ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ…..

ವಿಜಯ ದರ್ಪಣ ನ್ಯೂಸ್….

ಒಂದು ಪ್ರಹಸನ…….

ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ…..

ಪಟ್ಟಿ ರೂಪದಲ್ಲಿ ಪ್ರಶ್ನೆಗಳು ಈ ಕೆಳಗಿನಂತಿವೆ……..

1. ಮನೆಯ ಮುಖ್ಯಸ್ಥರ ಹೆಸರು : ನಾನೇ, ಶ್ರೀ 420….

2. ತಂದೆಯ ಹೆಸರು : ಇ
ಸ್ಮಾಯಿಲ್ ಸಾಬ್ ಮೌಲ್ವಿ…..

3. ತಾಯಿಯ ಹೆಸರು :
ಮೇರಿಯಮ್ಮ ಸಿಸ್ಟರ್….

4. ಕುಟುಂಬದ ಕುಲ ಹೆಸರು : ದೊಂಗಸ್ವಾಮಿ ಪಿಂಡ ವಂಶಾಲು ….

5. ಮನೆ ವಿಳಾಸ :
ಸಂಖ್ಯೆ 1, ವಿಧಾನಸೌಧ – ಪಾರ್ಲಿಮೆಂಟ್ – ಅಂಬೇಡ್ಕರ್ ಮತ್ತು ಗಾಂಧಿ ರಸ್ತೆ, ಬೆಂಗಳೂರು – ನವದೆಹಲಿ…..

6. ಮೊಬೈಲ್ ಸಂಖ್ಯೆ :
ಒರಿಜಿನಲ್ 9999999999….. ಡೂಪ್ಲಿಕೇಟ್ 8888888888…… ಸೀಕ್ರೆಟ್ 7777777777…….

7. ರೇಷನ್ ಕಾರ್ಡ್ ಸಂಖ್ಯೆ : ನಾವೇನು ಊಟ ಇಲ್ಲದ ಭಿಕ್ಷುಕರಲ್ಲ. ಕೋಟ್ಯಾಧಿಪತಿಗಳು. ಆದರೂ ಇರಲಿ ಎಂದು ಒಂದು ಬಿಪಿಎಲ್ ಕಾರ್ಡ್ ಇದೆ. ಸಂಖ್ಯೆ: 123456789…..

8. ಆಧಾರ್ ಸಂಖ್ಯೆ :
ಇದು ಮಾತ್ರ ನ್ಯಾಯಾವಾಗೇ ಇದೆ. 987654321…..

9. ಮತದಾರರ ಗುರುತಿನ ಚೀಟಿ ಸಂಖ್ಯೆ:
ಪ್ರತಿ ಚುನಾವಣೆಗೆ ಬದಲಾಗುತ್ತದೆ. ಒಂದು ನಮ್ಮ ಊರಿನದು. ಇನ್ನೊಂದು ಈಗ ಇರುವ ನಗರದ್ದು. ಸಧ್ಯಕ್ಕೆ ಇದನ್ನೇ ಬರೆದುಕೊಳ್ಳಿ. ABCDEFGHIJ…..

10. ಕುಟುಂಬದ ಒಟ್ಟು ಸದಸ್ಯರು: ಇದು ತುಂಬಾ ಸೀಕ್ರೆಟ್. ತೀರಾ ಖಾಸಗಿ. ಹೇಳಲು ಸಾಧ್ಯವಿಲ್ಲ. ಆದರೂ ಕಡ್ಡಾಯ ಆಗಿರುವುದರಿಂದ ಅಧಿಕೃತವಾಗಿ 9….

11. ಧರ್ಮ:
ಆಗಾಗ ಬದಲಾಗುತ್ತಿರುತ್ತದೆ. ಚುನಾವಣಾ ಸಂದರ್ಭದಲ್ಲಿ ಮತದಾನ ಧರ್ಮ, ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಬಹುಸಂಖ್ಯಾತ ಧರ್ಮ, ಸಂಪುಟ ವಿಸ್ತರಣೆ ಸಮಯದಲ್ಲಿ ಅಲ್ಪಸಂಖ್ಯಾತ ಧರ್ಮ, ಸಮಯ ಸಂದರ್ಭಕ್ಕೆ ತಕ್ಕಂತೆ ಸರ್ವಧರ್ಮ, ಮತದಾರರೇ ನಮ್ಮ ದೇವರು……

