ಸಮಾಜ ಸೇವೆ ಎಂದರೇನು ?
ವಿಜಯ ದರ್ಪಣ ನ್ಯೂಸ್…..
ಸಮಾಜ ಸೇವೆ ಎಂದರೇನು ?
ನಿಸ್ವಾರ್ಥವೇ ?
ತ್ಯಾಗವೇ ?
ಸ್ವಾರ್ಥದ ಮುಖವಾಡವೇ ?
ವೃತ್ತಿಯೇ ?
ಹವ್ಯಾಸವೇ ?
ಕರ್ತವ್ಯವೇ ?
ವ್ಯಾಪಾರ ವ್ಯವಹಾರವೇ ?
ಅಧಿಕಾರ ಹಣ ಪ್ರಚಾರದ ಮೋಹವೇ ?
ಪಲಾಯನ ಮಾರ್ಗವೇ ?
ನಾಯಕತ್ವದ ಪ್ರದರ್ಶನವೇ ?
ಕೆಲಸವಿಲ್ಲದವರ ಅನಾವಶ್ಯಕ ಓಡಾಟವೇ ?
ಹೊಟ್ಟೆ ಪಾಡಿನ ದಾರಿಯೇ ?
ಬುದ್ದಿಯ ತೋರ್ಪಡಿಕೆಯೇ ?
ಮನಸ್ಸಿನ ಅಹಂನ ತಣಿಸುವಿಕೆಯೇ ?
ಜೀವನದ ಸಾಧನೆಯೇ ?
ಅನುಭವದ ವಿಸ್ತರಣೆಯೇ ?
ಜ್ಞಾನದ ಹಂಚಿಕೆಯೇ ?
ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ?
ಬದುಕಿನ ಸಾರ್ಥಕತೆಯೇ ?
ನಿರ್ಭಾವುಕ ಮನಸ್ಥಿತಿಯೇ ?
ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸಮಾಜ ಸಂಕೀರ್ಣವಾದಷ್ಟು ಸಮಾಜ ಸೇವೆ ವಿವಿಧ ಅರ್ಥಗಳನ್ನು ಪಡೆಯುತ್ತಿದೆ.
ಮದರ್ ತೆರೇಸಾ ಅವರನ್ನು ಸಮಾಜ ಸೇವೆಯ ಬಹುದೊಡ್ಡ ಆದರ್ಶ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ಕೆಲವು ಧರ್ಮಾಧಾರಿತ ವ್ಯಕ್ತಿಗಳ ಮತಾಂತರ ಆರೋಪಗಳ ನಡುವೆಯೂ ಸಮಾಜ ಸೇವೆಗೆ ಇವರು ಒಂದು ಮಾದರಿ. ಕೊಲ್ಕತ್ತಾದ ಬೀದಿಗಳಲ್ಲಿ ಮಲಗಿದ್ದ ಅನಾಥ ಕುಷ್ಠರೋಗಿಗಳ ಸೇವೆಗೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಸೇವೆ ಸಲ್ಲಿಸುತ್ತಾ ಮುಂದೆ ಅದನ್ನೇ ಬದುಕಾಗಿ ಸ್ವೀಕರಿಸಿ ಒಂದು ಸಂಸ್ಥೆಯನ್ನೇ ಕಟ್ಟಿ ಬದುಕಿನ ಕೊನೆಯವರೆಗೂ ಅದನ್ನೇ ಮಾಡುತ್ತಾರೆ.
