ಹಾಸ್ಯ ಸಾರ್ವಭೌಮನ ಜನ್ಮ ಶತಮಾನೋತ್ಸವ.

ವಿಜಯ ದರ್ಪಣ ನ್ಯೂಸ್ 

ಹಾಸ್ಯ ಸಾರ್ವಭೌಮ ನರಸಿಂಹರಾಜು ಜನ್ಮ ಶತಮಾನೋತ್ಸವ.
**************************

ನವರಸಗಳ ಅಭಿನಯದಲ್ಲಿ ಆತ್ಯಂತ ಸವಾಲಿನದು ಎಂದರೆ ಅದು ಹಾಸ್ಯರಸದ ಆಭಿವ್ಯಕ್ತಿ ! ಮತ್ತೊಬ್ಬರನ್ನು ನಗಿಸುವ ಕೆಲಸ ಎಂದರೆ ನಾವು ನಕ್ಕಷ್ಟು ಸುಲಭವಲ್ಲ. ನಗಿಸುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು, ಮಾತುಗಳಲ್ಲಿ ಪಂಚಿಂಗ್ ಹಾಗೂ ಡೈಲಾಗ್ ಡಿಲಿವರಿಯಲ್ಲಿ ಟೈಮಿಂಗ್ಸ್ ಇರಬೇಕು ! ಇವೆಲ್ಲದರ ಜೊತೆಗೆ ಮತ್ತೊಬ್ಬರಿಗೆ ನೋವಾಗದಂತೆ ಹಾಗೂ ಸಭ್ಯತೆಯ ಎಲ್ಲೆ ಮೀರದಂತೆ ನಗಿಸುವುದು ಎಂದರೆ ಅದಕ್ಕೆ ಕಲಾವಿದನಾದವನು ಪರಿಪಕ್ವನಾಗಿರಬೇಕು . ಹಾಸ್ಯಕ್ಕಿರುವ ಮಹತ್ವವನ್ನು ಅರಿತೇ ಬಹುಶಃ ಡಿ.ವಿ.ಗುಂಡಪ್ಪನವರು ಹೇಳಿದ್ದಿರಬೇಕು, “ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ” ಎಂದು !

ಹಾಸ್ಯ ಎಂದರೆ ಕೇವಲ ಅಸಹ್ಯ ಮತ್ತು ಅಶ್ಲೀಲತೆಯಿಂದ ಕೂಡಿದ ದ್ವಂದ್ವಾರ್ಥ ಕೊಡುವ ಭಾಷೆ ಮತ್ತು ವಿಚಿತ್ರವಾದ ಆಂಗಿಕ ಭಾಷೆ ಮೂಲಕ ಅಭಿನಯವನ್ನು (?) ಬಿಂಬಿಸಿ ಚಪ್ಪಾಳೆ ಗಿಟ್ಟಿಸುವ ಒಂದು ಸಾಧಾರಣ ಕಲೆ ಎಂಬ ಇಂದಿನ ಅಪ್ರಬುದ್ಧ ಡೆಫ಼ಿನೇಷನ್ ನ ದಿನಗಳಲ್ಲಿ…… ಹಾಸ್ಯ ಎಂದರೆ ಅದೊಂದು ದೈವದತ್ತವಾದ, ಅಪರೂಪದ ಅನನ್ಯವಾದ ಪ್ರತಿಭೆ ಮತ್ತು ಅದನ್ನು ಯಾವುದೇ ಅಶ್ಲೀಲದ ಸೋಂಕಿಲ್ಲದೆಯೂ ಎಲ್ಲಾ ವರ್ಗದವರಿಗೂ ಮನದುಂಬಿ ಆಸ್ವಾದಿಸುವಂತೆ ಸರಾಗವಾಗಿ ತಲುಪಿಸಬಹುದು- ಎನ್ನುವ ಮಾತಿಗೆ ಜೀವಂತ ಉದಾಹರಣೆಯಾಗಿದ್ದವರು ಕಲಾ ಪ್ರಪಂಚದಲ್ಲಿ ತುಂಬಾ ವಿರಳ. ಆ ವಿರಳಾತಿ ವಿರಳರಲ್ಲಿ ಒಬ್ಬರು ನಮ್ಮ ಕನ್ನಡ ಚಿತ್ರರಂಗ ಕಂಡ ಅನಭಿಷಕ್ತ ಹಾಸ್ಯ ಚಕ್ರವರ್ತಿ , ಕನ್ನಡದ ಚಾರ್ಲಿ ಚಾಪ್ಲಿನ್ ಆಗಿದ್ದ ತಿಪಟೂರು ರಾಮರಾಜು ನರಸಿಂಹರಾಜು ರವರು.

