ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಲು ಮಾಧ್ಯಮದವರಿಗೆ ಮುಖ್ಯಮಂತ್ರಿಗಳ ಸಲಹೆ

ವಿಜಯ ದರ್ಪಣ ನ್ಯೂಸ್…

ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಲು ಮಾಧ್ಯಮದವರಿಗೆ ಮುಖ್ಯಮಂತ್ರಿಗಳ ಸಲಹೆ

ಬೆಂಗಳೂರು, ಸೆಪ್ಟೆಂಬರ್ 19 : ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2017 ರಿಂದ 2023 ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು. ವರದಿಗಳಾಗಲಿ ಅಥವಾ ಅಭಿಪ್ರಾಯಗಳಾಗಲಿ ವಸ್ತುಸ್ಥಿತಿಯಿಂದ ಕೂಡಿರಬೇಕು. ಕಲ್ಪನೆಯ ವರದಿ ಆಗಬಾರದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಊಹಾ ಪತ್ರಿಕೋದ್ಯಮ ಜೋತುಬೀಳುತ್ತಿವೆ. ಅದು ಆಗಬಾರದು. ಸತ್ಯ ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.

*ಅಸಮಾನತೆ ಹೋದರೆ ಮಾತ್ರ ಜಾತಿ ವ್ಯವಸ್ಥೆ ನಿಲ್ಲುವುದು* :

ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಬಹುಸಂಖ್ಯಾತರಾಗಿರುವ ಜನ ಅಕ್ಷರ ಸಂಸ್ಕøತಿಯಿಂದ ವಂಚಿತರಾಗಿರುವುದು ಅಸಮಾನತೆಗೆ ಪ್ರಮುಖ ಕಾರಣ. ಇದನ್ನು ನೇರವಾಗಿ ಜನರಿಗೆ ತಿಳಿಸುವ ಪ್ರಯತ್ನವಾಗಬೇಕು. ಯಾವುದೇ ರಾಜಿ ಇಲ್ಲದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ, ಇಲ್ಲವೇ, ಸಮಬಾಳು, ಸಮಪಾಲು ಅನುಷ್ಠಾನಕ್ಕೆ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಮಾಜಿಕ ನ್ಯಾಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರಬೇಕಾದ ವಿಚಾರವಲ್ಲ. ಎಲ್ಲರಿಗೂ ದೇಶದ ವ್ಯವಸ್ಥೆಯಲ್ಲಿ ಇನ್ನೂ ಸಹ ಸಮಾನವಾದ ಅವಕಾಶ ಸಿಗದಿರಲು ಕಾರಣಗಳೇನು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕು ಎಂದರು

ದಸರಾ- ಸಾಂಸ್ನಾಕೃತಿಕ ಡ ಹಬ್ಬ: 

ಇತ್ತೀಚಿಗೆ ಟಿವಿ ಚಾನೆಲ್‍ಗಳು ಇನ್ನೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿ ಸುದ್ದಿ ಮಾಡುತ್ತವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧವೇ ಪಟ್ಟಿರುವುದಿಲ್ಲ. ಸಮಾಜಕ್ಕೆ ಸಂಬಂಧಪಟ್ಟಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಭಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಸಹ ಇದನ್ನು ವಜಾಗೊಳಿಸಿದೆ. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡ ಹಬ್ಬವಾಗಿದ್ದು, ಸಾಂಸ್ಕೃತಿಕ ವಿಚಾರವಾಗಿದೆ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಮಾಜದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಅವರು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ವೈರುಧ್ಯಗಳಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಹೇಳಿದ್ದರು. ಆ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಬೇಕು. ದುರ್ಬಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಸಮಸಮಾಜದ ಕನಸು ಕಂಡ ಪರ್ತಕರ್ತ – ರಘುರಾಮ ಶೆಟ್ಟಿ 

ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು. ಬದ್ದತೆಯುಳ್ಳ, ಯಾವುದೇ ಪ್ರಶಸ್ತಿ, ಪ್ರಚಾರ ಬಯಸದ ವ್ಯಕ್ತಿ. ಮಾಧ್ಯಮ ರಂಗವು ಓದುಗರನ್ನೇ ಇಡಯರನ್ನಾಗಿ ಅವಲಂಬಿಸಬೇಕು ಹಾಗಾದಾಗ ಮಾತ್ರ ನಿಷ್ಠುರ ಮತ್ತು ವಸ್ತುನಿಷ್ಠ, ಜನಪರ ಪತ್ರಿಕೋದ್ಯಮ ಸಾಧ್ಯ ಎಂದು ಬಲವಾಗಿ ನಂಬಿ ಆ ನಿಟ್ಟಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯದ ಸ್ಪಷ್ಟ ಧ್ವನಿಯಾಗಿ ಹೊಸ ಮಾರ್ಗದಲ್ಲಿ ನೆಡೆದ ವ್ಯಕ್ತಿ ಎಂದು ರಘುರಾಮ ಶೆಟ್ಟಿಯವರನ್ನು ಸ್ಮರಿಸಿದರು.

ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು :

ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸ್ವಾತಂತ್ರ್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಮಹಿಳೆಯರಿಗೂ ಸಮಾನತೆ :
ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೇಗೆ ಬೇರು ಬಿಟ್ಟಿದೆ ಎಂದರೆ ಐದಾರು ವರ್ಷಗಳಲ್ಲಿ, ಹತ್ತಿಪ್ಪತ್ತು ವರ್ಷಗಳಲ್ಲಿ ಹೋಗುವಂತದ್ದಲ್ಲ. ಆದರೆ ಅಸಮಾನತೆಯ ಮಟ್ಟವನ್ನು ಕಡಿಮೆ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರಿಗೂ ಸಮಾನತೆ ಬರಬೇಕು ಎನ್ನುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ , ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದರು.

ಶಾಲಾ – ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ:

ಬಹಳಷ್ಟು ಜನರು ಸಂವಿಧಾನವನ್ನೇ ಓದಿರುವುದಿಲ್ಲ ಇದೇ ಕಾರಣಕ್ಕೆ ನಮ್ಮ ಸರ್ಕಾರ, ಶಾಲಾ – ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತಹ ಕಾರ್ಯಕ್ರಮ ಹಮ್ಮಿಕೊಂಡಿತು ಸಂವಿಧಾನದ ಕರ್ತವ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಂಡಲ್ಲಿ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜ, ನಾಡು ದೇಶ ಎಲ್ಲಕ್ಕೂ ಒಳ್ಳೆಯದಾಗುತ್ತದೆ ಎಂದರು.

ಸುಮಾರು 2017ರಿಂದ ಬಾಕಿ ಇದ್ದ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯ ಪದ್ಧತಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇನ್ನು ಮುಂದೆ ಯಾವುದೇ ಪ್ರಶಸ್ತಿಗಳಿರಲಿ ಆಯಾ ವರ್ಷವೇ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಾಸ್ತಾವಿಕ ಮಾತನಾಡುತ್ತಾ, ಪ್ರಸಕ್ತ ವರ್ಷ ವಡ್ಡರ್ಸೆ ರಘುರಾಮಶೆಟ್ಟಿ ಅವರ ಸ್ಮರಣಾರ್ಥವಾಗಿ 2024ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ “ಸಾಮಾಜಿಕ ನ್ಯಾಯ ಪತ್ರಿಕೋದ್ಯಮ” ವಿಶೇಷ ಪ್ರಶಸ್ತಿ ಹಾಗೂ 2017 ರಿಂದ 2023ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರದಾನ ಮಾಡಲಾಗುತ್ತಿದೆ ಎಂದರು.