ಗಾಂಧಿ, ಅಂಬೇಡ್ಕರ್, ಸುಭಾಷ್, ಭಗತ್ ಸಿಂಗ್ ಮುಂತಾದ ರಾಜಕೀಯ ನಾಯಕರ ಸೇವೆ, ಬುದ್ದ, ಮಹಾವೀರ, ಗುರುನಾನಕ್, ಬಸವಣ್ಣ, ವಿವೇಕಾನಂದ ಮುಂತಾದವರ ಆಧ್ಯಾತ್ಮಿಕ, ಧಾರ್ಮಿಕ, ಚಿಂತನಾತ್ಮಕ ಸೇವೆ, ವೈದ್ಯಕೀಯವೂ ಸೇರಿದಂತೆ ವಿವಿಧ ಕ್ಷೇತ್ರಗಳ ಸೇವೆ, ದೇಹ, ರಕ್ತ, ಅನ್ನ, ಶಿಕ್ಷಣ ಸೇವೆಗಳು ಹೀಗೆ ಅನೇಕ ಸಾಮಾಜಿಕ ಸೇವೆಗಳು ಗುರುತಿಸಲ್ಪಡುತ್ತದೆ.
ಸಮಾಜ ಸೇವೆಯ ಗುರಿ, ಉದ್ದೇಶ, ಮಾರ್ಗಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಇದನ್ನು ಅನೇಕ ದೃಷ್ಟಿಕೋನಗಳಿಂದ ನೋಡಲಾಗುತ್ತದೆ.
ಕಷ್ಟದಲ್ಲಿ ಇರುವವರಿಗೆ ಸಹಾಯ, ನೋವಿನಿಂದ ನರಳುತ್ತಿರುವವರಿಗೆ ಸಾಂತ್ವಾನ, ಮುಳುಗತ್ತಿರುವ ಬದುಕಿಗೆ ಆಸರೆ ಎಲ್ಲವೂ ಸೇವೆಗಳೇ,
ಇಲ್ಲಿ ಬಹುಮುಖ್ಯವಾಗಿ ಉದ್ಭವಿಸುವ ಪ್ರಶ್ನೆ ಸಮಾಜ ಸೇವೆ ಸ್ವಾರ್ಥ ರಹಿತವೇ ಅಥವಾ ಸಹಿತವೇ ?
ಮನುಷ್ಯನ ಅರಿವಿನ ಪ್ರಜ್ಞೆಯ ಜೊತೆಯೇ ಸ್ವಾರ್ಥವೂ ಸೇರಿಕೊಂಡಿರುತ್ತದೆ. ಹುಟ್ಟಿನಿಂದ ಸಾವಿನವರೆಗೆ ಆತನ ಮೆದುಳು ಆರೋಗ್ಯಪೂರ್ಣವಾಗಿ ಕೆಲಸ ಮಾಡುತ್ತಿರುವವರೆಗೆ ಸ್ವಾರ್ಥವೇ ಆತನ ಎಲ್ಲಾ ಚಿಂತನೆಗಳ ಮೂಲ. ಅದು ತನಗಾಗಿಯೋ, ಕುಟುಂಬಕ್ಕಾಗಿಯೋ, ಸಮಾಜಕ್ಕಾಗಿಯೋ, ಸೃಷ್ಟಿಗಾಗಿಯೋ ಏನೇ ಇರಲಿ ತನ್ನ ಮನವನ್ನು ತಣಿಸಲು ತನ್ನ ಇಚ್ಛೆಯಂತೆ ಕಾರ್ಯನಿರ್ವಹಿಸುವನು. ಅದು ಸ್ವಾರ್ಥದ ಪರಿಧಿಯೊಳಗೆ ಸೇರುತ್ತದೆ. ಅದರ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು ಮತ್ತು ಮುಂದೆ ಇದು ದುರಾಸೆಯಾಗಿ ಪರಿವರ್ತನೆ ಹೊಂದಿ ಕೇವಲ ತನಗಾಗಿ ಮಾತ್ರ ಎಂಬ ಸ್ವಾರ್ಥದ ತುತ್ತತುದಿ ತಲುಪಬಹುದು.
