ದಕ್ಷಿಣ ಕಾಶ್ಮೀರ ಮಡಿಕೇರಿ ನಗರದಲ್ಲಿರುವ ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆ.

ವಿಜಯ ದರ್ಪಣ ನ್ಯೂಸ್,                              ಮಡಿಕೇರಿ ಜುಲೈ 07 

ದಕ್ಷಿಣ ಕಾಶ್ಮೀರ ಎಂದೇ ಪ್ರಖ್ಯಾತಿ ಹೊಂದಿರುವ ಮಂಜಿನ ನಗರಿ ಮಡಿಕೇರಿಯಲ್ಲಿ   ತಾಲ್ಲೂಕಿನ ಹೆಚ್ಚಿನ ಎಲ್ಲ ವರ್ಗದ ಜನರು ಶುಕ್ರವಾರದ ಸಂತೆಯ ದಿನ ತಮ್ಮ ದಿನನಿತ್ಯದ ಬದುಕಿಗೆ ಅವಶ್ಯಕವಾದ ವಸ್ತುಗಳನ್ನು ಖರೀದಿ ಮಾಡಲು ಮಡಿಕೇರಿ ನಗರದಲ್ಲಿರುವ ಮಾರುಕಟ್ಟೆಯನ್ನು ಅವಲಂಬಿಸಿರುತ್ತಾರೆ.

ಹೈಟೆಕ್ ಮಾರುಕಟ್ಟೆಯ ರೂಪ ಪಡೆದುಕೊಂಡು ಹಲವು ವರ್ಷಗಳಿಂದ ವ್ಯಾಪಾರ ಮಾಡುವವರಿಗೆ ಮತ್ತು ಗ್ರಾಹಕರಿಗೆ ಮಳೆ ಗಾಳಿಯಿಂದ ರಕ್ಷಣೆನ್ನು ನೀಡಿದೆ. ಬೃಹತ್ತಾದ ಮಾರುಕಟ್ಟೆ ಸಂಕೀರ್ಣ ಹೊಂದಿರುವ ನನ್ನೂರು ಮಡಿಕೇರಿಯವಳಾದ ನನಗೆ ಹೆಮ್ಮೆಯ ವಿಷಯ.

ಆದರೆ ನಾನಿಂದು ತರಕಾರಿ ಖರೀದಿಸುವ ಸಲುವಾಗಿ ಮಾರುಕಟ್ಟೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ಹಾಗೂ ವ್ಯಾಪಾರ ಮಾಡುತ್ತಿದ್ದ ಮಹಿಳಾ ಸಹೋದರಿಯ ಮಾತು ತಲೆತಗ್ಗಿಸುವಂತೆ ಮಾಡಿತು. ವ್ಯಾಪಾರಸ್ಥರು ಊರೂರು ತೆರಳಿ ಸಂತೆ ನಡೆಯುವ ದಿನ ವ್ಯಾಪಾರ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಮಡಿಕೇರಿ ನಗರದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ನೆಲ ಬಾಡಿಗೆ ಎಂದು ರೂ 250/_ ಗಳನ್ನು ಸುಂಕ ವಸೂಲಿ ಮಾಡುವ ವ್ಯಕ್ತಿಗೆ ನೀಡುತ್ತಾರೆ. ಸಂತೆ ನಡೆಯುವ ಹಿಂದಿನ ರಾತ್ರಿಯೇ ಬರುವ ವ್ಯಾಪಾರಸ್ಥರು ತಮ್ಮ ನಿತ್ಯ ಕರ್ಮಗಳಿಗಾಗಿ ಮಾರುಕಟ್ಟೆಯ ಸಮೀಪವಿರುವ ನಗರಸಭೆಯ ವ್ಯಾಪ್ತಿಗೆ ಒಳಪಡುವ ಶೌಚಾಲಯವನ್ನು ಉಪಯೋಗಿಸುತ್ತಾರೆ. ಅದರ ಶುಚಿತ್ವ ನಿರ್ವಹಣೆಯ ವೈಖರಿ ನೋಡಿದರೆ ಯಾವ ಸಮಾಜದಲ್ಲಿ ನಾವಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ.

ದೂರದೂರುಗಳಿಂದ ಬರುವ ಮಹಿಳಾ ವ್ಯಾಪಾರಸ್ಥರು ವಿಧಿಯಿಲ್ಲದೆ ಅಶುಚಿತ್ವದಿಂದ ಕೂಡಿದ ಶೌಚಾಲಯದ ಬಳಕೆ ಮಾಡಿ ಆರೋಗ್ಯ ಕೆಡಿಸಿಕೊಂಡ ನಿದರ್ಶನಗಳು ಇವೆಯಂತೆ.

