೆಯಾಗುತ್ತದೆ ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಹ ವಹಿಸಬೇಕು ಎಂದರು.
ಹಸಿರು ಪರಿಸರ ನಿರ್ಮಾಣವು ನಮ್ಮೆಲ್ಲರ ಕರ್ತವ್ಯವಾಗಿದೆ ಮಿಯಾವಾಕಿ ಪದ್ಧತಿಯ ಮೂಲಕ ಗಿಡಗಳನ್ನು ನೆಡುವುದರಿಂದ ಕಡಿಮೆ ಜಾಗದಲ್ಲೇ ದಟ್ಟವಾದ ಅರಣ್ಯವನ್ನು ನಿರ್ಮಿಸಬಹುದು ಇದು ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಭೂಗರ್ಭ ಜಲಮಟ್ಟದ ವೃದ್ಧಿ ಹಾಗೂ ಜೈವ ವೈವಿಧ್ಯತೆಯ ರಕ್ಷಣೆಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಲಿಂಗೇಗೌಡ,ಅಪರ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜು ಮತ್ತು ಸಿದ್ಧಣ್ಣ,
ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್, ಶಿಡ್ಲಘಟ್ಟ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯಾ, ಅಪರ ಸಿವಿಲ್ ನ್ಯಾಯಾಧೀಶರಾದ ರಂಜಿತಾ ಮತ್ತು ಭಾವನಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲರಾದ ಎಂ.ಪಾಪಿರೆಡ್ಡಿ, ಶಾಬುದ್ದೀನ್,ಕೃಷ್ಣಮೂರ್ತಿ,
ಶಿವಕುಮಾರ್,ಮೋಹನ್,ಅಶೋಕ್, ಶಾರತ್, ಚಿಕ್ಕಬಳ್ಳಾಪುರ ಉಪವಿಭಾಗದ ಅಂಚೆ ನಿರೀಕ್ಷಕ ಕುಮಾರ್ ಅಭಿನೀತ್, ರಾಬರ್ಟ್ ಸನ್ ಪೇಟೆಯ ಅಂಚೆ ನಿರೀಕ್ಷಕ ಶಶಿಕಿರಣ್,ಶಿಡ್ಲಘಟ್ಟ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವೈ.ಎನ್.ಚಾಮರಾಜ್, ಕೋರ್ಟ್ ಆವರಣದ ಅಂಚೆ ಕಚೇರಿಯ ಸಬ್ ಪೋಸ್ಟ್ ಮಾಸ್ಟರ್ ನಂದೀಶ, ಕೋಲಾರ ವಿಭಾಗದ ಮುರಳೀಧರ್,ರವಿಚಂದ್ರ, ಶಶಿಕುಮಾರ್, ಚಿಕ್ಕಬಳ್ಳಾಪುರ ವಿಭಾಗದ ಎಚ್.ಪಿಸುರೇಶ್, ಸಿ.ಎಂ.ಶ್ರೀಧರ್, ಶಿಡ್ಲಘಟ್ಟ ಅಂಚೆ ವಿಭಾಗದ ಎಸ್.ಯಮುನಾ ಎನ್.ಆಶಾ,ನಾಗಮಣಿ , ತಥಾಗತ ಘೋಷ್ ಮತ್ತಿತರರು ಹಾಜರಿದ್ದರು.