ಸಡಗರ ಸಂಭ್ರಮದಿಂದ ನಡೆದು ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
ವಿಜಯ ದರ್ಪಣ ನ್ಯೂಸ್…
ಸಡಗರ ಸಂಭ್ರಮದಿಂದ ನಡೆದು ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ನೆರವೇರಿತು.
ಚಿತ್ರಾವತಿ ನದಿ ತಟದಲ್ಲಿ ನೆಲೆಸಿರುವ ರಾಮಲಿಂಗನಬೋಡು (ಬೆಟ್ಟ) ಮೇಲೆ ನೆಲೆನಿಂತ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ನಾನಾ ಕಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾಗಿ ದೇವರ ದರ್ಶನ ಪಡೆದರು.
ಬ್ರಹ್ಮ ರಥೋತ್ಸವ ಅಂಗವಾಗಿ ಸ್ವಾಮಿಗೆ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು,ರಥೋತ್ಸವದಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಅಲಂಕೃತ ಉತ್ಸವ ಮೂರ್ತಿಗಳನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ತಹಸೀಲ್ದಾರ್ ಎನ್.ಗಗನ ಸಿಂಧು, ಶಾಸಕ ಬಿ.ಎನ್.ರವಿಕುಮಾರ್ ಅವರು ತೇರಿನ ಹಗ್ಗ ಎಳೆಯುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ‘ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ, ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿದು ಎನ್ನುವ ನಂಬಿಕೆ ಭಕ್ತರಲ್ಲಿದೆ.
ಭಕ್ತಿ ಇರುವ ಕಡೆ ಭಗವಂತ ಇರುತ್ತಾನೆ. ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಎಲ್ಲರೂ ಸುಖ ಸಂತೋಷ ನೆಮ್ಮದಿಯ ಬದುಕನ್ನು ನಡೆಸುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ರೆಡ್ಡಿ, ಶಾಸಕ ಬಿ.ಎನ್.ರವಿಕುಮಾರ್, ತಹಶಿಲ್ದಾರ್ ಗಗನಸಿಂಧು ,ದೇವಾಲಯದ ಕನ್ವೀನಿಯರ್ ಸುನಿತಾಶ್ರೀನಿವಾಸರೆಡ್ಡಿ, ಸದಸ್ಯ ಬೈರಾರೆಡ್ಡಿ, ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಆಂಜಿನಪ್ಪ(ಪುಟ್ಟು) ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಬ್ರಹ್ಮರಥೋತ್ಸವದ ಜಾತ್ರೆಯ ಪರಿಷೆ ಅಂಗವಾಗಿ ಬರಗು ಬತಾಸು ಮೈಸೂರು ಪಾಕು ಜಿಲೇಬಿಯಂತ ಸಿಹಿ ತಿಂಡಿ ತನಿಸುಗಳ ಅಂಗಡಿ, ಬಿಸಿ ಬಿಸಿ ಬೋಂಡ, ಐಸ್ ಕ್ರೀಂನಂತ ಬಾಯಿ ಚಪ್ಪರಿಸುವ ತಿಂಡಿ ತಿನಿಸುಗಳ ಅಂಗಡಿ, ಮಕ್ಕಳ ಆಟಿಕೆಗಳ, ಹೆಂಗೆಳೆಯರ ಅಲಂಕಾರಿಕ ವಸ್ತುಗಳು, ಗೃಹ ಉಪಯೋಗಿ ವಸ್ತುಗಳ ಅಂಗಡಿ, ಕಲ್ಲಂಗಡಿ ,ಪಪ್ಪಾಯಿ ಇನ್ನಿತರೆ ಹತ್ತಾರು ಅಂಗಡಿಗಳು ತಲೆ ಎತ್ತಿದ್ದವು, ಖರೀದಿಯ ಭರಾಟೆಯೂ ಜೋರಾಗಿತ್ತು,ಪರಿಷೆಯ ವಿಶೇಷವಾಗಿ ಬರಗು ಬತಾಸು ಖರೀದಿಸಿ ಮನೆಗೆ ಹೊತ್ತೊಯ್ದರು.
