ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ……… ಗೆಳೆಯ ಗಣೇಶ ನಿನಗೆ ಹಬ್ಬದ ಶುಭಾಶಯಗಳು……….
ವಿಜಯ ದರ್ಪಣ ನ್ಯೂಸ್…..
ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ………
ಗೆಳೆಯ ಗಣೇಶ ನಿನಗೆ ಹಬ್ಬದ ಶುಭಾಶಯಗಳು……….
**********************
ಹೃದಯದ ಸ್ನೇಹಿತ ಗಣೇಶ,
ಹೇಗಿದ್ದೀಯಾ ?
ನಿನ್ನ ಹೊಟ್ಟೆ ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ.
ನಿನಗೇನು ಕಡಿಮೆ ಗೆಳೆಯ,
100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭಕ್ಷ್ಯಬೋಜನಗಳನ್ನು ಉಣಬಡಿಸುತ್ತಾರೆ. ವರ್ಷಕ್ಕೊಮ್ಮೆ ನಿನ್ನನ್ನು ಹಾಡಿ ಹೊಗಳಿ ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸುತ್ತಾರೆ.
ನೀನು ಅದರಲ್ಲಿ ಮೈಮರೆತು ನಮ್ಮನ್ನು ಮರೆತಿರಬಹುದು. ಅದನ್ನು ನೆನಪಿಸುವ ಸಲುವಾಗಿಯೇ ಮತ್ತು ಇಲ್ಲಿನ ನಿಜ ಸ್ಥಿತಿ ನಿನಗೆ ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ.
ಗೆಳೆಯ,
ನಮ್ಮ ಜನ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ನಿನ್ನನ್ನು ಕಂಡರೆ ಅವರಿಗೆ ಅಪಾರ ಅಭಿಮಾನ – ಬಹಳ ಭಕ್ತಿ. ನಮ್ಮ ಗಣೇಶ ನಮ್ಮೆಲ್ಲಾ ಕಷ್ಟ ಪರಿಹರಿಸುವ ವಿಘ್ನ ವಿನಾಯಕ ಎಂದು ನಂಬಿದ್ದಾರೆ.
ಅನೇಕ ಹೆಸರುಗಳಿಂದ ನಿನ್ನನ್ನು ಕರೆಯುತ್ತಾರೆ. ಎಲ್ಲಾ ಶುಭ ಕಾರ್ಯಗಳಲ್ಲಿ ನಿನಗೇ ಅಗ್ರ ಪೂಜೆ. ಒಂಥರಾ ಎಲ್ಲರಿಗೂ ನೀನೇ ಬಾಸ್.
ಆದರೆ ಗೆಳೆಯ,
ನನ್ನ ಜನಗಳಿಗೆ ನೀನು ಮೋಸ ಮಾಡುತ್ತಿರುವೆ ಎಂಬ ಅನುಮಾನ ನನ್ನದು. ನಮ್ಮ ಅಪ್ಪ ಅಮ್ಮ,ಅಜ್ಜ ಅಜ್ಜಿ, ಮುತ್ತಾತ, ಮುತ್ತಜ್ಜಿ ———. ಹೀಗೆ ಎಲ್ಲರೂ ನೀನು ಬಂದು ನಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸುವೆ, ನಮಗೆ ನೆಮ್ಮದಿ ಕಲ್ಪಸುವೆ ಎಂದು ಕಾಯುತ್ತಲೇ ಇದ್ದಾರೆ. ನೀನು ಮಾತ್ರ ಬರಲೇ ಇಲ್ಲ. ಅವರ ಗೋಳು ಕೇಳಲೇ ಇಲ್ಲ.
ನೋಡು ಗೆಳೆಯ,
ಇಲ್ಲಿಗೆ ಬಂದು ಕಣ್ಣಾರೆ ನೋಡು.
ಕೆಲವರು ವೈಭವೋಪೇತ ಬಂಗಲೆಗಳಲ್ಲಿ ವಾಸಿಸುತ್ತಾ ಅವರ ಮುಂದಿನ ಏಳು ತಲೆಮಾರು ತಿಂದರೂ ಸವೆಯದಷ್ಟು ಆಸ್ತಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಅದೇ ಬಲದಿಂದ ಅಧಿಕಾರ ಹಿಡಿದು ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅವರಿಗೆ ನಿನ್ನ ಅವಶ್ಯಕತೆಯೇ ಇಲ್ಲ.
