ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..
ವಿಜಯ ದರ್ಪಣ ನ್ಯೂಸ್…
ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..
ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಮೂಲಭೂತವಾದ ಸಂಪೂರ್ಣವಾಗಿ ತನ್ನ ನೆಲೆಯನ್ನು ವಿಸ್ತರಿಸುವ ಮುನ್ನ ಕ್ರಿಯೆ – ಪ್ರತಿಕ್ರಿಯೆಗಳ ಸುತ್ತ ಒಂದು ಸುತ್ತು…….
ವಿರೋಧಿಗಳನ್ನು
ಕೆಲವರು ಬಾಂಬ್ ಹಾಕಿ ಉಡಾಯಿಸುತ್ತಾರೆ,
ಕೆಲವರು ಬಂದೂಕಿನಿಂದ ಗುರಿಯಿಟ್ಟು ಹೊಡೆಯುತ್ತಾರೆ,
ಕೆಲವರು ಮಚ್ಚು ಲಾಂಗುಗಳನ್ನು ಬೀಸುತ್ತಾರೆ,
ಕೆಲವರು ರಾಡು, ದೊಣ್ಣೆಗಳಿಂದ ದಾಳಿ ಮಾಡುತ್ತಾರೆ,
ಕೆಲವರು ಚಾಕುವಿನಿಂದ ಚುಚ್ಚುತ್ತಾರೆ,
ಕೆಲವರು ಕಲ್ಲು ಬೀಸುತ್ತಾರೆ,
ಕೆಲವರು ಚಪ್ಪಲಿ ಎಸೆಯುತ್ತಾರೆ, ಕೆಲವರು ಪೇಪರ್ ಹರಿದು ಹಾಕುತ್ತಾರೆ,
ಕೆಲವರು ಧಿಕ್ಕಾರ ಕೂಗುತ್ತಾರೆ, ಕೆಲವರು ಮೌನವಾಗಿ ಪ್ರತಿಭಟಿಸುತ್ತಾರೆ,
ಕೆಲವರು ಕಾನೂನು ಕ್ರಮ ಕೈಗೊಳ್ಳುತ್ತಾರೆ,
ಕೆಲವರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತಾರೆ,
ಕೆಲವರು ಸ್ವತಃ ಪತ್ರ ಬರೆದು ಅಥವಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,
ಕೆಲವರು ಸಂಬಂಧಪಟ್ಟವರಿಗೆ ದೂರು ನೀಡುತ್ತಾರೆ,
ಕೆಲವರು ಎಲ್ಲಾ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ,
ಕೆಲವರು ತಮಗೆ ಸಂಬಂಧವೇ ಇಲ್ಲದಂತೆ ದಿವ್ಯ ಮೌನಕ್ಕೆ ಜಾರುತ್ತಾರೆ……..
ಇದರಲ್ಲಿ ನೀವು ಯಾರು ?
ಮೊನ್ನೆ ಸುಪ್ರೀಂಕೋರ್ಟಿನ 65ಕ್ಕೂ ಹೆಚ್ಚು ವಯಸ್ಸಿನ ವಕೀಲರೊಬ್ಬರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಗವಾಯಿ ಅವರ ಮೇಲೆ ಚಪ್ಪಲಿ ಎಸೆಯುತ್ತಾರೆ. ಅದಕ್ಕೆ ಕಾರಣ ಗವಾಯಿಯವರು ಒಂದು ಕೇಸಿನ ವಿಚಾರವಾಗಿ ವಿಚಾರಣೆ ನಡೆಸುತ್ತಿರುವಾಗ ಆಡಿದ ಮಾತುಗಳು ಆ ವ್ಯಕ್ತಿಗೆ ಇಷ್ಟವಾಗಲಿಲ್ಲ. ಅದಕ್ಕೆ ಆತ ನ್ಯಾಯಾಲಯದಲ್ಲಿಯೇ ಚಪ್ಪಲಿ ಎಸೆಯುತ್ತಾನೆ.