12. ಜಾತಿ / ಉಪಜಾತಿ :
ಅಪ್ಪ – ಪರಿಶಿಷ್ಟ, ಅಮ್ಮ – ಲಿಂಗಾಯಿತ, ಮಗ – ಒಕ್ಕಲಿಗ, ಮಗಳು – ಓಬಿಸಿ, ನಾನು – ಬೆರಕೆ….. ಉಪಜಾತಿ – ನಮ್ಮ ಪೂರ್ವಿಕರು ನಿಮ್ಮ ಪಟ್ಟಿಯಲ್ಲಿರುವ ಎಲ್ಲಾ ಉಪಜಾತಿಗಳಿಗೆ ಸೇರಿದ್ದಾರೆ…..

13. ಜಾತಿ ವರ್ಗ (SC/ST/OBC/General/Other) :
ಎಲ್ಲಾನೂ….

14. ಜಾತಿ ಪ್ರಮಾಣ ಪತ್ರ ಇದೆಯೇ ? :
ಇಲ್ಲ, ಬೇಕಾದರೆ ದುಡ್ಡು ಕೊಟ್ಟು ಯಾವುದು ಬೇಕಾದರೂ ತರುತ್ತೇನೆ….

15. ಪ್ರಮಾಣ ಪತ್ರ ಸಂಖ್ಯೆ : 56789…

16. ಜನ್ಮ ದಿನಾಂಕ :
ಸ್ವಲ್ಪ ಗೊಂದಲವಿದೆ. ಬೇರೆ ಬೇರೆ ದಾಖಲೆಗಳಲ್ಲಿ ಬೇರೆ ಬೇರೆ ಇದೆ. ನಂತರ ನೀಡುವೆ……

17. ವಯಸ್ಸು :
ಇಲ್ಲ, ಹೇಳುವುದಿಲ್ಲ….

18. ಲಿಂಗ (ಪುರುಷ/ಸ್ತ್ರೀ/ಇತರೆ) : ಇತರೇ…..

19. ವೈವಾಹಿಕ ಸ್ಥಿತಿ : ‌
ಹೇಳಿದರೆ ಬಣ್ಣ ಬಯಲಾಗುತ್ತದೆ. ಎಲ್ಲರೂ ಕೋಪ ಮಾಡಿಕೊಳ್ಳುತ್ತಾರೆ. ಯಾರ್ರೀ ಈ ಕಾಲಂ ಮಾಡಿದ್ದು. ನಮ್ಮ ವೈವಾಹಿಕ ಸ್ಥಿತಿ ನಮಗೇ ಸರಿಯಾಗಿ ಅರ್ಥವಾಗಿಲ್ಲ, ನಿಮಗ್ಯಾಕೆ, Nonsense…. ಏನಾದರೂ ಬರೆದುಕೊಳ್ಳಿ……

20. ಜನ್ಮ ಸ್ಥಳ :
ಕೃಷ್ಣ ಹುಟ್ಟಿದ ಸ್ಥಳ….

21. ವಿದ್ಯಾಭ್ಯಾಸದ ಮಟ್ಟ :
ಕಾಪಿ ಹೊಡೆದು ಎಸ್ ಎಸ್ ಎಲ್ ಸಿ ಪಾಸು, ದುಡ್ಡು ಕೊಟ್ಟು ಪಿಯುಸಿ ಪಾಸು, ಅಪ್ಪನ ಪ್ರಭಾವದಿಂದ ಪದವಿ ಪಡೆದೆ. ಪೋರ್ಜರಿ ಮಾಡಿದ ಸ್ನಾತಕೋತ್ತರ ಪದವಿ ಇದೆ.

22. ಮನೆಯಲ್ಲಿ ಓದಲು ಬಲ್ಲವರು ಎಷ್ಟು ? :
ಎಲ್ಲರೂ ಓದುವವರೇ, ಎಲ್ಲರೂ ಬರೆಯುವವರೇ. ಪ್ರೇಮ ಪತ್ರಗಳನ್ನು, ದುಡ್ಡಿನ ಲೆಕ್ಕವನ್ನು, ಸೋಷಿಯಲ್ ಮೀಡಿಯಾ ಕಾಮೆಂಟ್ ಗಳನ್ನು…….

23. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ ? :
ಹೌದು, ಶಾಲೆಗೆ ಮತ್ತು ವಾಹನಕ್ಕೆ ತುಂಬಾ ದುಡ್ಡು ಕಟ್ಟಿದ್ದೇವೆ. ಅದಕ್ಕೆ ಕಡ್ಡಾಯವಾಗಿ ಹೋಗಲೇಬೇಕು…..

24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ) :
ಸರ್ಕಾರಿ ಶಾಲೆಗೆ ಹೋಗಲು ಬಡವರಲ್ಲ. ನಮ್ಮ ಬಳಿ ಸಾಕಷ್ಟು ದುಡ್ಡು ಇದೆ. ಖಾಸಗಿ ಅಂತರರಾಷ್ಟ್ರೀಯ ಇಂಗ್ಲೀಷ್ ಶಾಲೆಗೆ ಸೇರಿಸಿದ್ದೇವೆ…..

25. ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರೆಯೇ ? :
ಹೌದು…, ದುರಹಂಕಾರದಿಂದ, ದುರಭ್ಯಾಸದಿಂದ, ಕಾಪಿ ಹೊಡೆದು ಡಿಬಾರ್ ಆಗಿದ್ದರಿಂದ ಶಾಲೆ ಬಿಟ್ಟವರು ಇದ್ದಾರೆ. ನಮಗೇನು ಚಿಂತೆ ಇಲ್ಲ. ಹೇಗಿದ್ದರೂ ನಮ್ಮ ಮಕ್ಕಳಿಗೆ ರಾಜಕೀಯ ಅಖಾಡವಿದೆ…..

26. ಮನೆಯ ಮುಖ್ಯ ಉದ್ಯೋಗ : ಭ್ರಷ್ಟಾಚಾರ, ಅಕ್ರಮ ಮರಳು ದಂಧೆ, ರಿಯಲ್ ಎಸ್ಟೇಟ್, ಶಾಲೆ ಮತ್ತು ಆಸ್ಪತ್ರೆ, ವ್ಯಭಿಚಾರ, ಡ್ರಗ್ಸ್ ಮಾರಾಟ ಮತ್ತು ಇತರ ಸೀಕ್ರೆಟ್ ವ್ಯವಹಾರಗಳು. ಸಾಕೆ ಅಥವಾ ಇನ್ನೂ ಬೇಕೆ ?…..

27. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ ? :
ನಮ್ಮದು ದೊಡ್ಡ ಫ್ಯಾಮಿಲಿ. ದೊಡ್ಡ ವ್ಯವಹಾರಗಳು. ಮನೆಯಲ್ಲಿ ಎಲ್ಲರೂ ಮೇಲೆ ಹೇಳಿದ ಉದ್ಯೋಗದಲ್ಲಿದ್ದೇವೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ದುಡಿಯುತ್ತೇವೆ. ನಮ್ಮ ಹತ್ತಿರದ ಬಂಧುಗಳಿಗೂ ಸಾಕಷ್ಟು ಉದ್ಯೋಗ ನೀಡಿದ್ದೇವೆ…..

28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ) ? :
ಹಾಗೇನೂ ಇಲ್ಲ. ಯಾವುದಾದರೂ ನಮಗೆ ಒಂದೇ. ಎಲ್ಲೆಲ್ಲಿ ಅಕ್ರಮವಾಗಿ ದುಡ್ಡು ಮಾಡಬಹುದೋ ಅಲ್ಲೆಲ್ಲಾ ಮಾಡುತ್ತೇವೆ. ಖಾಸಗಿ ಸರ್ಕಾರಿ ಎಂಬ ಭೇದವಿಲ್ಲ……

29. ನಿರುದ್ಯೋಗಿಗಳು ಇದ್ದಾರೆಯೇ ? :
ಸರ್ಕಾರದ ಲೆಕ್ಕದಲ್ಲಿ ನಾವೆಲ್ಲರೂ ನಿರುದ್ಯೋಗಿಗಳೇ. ನಮ್ಮದು ಸ್ವಯಂ ಸ್ವಾಹ ಉದ್ಯೋಗ….

30. ದಿನದ ಆದಾಯ ? : ನಿರ್ಧಿಷ್ಟವಾಗಿ ಇಲ್ಲ. ನಮ್ಮದೇ ಸರ್ಕಾರ, ನಮ್ಮವರೇ ಅಧಿಕಾರಿಗಳು ಇದ್ದಾಗ ತುಂಬಾ ಜಾಸ್ತಿ. ನೇರವಾಗಿ ಎಲ್ಲಾ ನಮಗೇ ಸೇರುತ್ತದೆ. ಇಲ್ಲದಿದ್ದರೆ ಕಮೀಷನ್ ಹೋಗಿ ದಿನದ ಆದಾಯದಲ್ಲಿ ಸ್ವಲ್ಪ ಕಡಿಮೆ ಆಗುತ್ತದೆ…..

31. ತಿಂಗಳ ಆದಾಯ ? :
ತಿಂಗಳ ಮಾಮೂಲಿ ಎಲ್ಲಾ ಸೇರಿ X ಬ್ಲಾಕ್ ಮತ್ತು Y ವೈಟ್ ಅಷ್ಟು ಅಧಿಕೃತ ಮತ್ತಷ್ಟು ಅನಧೀಕೃತ. …..

32. ತಿಂಗಳ ಖರ್ಚು ? :
ತುಂಬಾ ಇದೆ. ಬ್ಯೂಟಿ ಪಾರ್ಲರ್ ಗೆ, ಡ್ರಿಂಕ್ ಪಾರ್ಟಿಗೆ, ನಾಯಿ ಸೇವಕರಿಗೆ, ಫಾರಿನ್ ಟೂರ್ ಗೆ ಮತ್ತು ಕೆಲವು ತಿಂಗಳು ಅಂದರೆ ಗಣೇಶ, ಅಣ್ಣಮ್ಮ , ರಾಜ್ಯೋತ್ಸವ, ಬಕ್ರೀದ್, ಕ್ರಿಸ್ಮಸ್, ಹೊಸವರ್ಷ, ಚುನಾವಣಾ ಸಂದರ್ಭದಲ್ಲಿ ತಿಂಗಳ ಖರ್ಚು ತುಂಬಾ ಇರುತ್ತದೆ…..

33. ಸಾಲ ಇದೆಯೇ ? :
ಹೌದು, ನಮ್ಮ ಆಡಿಟರ್ ಸಲಹೆ ಮೇರೆಗೆ ಉದ್ದೇಶಪೂರ್ವಕವಾಗಿ ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಅತ್ತೆ ಮಾವನವರ ಬಳಿ ಕಳ್ಳ ಸಾಲ, ಸುಳ್ಳು ಸಾಲ, ಕೈ ಸಾಲ, ಅಕೌಂಟ್ ಸಾಲ ಎಲ್ಲಾ ಇದೆ…..

34. BPL ಕಾರ್ಡ್ ಇದೆಯೇ ? : ಹೌದು,……., ಖಂಡಿತ ಇದೆ. ಪುಕ್ಸಟ್ಟೆ ಸಿಗುವಾಗ, ನಮ್ಮ ಅಧಿಕಾರಿಗಳೇ ಅಲ್ಲಿರುವಾಗ ನಾವು ಈ ಕಾರ್ಡ್ ಮಾಡಿಸಿದ್ದೇವೆ…..

35. ಪಿಂಚಣಿ ಪಡೆಯುತ್ತೀರಾ ? : ಹೌದು, ವೃದ್ದಾಪ್ಯ ಪಿಂಚಣಿ, ಕಲಾ ಸೇವಾ ಪಿಂಚಣಿ, ಸ್ವಾತಂತ್ರ್ಯ ಹೋರಾಟ ಮಾಸಾಶನ, ವಿಕಲಚೇತನ ಪಿಂಚಣಿ ಇನ್ನೂ ಯಾವುದ್ಯಾವುದೋ ಮಾಡಿಸಿದ್ದೇವೆ. ಎಲ್ಲವೂ ನೇರವಾಗಿ ನಮ್ಮ ಅಕೌಂಟಿಗೇ ಬರುತ್ತದೆ…..