ಆದರೆ ಗೆಳೆಯ,
ಇದನ್ನು ಬರೆಯುತ್ತಿರುವಾಗಲೂ ನನಗೆ ಅರಿವಿಲ್ಲದೆ ನನ್ನ ಕಣ್ಣಿನಿಂದ ನೀರು ಜಾರುತ್ತಿದೆ. ಗಣೇಶ ,
ಇಲ್ಲಿ ಎಷ್ಟೋ ಜನ ಊಟಕ್ಕೂ ಗತಿಯಿಲ್ಲದೆ ಇಲಿ, ಹಾವು, ಬೆಕ್ಕು, ಜಿರಲೆ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದಾರೆ ಕಣಯ್ಯ.
ವಾಸಿಸಲು ಮನೆಯಿಲ್ಲದೆ ರಸ್ತೆ, ಬೀದಿ, ಬಸ್ ನಿಲ್ದಾಣಗಳಲ್ಲಿ ಬಿಸಿಲಿಗೆ ಬೆಂದು, ಮಳೆಯಲ್ಲಿ ನೆಂದು, ಚಳಿಗೆ ನಡುಗುತ್ತಾ ಮಲಗುತ್ತಿದ್ದಾರೆ. ಅವರಿಗೆ ನಿನ್ನ ಅವಶ್ಯಕತೆ ಇದೆ. ಬೇಗ ಬಾ…
ಅಲ್ವೋ ಗಣೇಶ,
3 ವರ್ಷದ ಏನೂ ಅರಿಯದ ಕಂದಮ್ಮಗಳಿಗೆ ಕ್ಯಾನ್ಸರ್, ಏಡ್ಸ್ ಕಾಯಿಲೆ ಬಂದಿದೆ, 5 ವರ್ಷದ ಪಾಪುವಿನ ಮೇಲೆ ಲೋಫರ್ ಗಳು ಅತ್ಯಾಚಾರ ಮಾಡುತ್ತಾರೆ. ನಿನಗೇನು ಗೊತ್ತಾಗ್ತಾ ಇಲ್ವಾ ಅಥವಾ ಅರ್ಥ ಆಗ್ತಾ ಇಲ್ವಾ,
ಅಲ್ಲಯ್ಯಾ ,
ಒಳ್ಳೆಯವರು ಕಷ್ಟ ನೋವುಗಳಿಂದಲೂ, ದುಷ್ಟ ಭ್ರಷ್ಟರು ಆರಾಮವಾಗಿಯೂ ಇರಲು ಬಿಟ್ಟಿದ್ದೀಯಲ್ಲಪ್ಪ ನಿನಗೇನು ಬುದ್ದಿ ಇಲ್ವಾ.
” ಓ ಇದಕ್ಕೆಲ್ಲಾ ನೀವೇ ಕಾರಣ, ನಿಮ್ಮ ದುರಹಂಕಾರ ದುಷ್ಟತನದಿಂದ ನೀವು ಅನುಭವಿಸುತ್ತಿದ್ದರೆ ನಾನೇನು ಮಾಡಲಿ ” ಎಂದು ಪಲಾಯನ ಮಾಡಬೇಡ. ಜನ ನಿನ್ನನ್ನು ನಂಬಿದ್ದಾರೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ನಿನ್ನ ಜವಾಬ್ದಾರಿ ಎಂದು.
ಅದು ಬಿಟ್ಟು ನೀನು ಎಲ್ಲೋ ಕುಳಿತು ಆಟ ನೋಡುವುದು ಸರಿಯಲ್ಲ ಗೆಳೆಯ.
ಈಗಾಗಲೇ ಜನ ನಿನ್ನ ಬಗ್ಗೆ ಸ್ವಲ್ಪ ಸ್ವಲ್ಪ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ರಕ್ಷಣೆಗೆ ತಾವೇ ಕಾನೂನು, ಪೊಲೀಸ್, ಮಿಲಿಟರಿ ಅಂತ ಮಾಡಿಕೊಂಡಿದ್ದಾರೆ. ನಿನಗೆ ಬೆಲೆ ಕಡಿಮೆಯಾಗಿದೆ.