 

” ಕನ್ನಡಕ್ಕೊಬ್ಬನೇ ರಾಜಕುಮಾರ ” ಎನ್ನುವ ಮಾತು ಎಷ್ಟು ಸತ್ಯವೋ ಹಾಸ್ಯಕ್ಕೊಬ್ಬನೇ ನರಸಿಂಹರಾಜು ಅನ್ನೋ ಉಕ್ತಿ ಸಹಾ ಅಷ್ಟೇ ವಾಸ್ತವವೂ ಹೌದು. ನರಸಿಂಹರಾಜು ಜನಿಸಿ ಇಂದಿಗೆ ಬರೋಬ್ಬರಿ 100 ವರ್ಷ ( 24.07.1923 ) ಗಳು ಉರುಳಿದರೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಅವರ ನಂತರ ಅನೇಕಾನೇಕ ಹಾಸ್ಯ ಕಲಾವಿದರು ಬಂದು ಹೋದರೂ ಅವರಂತೆ ಹಾಸ್ಯವನ್ನು ಆಸ್ವಾದಿಸಿ ಅಭಿನಯಿಸುತ್ತಿದ್ದ ಮತ್ತೊಬ್ಬ ನರಸಿಂಹರಾಜು ಹುಟ್ಟಲೇ ಇಲ್ಲ. ಹಾಸ್ಯ ಮತ್ತು ನರಸಿಂಹರಾಜು ಎನ್ನುವ ಹೆಸರುಗಳು ಒಂದಕ್ಕೊಂದು ಅನ್ವರ್ಥವೇನೋ ಎನ್ನುವಷ್ಟು ಪರಿಣಾಮಕಾರಿಯಾಗಿ ಕನ್ನಡ ಚಿತ್ರರಂಗದಲ್ಲಿ ಅವರು ತಮ್ಮ ಛಾಪನ್ನು ಬಿಟ್ಟು ಹೋಗಿದ್ದಾರೆ . ಕೆಲವು ಕಲಾವಿದರೇ ಹಾಗೆ ! ಶತಮಾನಕ್ಕೊಬ್ಬರೇ ಎನ್ನುವಂತೆ ಅಚ್ಚಳಿಯದೇ ಉಳಿದುಬಿಡುತ್ತಾರೆ. !

ಅವರ ಹಾಸ್ಯಪ್ರಜ್ಞೆ, ಟೈಮಿಂಗ್ಸ್, ಅಭಿನಯ, ನೋಟ, ಆಕಾರ, ಮಾತುಗಳ ಉಚ್ಛಾರಣೆ ಮುಖ್ಯವಾಗಿ ಅವರ ಉಬ್ಬನೆಯ ಹಲ್ಲುಗಳು…. ನಿಜಕ್ಕೂ ಯೂನಿಕ್ . ಅವರನ್ನು ತೆರೆ ಮೇಲೆ ಕಂಡರೆ ಸಾಕು ನಗು ತಾನಾಗಿಯೇ ಉಕ್ಕುತ್ತಿತ್ತು. ನಗುವನರಸಿ ಬಂದ ಪ್ರೇಕ್ಷಕರನ್ನು ಅವರೆಂದೂ ನಿರಾಶೆಗೊಳಿಸಲಿಲ್ಲ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಕೆಲವೇ ಅನರ್ಘ್ಯ “ಮುತ್ತು” ಗಳಲ್ಲಿ ಇವರೂ ಒಬ್ಬರು. ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಇವರು ಆ ಕಾಲದ ಅಜಾತಶತ್ರು ಮತ್ತು ಅತ್ಯಂತ ಬೇಡಿಕೆಯ ನಟ. ನಿರ್ಮಾಪಕರು ಮೊದಲು ಇವರ ಕಾಲ್ ಷೀಟ್ ಕೇಳಿ ನಂತರ ಚಿತ್ರದ ಹೀರೋವನ್ನು ಬುಕ್ ಮಾಡುತ್ತಿದ್ದ ದಿನಗಳವು.! ಚಿತ್ರದಲ್ಲಿ ನರಸಿಂಹರಾಜು ಇದ್ದಾರೆಂದರೆ ಅದು ಯಶಸ್ಸು ಅಂತಾನೇ ಅರ್ಥ. ಅದರಲ್ಲೂ ಡಾ. ರಾಜ್ ಕುಮಾರ್ ಜೊತೆ ಇವರಿದ್ದಾರೆಂದರೆ ಅಲ್ಲಿಗೆ ಆ ಚಿತ್ರ ಸೂಪರ್ ಹಿಟ್ ಎಂದು ಮೊದಲೇ ತೀರ್ಮಾನವಾಗುತ್ತಿತ್ತು .

