ಮನಸು ಮನಸುಗಳ ಬೆಸುಗೆಯಲ್ಲಿ ಅಡಗಿದೆ ಇಂದಿನ ಭಾರತದ ಭವಿಷ್ಯ: ಎಸ್.ರಾಜೇಂದ್ರ ಬಾಬು.

ವಿಜಯ ದರ್ಪಣ ನ್ಯೂಸ್. 

ಚಿಕ್ಕಬಳ್ಳಾಪುರ ಜಿಲ್ಲೆ. ಆಗಸ್ಟ್ 15 

ನಾವು ಈ ದಿನ 77ನೇ ಸ್ವಾತಂತ್ರ್ಯೋತ್ಸವದ  ಸಂಭ್ರಮ ಆಚರಿಸುತ್ತಾ ಇದ್ದೇವೆ. ಸರ್ವ ಧರ್ಮ ಶಾಂತಿಯ ತೋಟ ಎಂದು ನಮ್ಮ ರಾಷ್ಟçಕವಿ ಕುವೆಂಪು ನಮ್ಮ ಭಾರತ ದೇಶವನ್ನು ಬಣ್ಣಿಸಿದ್ದಾರೆ. ಈ ನೆಲದಲ್ಲಿ ಹಿಂದು, ಕ್ರೈಸ್ತ . ಮುಸಲ್ಮಾನ, ಸಿಖ್, ಜೈನ, ಪಾರ್ಸಿ ಹೀಗೆ ವಿವಿಧ ಧರ್ಮದ ಜನರು ತಮ್ಮದೇ ಆಚಾರ ವಿಚಾರಗಳಿಂದ ವಿವಿಧತೆ ತೋರಿದರೂ ನಾವೆಲ್ಲರೂ ಒಂದೇ, ಕುಲವೊಂದೇ, ಮತ ಒಂದೇ. ನಾವು ಮನುಜರು ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿವಾಣಿಯಂತೆ ನಾವು ಭಾರತೀಯರು ಎಂಬ ಹೆಮ್ಮೆಯನ್ನು ಸಂಭ್ರಮಿಸುವುದೇ ಈ ಸ್ವಾತಂತ್ರ್ಯೋತ್ಸವದ ಆಚರಣೆ.

ಈ ನೆಲದಲ್ಲಿ ಪ್ರಾಂತ್ಯಕ್ಕೊಂದು ಭಾಷೆ, ಸೊಗಡಿಗೊಂದು ವೇಷಭೂಷಣಗಳಿದ್ದರೂ ಇವೆಲ್ಲವನ್ನೂ ಮೀರಿದ ಸಹೋದರತ್ವ ಎಂಬ ಭಾವನೆಯು ನಮ್ಮನ್ನೆಲ್ಲಾ ಒಟ್ಟುಗೂಡಿಸಿದೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಯಾಂತ್ರಿಕವಾಗಿ ಹಲವು ಮೈಲಿಗಲ್ಲುಗಳನ್ನು ದಾಟಿ ವಿಶ್ವಕ್ಕೆ ನಾವೇನು ಎಂಬುದು ಸಾಧಿಸಿ ತೋರಿಸಿರುವ ಹೆಗ್ಗಳಿಕೆ ನಮ್ಮದಾಗಿದೆ ಎಂಬುದೇ ಸ್ವಾತಂತ್ರ್ಯೋತ್ಸವದ  ನಂತರದ ದಿನಗಳ ಹೆಮ್ಮೆ. ಪ್ರಜಾಪ್ರಭುತ್ವದ ಬುನಾದಿಯಲ್ಲಿ ಕಟ್ಟಿರುವ ಈ ದೇಶದಲ್ಲಿ ಏಕತೆಯಲ್ಲಿ ಐಕ್ಯತೆ ಎಂಬ ಭರವಸೆ ಮೂಡದೆ ಬರೀ ಭಾಷಣದ ಸರಕಾಗಿರುವುದು ದುಃಖಕರ ಸಂಗತಿಯಾಗಿದೆ.

ಜಾತಿ ಮತಗಳ ನಡುವೆ ಹೊಂದಾಣಿಕೆ ತೋರಿಕೆಯ ಸಂಗತಿಯಾಗಿದ್ದು, ರಾಜ್ಯಗಳ ನಡುವೆ ಭಾಷೆ, ಗಡಿ, ನದಿ, ಜಲ, ಜನಾಂಗೀಯ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಮನಸ್ಸುಗಳು ಎಷ್ಟು ವಿಶ್ವಾಸಾರ್ಹವಾಗಿದೆ ಎಂಬ ಪ್ರಶ್ನೆಯನ್ನು ಎಂದಾದರೂ ನಮ್ಮ ಮುಂದಿಟ್ಟುಕೊಂಡು ಚಿಂತನೆ ಮಂಥನ ನಡೆಸಲಾಗಿದೆ ಹೇಳಿ… ಆಂಗ್ಲರು ಭಾರತವನ್ನು ಬಿಟ್ಟು ಹೋಗಿದ್ದರು, ಅವರು ಬಿತ್ತಿದ ಒಡೆದು ಆಳುವ ನೀತಿ ನಮ್ಮನ್ನು ಇಂಚಿಂಚು ಆವರಿಸಿಕೊಂಡಿದೆ ಎಂಬುದು ಸುಳ್ಳು.