ಇದರಿಂದಾಗಿ ಸ್ಪಷ್ಟವಾಗುವ ವಿಷಯವೆಂದರೆ ಸ್ವಾರ್ಥ ರಹಿತವಾಗಿ ಯಾವುದೇ ಸೇವೆ ಇರುವುದಿಲ್ಲ. ಏನಾದರೂ ಒಂದು ಅಪೇಕ್ಷೆ, ಉದ್ದೇಶ ಇದ್ದೇ ಇರುತ್ತದೆ. ಬದುಕು, ದೇಹ, ಮನಸ್ಸುಗಳ ಮೇಲೆ ಸಾಕಷ್ಟು ನಿಯಂತ್ರಣ ಸಾಧಿಸಿ ಆಸೆಯೇ ದುಃಖಕ್ಕೆ ಮೂಲ ಎಂಬ ಅದ್ಬುತ ಸಂದೇಶ ನೀಡಿದ ಬುದ್ದನ ಚಿಂತನೆಯಲ್ಲಿಯೂ ಅದನ್ನು ಸ್ವತಃ ಅರ್ಥಮಾಡಿಕೊಳ್ಳುವ ಅಥವಾ ಸಮಾಜಕ್ಕೆ ತಲುಪಿಸುವಲ್ಲಿಯೂ ಸ್ವಾರ್ಥದ ಲಕ್ಷಣಗಳನ್ನು ಗುರುತಿಸಬಹುದು.
ಹಾಗಾದರೆ ಸಮಾಜ ಸೇವೆಗೆ ಅರ್ಥವಿಲ್ಲವೇ ? ಎಲ್ಲಾ ವೃತ್ತಿ ಉದ್ಯೋಗ ಅಥವಾ ಬದುಕಲು ಏನಾದರೂ ಒಂದು ಮಾಡುವ ಕ್ರಿಯೆಯಲ್ಲಿ ಸಮಾಜ ಸೇವೆಯೂ ಒಂದು ಎಂದು ಪರಿಗಣಿಸಬಹುದೆ ? ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮದರ್ ತೆರೇಸಾ ಮುಂತಾದವರ ಸೇವೆಯೂ, ಉದ್ಯಮಿಗಳು ಕಲಾವಿದರ ಸೇವೆಯೂ, ಧಾರ್ಮಿಕ, ರಾಜಕೀಯ ವ್ಯಕ್ತಿಗಳ ಸೇವೆಯೂ, ಕುಟುಂಬಕ್ಕಾಗಿ ದುಡಿಯುವ ವ್ಯಕ್ತಿಗಳ ಸೇವೆಯೂ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಕೆ ? ಅಥವಾ ಚರ್ಚೆ ಸಮರ್ಥನೆಗಾಗಿ ಇದಕ್ಕೆ ಬೇರೆ ಬೇರೆ ಆಯಾಮ ನೀಡಿ ಸಮಾಧಾನ ಮಾಡಿಕೊಳ್ಳುವುದೇ ?
ಸಮಾಜ ಸೇವೇಗೆ ಯಾವುದೇ ಅರ್ಥವಿಲ್ಲವೇ ?
ಬಸವಣ್ಣ, ಗಾಂಧಿ, ಅಂಬೇಡ್ಕರ್, ಆಜಾದ್ ಮುಂತಾದವರಿಗೆ ತಲೆ ಕೆಟ್ಟಿತ್ತೇ ? ಇವರುಗಳು ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿದರೇ ಅಥವಾ ತಮ್ಮ ಮನಸ್ಸಿನ ಅಹಂ ತಣಿಸಲು ಅಥವಾ ತಾವು ನಾಯಕರಾಗಲು ಅಥವಾ ತಮ್ಮ ಬುದ್ದಿಯ ಪ್ರದರ್ಶನ ಮಾಡಲು ಅಥವಾ ಸಮಾಜದ ಮೇಲೆ ತಾವು ನಿಯಂತ್ರಣ ಹೊಂದಲು ಅಥವಾ ತಮ್ಮ ಬದುಕು ಸಾರ್ಥಕ ಪಡಿಸಿಕೊಳ್ಳಲು ಸಮಾಜದ ಸೇವೆಯನ್ನು ನೆಪವಾಗಿ ಬಳಸಿಕೊಂಡರೆ ?