ತರಕಾರಿ ದಿನಸಿ ಸೊಪ್ಪು ಮುಂತಾದವುಗಳನ್ನು ಮಾರಾಟ ಮಾಡುವವರು ನೆಮ್ಮದಿಯಿಂದ ವ್ಯಾಪಾರ ಮಾಡೋಣ ಎಂದುಕೊಂಡರೆ ಬೀಡಾಡಿ ಹಸುಗಳ ಕಾಟ ಬೇರೆ ದೃಡಕಾಯದ ಹಸುಗಳು ತಮ್ಮ ಮಳಿಗೆಗಳ ಮೇಲೆ ಎರಗಿ ನಷ್ಟ ಉಂಟು ಮಾಡಬಹುದೆಂದು ಹೆಚ್ಚಿನ ಗಮನವನ್ನು ಹಸುಗಳನ್ನು ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಓಡಿಸುವ ಕೆಲಸಕ್ಕೆ ಮೀಸಲಿಡುತ್ತಾರೆ. ಇಲ್ಲವಾದಲ್ಲಿ ಹೆಚ್ಚಾಗಿರುವ ಬೆಲೆಯ ನಡುವೆ ಮಾರಾಟ ಮಾಡಲು ತಂದಿರುವ ತರಕಾರಿಗಳು ಹಸುಗಳ ಓಡಾಟದ ಅಬ್ಬರಕ್ಕೆ ಕಸದ ರಾಶಿಗೆ ಹೋಗಬೇಕಾದಿತು.

ಕೊಡಗು ಜಿಲ್ಲೆಯಾದ್ಯಂತ ಮಾರುಕಟ್ಟೆಯ ದಿನಗಳಲ್ಲಿ ವ್ಯಾಪಾರ ಮಾಡಿರುವ ಮಹಿಳೆಯೊಬ್ಬರು ತಾವು ಕಂಡ ಎಲ್ಲ ಮಾರುಕಟ್ಟೆಕಿಂತ ಮಡಿಕೇರಿ ನಗರದ ಮಾರುಕಟ್ಟೆಯು ಕಳಪೆ ನಿರ್ವಹಣೆಯನ್ನು ಮಾಡುತ್ತಿದೆ, ಇಂತಹ ಮಾರುಕಟ್ಟೆಯನ್ನು ಎಲ್ಲೂ ಕಂಡಿಲ್ಲ ಎಂದು ನೊಂದು ನುಡಿದರು.

ಸಂಬಂಧಿಸಿದ ಅಧಿಕಾರಿಗಳು ಮಾರುಕಟ್ಟೆಯ ವೀಕ್ಷಣೆಯ ಬದಲಾಗಿ ಇಲ್ಲಿನ ಸಮಸ್ಯೆಯ ಬಗ್ಗೆ ಪ್ರತ್ಯಕ್ಷ ನೋಡಬೇಕು ಆಗ ಅವರಿಗೆ ಸಮಸ್ಯೆಯ ಬಗ್ಗೆ ಅರಿವಾಗಬಹುದು.

ಸಂಬಂಧಿಸಿದವರು ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ನೆಲಬಾಡಿಗೆ ಎಂದು ಸಂಗ್ರಹವಾಗುತ್ತಿರುವ ಹಣ ನಗರಸಭೆಯ ಖಾತೆಗೆ ಸಂದಾಯವಾಗುತಿದಿಯೇ?ಎಂಬುದನ್ನು ಪರಿಶೀಲಿಸಬೇಕು. ಮಳೆ ಗಾಳಿಯಿಂದ ರಕ್ಷಣೆಯ ದೃಷ್ಟಿಯಿಂದ ನಿರ್ಮಾಣ ಮಾಡಿದ ಹೈ ಟೆಕ್ ಮಾರುಕಟ್ಟೆ ಇದ್ದರೆ ಸಾಲದು ಸಮರ್ಥವಾಗಿ ನಿರ್ವಹಣೆಯನ್ನು ನಿರ್ವಹಿಸುವ ಸಾಮರ್ಥ್ಯ ಸಂಬಂಧಿಸಿದ ಆಡಳಿತ ವ್ಯವಸ್ಥೆಯಲ್ಲಿರಬೇಕು.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗಬಹುದೆಂಬ ಆಶಾಭಾವ.

ಜಯಂತಿ ರೈ, ಮಡಿಕೇರಿ