ಆದಷ್ಟು ಬೇಗ ಇಲ್ಲಿಗೆ ಬಂದು ನಮ್ಮೆಲ್ಲರ ಸಮಸ್ಯೆ ಆಲಿಸಿ ಒಂದಷ್ಟು ಸಮಾನತೆಯ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರೆ ಉತ್ತಮ. ಇಲ್ಲದಿದ್ದರೆ ನಿನ್ನನ್ನು ಪ್ರಾಣಕ್ಕಿಂತ ಹೆಚ್ಚು ನಂಬಿರುವ ಜನಕ್ಕೆ ನೀನು ಮೋಸ ಮಾಡಿದ ಪಾಪ ಕಟ್ಟಿಕೊಳ್ಳಬೇಕಾಗುತ್ತದೆ.
ಗಣು,
ನಿನಗೆ ಗೊತ್ತಿರಬೇಕು. ನಾಲ್ಕು ವರ್ಷಗಳ ಹಿಂದೆ ಪಕ್ಕದ ಚೀನಾ ದೇಶದಿಂದ ಅದೆಂತದೋ ಕೊರೋನಾ ವೈರಸ್ ಬಂದು ಜನ ತತ್ತರಿಸಿ ಹೋಗಿದ್ದರು. ಪ್ರಾಣ ಭೀತಿಯಿಂದ ಮನೆಗಳಲ್ಲಿ ಅಡಗಿ ಕುಳಿತಿದ್ದರು. ನಿನ್ನ ಹಬ್ಬದ ಸಂಭ್ರಮ ಆಚರಿಸಲು ಹೆದರುತ್ತಿದ್ದರು. ಆದರೆ ಈಗ ಆ ಭಯ ಇಲ್ಲ. ನಿನ್ನ ಮೇಲಿನ ಪ್ರೀತಿ – ಭಕ್ತಿ – ನಂಬಿಕೆಯಿಂದ ಉತ್ಸಾಹದಿಂದಲೇ ಆಚರಿಸುತ್ತಾರೆ. ಆದರೂ ಏನೋ ನಿನಗೆ ಸ್ವಲ್ಪವೂ ಕರುಣೆ, ಜವಾಬ್ದಾರಿ ಇಲ್ಲವೇ ?
ಕ್ಷಮಿಸು ಗೆಳೆಯ,
ಏನೋ ಆತ್ಮೀಯ ಸ್ನೇಹಿತನಾಗಿದ್ದುದಕ್ಕೆ ಸಲುಗೆಯಿಂದ ನಿನ್ನ ಒಳ್ಳೆಯದಕ್ಕೆ ನಾಲ್ಕು ಮಾತು ಜೋರಾಗಿ ಹೇಳಿದೆ ಪ್ರೀತಿಯಿಂದ. ಬೇಜಾರಾಗಬೇಡ.
ಮತ್ತೆ ಮನೆಯಲ್ಲಿ ನಿಮ್ಮ ಅಪ್ಪ, ಅಮ್ಮ ಎಲ್ಲರೂ ಕ್ಷೇಮವೇ. ಎಲ್ಲರಿಗೂ ನಾನು ಕೇಳಿದೆನೆಂದು ಹೇಳು. ಆರೋಗ್ಯದ ಬಗ್ಗೆ ಎಚ್ಚರ. ಹಬ್ಬದ ಸಂಭ್ರಮದಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನಬೇಡ. ಇಲ್ಲಿನ ಜನ ಇತ್ತೀಚೆಗೆ ಎಲ್ಲಾ ಆಹಾರ ಕಲಬೆರಕೆ ಮಾಡುತ್ತಿದ್ದಾರೆ ಹುಷಾರು. ಆಗಾಗ ಸಂದೇಶಗಳನ್ನು ಕಳುಹಿಸುತ್ತಿರು. ಆತ್ಮೀಯತೆ ಪ್ರೀತಿ ವಿಶ್ವಾಸ ಹಾಗೇ ಇರಲಿ.