36. ಒಟ್ಟು ಜಮೀನು ? :
ಏನ್ರೀ ನೀವು ಅದೆಲ್ಲಾ ಹೇಳಕ್ಕೆ ಆಗುತ್ತದೆಯೇ ? ನಮ್ಮ ಮನೆಯ ಎಲ್ಲರ ಹೆಸರಿನಲ್ಲಿ, ನೆಂಟರ ಹೆಸರಿನಲ್ಲಿ, ಹತ್ತಿರದ ಸ್ನೇಹಿತರ ಹೆಸರಿನಲ್ಲಿ, ಮನೆಕೆಲಸದವರ ಹೆಸರಿನಲ್ಲಿ ಹಾಗೂ ಬೇನಾಮಿ ಹೆಸರಿನಲ್ಲಿ ಸಾಕಷ್ಟು ಜಮೀನು ಇದೆ…..

37. ಕೃಷಿ/ನಿವಾಸಿ ಜಮೀನು ? : ಅದೆಲ್ಲಾ….. ಸರಿಯಾಗಿ ಗೊತ್ತಿಲ್ಲ. ಬಟ್ ಸಾವಿರಾರು ಎಕರೆ ಕೃಷಿ, ವಾಣಿಜ್ಯ ಮತ್ತು ಗೃಹ ನಿರ್ಮಾಣ ಜಮೀನು ಇದೆ….

38. ಮನೆ ಸ್ವಂತದ್ದೇ/ಬಾಡಿಗೆ ? : ರೀ………… ಏನು ತಮಾಷೆ ಮಾಡ್ತೀರಾ. ನಮಗೇ ಐದಾರು ಸ್ವಂತ ಮನೆ ಮಾತ್ರವಲ್ಲ, ನಾವೇ ಹಲವಾರು ಮನೆ ಬಾಡಿಗೆಗೆ ಕೊಟ್ಟಿದ್ದೇವೆ. ಸರಿಯಾಗಿ ಪ್ರಶ್ನೆ ಕೇಳಿ…..

39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ) ?…
ನಮ್ಮದೆಲ್ಲವೂ ಪಕ್ಕಾ. ಕಚ್ಚಾ ಆಗಲು ನಾವು ಭಿಕಾರಿಗಳಲ್ಲ….

40. ವಿದ್ಯುತ್ ಸಂಪರ್ಕ ಇದೆಯೇ ? : ಸರ್ಕಾರಕ್ಕೂ ಮಾರುವಷ್ಟು ಸೋಲಾರ್ ಎನರ್ಜಿ ನಮ್ಮ ಬಳಿ ಇದೆ. ಆದರೂ ಸರ್ಕಾರದ ಉಚಿತ ಯೋಜನೆ ಪಡೆಯುತ್ತಿದ್ದೇವೆ…..

41. ಕುಡಿಯುವ ನೀರಿನ ಮೂಲ ? : ಕಾವೇರಿ, ಎರಡೆರಡು ಬೋರ್ ವೆಲ್, ಲಾರಿ ಟ್ಯಾಂಕರ್ ನೀರು ಎಲ್ಲಾ 24 ಅವರ್ ಸೌಕರ್ಯ ಇದೆ…..

42. ಶೌಚಾಲಯ ಇದೆಯೇ ? : ಅಹಹಾ…… ಇಂಡಿಯನ್, ವೆಸ್ಟ್ರನ್, ವಿಲೇಜ್, ಓಪನ್ ಫೀಲ್ಡ್ ಎಲ್ಲಾ ಇದೆ…..

43. ಮನೆಯಲ್ಲಿ ಎಷ್ಟು ಕೊಠಡಿಗಳು ? :
ಹಾಲ್, ಕಿಚನ್, ಡೈನಿಂಗ್, ಸಿಟ್ ಹೌಟ್, ವಿಸಿಟರ್ ರೂಮ್, ವೈಟಿಂಗ್ ರೂಮ್, ಆಫೀಸ್ ರೂಂ, ಮಾಸ್ಟರ್ ಬೆಡ್ ರೂಮ್, ಚಿಲ್ಡ್ರನ್ ಬೆಡ್ ರೂಮ್, ಗೆಸ್ಟ್ ರೂಂ, ಸ್ಟಡಿ ರೂಂ, ಸರ್ವೆಂಟ್ ರೂಂ, ಡಾಗ್ ಅಂಡ್ ಕ್ಯಾಟ್ ಡೆನ್, ಹೌಟ್ ಹೌಸ್, ಸೆಕ್ಕ್ಯೂರಿಟಿ ರೂಮ್, ಎಕ್ಸ್ ಟ್ರಾ ರೂಂ, ವಿಐಪಿ, ವಿವಿಐಪಿ ರೂಂ, ಸೀಕ್ರೆಟ್ ಡೀಲಿಂಗ್ ರೂಂ ಎಲ್ಲಾ ಇದೆ…..

44. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ ? :
ಈ ಪ್ರಶ್ನೆ ಈ ಕಾಲದಲ್ಲಿ ನಮಗೆ ಕೇಳುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ನಮ್ಮಲ್ಲಿ ಪುಟ್ಟ ಮಗುವಿಗೂ, ನಮ್ಮ ಬೆಕ್ಕಿಗೂ ಫೈವ್ ಜಿ ಆಟೋಮ್ಯಾಟಿಕ್ ಇಂಟರ್ನೆಟ್ ಕನೆಕ್ಷನ್ ಇದೆ…..

45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್) ? :
ಇದೆ…….. ಬರೆದುಕೊಳ್ಳಿ. ರೋಲ್ಸ್ ರಾಯ್, ಬ್ರೆಂಟ್ಲೀ, ಬುಗಾಟಿ, ಲಂಬಾರ್ಗಿನಿ, ಬಿಎಮ್ ಡಬ್ಲ್ಯೂ, ಆಡಿ, ಹಾರ್ಲೆ ಡೇವಿಡ್ ಬೈಕ್, ಜೊತೆಗೆ ಒಂದು ಹೆಲಿಕಾಪ್ಟರ್ ಇದೆ…..

46. ರೇಷನ್ ಸಬ್ಸಿಡಿ ಸಿಗುತ್ತಿದೆಯೇ ? ಹೌದು… ಪ್ರತಿ ತಿಂಗಳು ತಪ್ಪದೇ ಪಡೆಯುತ್ತೇವೆ…..

47. ವಸತಿ ಯೋಜನೆ ಲಾಭ ಪಡೆದಿದ್ದೀರಾ ? :
ಹೌದು… ಸಾಕಷ್ಟು ಪಡೆದಿದ್ದೇವೆ ಮತ್ತು ಲಂಚ ಪಡೆದು, ಇನ್ಫ್ಲುಯೆನ್ಸ್ ಉಪಯೋಗಿಸಿ, ಪೋರ್ಜರಿ ಮಾಡಿ ವಸತಿ ಸಿಕ್ಕಿದೆ……

48. ವಿದ್ಯಾರ್ಥಿವೇತನ ಪಡೆದಿದ್ದೀರಾ ? :
ಹೌದು, ಸುಳ್ಳು ದಾಖಲಾತಿ ನೀಡಿ ಮತ್ತು ಬೇನಾಮಿ ಹೆಸರಿನಲ್ಲಿ ಸಾಕಷ್ಟು ಸಂದರ್ಭಗಳಲ್ಲಿ ವಿದ್ಯಾರ್ಥಿ ವೇತನ ಪಡೆದಿದ್ದೇವೆ…….

49. ಮೀಸಲಾತಿ ಲಾಭ ಪಡೆದಿದ್ದೀರಾ ? :
ಹೌದು…..

50. ಆರೋಗ್ಯ ಯೋಜನೆ ಲಾಭ ಇದೆಯೇ ?
ಇದೆ…..

51. ಮನೆಯಲ್ಲಿ ಯಾರಾದರು ವಿಧವೆ ಇದ್ದಾರೆಯೇ ? :
ವಿಧವೆಯರು ಇದ್ದಾರೆ, ವಿಚ್ಛೇದಿತರು ಇದ್ದಾರೆ, ಓಡಿ ಬಂದವರು ಇದ್ದಾರೆ, ಇಟ್ಟುಕೊಂಡವರು ಇದ್ದಾರೆ, ಕಟ್ಟಿಕೊಂಡವರು ಇದ್ದಾರೆ. ಅದೆಲ್ಲಾ ನಿಮಗ್ಯಾಕೆ ?….