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಸಾಮಾನ್ಯವಾಗಿ ಸದಾ ಹೇಳುವುದು ನಾವು ಮಾಡುವ ಕೆಲಸ ನಮಗಾಗಿ ಅಲ್ಲ ನಿಮಗಾಗಿ, ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಒಳಿತೇ ನಮಗೆ ಮುಖ್ಯ ಎಂದು. ಅದಕ್ಕಾಗಿ ನಾವು ನಮ್ಮ ಅನೇಕ ಸುಖ ಸಂತೋಷಗಳನ್ನು ತ್ಯಾಗ ಮಾಡಿದ್ದೇವೆ ಎಂದು. ಇದನ್ನು ಹೇಗೆ ಅರ್ಥೈಸುವುದು ? ಸ್ವಯಂ ಪ್ರೇರಣೆಯಿಂದ ಸೇವೆಗೆ ಬಂದು ಈಗ ನನಗೆ ಯಾವುದೇ ಸ್ವಾರ್ಥವಿಲ್ಲ ಎಂಬುದು ಆತ್ಮವಂಚನೆಯಲ್ಲವೇ ?
ಹಣ, ಅಧಿಕಾರ, ಪ್ರಚಾರ ಮುಂತಾದ ಲಾಭಕ್ಕಾಗಿ ಮಾಡುವ ಸೇವೆ ಮತ್ತು ಇವುಗಳನ್ನು ಪಡೆಯುವ ಸಾಧ್ಯತೆ ಇದ್ದರೂ ಅದನ್ನು ತಿರಸ್ಕರಿಸಿ ತನ್ನ ಮನಸ್ಸಿನ ಇಚ್ಚೆಯಂತೆ ತನ್ನಿಂದ ಇತರರಿಗೆ ಏನಾದರೂ ಪ್ರಯೋಜನವಾಗಲಿ ಎಂದು ಮಾಡುವ ಸೇವೆಗಳಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ ಇದನ್ನು ನಿರ್ಧರಿಸಬೇಕೆ ? ಹಾಗಾದರೆ ಇದಕ್ಕೆ ಇರುವ ಮಾನದಂಡಗಳೇನು ? ಅದನ್ನು ರೂಪಿಸುವುದು ಯಾವ ನಿಯಮಗಳ ಅಡಿಯಲ್ಲಿ ? ಸೃಷ್ಟಿಯ ಮೂಲದಿಂದಲೋ, ಮಾನವೀಯ ಮೌಲ್ಯಗಳಿಂದಲೋ, ನಾಗರಿಕತೆಯ ನೈತಿಕತೆಯಿಂದಲೋ, ಕಾನೂನಿನ ಆಧಾರದಿಂದಲೋ ? ಅನುಭವದ ಮೂಸೆಯಿಂದಲೋ ?
ಸೇವೆಯ ಪಾವಿತ್ರ್ಯತೆಗೂ, ಹೊಟ್ಟೆ ಪಾಡಿನ ಮೋಹಕ್ಕೂ ನಡುವಿನ ಅಂತರ ಗುರುತಿಸುವುದು ಸಾಧ್ಯವಿಲ್ಲವೇ ?
ಭ್ರಷ್ಟನೊಬ್ಬ ರಾಬಿನ್ ಹುಡ್ ಮಾದರಿಯಲ್ಲಿ ಉಳ್ಳವರಿಂದ ದೋಚಿ ಅಥವಾ ಆ ರೀತಿ ಭಾವಿಸಿ ಅದನ್ನು ಇತರರಿಗೆ ಕೊಡುವ ಉದಾಹರಣೆಯೂ, ಸಿದ್ದಗಂಗಾ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಅನ್ನ ದಾಸೋಹ ಮಾಡಿದ ಉದಾಹರಣೆಯೂ, ಸಾಲು ಮರದ ತಿಮ್ಮಕ್ಕನವರ ಸೇವೆಯೂ, ಇನ್ಫೋಸಿಸ್ ಸುಧಾಮೂರ್ತಿ, ವಿಪ್ರೋ ಅಜೀಂ ಪ್ರೇಮ್ ಜಿ ತರಹದ ಕಾರ್ಪೊರೇಟ್ ಜನರ ಸೇವೆಯೂ, ರಾಜಕಾರಣಿಗಳು ಜನರಿಗೆ ಮಾಡುವ ಸೇವೆಯೂ, ದಿಕ್ಕಿಲ್ಲದ ಹೆಣವನ್ನು ಸ್ವತಃ ತಾನೇ ಹೊತ್ತು ಶವ ಸಂಸ್ಕಾರ ಮಾಡುವ ಸೇವೆಯೂ, ಹಸಿದವರಿಗೆ ಅನ್ನ ನೀಡುವ ಸೇವೆಯೂ ಹೀಗೆ ಒಂದು ಸಿದ್ದ ನೀತಿ ನಿಯಮಗಳಿಗೆ ಈ ಸಮಾಜ ಸೇವೆ ನಿಲುಕುತ್ತಿಲ್ಲ.
ಈ ರೀತಿಯ ಜಿಜ್ಞಾಸೆಗೆ ಇನ್ನೂ ಅಂತಿಮ ಉತ್ತರ ಸಿಗುತ್ತಿಲ್ಲ. ಕಾಯಕವೇ ಕೈಲಾಸ ಎಂಬುದೇ ಸದ್ಯದ ವಾಸ್ತವ ಎಂಬ ಭರವಸೆಯೊಂದಿಗೆ…….
ಇದೇ ಸಂದರ್ಭದಲ್ಲಿ ಸಮಾಜದ ಸೇವೆಯಲ್ಲಿ ಉತ್ತುಂಗಕ್ಕೇರಿದ ಮದರ್ ತೆರೇಸಾ ಅವರನ್ನು ಸ್ಮರಿಸುತ್ತಾ…….
ಮದರ್ ತೆರೇಸಾ – ಆಗಸ್ಟ್ 26 1910…..
ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ ಕೈಯ್ಯಾರೆ ಉಪಚರಿಸಿ ಅವರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ಮಾನವೀಯತೆಯ ಮೇರು ಶಿಖರ ಮದರ್ ತೆರೆಸಾ………....
ಬಿಲ್ ಗೇಟ್ಸ್, ಅಜೀಂ ಪ್ರೇಮ್ಜಿ, ಅಂಬಾನಿ, ಮಾರ್ಕ್ ಜುಕರ್ ಬರ್ಗ್ ಮುಂತಾದವರು ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ದಾನ ಮಾಡಿದ್ದಾರೆ. ಅದೂ ಸಹ ಅತ್ಯುತ್ತಮ ಸೇವೆಯೇ ನಿಜ. ಆದರೆ ತಾವೇ ಖುದ್ದು ಮುಂದೆ ನಿಂತು ಇಡೀ ವ್ಯವಸ್ಥೆಯೇ ಅಸಹ್ಯಪಟ್ಟುಕೊಳ್ಳುವ ಜನರನ್ನು ತಮ್ಮ ಜೊತೆಗೇ ಇಟ್ಟುಕೊಂಡು ಅವರ ಸೇವೆ ಮಾಡುತ್ತಾ ತಮ್ಮ ಜೀವನ ಸವೆಸಿದ ಆ ಮಹಾತಾಯಿಯ ತೂಕವೇ ಬೇರೆ…….
ಎಷ್ಟೋ ಜನ ತಮ್ಮ ಕಲೆಗಾಗಿ, ಸಾಹಿತ್ಯಕ್ಕಾಗಿ, ಕ್ರೀಡೆಗಾಗಿ, ಸೇವೆಗಾಗಿ ಭಾರತ ರತ್ನ ಪಡೆದಿದ್ದಾರೆ. ಅದು ಕೂಡ ಮಹಾನ್ ಸಾಧನೆಯೇ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ರೀತಿಯ ಸಮಾಜದ ಕಟ್ಟ ಕಡೆಯ ಜನರಿಗಾಗಿ ಬದುಕನ್ನೇ ಮೀಸಲಿರಿಸಿದ ಈ ಅಮ್ಮ ನಿಜವಾದ ಭಾರತ ರತ್ನ…..