ವಂದನೆಗಳೊಂದಿಗೆ,
ಇಂತಿ,
ನಿನ್ನ ಪ್ರಾಣ ಸ್ನೇಹಿತ ಅವಿವೇಕ.
ಭೂ ಲೋಕದಲ್ಲಿರುವ ಭಾರತದ ಕರ್ನಾಟಕದಿಂದ…………
*****************************
ಈಗ ಸಂತಸದ ಸುದ್ದಿಯೊಂದು ನಿಮಗಾಗಿ……….
ನನ್ನ ಗೆಳೆಯ ಗಣೇಶನ ಮಾರಾಟ ಮತ್ತು ಪ್ರದರ್ಶನದ ಆಕರ್ಷಕ ಅಂಗಡಿ ತೆರೆದಿದ್ದೇನೆ………
ಹೌದು,
ಗಣೇಶನ ಪ್ರದರ್ಶನ ಮತ್ತು ಮಾರಾಟ……
ಯಾವ ರೀತಿಯ ಗಣೇಶ ಬೇಕು ನಿಮಗೆ………
ಮಣ್ಣಿನ ಗಣೇಶ, ಕಲ್ಲಿನ ಗಣೇಶ,
ಮರದ ಗಣೇಶ, ತಾಮ್ರದ ಗಣೇಶ,
ಕಂಚಿನ ಗಣೇಶ, ಬೆಳ್ಳಿಯ ಗಣೇಶ,
ಚಿನ್ನದ ಗಣೇಶ, ವಜ್ರದ ಗಣೇಶ……….
ಬಣ್ಣದ ಗಣೇಶ, ನವರಸ ಗಣೇಶ,
ಪರಿಸರ ಪ್ರೇಮಿ ಗಣೇಶ, ಕಾಗದದ ಗಣೇಶ, ಮೇಣದ ಗಣೇಶ, ಮೈಲುತುತ್ತದ ಗಣೇಶ, ತರಕಾರಿ ಗಣೇಶ, ಹಣ್ಣಿನ ಗಣೇಶ,
ಧವಸ ಧಾನ್ಯಗಳ ಗಣೇಶ..……
ಬಲಮುರಿ ಗಣೇಶ, ಎಡಮುರಿ ಗಣೇಶ, ಕುಳಿತಿರುವ ಗಣೇಶ, ನಿಂತಿರುವ ಗಣೇಶ, ಆಯುಧಧಾರಿ ಗಣೇಶ, ವಿಶ್ವರೂಪಿ ಗಣೇಶ, ಪ್ರಸನ್ನವದನ ಗಣೇಶ, ಉಗ್ರ ರೂಪಿ ಗಣೇಶ………
ನೃತ್ಯ ಮಾಡುತ್ತಿರುವ ಗಣೇಶ, ಯೋಧನಾಗಿರುವ ಗಣೇಶ,
ಸಿಕ್ಸ್ ಪ್ಯಾಕ್ ಗಣೇಶ,
ಡೊಳ್ಳು ಹೊಟ್ಟೆಯ ಗಣೇಶ,
ಋಷಿ ರೂಪದ ಗಣೇಶ,
ಖುಷಿ ಮೂಡಿನ ಗಣೇಶ,
ಬಹುಮುಖಿ ಗಣೇಶ…….
ಎಲ್ಲವೂ ಮಾರಾಟಕ್ಕಿದೆ..
