ವಿಷಕಾರಿ ಜನರೊಂದಿಗೆ ವ್ಯವಹರಿಸುವುದು ಹೇಗೆ?
ವಿಜಯ ದರ್ಪಣ ನ್ಯೂಸ್…
ವಿಷಕಾರಿ ಜನರೊಂದಿಗೆ ವ್ಯವಹರಿಸುವುದು ಹೇಗೆ?
ಇಂದು ಬಹುತೇಕರ ಅಂಬೋಣ, ನನ್ನ ಸರಳ ಸ್ವಭಾವ ನನ್ನ ಬಲಹೀನತೆ ಆಗಿದೆ ಎಂಬುದು. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ. ಆದರೆ ಅದರ ರಭಸಕ್ಕೆ ಎಲ್ಲವನ್ನೂ ಸೋಲಿಸುವ ಸಾಮರ್ಥ್ಯವಿದೆ ಎನ್ನುವ ಮಾತನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ವಾಸ್ತವದಲ್ಲಿ ಸಮಾಜ ಕಠಿಣ ಜನರಿಂದ ಕೂಡಿದೆ. ಕೆಲವರು ಪರೀಕ್ಷಿಸುತ್ತಾರೆ. ಕೆಲವರು ಹಿಂಡುತ್ತಾರೆ. ಇನ್ನೂ ಕೆಲವರು ಜೀವನವನ್ನು ಇನ್ನಷ್ಟು ಕಠಿಣ ಮಾಡಲೆಂದೇ ಇರುತ್ತಾರೆ. ವಿಚಿತ್ರ ಸತ್ಯವೆಂದರೆ ಅವರೆಲ್ಲ ನಮ್ಮ ಬದುಕಿನಲ್ಲಿ ನಮ್ಮ ಅನುಮತಿಯ ಹೊರತು ಏನೂ ಮಾಡಲು ಸಾಧ್ಯವಿಲ್ಲ. ‘ನೀನು ಅವರನ್ನು ಹೇಗೆ ನಿಭಾಯಿಸುವೆಯೋ ಅದು ನಿನ್ನ ವ್ಯಕ್ತಿತ್ವವನ್ನು ತೋರಿಸುತ್ತದೆ.’ ವಿಷಕಾರಿ ಜನರು ಕೆಟ್ಟದಾಗಿ ನಡೆದುಕೊಳ್ಳುವಂತೆ ತಿವಿಯುತ್ತಾರೆ ಪ್ರಚೋದಿಸುತ್ತಾರೆ ಏಕೆಂದರೆ ಅವರು ನಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ. ನಮ್ಮನ್ನು ಬಲಹೀನರನ್ನಾಗಿಸಲು ಹಾತೊರೆಯುತ್ತಾರೆ. ಅವರು ಅಂದುಕೊಂಡಂತೆ ನಾವು ಪ್ರತಿಕ್ರಿಯಿಸಿದರೆ ತಾವು ಗೆದ್ದೆವೆಂದು ಬೀಗುತ್ತಾರೆ. ಇದರರ್ಥ ಅವರು ಸರಿ ಇರುವರೆಂದು ಅರ್ಥವಲ್ಲ, ಶಕ್ತಿವಂತರೆಂದು ಅಲ್ಲ. ಅವರು ನಮ್ಮ ಮೇಲೆ ಹಕ್ಕು ಚಲಾಯಿಸಿದ್ದಾರೆಂದು ಅರ್ಥ. ವಿಷಕಾರಿ ಜನರಿಗೆ ಬೇಕಾಗಿರುವುದೇನು? ನಮ್ಮ ಶಕ್ತಿ, ಕೋಪ, ಖಿನ್ನತೆ. ಅವರಿಗೆ ಬೇಕಾಗಿದ್ದನ್ನು ನೀಡಿದರೆ ಮತ್ತಷ್ಟು ಬಲಿಯುತ್ತಾರೆ.