ಸರ್ಕಾರವು 2017 ರಿಂದ ಬಾಕಿ ಇದ್ದ ಪರಿಸರ ಮತ್ತು ಅಭಿವೃದ್ಧಿ ಪ್ರಶಸ್ತಿ ಹಾಗೂ 5 ವರ್ಷಗಳಿಂದ ಬಾಕಿ ಇದ್ದ ಮೊಹರೆ ಹಣಮಂತರಾಯ ಹಾಗೂ ಟಿಯೇಸ್ಸಾರ್ ಪ್ರಶಸ್ತಿ ನೀಡಲು ಸಮಿತಿಯನ್ನು ರಚಿಸಿ, ಪ್ರಶಸ್ತಿ ನೀಡುವ ಮೂಲಕ ಪತ್ರಕರ್ತರಿಗೆ ಶಬ್ಬಾಷ್ ಎಂದು ಸರ್ಕಾರ ಹೇಳಿದೆ. ಅಲ್ಲದೆ ಸರ್ಕಾರವು ಕಳೆದ ಎರಡು ವರ್ಷಗಳಿಂದ ಪತ್ರಕರ್ತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ, ಕುಟುಂಬ ಮಾಸಾಶನವನ್ನು ಸಹ ನೀಡಿದೆ. ಪತ್ರಕರ್ತರಿಗಾಗಿ ಮೀಡಿಯಾ ಫೆಸ್ಟ್, ಕಾರ್ಯಾಗಾರಗಳು ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕ್ಯಾಮೆರಾ, ಲ್ಯಾಪ್ ಟಾಪ್ ಹಾಗೂ ಇನ್ನಿತರ ಉಪಕರಣಗಳನ್ನೊಳಗೊಂಡ ಮಾಧ್ಯಮ ಕಿಟ್‍ಗಳನ್ನು ಸಹ ವಿತರಿಸುವುದರ ಮೂಲಕ ಸರ್ಕಾರ ಪತ್ರಕರ್ತರಿಗೆ ಶಬ್ಬಾಷ್ ಹೇಳುವಂತಹ ಕೆಲಸ ಮಾಡುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಲು ಕಲಾವಿದರಿಗೂ ಅನುಕೂಲ ಕಲ್ಪಿಸಿಕೊಟ್ಟಿದೆ. ಚಿತ್ರರಂಗದಲ್ಲಿ 25 ವರ್ಷಗಳ ಸೇವೆ ಪೂರೈಸಿದ ಮಹಿಳಾ ಕಲಾವಿದರಿಗೆ ಪ್ರಶಸ್ತಿ ನೀಡಲು ಹಿರಿಯ ನಟಿ, ಬಿ.ಸರೋಜದೇವಿ ಅವರ ಹೆಸರಿನಲ್ಲಿ ಜೀವಮಾನ ಸಾಧನೆಗಾಗಿ ಅಭಿನಯ ಸರಸ್ವತಿ ಪ್ರಶಸ್ತಿಯನ್ನು ಪ್ರದಾನ ಮಾಡಲು ಸರ್ಕಾರವು ಆದೇಶ ಹೊರಡಿಸಿದೆ. ಈ ಪ್ರಶಸ್ತಿಯು 2025 ನೇ ಸಾಲಿನಿಂದಲೇ ನೀಡಲಾಗುವುದು. ಬಡಜನರು ಚಲನಚಿತ್ರ ನೋಡಲು ಅನುಕೂಲವಾಗುವಂತೆ ಟಿಕೆಟ್ ದರವನ್ನು ರೂ.200 ಗಳಿಗೆ ನಿಗಧಿ ಮಾಡಿದೆ. ಮೈಸೂರಿನಲ್ಲಿ 160 ಎಕರೆ ಪ್ರದೇಶದಲ್ಲಿ ಫಿಲಂಸಿಟಿ ನಿರ್ಮಿಸಲು ಕ್ರಮವಹಿಸಿದೆ. ಸರ್ಕಾರ ತಾವು ಮಾಡಿರುವ ಕೆಲಸಕ್ಕೆ ಪುರಸ್ಕಾರ ನೀಡಿ ಶ್ಲಾಘಿಸುತ್ತಿದೆ. ಪತ್ರಕರ್ತರ ಹಿತಕ್ಕಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

*ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ .ಉಮಾಪತಿ* ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿಯಾಗಬೇಕೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ತಲುಪಬೇಕು. ಇದು ಸರ್ಕಾರ, ಸಮಾಜ ಹಾಗೂ ಪತ್ರಿಕೆಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಜನಪರ ಆಶಯಗಳನ್ನಿಟ್ಟುಕೊಂಡು ಪತ್ರಿಕೆಗಳು, ಮಾಧ್ಯಮಗಳು ಜನಪರ ಆಶಯಗಳನ್ನಿಟುಕೊಂಡು ಕೆಲಸ ನಿರ್ವಹಿಸಬೇಕು. ದೀನ ದಲಿತರ, ದಮನಿತರ ಧ್ವನಿಯಾಗಬೇಕು ಎಂದರು.

