ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ

ವಿಜಯ ದರ್ಪಣ ನ್ಯೂಸ್….

ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ  ವೈಕುಂಠ ಏಕಾದಶಿ

ವಿಜಯಪುರ ಡಿಸೆಂಬರ್ 30 : ಪಟ್ಟಣದ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಬ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವಿಷ್ಣುವಿನ ಸ್ಮರಣೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದವು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪುರಸಭಾ ಸದಸ್ಯ ವಿ ನಂದಕುಮಾ‌ರ್, ವೈಕುಂಠ ಏಕಾದಶಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಪರಮ ಪವಿತ್ರ ದಿನ. ಈ ದಿನ ಉಪವಾಸವಿದ್ದು ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ಜನ್ಮ ಜನ್ಮಾಂತರಗಳ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಇದನ್ನು ‘ಮೋಕ್ಷ ಏಕಾದಶಿ’ ಎಂದೂ ಕರೆಯಲಾಗುತ್ತಿದ್ದು, ಇದು ಮನುಷ್ಯನ ದೇಹ ಮತ್ತು ಮನಸ್ಸನ್ನು ಶುದ್ದೀಕರಿಸಿ ಮೋಕ್ಷದ ಹಾದಿಯನ್ನು ಸುಗಮ ಗೊಳಿಸುತ್ತದೆ ಎಂದು ತಿಳಿಸಿದರು.

ಅಲ್ಲದೆ, ನಮ್ಮ ದೇವಾಲಯದಲ್ಲಿ ಪ್ರತಿ ವರ್ಷ ಕರಗ ಮಹೋತ್ಸವ, ಭೀಮನ ಅಮಾವಾಸ್ಯೆ ಹಾಗೂ ನವರಾತ್ರಿಯಂತಹ ಪವಿತ್ರ ಹಬ್ಬಗಳನ್ನು ವಿಜೃಂಭಣೆ ಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯ ಮುಂದಿನ ಪೀಳಿಗೆಗೂ ಸಾಗಲಿ, ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಸಿದ್ದಪಡಿಸಲಾದ 2026ನೇ ಸಾಲಿನ ನೂತನ  ಕ್ಯಾಲೆಂಡರ್ ನ್ನು ಗಣ್ಯರು ಹಾಗೂ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಕೆ.ವಿ ಮುನಿರಾಜು, ಖಜಾಂಚಿ ತರಕಾರಿ ರಮೇಶ್, ತಿಂಗಳ ಸಂಘದ ರಾಜ್ಯ ನಿರ್ದೇಶಕ ಕನಕರಾಜು, ಪುರಸಭಾ ಸದಸ್ಯ  ವಿ ನಂದಕುಮಾರ್, ಎಂ. ರಾಜಣ್ಣ, ಎಂಪಿಸಿಎಸ್ ಅಧ್ಯಕ್ಷ ನಾಗರಾಜು, ಪುರಸಭಾ ಮಾಜಿ ಸದಸ್ಯ ಮುನಿಕೃಷ್ಣ, . ಪ್ರಕಾಶ್, ಗೌಡರಾದ ನಂಜುಂಡಪ್ಪ, ರಮೇಶ್ ಹಾಗೂ ಕುಲಸ್ತರು, ಗಣಾಚಾರಿಗಳು, ಯಜಮಾನರು, ಗೌಡರು ಮತ್ತು ವೀರಕುಮಾರ ಮಕ್ಕಳು ಉಪಸ್ಥಿತರಿದ್ದರು.