ಸಾಲ ವಸೂಲಾತಿ ಹೆಚ್ಚಳ ಅದರೆ ನಬಾರ್ಡ್ ನಿಂದ ಅನುದಾನ ಸಿಗುತ್ತದೆ: ಬಂಕ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…

ಸಾಲ ವಸೂಲಾತಿ ಹೆಚ್ಚಳ ಅದರೆ ನಬಾರ್ಡ್ ನಿಂದ ಅನುದಾನ ಸಿಗುತ್ತದೆ: ಬಂಕ್ ಮುನಿಯಪ್ಪ

ಶಿಡ್ಲಘಟ್ಟ : ಸಾಲ ವಸೂಲಾತಿಯ ಪ್ರಮಾಣದಲ್ಲಿ ಹೆಚ್ಚಳ ಆದರೆ ಮಾತ್ರ ನಮಗೆ ನಬಾರ್ಡ್ ನಿಂದ ಅನುದಾನ ಸಿಗುತ್ತದೆ ಕಳೆದ ಮಾರ್ಚ್ ಗೆ ಶೇ53 ರಷ್ಟು ಸಾಲ ವಸೂಲಾತಿಯಾಗಿದ್ದು ಸೆಪ್ಟೆಂಬರ್‌ಗೆ ಶೇ 80 ರಷ್ಟು ಸಾಲ ವಸೂಲು ಮಾಡಲು ನಮ್ಮ ಬ್ಯಾಂಕಿನ ಆಡಳಿತ ಮಂಡಳಿ ಗುರಿ ಇಟ್ಟುಕೊಂಡಿದೆ ಎಂದು ಪಿ.ಎಲ್‌.ಡಿ. ಬ್ಯಾಂಕ್ ನ ಅಧ್ಯಕ್ಷ ಬಂಕ್ ಮುನಿಯಪ್ಪ ಅವರು ರೈತರಲ್ಲಿ ಮನವಿ ಮಾಡಿದರು.

ನಗರದಲ್ಲಿನ ಪಿ.ಎಲ್‌.ಡಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಲ ಮರುಪಾವತಿಸಿದ ರೈತರಿಗೆ ಸಾಲ ಪಡೆಯುವಾಗ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದ ಜಮೀನಿನ ದಾಖಲೆಗಳನ್ನು ರೈತರಿಗೆ ವಾಪಸ್ ಮಾಡಿ ಅವರು ಮಾತನಾಡಿದರು.

ರೈತರು ಕೃಷಿ ಸಾಲದ ಸೆಪ್ಟೆಂಬರ್ ತಿಂಗಳ ಕಂತಿನ ಹಣವನ್ನು ಸೆಪ್ಟೆಂಬರ್ ವರೆಗೂ ಕಾಯದೆ ಅದಕ್ಕೂ ಮುಂಚೆಯೆ ಕಟ್ಟಿದ್ದಲ್ಲಿ ನಬಾರ್ಡ್ ನಿಂದ ನಮಗೆ ಸಿಗುವ ಅನುದಾನ ಹೆಚ್ಚುತ್ತದೆ ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ನೀಡಬಹುದು ಎಂದು ಹೇಳಿದರು.

ಸುಸ್ತಿ ಸಾಲ ವಸೂಲಿ ಮಾಡಿರುವ ಬ್ಯಾಂಕುಗಳಲ್ಲಿ ನಮ್ಮ ಬ್ಯಾಂಕು ರಾಜ್ಯದಲ್ಲಿಯೆ ಮುಂಚೂಣಿಯಲ್ಲಿದೆ ಸುಸ್ತಿ ಸಾಲದ ಪೈಕಿ ಶೇ 20 ರಷ್ಟು ಸಾಲ ವಸೂಲಿ ಮಾಡಿದ್ದು ಇದರಿಂದ ಬ್ಯಾಂಕ್ ನ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದ್ದು ರೈತರಿಗೆ ಸಾಲ ನೀಡುವ ಸಾಮರ್ಥ್ಯ ಹೆಚ್ಚಲಿದೆ ಎಂದರು.

ಕಳೆದ ಹಲವು ವರ್ಷಗಳ ಹಿಂದೆಯೆ ಪಡೆದ ಸಾಲವನ್ನು ಮರು ಪಾವತಿಸಿದ್ದರೂ ಅವರು ಸಾಲ ಪಡೆದುಕೊಳ್ಳುವಾಗ ಬ್ಯಾಂಕ್ ಗೆ ನೀಡಿದ್ದ ಜಮೀನಿನ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಬ್ಯಾಂಕ್ ನಿಂದ ವಾಪಸ್‌ ಪಡೆದುಕೊಳ್ಳದೆ ಇಲ್ಲೇ ಇದ್ದವು ಅಂತಹ ಎಲ್ಲರ ದಾಖಲೆಗಳನ್ನು ಬ್ಯಾಂಕ್ ನ ಅಧಿಕಾರಿ ಸಿಬ್ಬಂದಿಯೆ ರೈತರ ಮನೆಗೆ ತಲುಪಿಸಲಿದ್ದಾರೆ ಎಂದು ವಿವರಿಸಿದರು.

ಈ ವೇಳೆ ಕೆಲ ರೈತರಿಗೆ ಸಾಂಕೇತಿಕವಾಗಿ ದಾಖಲೆಗಳನ್ನು ಹಿಂತಿರುಗಿಸಿದ್ದು ಉಳಿದ 250 ಮಂದಿಗೆ ಅವರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಬೈರೇಗೌಡ ಮಾತನಾಡಿ, ಸಾಲ ನೀಡುವಷ್ಟು ಬ್ಯಾಂಕ್ ಆರ್ಥಿಕವಾಗಿ ಸದೃಡವಾಗದ ಸ್ಥಿತಿಯಲ್ಲೂ ಶೇ 20 ರಷ್ಟು ಸುಸ್ತಿ ಸಾಲವನ್ನು ಕಟ್ಟಿಸಿಕೊಳ್ಳುವ ಮೂಲಕ ಬ್ಯಾಂಕ್ ನ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ಆಡಳಿತ ಮಂಡಳಿ ಮತ್ತು ಸಾಲವನ್ನು ಮರು ಪಾವತಿ ಮಾಡಿದ ರೈತರ ಸಹಕಾರದಿಂದ ಇದೀಗ ಬ್ಯಾಂಕ್ ಸಾಲ ನೀಡುವಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಆರ್.ಶ್ರೀನಾಥ್, ಉಪಾಧ್ಯಕ್ಷ ಡಿ.ಎನ್‌.ರಾಮಚಂದ್ರರೆಡ್ಡಿ, ನಿರ್ದೇಶಕರಾದ ಎಂ.ಪಿ.ರವಿ,ಎಂ.ಜಿ.ಸುರೇಶ್, ಎಂ.ಮುರಳಿ,ಚಂದ್ರನಾಥ್, ಮಂಜುನಾಥ್, ಶ್ರೀನಿವಾಸ್, ಸುನಂದಮ್ಮ, ನರಸಿಂಹಪ್ಪ, ಬ್ಯಾಂಕ್ ನ ಸಿಬ್ಬಂದಿ ಟಿ.ಸಿ.ಶ್ಯಾಮಲ, ಚಂದ್ರಶೇಖರ್, ಪ್ರವೀಣ್‌ ಕುಮಾ‌ರ್, ಪಲ್ಲವಿ ಹಾಜರಿದ್ದರು.