ಈ ಸಮಾಜದಲ್ಲಿ ಚಪ್ಪಲಿ ಎಸೆಯುವುದು ದೊಡ್ಡ ವಿಷಯವೇನು ಅಲ್ಲ. ಏಕೆಂದರೆ ಸತ್ಯ, ಅಹಿಂಸೆ ಪ್ರತಿಪಾದಕರಾದ ಮಹಾತ್ಮ ಗಾಂಧಿಯವರಿಂದ ಹಿಡಿದು ಇಲ್ಲಿಯವರೆಗೆ ಸಾರ್ವಜನಿಕ ಜೀವನದಲ್ಲಿ ಜನಪ್ರಿಯತೆ ಪಡೆದ ಬಹುತೇಕ ವ್ಯಕ್ತಿಗಳ ಮೇಲೆ ಕಲ್ಲು ಮತ್ತು ಚಪ್ಪಲಿ ತೂರುವುದು ಆಗಾಗ ನಡೆಯುತ್ತಲೇ ಇರುತ್ತದೆ. ಇಷ್ಟೇ ಅಲ್ಲದೆ ಮೇಲೆ ಹೇಳಿದ ಎಲ್ಲಾ ರೀತಿಯ ಪ್ರತಿಭಟನಾ ಅಸ್ತ್ರಗಳನ್ನು ಉಪಯೋಗಿಸುತ್ತಿರುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಭಿನ್ನ ಅಭಿಪ್ರಾಯಗಳು ಅತ್ಯಂತ ಸಹಜವಾದದ್ದು. ಆದರೆ ಅದಕ್ಕೆ ನಾವು ನೀಡಬೇಕಾದ ಪ್ರತಿಕ್ರಿಯೆ ಯಾವ ರೀತಿ ಇರಬೇಕು ಎಂಬುದು ಮಾತ್ರ ನಮ್ಮ ನಮ್ಮ ನಾಗರೀಕ ಪ್ರಜ್ಞೆಯನ್ನು ಅವಲಂಬಿಸಿರುತ್ತದೆ…
ಭಾರತದ ಇತಿಹಾಸದಲ್ಲಿ ದಾಖಲಾಗಿರುವಂತೆ ಮಹಾತ್ಮಗಾಂಧಿ ಅವರ ಎದೆಗೆ ನೇರವಾಗಿ ಗುಂಡು ಹಾರಿಸಲಾಯಿತು. ಬಹುಶಃ ಅಲ್ಲಿಂದ ಪ್ರತಿಭಟನೆಯ ಮಾರ್ಗಗಳು ಭಿನ್ನ ಮಾರ್ಗವಾಗಿ ಈ ಸಮಾಜದಲ್ಲಿ ಮುನ್ನಡೆಸಿಕೊಂಡು ಬರುತ್ತಿವೆ, ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೊರತಾಗಿಯೂ……
ಈಗ ಘಟನೆಗೆ ಕಾರಣವಾದ ವಾಸ್ತವ ಅಂಶವನ್ನು ಪರಿಶೀಲಿಸಿಸೋಣ. ದಯವಿಟ್ಟು ಯಾವುದೇ ಪೂರ್ವಗ್ರಹ ಪೀಡಿತರಾಗದೆ, ಯಾರಿಗೂ ಸೇರದ ಪ್ರದೇಶದಲ್ಲಿ ನಿಂತು, ಘಟನೆಯನ್ನು ಒಮ್ಮೆ ನೋಡಿ. ಪೂರ್ವಾಗ್ರಹ ಪೀಡಿತರಾದರೆ, ಜಾತಿ, ಧರ್ಮ, ಪಂಥ, ಭಾಷೆ, ಪ್ರದೇಶಗಳ ಮಿತಿಗೆ ಒಳಪಟ್ಟರೆ ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಲಾಗುವುದಿಲ್ಲ…..
ಮಧ್ಯಪ್ರದೇಶದ ಒಂದು ದೇವಸ್ಥಾನದಲ್ಲಿ ವಿಷ್ಣು ದೇವರ ವಿಗ್ರಹಕ್ಕೆ ಹಾನಿಯಾಗಿರುತ್ತದೆ. ಅದನ್ನು ಸರಿಪಡಿಸಿರುವಂತೆ ಅಲ್ಲಿನ ಕೆಲವರು ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದ ನಂತರವೂ ಆಡಳಿತ ಯಾವುದೇ ಕ್ರಮ ಕೈಗೊಂಡಿರದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ.
