ಜಗತ್ತು ತಲೆಬಾಗುವುದು ಸ್ವಾವಲಂಬನೆಗೆ
ವಿಜಯ ದರ್ಪಣ ನ್ಯೂಸ್….
ಜಗತ್ತು ತಲೆಬಾಗುವುದು ಸ್ವಾವಲಂಬನೆಗೆ
ಲೇಖಕರು: ಜಯಶ್ರೀ .ಜೆ. ಅಬ್ಬಿಗೇರಿ. ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ
ಹೂವಿನ ಪರಿಮಳ ಗಾಳಿ ಬೀಸಿದ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಒಂದೊಳ್ಳೆ ಕಾರ್ಯದ ಗುಣಗಾನ ಎಲ್ಲ ದಿಕ್ಕಿನಲ್ಲಿಯೂ ಪಸರಿಸುತ್ತದೆ. ಒಳ್ಳೆಯ ಕಾರ್ಯ ಮೊದಲು ಆರಂಭವಾಗುವುದು ಒಂದೊಳ್ಳೆ ಯೋಚನೆಯಿಂದ ನಾವು ಸ್ವತಂತ್ರವಾಗಿ ಯೋಚನೆಯನ್ನೇನೋ ಮಾಡುತ್ತೇವೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಬಹಳಷ್ಟು ಸಲ ಬೇರೆಯವರ ಸಲಹೆಗಳ ಮೇಲೆಯೇ ಅವಲಂಬಿತರಾಗುತ್ತೇವೆ. ನಮಗೆ ತಿಳಿಯದ ವಿಷಯಗಳಲ್ಲಿ ಬಲ್ಲವರ ಸಲಹೆ ಮಾರ್ಗದರ್ಶನ ಪಡೆಯುವುದು ಒಳಿತು. ಗೊತ್ತಿದ್ದ ವಿಷಯಗಳಲ್ಲೂ ಮತ್ತೊಬ್ಬರ ಒಪ್ಪಿಗೆಗಾಗಿ ಒಪ್ಪಿಗೆಯ ಮುದೆಗಾಗಿ ಕಾಯುವುದು ಸರಿಯಲ್ಲ. ಹೆಜ್ಜೆ ಹೆಜ್ಜೆಗೂ ಬೇರೆಯವರ ಮೇಲೆ ಅವಲಂಬನೆ ವಿಳಂಬಕ್ಕೆ ಕಾರಣವಾಗುತ್ತದೆ. ಕೇವಲ ವಿಳಂಬವಲ್ಲ ಪರಾವಲಂಬಿ ಪ್ರವೃತ್ತಿಗೆ ದಾರಿ ಮಾಡುತ್ತದೆ. ಪರಾವಂಬಿ ಪ್ರವೃತ್ತಿಯು ನಮ್ಮಲ್ಲಿಯ ನಿಜವಾದ ಪ್ರತಿಭೆಯನ್ನು ಹೊರಹಾಕಲು ಬಿಡುವುದಿಲ್ಲ. ಆತ್ಮವಿಶ್ವಾಸ ಬೆಳೆಯಲು ಅವಕಾಶವನ್ನು ನೀಡುವುದಿಲ್ಲ. ಪರಾವಲಂಬಿತನ ಆತ್ಮವಿಶ್ವಾಸದ ದಾರಿಯನ್ನು ಭಾರಿ ದುಬಾರಿ ಮಾಡುವುದಲ್ಲದೆ. ಗೆಲುವಿನ ದಾರಿಯನ್ನು ತುಂಬಾ ದೂರ ಮಾಡಿಬಿಡುತ್ತದೆ.
ಹಾಗಿದ್ದರೆ ಸ್ವತಂತ್ರ ಯೋಚನೆಗಳನ್ನು ಕಾರ್ಯರೂಪಕ್ಕಿಳಿಸಲು ಅಡ್ಡವಾಗಿರುವ ಅಂಶಗಳಾವವು? ಪೂರಕವಾಗಿ ನಾವೇನು ಮಾಡಬೇಕಿದೆ? ಎನ್ನುವುದನ್ನು ನೋಡೋಣ ಬನ್ನಿ.
ಸ್ವತಂತ್ರವೆಂದರೆ?