1954 ರಲ್ಲಿ ತೆರೆ ಕಂಡ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಅಣ್ಣಾವ್ರ ಜೊತೆಯಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಮಹಾನ್ ಕಲಾವಿದ ಅಣ್ಣಾವ್ರ ಅಭಿನಯದ ಒಟ್ಟು ಇನ್ನೂರಾ ಐದು ಚಿತ್ರಗಳಲ್ಲಿ ( ಅಣ್ಣಾವ್ರ ನೂರಾ ಐವತ್ತನೇ ಚಿತ್ರ ಗಂಧದ ಗುಡಿ ಯವರೆಗೆ ) ಸುಮಾರು ಅರ್ಧದಷ್ಟು ಚಿತ್ರಗಳಲ್ಲಿ ಸಾಥ್ ನೀಡಿದ್ದಾರೆ. ಡಾ.ರಾಜ್ ರ ಅತ್ಯಂತ ಪರಮಾಪ್ತ ಮಿತ್ರ ಕೂಡಾ ಆಗಿದ್ದ ಇವರ ಮತ್ತು ಡಾ.ರಾಜ್ ಜೋಡಿ ಇಂದಿಗೂ ಕನ್ನಡದ ಸಹೃದಯ ಸಿನಿರಸಿಕರಲ್ಲಿ ಹಸಿರಾಗಿದೆ. ನಿಮ್ಮ ಮನಸ್ಸು ಒತ್ತಡದಲ್ಲಿದ್ದರೆ, ಹಾಸ್ಯ ಬಯಸುತ್ತದೆಯೆಂದರೆ ಒಮ್ಮೆ ಇವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಳೆಯ ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ಹಾಗೂ ಸಾಮಾಜಿಕ ಚಿತ್ರಗಳನ್ನು ನೋಡಿದಾಗ ಸದಭಿರುಚಿಯ ಹಾಸ್ಯದ ನಿಜಾರ್ಥ ತಿಳಿಯುತ್ತದೆ !

ಕೇವಲ ಐವತ್ತಾರು ವರ್ಷ ಮಾತ್ರ ( 24.07.1923 – 11.07.1979 ) ಜೀವಿಸಿದ್ದ ಈ ಅಪರೂಪದ ಪ್ರತಿಭೆ ತನ್ನ ಜೀವನದ ಕೊನೆಯ ದಿನಗಳಲ್ಲಿ ಮಗನ ಅಕಾಲಿಕ ಮೃತ್ಯುವಿನಿಂದ ಕೊರಗಿ ಕಣ್ಣೀರಾಗಿ ಕೊನೆಗೆ ಅದೇ ಕೊರಗಿನಲ್ಲಿ ಕಣ್ಮರೆಯಾಗಿಯೇ ಹೋದರು. ಬಹುತೇಕ ಕಲಾವಿದರ , ಅದರಲ್ಲೂ ಹಾಸ್ಯ ಕಲಾವಿದರ ವೈಯಕ್ತಿಕ ಬದುಕು ತುಂಬಾ ಯಾತನೆಯಿಂದಲೇ ಕೂಡಿರುವುದು, ಅಥವಾ ಅಕಾಲಿಕ ದುರಂತದಲ್ಲೇ ಅಂತ್ಯವಾಗುವುದೂ ಸಹಾ ವಿಧಿಲಿಖಿತವೇನೋ ಗೊತ್ತಿಲ್ಲ. ಎಲ್ಲರನ್ನು ನಗಿಸುವವನ ನಿಜ ಬಾಳಲ್ಲಿ ಹೆಚ್ಚಾಗಿ ಗೋಳೇ ತುಂಬಿರುವುದು ಸಹಾ ವಿಸ್ಮಯಕಾರಿ ಸಂಗತಿ !

       ** ಮರೆಯುವ ಮುನ್ನ **

ಇಂದು ಹಾಸ್ಯಬ್ರಹ್ಮ ನರಸಿಂಹರಾಜು ರವರ ಜನ್ಮ ಶತಮಾನೋತ್ಸವದ ದಿನ. ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದರೂ ಅವರ ನೆನಪು ಮಾತ್ರ ಸದಾ ಕನ್ನಡ ಸಿನಿಮಾರಂಗದಲ್ಲಿ ಸದಾ ಜೀವಂತ.

ಮಗನನ್ನು ಮೋಟಾರ್ ಬೈಕ್ ಅಪಘಾತದಲ್ಲಿ ಕಳೆದುಕೊಂಡು ದುಃಖತಪ್ತರಾಗಿದ್ದ ನರಸಿಂಹರಾಜುರವರು ಅಣ್ಣಾವ್ರ ಎದೆಯ ಮೇಲೆ ತಲೆಯಿಟ್ಟು ದುಃಖವನ್ನು ಹೊರ ಹಾಕುವ ಯತ್ನದಲ್ಲಿರುವ ಹಾಗೂ ಅವರನ್ನು ಸಂತ ಬುದ್ಧನಂತೆ ಸಮಾಧಾನದಿಂದ ಆಲಂಗಿಸಿ ಸಂತೈಸುತ್ತಿರುವ ಡಾ. ರಾಜ್ ಕುಮಾರ್ ರವರ ಈ ಅಪರೂಪದ ಭಾವಚಿತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನರಸಿಂಹರಾಜುರವರಿಗೆ ಜನ್ಮದಿನದ ಜನ್ಮ‌ಶತಮಾನೋತ್ಸವದ ಶುಭಾಶಯಗಳನ್ನು ಅರ್ಪಿಸೋಣ.

ನಟಸಾರ್ವಭೌಮನೊಂದಿಗೆ ಹಾಸ್ಯಬ್ರಹ್ಮನ ನವಿರಾದ ನೆನಪುಗಳೊಂದಿಗೆ…

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.