ಆ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮಾತನಾಡುತ್ತಾ ಈ ವಿಷಯವನ್ನು ನೀವು ದೇವರಲ್ಲಿ ಪ್ರಸ್ತಾಪಿಸಿ ಸರಿಪಡಿಸಿಕೊಳ್ಳಬಹುದಿತ್ತಲ್ಲವೇ ಎಂಬ ಅರ್ಥದ ಸ್ವಲ್ಪ ವ್ಯಂಗ್ಯ, ಸ್ವಲ್ಪ ಹಾಸ್ಯ ಭರಿತ ಮಾತುಗಳನ್ನು ಸಹಜವಾಗಿ ಆಡುತ್ತಾರೆ….
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಾಂಗ ಪೀಠದ ಅತ್ಯುನ್ನತ ಸ್ಥಾನದಲ್ಲಿ ಕುಳಿತ ಮುಖ್ಯ ನ್ಯಾಯಮೂರ್ತಿಗಳು ಒಂದು ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುತ್ತಾರೆ. ಅವರಿಗೆ ಇಡೀ ಸಂವಿಧಾನವನ್ನೇ ಅರ್ಥೈಸುವ, ಜನರಿಗೆ ನ್ಯಾಯ ನೀಡುವ ಸ್ಥಾನದ ಜವಾಬ್ದಾರಿ ಹೊಂದಿರುತ್ತಾರೆ. ಅವರು ಏನೇ ಹೇಳುವುದಿದ್ದರೂ ಅದನ್ನು ಕಾನೂನಿನ ಮಿತಿಯಲ್ಲಿಯೇ ಹೇಳಬೇಕು. ಆ ಅರ್ಥದಲ್ಲಿ ನೋಡಿದರೆ ಆ ಸ್ಥಾನದ ವ್ಯಕ್ತಿ ಈ ಪದಗಳನ್ನು ಉಪಯೋಗಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ನಮ್ಮಂತ ಸಾಮಾನ್ಯರು ನೇರ ಅಭಿಪ್ರಾಯಗಳನ್ನು ಹೇಳಬಹುದು. ದೇವರು, ಧರ್ಮದ ಬಗ್ಗೆ ನಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಆದರೆ ನ್ಯಾಯಮೂರ್ತಿಗಳು ದೇವರನ್ನೇ ಕೇಳಬೇಕಿತ್ತು ಎನ್ನುವುದು ಅಷ್ಟು ಉತ್ತಮ ನಡೆಯಲ್ಲ.
ಹೌದು, ದೇವರು ಎಂಬ ಕಾಲ್ಪನಿಕ ಅಥವಾ ನಂಬಿಕೆ ಎಂಬ ಶಕ್ತಿಯ ವೈಫಲ್ಯದಿಂದಾಗಿಯೇ ನ್ಯಾಯಾಲಯ, ನ್ಯಾಯಾಧೀಶರು ಮತ್ತು ಕಾನೂನು ಸ್ಥಾಪಿತವಾಗಿರುವುದು. ಇತ್ತೀಚಿನ ಹಾಸನ ಜಿಲ್ಲೆಯಲ್ಲಿ ಗಣೇಶ ಮೆರವಣಿಗೆಯ ಮೇಲೆ ಟ್ರಕ್ ಹರಿದು ಕೆಲವರು ಸಾವಿಗೀಡಾದ ಘಟನೆಯಲ್ಲಿ ಆಡಳಿತ ಹೊಣೆಯಾಗದೆ ದೇವರನ್ನು ಹೊಣೆ ಮಾಡಬಹುದಲ್ಲವೇ. ಆದರೆ ದೇವರನ್ನು ಯಾರೂ ಪ್ರಶ್ನಿಸುವುದಿಲ್ಲ. ಇದೇ ಮೌಢ್ಯ. ಇದೇ ವಾಸ್ತವ ಸತ್ಯ.