ಮೊದಲನೆಯದಾಗಿ ಸ್ವತಂತ್ರ ಪದದ ಅರ್ಥವನ್ನು ಸರಿಯಾಗಿ ತಿಳಿಯಬೇಕು. ಇಲ್ಲಿ ಸ್ವಾತಂತ್ರವೆಂದರೆ ಸ್ವಚ್ಛಾಚಾರವಲ್ಲ. ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ವಾತಂತ್ರ್ಯವೆಂದರೆ ಪ್ರತ್ಯೇಕತೆ ಎಂದು ತಿಳಿಯುತ್ತಾರೆ. ಇನ್ನೂ ಕೆಲವರು ಬಂಡಾಯವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮತ್ತೊಬ್ಬರ ಸ್ವಾತಂತ್ರ್ಯವನ್ನು ವಿರೋಧಿಸುವುದು ಸ್ವಾತಂತ್ರ್ಯವಲ್ಲ. ಬೇರೆಯವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವುದಲ್ಲ. ಮತ್ತೊಬ್ಬರ ವಿಚಾರ ಅಭಿಪ್ರಾಯಗಳನ್ನು ಎಳ್ಳಷ್ಟೂ ಪರಿಗಣಿಸದೆ ನಮ್ಮ ವಿಚಾರಗಳಿಗೆ ಮಾತ್ರ ಆದ್ಯತೆ ನೀಡುವುದಲ್ಲ. ಬಲವಂತವಾಗಿ ಅವರ ಮೇಲೆ ನಮ್ಮ ಯೋಚನೆ ಹೇರುವುದು ಸ್ವಾತಂತ್ರ್ಯವಲ್ಲ. ಇತರರ ವಿಚಾರ ಅಭಿಪ್ರಾಯಗಳನ್ನು ಗೌರವಿಸಿ. ಸಂದರ್ಭೋಚಿತವಾಗಿ ನಮ್ಮ ವಿಚಾರ ಮತ್ತು ಅಭಿಪ್ರಾಯಗಳನ್ನು ಮಂಡಿಸುವುದು ಅಥವಾ ಪ್ರತಿಪಾದಿಸುವುದು ನಿಜವಾದ ಸ್ವಾತಂತ್ರ್ಯವೆನಿಸಿಕೊಳ್ಳುತ್ತದೆ.
ಆತ್ಮವಿಶ್ವಾಸ
ಆತ್ಮವಿಶ್ವಾಸವಿಲ್ಲದೆ ಸಣ್ಣದೊಂದು ಹುಲ್ಲುಕಡ್ಡಿಯನ್ನು ಸರಿಯಾಗಿ ಎತ್ತಿ ಹಿಡಿಯಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಯೋಚಿಸಿದ ವಿಚಾರದ ಅನುಷ್ಠಾನದಲ್ಲಿ ಪರಾವಲಂಭಿ ಯಾದರೆ ಕಾರ್ಯ ರೂಪಕ್ಕೆ ಇಳಿಸುವುದು ಕಷ್ಟವೇ ಸರಿ. ಆತ್ಮವಿಶ್ವಾಸದ ಹಿನ್ನೆಡೆಗೆ ಮುಖ್ಯ ಕಾರಣ ಈ ಹಿಂದೆ ಮಾಡಿದ ತಪ್ಪು ಆಗಿರಬಹುದು. ಹಿಂದೆ ಮಾಡಿದ ತಪ್ಪಿಗಿಂತ ಇಂದು ಧೈರ್ಯದಿಂದ ಇಡುವ ಹೆಜ್ಜೆಯೇ ಹೆಚ್ಚು ಮುಖ್ಯವಾಗುತ್ತದೆ. ಕಷ್ಟಪಟ್ಟು ಬೆಟ್ಟ ಹತ್ತಿದರೆ ಮಾತ್ರ ಸುಂದರ ದೃಶ್ಯಗಳನ್ನು ನೋಡಲು ಸಾಧ್ಯ. ಹಾಗೆಯೇ ಆತ್ಮವಿಶ್ವಾಸದಿಂದ ಕೆಲಸದಲ್ಲಿ ತೊಡಗಿಕೊಂಡರೆ ಮಾತ್ರ ಗೆಲುವಿನ ಆನಂದ ಸವಿಯಲು ಸಾಧ್ಯ. ಬೇರೆಯವರನ್ನು ಅವಲಂಬಿಸಿ ಮಾಡಿದ ಕ್ರಿಯೆಗಿಂತ ನೀವೇ ನಿರ್ಧರಿಸಿ ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಹೆಚ್ಚು ಪರಿಪಕ್ವವೆನಿಸುತ್ತದೆ.