ಒಂದು ಸವಾಲು
ಇರುವೆಗಳು ಸಾಲಿನಲ್ಲಿ ಹೋಗುವುದನ್ನು ಗಮನಿಸಿರುತ್ತೇವೆ. ಅವೆಲ್ಲ ಒಂದರ ಹಿಂದೆ ಒಂದು ಒಂದೇ ಸಾಲಿನಲ್ಲಿ ಸಾಗುತ್ತವೆ. ಯಾರಾದರೂ ಅಡ್ಡಗಟ್ಟಲು ಪ್ರಯತ್ನಿಸಿದರೆ ತಮ್ಮ ದಿಕ್ಕನ್ನು ಬದಲಿಸಿ ಮತ್ತೆ ಒಂದೇ ಸಾಲಿನಲ್ಲಿ ಚಲಿಸುತ್ತವೆ. ಗಮನ ಸೆಳೆಯುವ, ದ್ವಂಸಗೊಳಿಸುವ, ಬಾಳು ಹಾಳಾಗಿಸುವ ಜನರಿಗಾಗಿ ಶಕ್ತಿ ಸಮಯ ವ್ಯರ್ಥ ಮಾಡಿಕೊಂಡರೆ ವಿಷಕಾರಿ ಜನರ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ನಂತರ ಬಿಕ್ಕಿ ಬಿಕ್ಕಿ ಗೋಳಾಡುತ್ತೇವೆ. ಅದನ್ನು ಕಂಡು ಅವರು ಖುಷಿ ಪಡುತ್ತಾರೆ. ಅವರ ಬಳಿ ಕರುಣೆ ಇಲ್ಲ. ‘ಕರುಣೆ ಎಂಬುದು ನಾವು ಇತರರಿಗೆ ಕೊಡಬಹುದಾದ ಅತ್ಯಂತ ಶ್ರೀಮಂತ ಉಡುಗೊರೆ.’ ಇಂಥ ಜನರೊಂದಿಗೆ ಚೆಂದದಿ ಬದುಕಲು ನಮಗೆ ಬೇಕಿರುವುದು ಶಕ್ತಿಯುತವಾದ ಮನಸ್ಥಿತಿ. ‘ಹುಟ್ಟುವುದು ಒಂದೇ ಸಲ, ಸಾಯುವುದು ಒಂದೇ ಸಲ. ಈ ಹುಟ್ಟು ಸಾವುಗಳ ಮಧ್ಯೆ ಪೀಡಿಸುವ ಜನರ ನಡುವೆ ಬದುಕನ್ನು ಸವಾಲಾಗಿ ಸ್ವೀಕರಿಸುವುದು ಒಂದು ಸವಾಲು. ಕೇವಲ ಒಂದು ದಿನ ಜೀವಿಸುವ ಅರಳುವ ಹೂವಿಗೆ ಸುಂದರ ಜೀವನವಿದೆ. ಸಾಕಷ್ಟು ವರ್ಷ ಜೀವಿಸುವ ನಮ್ಮ ಜೀವನ ಸುಂದರವಾಗಲು ಹೊಸ ಉತ್ತಮ ಮನಸ್ಥಿತಿಯನ್ನು ಹೊಂದಬೇಕು.
ಹಾಗಾದರೆ ಉತ್ತಮ ಮನಸ್ಥಿತಿಯನ್ನು ಪಡೆಯಲು ಮತ್ತು ಕಾಲೆಳೆಯುವ, ಪೀಡಿಸುವ ವಿಷಕಾರಿ ಜನರೊಂದಿಗೆ ವ್ಯವಹರಿಸುವುದು ಹೇಗೆ ನೋಡೋಣ ಬನ್ನಿ.
ವಿಷಕಾರಿ ಜನರೆಂದರೆ?