ಅಂತಹ ವ್ಯವಸ್ಥೆಯಲ್ಲಿ ನಾವಿರುವಾಗ ಕಾನೂನು ನೆರವು ನೀಡಬೇಕಾಗಿದ್ದ ಮಾನ್ಯ ನ್ಯಾಯಾಧೀಶರು ಲೋಕಾಭಿರಾಮವಾಗಿಯಾದರೂ ಆಡಿದ ಕನಿಷ್ಠ ಆ ಪದ ಬಳಕೆಯ ನಂತರ ಸಣ್ಣ ಕ್ಷಮಾಪಣೆ ಕೇಳಬಹುದಿತ್ತೇನೋ….
ಇದು ಒಂದು ಆಯಾಮವಾದರೆ ಅವರಿಗೆ ಚಪ್ಪಲಿ ಎಸೆಯುವ ಅತ್ಯಂತ ಅಮಾನವೀಯ ಕ್ರೌರ್ಯವನ್ನು, ಅಪರಾಧವನ್ನು ವಕೀಲರೊಬ್ಬರು ಪ್ರದರ್ಶಿಸಿರುವುದು ಸಹ ಕಂಡುಬರುತ್ತದೆ. ಏಕೆಂದರೆ ಕಾನೂನನ್ನು ತಿಳಿದಿರುವ ವ್ಯಕ್ತಿ ಎಸೆದ ಚಪ್ಪಲಿ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ದಾಳಿಯಾಗುತ್ತದೆ ಎಂಬ ಅರಿವು ಇಲ್ಲದೆ ವರ್ತಿಸಿರುವುದು ಗಂಭೀರವಾದದ್ದು ಮತ್ತು ಶಿಕ್ಷಾರ್ಹ ಅಪರಾಧ. ಗವಾಯಿಯವರು ಹೇಳಿರುವುದು ವಾಸ್ತವ ನೆಲೆಗಟ್ಟಿನಲ್ಲಿ ಸತ್ಯ, ಆದರೆ ಆ ಸ್ಥಾನಕ್ಕೆ ಅರ್ಹವಾದುದಲ್ಲ. ಅದನ್ನು ಬೇರೆ ರೂಪದಲ್ಲಿ ಪ್ರಶ್ನಿಸುವುದು ಬಿಟ್ಟು ಮೂಲಭೂತವಾದದ ಹಿನ್ನೆಲೆಯಲ್ಲಿ ಚಪ್ಪಲಿ ಎಸೆಯುವುದು ದುಷ್ಟ ಮನಸ್ಥಿತಿಯ ಯಥಾಸ್ಥಿತಿ ವಾದದ ಪಟ್ಟಭದ್ರ ಹಿತಾಸಕ್ತಿಯ ಪ್ರತೀಕ….
ಆ ಘಟನೆಯನ್ನು ವಕೀಲರ ಮತ್ತು ಎಲ್ಲ ಪ್ರಜ್ಞಾವಂತ ನಾಗರಿಕರು ಖಂಡಿಸಬೇಕು ಮತ್ತು ಎಲ್ಲಾ ಶಿಕ್ಷಿಸುವ ಕಾನೂನಾತ್ಮಕ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು. ಈಗಾಗಲೇ ಶಾಸಕಾಂಗ ಮತ್ತು ಕಾರ್ಯಾಂಗ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ. ಅಲ್ಪಸ್ವಲ್ಪ ನ್ಯಾಯಾಂಗದ ಮೇಲೆ ಭರವಸೆ ಇತ್ತು. ಇತ್ತೀಚೆಗೆ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ದೊರಕಿದ್ದ ಕಂತೆ ಕಂತೆ ಹಣ, ಬೇರೆ ಬೇರೆ ನ್ಯಾಯಾಧೀಶರು ವ್ಯಕ್ತಪಡಿಸುತ್ತಿರುವ ಕೆಲವು ಬಹಿರಂಗ ಅನಾವಶ್ಯಕ ಹೇಳಿಕೆಗಳು, ತೀರ್ಪುಗಳು ನ್ಯಾಯಾಲಯದ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಅದನ್ನು ಸಹ ಗಮನಿಸಬೇಕು
ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮತಾಂಧ ಶಕ್ತಿಗಳು, ಮೂಲಭೂತವಾದಿಗಳು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ, ಧಾರ್ಮಿಕ ವಿಷಯದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಳ್ಳೆಯ ವಾತಾವರಣವಲ್ಲ, ಒಳ್ಳೆಯ ಬೆಳವಣಿಗೆಯಲ್ಲ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……