52. ಅಂಗವಿಕಲರು ಇದ್ದಾರೆಯೇ ? : ಹೌದು…. ಬಹುತೇಕ ಮನೆಯಲ್ಲಿ ಇರುವವರೆಲ್ಲರೂ ಮಾನಸಿಕ ಅಂಗವಿಕಲರೇ, ದೈಹಿಕ ಅಸ್ವಸ್ಥರೇ, ರೋಗಿಗಳೇ, ಆಸ್ಪತ್ರೆಯ ಗ್ರಾಹಕರೇ….

53. ಹಿರಿಯ ನಾಗರಿಕರು (60+) ಇದ್ದಾರೆಯೇ ? :
ಹೌದು, ಕೆಲವರು ಮೈನಸ್ – 40 ಇದ್ದರೂ ವೃದ್ಧ ನಾಗರಿಕರಂತೆ‌ ಸೋಮಾರಿಗಳು ಮತ್ತು ನಿಷ್ಪ್ರಯೋಜಕರು. ಅವರನ್ನು 60+ ಗೆ ಸೇರಿಸಿಬಿಡಿ…..

54. ಆರು ವರ್ಷದೊಳಗಿನ ಮಕ್ಕಳು ಎಷ್ಟು ? :
ಕ್ಷಮಿಸಿ, ಅಧೀಕೃತವಾಗಿ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಡಿ ಎನ್ ಎ ಮಾಡಿಸಿ ನಂತರ ಹೇಳುವೆ….

55. ಯುವಕರು (18-35) ಎಷ್ಟು ? : ಬಹಳಷ್ಟು……, ಇದ್ದಾರೆ. ಆದರೆ ಎಲ್ಲರೂ ಸೀಡ್ ಲೆಸ್….

56. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ ?: ಚುನಾವಣಾ ಸಂದರ್ಭದಲ್ಲಿ, ಗಲಭೆ, ಗಲಾಟೆ ಸಮಯದಲ್ಲಿ, ಹಣ ಹೆಂಡ ಸೀರೆ ಪಂಚೆ ಹಂಚುವಾಗ ಕೆಲವು ಸಂಘಟನೆಗಳ ಸದಸ್ಯತ್ವ ಪಡೆಯುತ್ತೇನೆ….

57. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು ? :
ಅದು ಪ್ರತಿ ಚುನಾವಣೆಗೆ ಬದಲಾಗುತ್ತಲೇ ಇರುತ್ತದೆ. ದುಡ್ಡು ಎಷ್ಟು ಹೆಚ್ಚಿಗೆ ಕೊಡುತ್ತಾರೋ ಅಷ್ಟು ಹೆಚ್ಚು ಮತದಾರರ ಸಂಖ್ಯೆ ಏರುತ್ತಲೇ ಇರುತ್ತದೆ….

58. ಮತದಾನ ಮಾಡುವವರೇ ? : ಹೌದು, ಯಾಕಿಲ್ಲ. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುತ್ತೇವೆ….

59. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ ? : ಅಯ್ಯೋ, ದಿನವೂ ಅನುಭವಿಸುತ್ತಲೇ ಇರುತ್ತೇವೆ…

60. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ ? :
ಚುನಾವಣೆಗೆ ಅನುಕೂಲಕರ…..

61. ಹವ್ಯಾಸ : ತುಂಬಾ ಇದೆ. ಚುನಾವಣಾ ಸಂದರ್ಭದಲ್ಲಿ ಗಲಾಟೆ ಮಾಡಿಸುವುದು. ಗಣೇಶೋತ್ಸವ, ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ಕಲ್ಲು ತೂರುವುದು. ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವುದು, ಸಮಾವೇಶಗಳಿಗೆ ಬಾಡಿಗೆ ಜನರನ್ನು ದುಡ್ಡು ಕೊಟ್ಟು ಖರೀದಿ ಮಾಡಿ ಜೀತ ಮಾಡಿಸುವುದು ಇತ್ಯಾದಿ ಇತ್ಯಾದಿ…

62. ಆಸ್ತಿಕ/ನಾಸ್ತಿಕ ?. ಸಮಯ ಸಂದರ್ಭಕ್ಕೆ ತಕ್ಕಂತೆ ಎರಡಕ್ಕೂ ಸೈ. ಅದರಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……