ನಕಾರಾತ್ಮಕತೆ ಹರಡುವವರು, ಯಾವಾಗಲೂ ಬೇರೆಯವರನ್ನು ನಿಂದಿಸುವವರು, ಟೀಕಿಸುವವರು, ಕಾರಣವಿಲ್ಲದೆ ನಿರಾಶೆಗೊಳಿಸುವವರು, ಹೊಟ್ಟೆಕಿಚ್ಚಿನ ಸ್ವಭಾವ ಉಳ್ಳವರು, ಇತರರನ್ನು ಬಲಿಪಶು ಮಾಡುವವರು, ಇತರರಿಗೆ ಏನೇ ಆದರೂ ಕಾಳಜಿ ವಹಿಸದವರು, ಸ್ವಾರ್ಥಿ ಸ್ವಭಾವದವರು, ಸುಳ್ಳು ಹೇಳುವವರು, ಅಗೌರವ ತೋರುವವರು, ವಸ್ತುವಿನಂತೆ ಉಪಯೋಗಿಸಿಕೊಂಡು ಎಸೆಯುವವರು, ಸುಳ್ಳು ದೂರು ನೀಡುವವರು, ನಿಮ್ಮನ್ನು ಕೆಟ್ಟದಾಗಿ ಭಾವಿಸುವವರನ್ನು ವಿಷಕಾರಿ ಎಂದು ಕರೆಯುವುದು ಸಾಮಾನ್ಯ. ಆದರೆ ಸರಳವಾದ ವ್ಯಾಖ್ಯಾನ ಹೊಂದಿಲ್ಲ. ಒಟ್ಟಿನಲ್ಲಿ ಯಾರೊಂದಿಗೆ ವ್ಯವಹರಿಸುವುದು ಕಷ್ಟವಾಗುವುದೋ ಅಂತಹವರು ವಿಷಕಾರಿ ಎನ್ನಬಹುದು.
ತಿಳಿಯಬೇಕು

ಉತ್ತಮ ಮನಸ್ಥಿತಿಯನ್ನು ಹುಡುಕಿಕೊಂಡು ಎಲ್ಲೋ ಹೋಗಬೇಕಿಲ್ಲ. ಹಾಗೆಂದು ಇದ್ದಲ್ಲಿಗೆ ಮನಸ್ಥಿತಿ ಹುಡುಕಿಕೊಂಡು ಬಂದು ಸೇರುವುದೂ ಇಲ್ಲ. ನಕಾರಾತ್ಮಕ ಜನರನ್ನು ಎದುರಿಸುವ ಮನಸ್ಥಿತಿ ಹೊಂದಬೇಕಾದರೆ ಮೊದಲು ಪೀಡಿಸುವ ಜನರ ಪ್ರತಿ ಆಲೋಚನೆಯು ನಮ್ಮ ಬಾಳಿಗೆ ಬೆಳಕು ಕೊಡುವ ತರಹ ಇರುವುದಿಲ್ಲ ಬದಲಾಗಿ ಕತ್ತಲೆ ಕೋಣೆಗೆ ತಳ್ಳುವಂತೆ ಇರುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ‘ಕಲಿಯುವುದರಿಂದ ನೀನು ಕಲಿಸುತ್ತಿ ಮತ್ತು ಕಲಿಸುವುದರಿಂದ ನೀನು ಕಲಿಯುತ್ತಿ.’ ಎಂಬ ಮಾತಿನಂತೆ ನೀನು ವಿಷಕಾರಿ ಜನರನ್ನು ತಿಳಿಯುವುದರಿಂದ ಕಲಿಯುವೆ ಎಂಬ ಮಾತು ಸಹ ಸತ್ಯ. ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ, ಯಾವುದನ್ನು ಹಚ್ಚಬೇಕೆಂದು ನಕಾರಾತ್ಮಕ ಜನರಿಗೆ ತಿಳಿಯುವುದಿಲ್ಲ ಎಂಬುದನ್ನು ನಾವು ಸರಿಯಾಗಿ ತಿಳಿಯಬೇಕು.