ನಿಮ್ಮೆಲ್ಲಾ ಸಂಕಷ್ಟಹರ ಗಣಪ ನಮ್ಮಲ್ಲಿದ್ದಾನೆ…
ಮದುವೆ ಆಗದವರಿಗೊಂದು ಗಣೇಶ, ಮಕ್ಕಳಾಗದವರಿಗೊಂದು ಗಣೇಶ,
ಅವಿದ್ಯಾವಂತರಿಗೊಂದು ಗಣೇಶ, ಬುದ್ದಿವಂತರಿಗೊಂದು ಗಣೇಶ, ಬಡವರಿಗೊಂದು ಗಣೇಶ, ಶ್ರೀಮಂತರಿಗೊಂದು ಗಣೇಶ ,
ನಿರುದ್ಯೋಗಿಗಳಿಗೊಂದು ಗಣೇಶ, ವ್ಯಾಪಾರಸ್ತರಿಗೊಂದು ಗಣೇಶ……
ರೋಗಿಗಳಿಗೊಂದು ಗಣೇಶ, ಆರೋಗ್ಯವಂತರಿಗೊಂದು ಗಣೇಶ, ದಂಪತಿಗಳಿಗೊಂದು ಗಣೇಶ, ವಿಚ್ಚೇದಿತರಿಗೊಂದು ಗಣೇಶ,
ಹಣ ಮಾಡಲೊಂದು ಗಣೇಶ,
ಆಸ್ತಿ ಮಾಡಲೊಂದು ಗಣೇಶ,
ಅಧಿಕಾರ ಹಿಡಿಯಲೊಂದು ಗಣೇಶ………
ಪ್ರಚಾರಕ್ಕೊಂದು ಗಣೇಶ, ವಿರೋಧಿಗಳನ್ನು ಹಣಿಯಲೊಂದು ಗಣೇಶ,
ಬ್ರಹ್ಮಚಾರಿಗಳಿಗೊಂದು ಗಣೇಶ, ಸಂಸಾರಸ್ತರಿಗೊಂದು ಗಣೇಶ,
ಪ್ರೇಮಿಗಳಿಗೊಂದು ಗಣೇಶ, ವಿರಹಿಗಳಿಗೊಂದು ಗಣೇಶ …..
ಇದಲ್ಲದೆ ಇನ್ನೂ ಸಾವಿರಾರು…
ಯಾವುದು ಬೇಕು ನಿಮಗೆ …..
ಸರ್ವಶಕ್ತ ಸರ್ವಾಂತರ್ಯಾಮಿ ಗಣೇಶ ನಮ್ಮವನು.
ನಿಮ್ಮೆಲ್ಲ ಸಂಕಷ್ಟಗಳ ನಿವಾರಕ ಇವನು.
ಇಂದೇ ನಿಮ್ಮ ಆಯ್ಕೆಯ ಗಣೇಶನನ್ನು ಕಾಯ್ದಿರಿಸಿ…….
ನಿಮ್ಮ ಮನೆ ಬಾಗಿಲಿಗೆ,
ಮನಸ್ಸಿನ ಅಂತರಾಳಕ್ಕೆ,
ಬದುಕಿನ ಜೊತೆಯಾಟಕ್ಕೆ,
ಉಚಿತವಾಗಿ ತಲುಪಿಸಲಾಗುತ್ತದೆ……
ಫಲಿತಾಂಶ ಮಾತ್ರ ಖಚಿತ..
ಯಾವ ಮೋಸ ವಂಚನೆ ಇಲ್ಲದೆ ಶತಶತಮಾನಗಳಿಂದ ಮಾರಾಟ ಮಾಡುತ್ತಿದ್ದೇವೆ………..
ವಿಶೇಷ ಕೊಡುಗೆ…..
ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ, ಪಾರ್ಸಿ, ಮುಸ್ಲಿಂ ಧರ್ಮದವರು ತಮ್ಮ ತಮ್ಮ ಧರ್ಮದ ಭಿನ್ನತೆಯನ್ನು ರಕ್ತ, ಮಾಂಸ, ಮೂಳೆ, ನರಗಳ ಮುಖಾಂತರ ದೃಢಪಡಿಸಿದರೆ ಅತ್ಯಂತ ಬೆಲೆಬಾಳುವ ಗಣೇಶನನ್ನು ಉಚಿತವಾಗಿ ಕೊಡಲಾಗುತ್ತದೆ….
ನಿಮ್ಮೆಲ್ಲಾ ಕಷ್ಟಗಳು ಪರಿಹಾರ ಆಗುವವವರೆಗೂ ನಮ್ಮ ಗೆಳೆಯ ಗಣೇಶನ ಮಾರಾಟ ನಿರಂತರ…….
ಬೇಗ ಬನ್ನಿ,
ಇಂದೇ ಕಾಯ್ದಿರಿಸಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451……
9844013068……