ರಾಜಕೀಯ ಪ್ರೇರಿತ ಸಂಘ ಸಂಸ್ಥೆ ಸಂಘಟನೆಗಳು ತಮ್ಮ ಶಕ್ತಿ? ವೃದ್ಧಿಸಿಕೊಳ್ಳಲು ಅಮಾಯಕ ಜನರ ಮನಸ್ಸು ಹದಗೆಡಿಸಿ ಈ ದೇಶದ ಅಖಂಡತೆಗೆ ಧಕ್ಕೆ ತರುತ್ತಿರುವುದು ಬಹಿರಂಗ ಸತ್ಯ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಇವ ಬಲಪಂಥೀಯ, ಅವ ಎಡಪಂಥೀಯ ಎಂದು ವರ್ಗೀಕರಿಸುವುದಲ್ಲದೇ ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಬಹುಜನರು, ಬಡಜನರು ಎಂದು ವಿಭಜಿಸಿ ಅಂತಹವರ  ಆತ್ಮಸ್ಥೈರ್ಯ ಕುಗ್ಗಿಸಿ ಅವರು ಮತ್ತೆ ಮಾತನಾಡದಂತೆ ಬಾಯಿ ಮುಚ್ಚಿಸುವ ಕೆಲಸ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಇತಿಹಾಸದಲ್ಲಿ ಉಲ್ಲೇಖವಾಗದಿರುವ ಎಷ್ಟೇ ವಿಷಯಗಳನ್ನು ಕೆದಕಿ ವಿಷ ಬೀಜವನ್ನು ಬಿತ್ತಿ ಮನಸ್ಸು ಮತ್ತು ಮನುಷ್ಯರ ನಡುವೆ ಕಂದಕ ಸೃಷ್ಟಿಸಿ ಅಖಂಡ ಭಾರತವನ್ನು ದುರ್ಬಲಗೊಳಿಸುವ ಕೆಲಸ ಸ್ವತಂತ್ರ ಪೂರ್ವದಿಂದಲೂ ನಡೆದುಕೊಂಡು ಬರುತ್ತಿರುವ ದೌರ್ಜನ್ಯ.

ಈ ದೌರ್ಜನ್ಯಗಳಿಗೆ ಅಂಕುಶ ಹಾಕಬೇಕಿರುವ ಯುವ ಜನಾಂಗ ಸೆಕ್ಸು, ಫ್ಲೆಕ್ಸು, ಡ್ರಿಂಕ್ಸ್, ಡ್ರಗ್ಸುಗಳ ಮತ್ತಿನಲ್ಲಿ ಕಳೆದು ಹೋಗುತ್ತಿರುವುದು ದೌರ್ಭಾಗ್ಯವಾದರೆ, ಜನಾಂಗೀಯ ಘರ್ಷಣೆ ಈ ದೇಶದ ಅವನತಿಗೆ ಪ್ರಮುಖ ಕಾರಣ. ರಾಜಧಾನಿ ದೆಹಲಿಯ ನಿರ್ಭಯ ಅತ್ಯಾಚಾರ, ಹೈದರಾಬಾದಿನಲ್ಲಿ ಗೃಹಿಣಿಯ ಮಾನಹರಣ, ಯುಪಿಯಲ್ಲಿ ರೌಡಿಗಳ ಅಟ್ಟಹಾಸ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಉಡುಪಿಯಲ್ಲೀ ವಿಡಿಯೋ ಚಿತ್ರೀಕರಣ, ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ, ಕೇರಳದಲ್ಲಿ ಮಾಂತ್ರಿಕನ ಮೋಡಿ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಪ್ರಕರಣಗಳು ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾಗಿ ಪ್ರಚಾರ ಪಡೆದಷ್ಟೇ ವೇಗವಾಗಿ ನಮ್ಮ ಮನಸ್ಸಿನಿಂದ ದೂರವಾಗುತ್ತಿದೆ.

ರಾಜಕಾರಣಿಗಳ ಭ್ರಷ್ಟಾಚಾರ, ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆಂಬ ಕುತೂಹಲ, ಸೆಲೆಬ್ರಿಟಿಗಳಿಗೆ ಏನಾಗಿದೆ ಎಂಬ ಅಪರಾಧ ಜಗತ್ತಿನ ಕರಾಳ ಕೃತ್ಯಗಳು ಏನಾಗಿದೆ, ಏನಾಗುತ್ತಿದೆ ಎಂಬ ಬ್ರೇಕಿಂಗ್ ನ್ಯೂಸ್‌ನ ಚಟ ಹತ್ತಿಸಿಕೊಂಡು ದಿನಕಳೆಯುವ ಸಾಮಾನ್ಯ ಜನ ಹೊಟ್ಟೆ, ಬಟ್ಟೆಗಳಿಗಾಗಿ ಮಾಲ್‌ಗಳ ಜಂಜಾಟಗಳಲ್ಲಿ ಕಳೆದು ಹೋಗುತ್ತಿರುವುದು ಸಹ ಇವತ್ತಿನ ದುಸ್ಥಿತಿಗೆ ಕಾರಣವೆಂದರೆ ತಪ್ಪಾಗಲಾರದು.

ಎಲ್ಲರೊಂದಿಗೆ ನಾವು ಎಂಬ ಭಾವ ಮರೆತು ಹೆಮ್ಮರವಾಗಿ ಬೆಳೆದು ನಿಂತು, ನೆರೆಯ ಹೊರೆಯವರು ನಮ್ಮ ಪರಿಚಿತರು, ಅವರಿಗಾಗಿ ಕೆಲವೊಮ್ಮೆಯಾದರೂ ಅವರಿಗಾಗಿ ಸ್ಪಂದಿಸೋಣ ಎಂಬ ