ಬೀದಿ ನಾಯಿ ಹಾವಳಿ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಿಸಿ ಎಬಿ ಬಸವರಾಜು
ವಿಜಯ ದರ್ಪಣ ನ್ಯೂಸ್….
ಪಶುಸಂಗೋಪನೆ ಚಟುವಟಿಕೆಗಳಿಂದ ರೈತರಿಗೆ ವರದಾನ
ಬೀದಿ ನಾಯಿ ಹಾವಳಿ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಿಸಿ ಎಬಿ ಬಸವರಾಜು
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾಂ.ಜಿಲ್ಲೆ, ಆಗಸ್ಟ್,25 : ಬೀದಿ ನಾಯಿ ಹಾವಳಿಯಿಂದ ಆಗುವ ಅನಾಹುತವನ್ನು ತಪ್ಪಿಸಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ನವೀಕರಣ ಹಾಗೂ ಸಂಚಾರಿ ಪಶುಚಿಕಿತ್ಸಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದಿ ನಾಯಿಗಳ ಹಾವಳಿ ಮತ್ತು ಸಂತಾನ ನಿಯಂತ್ರಣದ ಬಗ್ಗೆ ಮಾತನಾಡುತ್ತಾ, 2025-26ನೇ ಸಾಲಿನಲ್ಲಿ ರೇಬಿಸ್ ಮಾಸಾಚರಣೆ ಚಟುವಟಿಕೆ ನಡೆಸಲು ಪ್ರಾಣಿ ಕಲ್ಯಾಣ ಮಂಡಳಿಯಿಂದ ಜಿಲ್ಲೆಗೆ 20 ಸಾವಿರ(ಪ್ರತಿ ತಾಲ್ಲೂಕಿಗೆ ರೂ. 5 ಸಾವಿರ) ಅನುದಾನ ನೀಡಲಾಗಿದೆ, ಇದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ನಗರಸಭೆ, ಪುರಸಭೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಾಡಬೇಕು. ಜಿಲ್ಲೆಯಲ್ಲಿ ಅನಗತ್ಯವಾಗಿ ಪ್ರಾಣಿಗಳನ್ನು ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾಯಿ ತಳಿ ಸಂವರ್ಧನೆ ಮತ್ತು ಮಾರಾಟ ಕೇಂದ್ರಗಳು ಇದ್ದಲ್ಲಿ ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ABC (ಪ್ರಾಣಿ ಜನನ ನಿಯಂತ್ರಣ) ಕಾಯ್ದೆ
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಈ ಕಾಯ್ದೆಯಡಿ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಕ್ರಿಮಿನಾಶಕ ಮತ್ತು ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸುತ್ತವೆ. ಈ ಕಾಯ್ದೆಯನ್ನು 2001ರಲ್ಲಿ ಜಾರಿಗೊಳಿಸಲಾಯಿತು, ನಂತರ 2023ರಲ್ಲಿ ನಿಯಮಗಳನ್ನು ನವೀಕರಿಸಲಾಗಿದೆ,ಇದರ ಮುಖ್ಯ ಉದ್ದೇಶ ಹೆಚ್ಚುತ್ತಿರುವ ಬೀದಿ ನಾಯಿಗಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದು, ರೇಬಿಸ್ ಕಾಯಿಲೆ ನಿರ್ಮೂಲನೆ ಮಾಡಲು
ನಾಯಿಗಳಿಗೆ ಲಸಿಕೆಗಳನ್ನು ಹಾಕುವುದು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಪ್ರಾಣಿ ವಧೆ ಮಾಡುವಂತಿಲ್ಲ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ. ಸಾಧ್ಯವಾದಲ್ಲಿ ಹಸುಗಳಿಗೆ ಬೇಕಾದ ಮೇವುಗಳನ್ನು ಗೋಶಾಲೆಗಳ ಜಾಗದಲ್ಲಿ ಬೆಳೆಯಿರಿ.
ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಹೆಚ್ಚಿನ ಪ್ರೊತ್ಸಾಹ ಕಲ್ಪಿಸಿ, ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಕೊಟ್ಟಿಗೆ ಗೊಬ್ಬರ ಬಳಸಿ ಪೌಷ್ಠಿಕ ಆಹಾರ ಉತ್ಪನ್ನಗಳನ್ನು ಬೆಳೆಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು.
ಇತ್ತೀಚಿನ ದಿನಗಳಲ್ಲಿ ಸಗಣಿಯ ಬೆರಣಿಗೆ ಹೆಚ್ಚಿನ ಬೇಡಿಕೆಯಿದೆ, ಹಾಗಾಗಿ ಬೆರಣಿಯನ್ನು ಅಡುಗೆ ಮಾಡಲು ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಗೋ ಮೂತ್ರ ಮತ್ತು ಸಗಣಿಯಿಂದ ತಯಾರಿಸುವ ದೀಪಗಳು, ಸ್ಟಿಕ್ಕರ್ ಗಳು, ಅಲಂಕಾರಿಕ ವಸ್ತುಗಳು ಹಾಗೇ ಇನ್ನೂ ಹಲವಾರು ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಇವುಗಳ ಉತ್ಪಾದನೆ ಮಾಡಲು ತರಬೇತಿ ನೀಡಿದರೆ ಹಲವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಮುಖ್ಯವಾಗಿ ನಮ್ಮಲ್ಲಿರುವ ಗೋಶಾಲೆಯಲ್ಲಿನ ಪಶುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಜೊತೆಗೆ ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ ಮತ್ತು ಸಗಣಿ ಹಾಗೂ ಗೋ ಮೂತ್ರದಿಂದ ವಸ್ತುಗಳನ್ನು ತಯಾರಿಸಲು ಪ್ರೋತ್ಸಾಹಧನ ನೀಡವುದರಿಂದ ಯುವಕರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಸುಗಳಿಗೆ ವಿಮೆ ಮಾಡಿಸುವುದರಿಂದ ಅಕಾಲಿಕ ಮರಣ ಹೊಂದಿದರೆ ಪರಿಹಾರ ಸಿಗುತ್ತದೆ.
ಸಭೆಯಲ್ಲಿ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಗದೀಶ್ ಕುಮಾರ್, ಜಿಲ್ಲಾ ಪಶುವೈದ್ಯಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಬ್ಯಾಟರಿ ಚಾಲಿತ ವ್ಹೀಲ್ ಚೇರ್ ವಿತರಿಸಲು ವಿಕಲಚೇತನರಿಂದ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಆಗಸ್ಟ್. 25: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಲ್ಲಾ ಪಂಚಾಯತಿಯ ಅನಿರ್ಬಂಧೀತ ಅನುದಾನದಲ್ಲಿ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಗಳನ್ನು ವಿತರಿಸಲು ಸೇವಾ ಸಿಂಧು ಪೊರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಹ ವಿಕಲಚೇತನರು ಯೋಜನೆಯ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಸೇವಾ ಸಿಂಧು (https://seva sindhu.Karnataka. gov.in/) ಪೊರ್ಟಲ್ ನಲ್ಲಿ ಸೆಪ್ಟೆಂಬರ್ 06, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಕಲಚೇತನರು ಭಾರತದ ಪ್ರಜೆಯಾಗಿದ್ದು, ಕರ್ನಾಟಕದಲ್ಲಿ ಕನಿಷ್ಟ 10 ವರ್ಷಗಳು ವಾಸವಾಗಿರಬೇಕು. ಈ ಯೋಜನೆ ಸೌಲಭ್ಯ ಪಡೆಯಲು ಕುಟುಂಬ ವಾರ್ಷಿಕ ಆದಾಯ ರೂ 2.00 ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿಕಲಚೇತನರ ಅಧಿನಿಯಮದಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಗುರುತಿನ ಚೀಟಿ (ಯುಡಿಐಡಿ ಕಾರ್ಡ್)ಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ.75% ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನವನ್ನು ಚಾಲನೆ ಮಾಡಲು ಸಾಮಾರ್ಥ್ಯ ಹೊಂದಿರದ ಹಾಗೂ ಕನಿಷ್ಟ ಒಂದು ಕೈ, ಒಂದು ಕಣ್ಣು ಸ್ವಾಧೀನದಲ್ಲಿದ್ದು ಹಾಗೂ ಬ್ಯಾಟರಿಚಾಲಿತ ವ್ಹೀಲ್ ಚೇರ್ ಚಲಾಯಿಸಲು ಇತರೆ ಎಲ್ಲಾ ರೀತಿಯಲ್ಲಿ ಸದೃಢವಾಗಿರುವ ವಿಕಲಚೇತನರಾಗಿರಬೇಕು. ಆಸಕ್ತ ದೈಹಿಕ ವಿಕಲಚೇತನರು ಸರ್ಕಾರದಿಂದ ಯಾವುದೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಪಡೆದಿರಬಾರದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಮಾಹಿತಿ ಸಲಹಾ ಕೇಂದ್ರ ದೂರವಾಣಿ ಸಂಖ್ಯೆ-080-29787441 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂ.ಗ್ರಾಂ.ಜಿಲ್ಲೆ. ಆಗಸ್ಟ್,25(ಕ.ವಾ): 2025-26ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ ಯಾತ್ರೆ ಕೈಗೊಳ್ಳುವ ಪರಿಶಿಷ್ಟ ಜಾತಿಯ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ನಿಯೋಜಿಸಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳು https://swd.services.karnataka.gov.in/ ಜಾಲತಾಣದ ಮೂಲಕ ಅರ್ಜಿಯನ್ನು ಸೆಪ್ಟೆಂಬರ್ 09 ರೊಳಗೆ ಸಲ್ಲಿಸಬೇಕು.
ಮಾರ್ಗಸೂಚಿಗಳು:
ಯಾತ್ರಾರ್ಥಿಗಳು ಕಡ್ಡಾಯವಾಗಿ ಬಿ.ಪಿ.ಎಲ್ ಕಾರ್ಡ ಹೊಂದಿರಬೇಕು. ಯಾತ್ರಾರ್ಥಿಗಳು ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಇತರೆ ಸಮುದಾಯದ ಜನರು ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆ ಕೈಗೊಳ್ಳಬಹುದು. ಯಾತ್ರಾರ್ಥಿಗಳಿಗೆ ಕನಿಷ್ಟ 18 ವರ್ಷ ಮೇಲ್ಪಟ್ಟಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು. ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾಭೂಮಿಗೆ ಪ್ರವಾಸ ಮಾಡಿದವರು 2ನೇ ಭಾರಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಸರ್ಕಾರಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು ವಸತಿ ಮತ್ತು ಬೋಜನಾ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸತಕ್ಕದ್ದು.
ಹೆಚ್ಚಿನ ವಿವರಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ, ನಂ.217, 2ನೇ ಮಹಡಿ ಜಿಲ್ಲಾಡಳಿತ ಭವನ. ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110. ದೂ.ಸಂಖ್ಯೆ: 29787447, ಸಹಾಯಕ ನಿರ್ದೇಶಕರು ದೇವನಹಳ್ಳಿ ತಾಲ್ಲೂಕು ದೂ.ಸಂಖ್ಯೆ: 27681784, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂಖ್ಯೆ:27623681, ಹೊಸಕೋಟೆ ತಾಲ್ಲೂಕು ದೂ.ಸಂಖ್ಯೆ:27931528, ನೆಲಮಂಗಲ ತಾಲ್ಲೂಕು ದೂ.ಸಂಖ್ಯೆ: 27723172 ಗೆ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಟಿ.ಎಲ್.ಎಸ್ ಪ್ರೇಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.