ಉತ್ಸಾಹ
ಇನ್ನೊಂದು ಸಂಗತಿ ಇಲ್ಲಿ ಉಲ್ಲೇಖಿಸಲೇಬೇಕು: ಯೋಚನೆಯು ಕಾರ್ಯಫಲ ನೀಡಬೇಕೆಂದರೆ ಉತ್ಸಾಹದ ಚಿಲುಮೆ ಚಿಮ್ಮುತ್ತಿರಬೇಕು. ಬೇಸರವನ್ನು ಸನಿಹ ಸುಳಿಯಲು ಬಿಡಬಾರದು. ಕೆಲಸದಲ್ಲಿ ದಕ್ಷತೆ ತುಂಬಿರಬೇಕು, ಸೋಲೊಪ್ಪಿ ಕೊಳ್ಳದ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ತುಸು ಸಂಯಮದಿಂದ ಕಾರ್ಯ ನಿರ್ವಹಿಸಿದರೆ ಕಾರ್ಯ ಸಫಲಗೊಳ್ಳುವುದು, ಪರಾವಲಂಬಿ ಪ್ರವೃತ್ತಿಯೂ ದೂರ ವಾಗುವುದು. ಉತ್ಸಾಹ ಇರದ ಕಡೆ ಕಾರ್ಯ ಸಿದ್ಧಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಪರಿಣಿತರ ಸಲಹೆ ತಿದ್ದುತ್ತದೆ. ಹುರಿದುಂಬಿಸುತ್ತದೆ ದಾರಿ ತೋರುತ್ತದೆಂಬುದೇನೋ ನಿಜ ಎಲ್ಲದಕ್ಕೂ ಮಿಗಿಲಾಗಿ ಉತ್ಸಾಹವು ಬದುಕಿನ ಹಾದಿಯಲ್ಲಿ ಮುನ್ನಡೆಸುತ್ತದೆ. ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.
ಮನೆ ಮಂದಿ
ಹೆತ್ತವರು ಹಿರಿಯರು ಹೇಳಿದಂತೆ ಕೇಳಲು ಒಂದು ವಯಸ್ಸಿನ ಮಿತಿ ಇರುತ್ತವೆ. ಅದನ್ನು ದಾಟಿದ ನಂತರ ಸ್ವತಃ ನೀವೇ ಯೋಚಿಸಲು ಆರಂಭಿಸಿ. ನಿಮ್ಮ ವಿಚಾರವನ್ನು ಅವರ ಮುಂದಿಟ್ಟು ಸಲಹೆಯನ್ನು ಪಡೆಯಿರಿ. ಸಲಹೆಯ ಸಾಧಕ ಬಾಧಕಗಳನ್ನು ವಿಶ್ಲೇಶಿಸಿ ನೀವೇ ನಿರ್ಧಾರ ತೆಗೆದುಕೊಳ್ಳಿ. ಮನೆಮಂದಿ ನಿಮ್ಮನ್ನು ಚೆನ್ನಾಗಿ ಅರಿತಿರುತ್ತಾರೆಂಬುದೇನೋ ನಿಜ ಅದು ಯಾವಾಗಲೂ ಸತ್ಯ ಎಂಬ ಭಾವನೆ ಸಲ್ಲ, ಕೆಲವೊಮ್ಮೆ ನಿಮ್ಮ ನಿರ್ಧಾರ ನಿಮ್ಮ ಮನೆಮಂದಿಗಿಂತ ಚೆನ್ನಾಗಿರ ಬಹುದು. ಕುಟುಂಬದಲ್ಲಿ ಪರಾವಲಂಬಿತನ ಬೆಳೆಸಿಕೊಂಡರೆ ಮುಂದೆ ನೀವು ಸ್ವತಃ ಜೀವನ ನಡೆಸುವಾಗ ಹೊರಗಿನ ಜೀವನದಲ್ಲೂ ಹಲವು ಪರಿಸ್ಥಿತಿಗಳಲ್ಲಿ ಪರಾವಲಂಬಿತನ ಮುಂದುವರೆಯುತ್ತದೆ. ಪ್ರತಿಯೊಂದನ್ನು ಮನೆಯವರು ಹೇಳಿದಂತೆ ಮಾಡಿದರೆ ನಿಮ್ಮ ಬುದ್ಧಿ ಮಂಕಾಗುತ್ತದೆ. ಪರಿವಾರ ದಲ್ಲಿರುವಾಗ ಹೆಚ್ಚು ಪರಾವಲಂಬಿಯಾಗದಿದ್ದರೆ ಮುಂದೆ ಸ್ವತಂತ್ರ ಜೀವನದಲ್ಲಿ ಹೆಚ್ಚು ಯಶಸ್ಸು ಸಿಗಬಲ್ಲದು. ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆಯವರ ಮೇಲೆ ಅವಲಂಬನೆಯಾಗುವ ಪ್ರಸಂಗ ಬರುವುದಿಲ್ಲ. ಬೇರೆಯವರಿಂದ ಮೋಸ ವಂಚನೆಗೆ ಬಲಿ ಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ವಿಚಾರಗಳು
ವಿಚಾರದಲ್ಲಿ ವ್ಯತ್ಯಾಸವಾದರೆ ಕಾರ್ಯದಲ್ಲೂ ವ್ಯತ್ಯಾಸ ವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಉತ್ತಮ ವಿಚಾರ ಗಳು ಪವಾಡಗಳನ್ನು ಮಾಡುತ್ತವೆ. ಜೀವನವನ್ನು ಧೈರ್ಯದಿಂದ ನಡೆಸಲು ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಉತ್ತಮ ವಿಚಾರಗಳಿಗೆ ತುಂಬಾ ಮೌಲ್ಯವಿದೆ. ಏಕೆಂದರೆ ಅವು ಕಾರ್ಯ ಗಳಿಗೆ ಬೀಜಗಳಿದ್ದಂತೆ, ಸರಿಯಾದ ವಿಚಾರಗಳು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುತ್ತವೆ. ದಾರಿ ತಪ್ಪಿಸುವುದಿಲ್ಲ.
ವಿಚಾರಗಳು ತಿಳಿ ನೀರಿನ ಕೊಳದಂತಿರಬೇಕು. ಶಾಂತವಾಗಿದ್ದರೆ ಉತ್ತಮ ವಿಚಾರ ಎದ್ದು ಕಾಣುತ್ತವೆ. ಕಲಕಿದರೆ ಸರಿಯಾದ ವಿಚಾರಗಳು ಹೊಮ್ಮುವುದಿಲ್ಲ. ಉತ್ತಮ ವಿಚಾರಗಳನ್ನು ಹೊಂದಿದವರ ಸಂಗದಲ್ಲಿದ್ದರೆ ಅವರ ಪ್ರಭಾವ ನಮ್ಮ ಮೇಲಾಗುತ್ತದೆ. ಉತ್ತಮ ವಿಚಾರ ಗೌರವವನ್ನು ಕಾಪಾಡುತ್ತದೆ. ಕೆಟ್ಟ ವಿಚಾರಗಳು ಅವಮಾನದ ಬಾಗಿಲಿಗೆ ತಂದು ನಿಲ್ಲಿಸುತ್ತವೆ. ಉತ್ತಮ ಕಾರ್ಯ ಘನತೆಯನ್ನು ಹೆಚ್ಚಿಸುತ್ತದೆ. ಸ್ವಾವಲಂಬಿತನಕ್ಕೆ ನಾಂದಿ ಹಾಡುತ್ತದೆ.
