ಸಾರ್ವಜನಿಕರ ಬಹುದಿನಗಳ ಕನಸು ಸಾಕಾರ: ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

13 ಕೋಟಿ ರೂ ವೆಚ್ಚದಲ್ಲಿ ಕ್ರಿಡಾಂಗಣ ಅಭಿವೃದ್ಧಿ

ಸಾರ್ವಜನಿಕರ ಬಹುದಿನಗಳ ಕನಸು ಸಾಕಾರ: ಸಚಿವ ಕೆ.ಹೆಚ್ ಮುನಿಯಪ್ಪ

ದೇವನಹಳ್ಳಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್. 03: ದೇವನಹಳ್ಳಿ ತಾಲ್ಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರುತ್ತಿದ್ದು ದೇವನಹಳ್ಳಿ ಟೌನ್ ನ ಕ್ರೀಡಾಂಗಣದಲ್ಲಿ 13 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಾಸ್ಕೇಟ್ ಬಾಲ್ ಕೋರ್ಟ್ ವಾಲಿಬಾಲ್ ಕೋರ್ಟ್, ಕಬ್ಬಡ್ಡಿ ಕೋರ್ಟ್, ವಾಕಿಂಗ್ ಪಾತ್ ಸೇರಿ ಅಗತ್ಯ ಸೌಲಭ್ಯಗಳ ಕಾಮಗಾರಿಗಳು ನಡೆಯಲಿವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

11 ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲು ಗಡುವು ನೀಡಿದ್ದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದರು.

ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ವಾಕಿಂಗ್ ಪಾತ್ ನಿರ್ಮಾಣಗೊಳ್ಳಲಿದೆ ಅಂದರು.

ಸಾರ್ವಜನಿಕರಿಗೆ ಬೆಳಗಿನ ಜಾವದ ವಾಯುವಿಹಾರ ಹಾಗೂ ಯುವಕರಿಗೆ ಆಟವಾಡಲು ಬಹಳಷ್ಟು ಅನುಕೂಲವಾಗಲಿದೆ. ಕ್ರೀಡಾಂಗಣದ ಕಾಮಗಾರಿಯು 11 ತಿಂಗಳಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8ನೇ ಸುತ್ತಿನ ಜಾನುವಾರುಗಳಿಗೆ ಕಾಲು-ಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ನವೆಂಬರ್ 03 ರಿಂದ ಡಿಸೆಂಬರ್ 02 ರ ವರೆಗೆ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕಾಲು-ಬಾಯಿ ರೋಗ ಬಾರದಂತೆ ಲಸಿಕೆಯನ್ನು ತಪ್ಪದೇ ಹಾಕಿಸಬೇಕು. ಮುಂದೆ ಕಾಲು-ಬಾಯಿ ರೋಗಕ್ಕೆ ತುತ್ತಾಗುವುದನ್ನು ನಿಯಂತ್ರಿಸಲು ಅತ್ಯಗತ್ಯವಾಗಿದೆ. ಜೊತೆಗೆ ರಾಸುಗಳ ಹಾಗೂ ಹೈನುಗಾರಿಕೆ ಉತ್ಪಾದನೆ ಹೆಚ್ಚಿಸುವ ಕುರಿತು ಇಲಾಖೆಯಿಂದ ಕಾಲಕಾಲಕ್ಕೆ ರೈತರಿಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ 50 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರಗಳನ್ನು ಸಚಿವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷ ಶಾಂತಕುಮಾರ್, ದೇವನಹಳ್ಳಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಎನ್ ಅನುರಾಧ, ಪಶು ಪಾಲನಾ ಮತ್ತು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಜಗದೀಶ, ಯವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ, ದೇವನಹಳ್ಳಿ ತಹಶೀಲ್ದಾರ ಅನೀಲ್, ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.