ಒಂದು ಹಂತಕ್ಕೆ ಆಕೆ ಬೆಳೆದು ನೊಬೆಲ್ ಪ್ರಶಸ್ತಿಯ ನಂತರ ಆಕೆಯ ಪರಿಸ್ಥಿತಿ ಸಹಜವಾಗಿಯೇ ಉತ್ತಮವಾಗಿರುತ್ತದೆ. ಆದರೆ ಪ್ರಾರಂಭದ ಹಂತದಲ್ಲಿ ಅನಾಗರಿಕ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೇ ಇದ್ದು ಬಡತನವೆಂಬುದು ದಟ್ಟ ದರಿದ್ರ ಎಂಬ ಸಂದರ್ಭದಲ್ಲಿ ಆಕೆ ಈ ಸೇವೆಯನ್ನು ತನ್ನ ಕರ್ತವ್ಯ ಎಂದು ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡು ಮಾಡಿದ ರೀತಿ ಇದೆಯಲ್ಲಾ ಅದು ಊಹಿಸಲೂ ಅಸಾಧ್ಯ……..
ಪ್ರವಚನ, ಕಲೆ, ಸಾಹಿತ್ಯ, ಸಂಗೀತ, ಬುದ್ದಿಮಾತು ಇವೆಲ್ಲಾ ನಮ್ಮ ನಿಮ್ಮ ಆಂತರಿಕ ಪ್ರತಿಭೆಯನ್ನು ಅವಲಂಬಿಸಿರುತ್ತದೆ. ಆದರೆ ನತದೃಷ್ಟ ರೋಗಿಗಳ ಉಚಿತ ಸೇವೆ ಇದೆಯಲ್ಲ ಆದು ಎಲ್ಲವನ್ನು ಮೀರಿದ್ದು.
ಅದಕ್ಕಾಗಿಯೇ ಆ ಮಾತೆ ಸರ್ವ ಶ್ರೇಷ್ಠವಾಗಿ ನಿಲ್ಲುತ್ತಾಳೆ……..
ಇನ್ನು ಆಕೆಯ ಹೆಸರಿನಲ್ಲಿ ನಡೆದ ಪವಾಡ, ಆಕೆಗೆ ನೀಡಿದ ಸಂತ ಪದವಿ ಎಲ್ಲವೂ ಎಂದಿನಂತೆ ಮೌಢ್ಯದ ಮತ್ತೊಂದು ರೂಪ. ಆಕೆಯು ಕೂಡ ನಮ್ಮ ನಿಮ್ಮಂತೆ ಮೂಳೆ, ಮಾಂಸ, ರಕ್ತ ಮತ್ತು ಚರ್ಮದ ಹೊದಿಕೆ. ಯಾವ ದೈವಶಕ್ತಿಯೂ ಇಲ್ಲ. ಜೀವಂತವಿದ್ದಾಗ ಮಾಡಿದ ಪರೋಪಕಾರವೇ ನಮ್ಮೆಲ್ಲರ ಪಾಲಿಗೆ ಸ್ಪೂರ್ತಿಯ ಮಹಾನ್ ಶಕ್ತಿ…….
ಸಮಾಜ ಸೇವಾ ಹೆಸರಿನ ಬಹಳಷ್ಟು ಆತ್ಮವಂಚಕ ಮನಸ್ಸುಗಳಿಗೆ ಪ್ರಜಾಸೇವೆಯಲ್ಲಿ ಆಕೆ ಮಾದರಿಯಾಗಲಿ. ಕಪಟ ನಾಟಕಗಳು ನಿಲ್ಲಲಿ ಎಂದು ಆಶಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451……
9844013068……