ವಡ್ಡರ್ಸೆ ರಘುರಾಮಶೆಟ್ಟಿ ಅವರು “ಮುಂಗಾರು” ಪತ್ರಿಕೆಯನ್ನು ಹೊರತಂದು ಶೋಷಿತರ ಧ್ವನಿಗಳಿಗೆ ಸ್ಪಂದಿಸಿ ಸಾಮಾಜಿಕ ಚಿಂತನೆಗಳು ಹಾಗೂ ತಮ್ಮ ಬರಹಗಳ ಮೂಲಕ ಗಟ್ಟಿ ಪತ್ರಿಕೋದ್ಯಮವನ್ನು ಕಟ್ಟಿದವರು. ಜನರ ದನಿಯಾಗಿ ಹೊರಹೊಮ್ಮಿದ ಅವರ ಪತ್ರಿಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತು ಹಿಡಿಯುವಲ್ಲಿ ಯಶಸ್ವಿಯಾಯಿತು. ಆದರೆ ಈಗಿನ ಕೆಲವು ಮಾಧ್ಯಮಗಳು ಸತ್ಯ, ನ್ಯಾಯವನ್ನು ಮರೆಮಾಚಿ ವರದಿಗಳನ್ನು ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಯಾವುದೇ ಮಾಧ್ಯಮಗಳಿರಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತ ಕೋರಿದರು.

*ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ* 2017ನೇ ಸಾಲಿಗೆ, ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು, 2018 ನೇ ಸಾಲಿಗೆ ಶ್ರೀ ಬಿ.ಟಿ.ಎಂ. ರಾಜೀವ್, 2019ನೇ ಸಾಲಿಗೆ ಶ್ರೀ ವಿನೋದ ಕುಮಾರ್ ನಾಯ್ಕ್, 2020ನೇ ಸಾಲಿಗೆ ಶ್ರೀ ಮಾಲತೇಶ ಅಂಗೂರ, 2021ನೇ ಸಾಲಿಗೆ ಶ್ರೀ ಸುಧೀರ್ ಶೆಟ್ಟಿ, 2022ನೇ ಸಾಲಿಗೆ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಹಾಗೂ 2023ನೇ ಸಾಲಿಗೆ ಆರ್. ಮಂಜುನಾಥ್ ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

*ಅಭಿವೃದ್ಧಿ ಪತ್ರಿಕೋದ್ಯಮಕ್ಕೆ* 2017ನೇ ಸಾಲಿಗೆ ಶ್ರೀ ಚೀ.ಜ. ರಾಜೀವ್, 2018ನೇ ಸಾಲಿಗೆ ಶ್ರೀ ದೇವಯ್ಯ ಗುತ್ತೇದಾರ್, 2019ನೇ ಸಾಲಿಗೆ ಶ್ರೀ ಗಿರೀಶ್ ಲಿಂಗಣ್ಣ, 2020ನೇ ಸಾಲಿಗೆ ಶ್ರೀ ಯೋಗೀಶ್ ಎಂ.ಎನ್., 2021ನೇ ಸಾಲಿಗೆ ಶ್ರೀ ನೌಶಾದ್ ಬಿಜಾಪುರ, 2022ನೇ ಸಾಲಿಗೆ ಶ್ರೀ ಸತೀಶ್ ಜಿ.ಟಿ ಮತ್ತು 2023ನೇ ಸಾಲಿಗೆ ಶ್ರೀ ಗಿರೀಶ್ ಬಾಬು ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

*2024 ನೇ ಕ್ಯಾಲೆಂಡರ್ ವರ್ಷದ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ* ಯನ್ನು ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗ ನಸೀರ್ ಅಹಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ಆಯೋಗದ ಅಧ್ಯಕ್ಷರು ಮತ್ತು 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಅಶೋಕ್ ಬಿ ಹಿಂಚಿಗೇರಿ, ವಿಧಾನ ಪರಿಷತ್ ಸದಸ್ಯರು ಹಾಗೂ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಆದ ಕೆ.ಶಿವಕುಮಾರ್, ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ ಸೇರಿದಂತೆ ಹಿರಿಯ ಪತ್ರಕರ್ತರು, ಪ್ರಶಸ್ತಿ ಪುರಸ್ಕøತರ ಕುಟುಂಬದವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.