ಬೆಂಬಲ
ಸಹಾಯ ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಕುಟುಂಬದ ಆಪ್ತರನ್ನು ಆತ್ಮೀಯರನ್ನು ಕೇಳಲೇಬಾರದು ಅಂತೇನಿಲ್ಲ. ಅವರ ಮಾತಿನ ಮೌಲ್ಯಮಾಪನ ಮಾಡಿ. ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಕಲಿಯಿರಿ. ಆದರೆ ಅವರ ಸಹಾಯವಿಲ್ಲದೆ ನೀವು ಅಸಹಾಯಕರು ಅಥವಾ ನಿಮ್ಮಿಂದ ಏನನ್ನೂ ಮಾಡಲಾಗದು ಎನ್ನುವ ಭಾವನೆಯನ್ನು ದೂರವಿಡಿ. ವಾಸ್ತವದಲ್ಲಿ ಕುಟುಂಬವು ಭಾವನಾತ್ಮಕ ಬೆಂಬಲ ನೀಡುವಲ್ಲಿ ಸದಾ ಸಿದ್ದವಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ನೀವು ತೆಗೆದುಕೊಂಡ ನಿರ್ಧಾರ ಸರಿಯಿದೆಯೆಂದು ಅವರಿಗೆ ಮನವರಿಕೆ ಮಾಡಕೊಡಬೇಕೆಂದಿಲ್ಲ. ನಿಮಗೆ ಸರಿಯೆನಿಸಿದ್ದನ್ನು ಮಾಡಿ ಸ್ವಾವಲಂಬಿಯಾಗಿ,
ದೊಡ್ಡ ವೈರಿ
ಪರಾವಲಂಬಿ ಪ್ರವೃತ್ತಿ ನಮ್ಮ ದೊಡ್ಡ ವೈರಿ. ಪರಾವ ಲಂಬಿ ಬದುಕು ಸರಳವೆನಿಸಿ ಅದಕ್ಕೆ ಜೋತು ಬೀಳುತ್ತೇವೆ. ಅದು ಕೊನೆಯಲ್ಲಿ ನಮಗೆ ತಡೆಯಲಾರದ ದುಃಖವನ್ನು ನೀಡುತ್ತದೆ. ಸ್ವಾವಲಂಬಿತನ ನೋವುಗಳನ್ನು ಹೆಚ್ಚಿಸುತ್ತದೆ. ನೋವಿನಲ್ಲಿದ್ದರೂ ಹೇಗೆ ಸ್ವಾವಲಂಬಿಯಾಗಬೇಕು ಎಂಬುದನ್ನು ಕಲಿಸುತ್ತದೆ. ಅದರೊಂದಿಗೆ ಅನುಭವವನ್ನು ಹೆಚ್ಚಿಸುತ್ತದೆ. ಅನುಭವವು ಶ್ರೇಷ್ಠ ಗುರು ಎಂಬ ಮಾತನ್ನು ಅಲ್ಲಗಳೆಯುವ ಹಾಗಿಲ್ಲ. ಗೆಲುವಿನ ಬದುಕು ನಮ್ಮದಾಗಿರಬೇಕು. ನೆಮ್ಮದಿಯ ಬದುಕು ಸಾಗಿಸಬೇಕೆಂದರೆ ಪರಾವಲಂಬಿ ದಾರಿಯನ್ನು ಶಾಶ್ವತ ವಾಗಿ ಮುಚ್ಚಬೇಕು. ಉಜ್ವಲ ಭವಿಷ್ಯಕ್ಕೆ ಅದೊಂದೇ ದಾರಿ. ಸ್ವತಂತ್ರ ಯೋಚನೆ ಮತ್ತು ಸ್ವತಂತ್ರ ಕಾರ್ಯಗಳಿಂದ ಕೂಡಿದ ಬದುಕು ಕುತೂಹಲಕಾರಿಯಾಗಿರುತ್ತದೆ. ಅದನ್ನು ಎದುರಿಸಿ ಗೆದ್ದರೆ ಬದುಕು ಅರ್ಥಪೂರ್ಣವಾಗುತ್ತದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಯ ಹಿಡಿದೇ ಹಿಡಿಯುತ್ತದೆ. ಸಮಯ ತೆಗೆದು ಕೊಂಡರೂ ರಾಜ ಮರ್ಯಾದೆಯ ಬದುಕು ಅದಾಗಿರುತ್ತದೆ.
ಕೊನೆ ಹನಿ
ಪರಾವಲಂಬಿ ಪ್ರವೃತ್ತಿಗೆ ತಳ್ಳುವ ದಾರಿ ಎಷ್ಟೇ ಸುಂದರವೆನಿಸಿದರೂ ಕೂಡಲೇ ಮುಚ್ಚಬೇಕು. ಏಕೆಂದರೆ ಜಗತ್ತು ಸ್ವಾವಲಂಬನೆಗೆ ತಲೆ ಬಾಗುತ್ತದೆಯೇ ಹೊರತು ಪರಾವಲಂಬಿ ಪ್ರವೃತ್ತಿಗಲ್ಲ.