ಸಾಮರ್ಥ್ಯದ ಅರಿವು
ವಿಷಕಾರಿ ಜನರು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸುತ್ತಾರೆ. ನಿಮ್ಮಲ್ಲಿನ ಸಾಮರ್ಥ್ಯವನ್ನು ಕಂಡು ಅವರಿಗೆಲ್ಲ ಹೊಟ್ಟೆ ಉರಿಯಾಗುತ್ತಿದೆ. ಆದರೆ ನಿಮಗೆ ಮಾತ್ರ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನವಿದೆ. ನೀವು ಅವರಿಗೆ ಸೊಪ್ಪು ಹಾಕುವುದಿಲ್ಲವೆಂದು ಗೊತ್ತಾದಾಗ ತಾವಾಗಿಯೇ ದೂರ ಸರಿಯುತ್ತಾರೆ. ಯಾವುದೇ ಒಂದು ಕೆಲಸ ಆಗಬೇಕಾದರೂ ನಿಮ್ಮಲ್ಲಿನ ಯೋಗ್ಯತೆ ಸಾಮರ್ಥ್ಯ ನೀವು ಅರಿತಿರಬೇಕು. ಒಟ್ಟಿನಲ್ಲಿ ನೀವು ಬೆಳೆಯುವುದು ಅಳಿಯುವುದು ಎಲ್ಲವೂ ನಿಮ್ಮ ಸಾಮರ್ಥ್ಯದ ಅರಿವಿನಂದಲೇ ಉತ್ತಮ ಮನಸ್ಥಿತಿ ಹೊಂದಿದರೆ ಬೆಳೆಯುತ್ತೇವೆ. ನಕಾರಾತ್ಮಕ ಮನೋಭಾವದ ಜನರ ಮಾತುಗಳನ್ನು ಕೇಳುತ್ತ ತಲೆ ಕೆಡಿಸಿಕೊಂಡರೆ ಅಳಿಯುತ್ತೇವೆ. ಸಾಮರ್ಥ್ಯದ ಅರಿವಿದ್ದರೆ ಎಲ್ಲವೂ ಸಾಧ್ಯ. ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಶಕ್ತಿ ಮತ್ತು ಬಲಹೀನತೆಗಳು ಅರಿವಿಗೆ ಬರುತ್ತವೆ. ಕಾಲೆಳೆಯುವ ಜನರ ದ್ವೇಷವನ್ನು ಬೆಳೆಸಿಕೊಳ್ಳುವುದರ ಬದಲು ಅವರ ತಪ್ಪುಗಳನ್ನು ಕ್ಷಮಿಸುವುದನ್ನು ಕಲಿಯುತ್ತೀರಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವಿರಿ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಸಾಮರ್ಥ್ಯ ಇಮ್ಮಡಿಯಾಗುತ್ತದೆ.
ಮುನ್ನುಗ್ಗು
ವಿಷಕಾರಿ ಜನರಿಗೆ ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯವಾಗುತ್ತದೆ. ಭಯವನ್ನು ಕಿತ್ತು ಹಾಕಿ ಏನಾದರೂ ಆಗಲಿ ಎಂದು ಧೈರ್ಯದಿಂದ ಹೆಜ್ಜೆ ಹಾಕಬೇಕು. ಮುಂದಿಟ್ಟ ಹೆಜ್ಜೆಯಿಂದ ಗೆದ್ದರೆ ಮುಂದಕ್ಕೆ ಹೋಗುತ್ತೇವೆ. ಸೋತರೆ ಮುಂದೆ ಏನು ಮಾಡಬೇಕೆಂದು ದಾರಿ ಕಂಡುಕೊಳ್ಳಬಹುದು. ಭಯದಿಂದ ಕಣ್ಮುಚ್ಚಿ ಸಮಯ ಮುಂದೂಡಿದರೆ ಮೊಗ್ಗಿನಂತಿರುವ ನಾವು ಅರಳುವ ಸಮಯ ಎಂದೂ ಬರುವುದೇ ಇಲ್ಲ. ಹೂವಾಗಿ ಅರಳುವ ಮುನ್ನವೇ ಕಿತ್ತು ಬೀಸಾಕಲು ಮುಂದಾಗಿರುವ ಜನರ ಮುಂದೆ ಧೈರ್ಯದಿಂದ ಅರಳಿದರೆ ಕಣ್ರೆಪ್ಪೆ ಮುಚ್ಚದೇ ಅವಕ್ಕಾಗಿ ನೋಡುತ್ತಾರೆ. ಮುಂದೆ ಬಂದು ಅಭಿನಂದನೆಗಳನ್ನು ತಿಳಿಸುತ್ತಾರೆ. ಮೂಗು ಮುರಿದು ತಿರಸ್ಕರಿಸಿದವರೆ ಸನ್ಮಾನಿಸುತ್ತಾರೆ. ಅರಳಿದ ಹೂವಿಗಿರುವ ಬೆಲೆ ಅರಳದಿರುವ ಮೊಗ್ಗಿಗೆ ಇಲ್ಲ. ದೈರ್ಯಂ ಸರ್ವತ್ರ ಸಾಧನಂ ಎಂಬ ನುಡಿಯಂತೆ ಧೈರ್ಯದಿಂದ ಮುನ್ನುಗ್ಗಬೇಕು.ಗುರಿ
ಹೊಂದಿಸಿಕೊಳ್ಳಬೇಕು
ವಿಷಕಾರಿ ಜನರಿಂದ ದೂರವಿರಲು ಸ್ಪಷ್ಟ ಗುರಿಗಳನ್ನು ಹೊಂದಿಸಿಕೊಳ್ಳಬೇಕು. ಈ ಗುರಿ ನಿಮ್ಮನ್ನು ನಕಾರಾತ್ಮಕ ಜನರೊಂದಿಗೆ ಇರಲು ಅವರ ಬಗ್ಗೆ ಯೋಚಿಸಲು ಬಿಡುವುದಿಲ್ಲ. ಶಿಸ್ತನ್ನು ರೂಢಿಸಿಕೊಳ್ಳಬೇಕು. ಶಿಸ್ತು ಎಂದರೆ ನಿಯಮವನ್ನು ಪಾಲಿಸುವುದು. ಕ್ರಮಬದ್ಧತೆಯನ್ನು ಮೈಗೂಡಿಸಿಕೊಳ್ಳುವುದು. ಶಿಸ್ತು ಗುರಿ ಮತ್ತು ಸಾಧನೆಯ ನಡುವಿನ ಸೇತುವೆ ಆಗಿದೆ. ಶಿಸ್ತಿನಂಂತಹ ಉತ್ತಮ ಹವ್ಯಾಸವು ಉತ್ತಮ ಬದುಕನ್ನು ನಿರ್ಮಾಣ ಮಾಡಬಲ್ಲದು. ಒಬ್ಬಂಟಿಯಾಗುತ್ತೇನೆಂದು ವಿಷಕಾರಿ ಜನರೊಂದಿಗೆ ಬೆರೆಯುವುದು ಒಳ್ಳೆಯದಲ್ಲ. ಹಾಗೆ ಬೆರೆಯುವುದು ನೀರೆಡಿಕೆಯಾಗಿದೆ ಎಂದು ವಿಷ ಕುಡಿಯುವುದಕ್ಕೆ ಸಮಾನ. ನಮ್ಮನ್ನು ಹೆದರಿಸುವ ಸನ್ನಿವೇಶಗಳಿಂದ ಶಾಂತಿಯಿಂದ ದೂರ ಮಾಡುವ ಜನರಿಂದ ದೂರವಿದ್ದಷ್ಟು ಶಾಂತಿ ಸ್ವ ಗೌರವ ಹೆಚ್ಚಾಗುವುದು.
ಕೊನೆ ಹನಿ
ವಿಷಕಾರಿ ವ್ಯಕ್ತಿಯೊಂದಿಗೆ ವ್ಯವಹರಿಸುವುದು ಮಾನಸಿಕವಾಗಿ ಬಳಲಿಕೆ ಉಂಟು ಮಾಡಬಹುದು. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ನಿಮ್ಮ ಅಗತ್ಯಗಳಿಗೆ ಆದ್ಯತೆ ನೀಡಿ. ತಟಸ್ಥರಾಗಿರಿ, ಲಭ್ಯವಿಲ್ಲದಂತೆ ಇರಿ. ವಾಸ್ತವಕ್ಕೆ ಅಂಟಿಕೊಳ್ಳಿ. ಮಿತಿಗಳನ್ನು ನಿಗದಿಪಡಿಸುವ ಮೂಲಕ ಅಗತ್ಯವಿದ್ದಾಗ ದೂರವಿರುವ ಮೂಲಕ ಮತ್ತು ಅವರ ಆಟದಲ್ಲಿ ಸೋಲಿಸುವದನ್ನು ನಿಲ್ಲಿಸಬೇಕು. ಇವು ವಿಷಕಾರಿ ಜನರಿಂದ ದೂರವಿರಲು ಇನ್ನಷ್ಟು ಸಲಹೆಗಳು. ಹಳಿ ತಪ್ಪಿದ ಆಲೋಚನೆಯಲ್ಲಿ ತೊಡಗಿರುವ ವಿಷಕಾರಿ ವ್ಯಕ್ತಿಗಳೊಂದಿಗೆ ಕೆಲವೊಮ್ಮೆ ನಗುತ್ತಾ ತಲೆಯಾಡಿಸುವುದು ಉತ್ತಮ.

ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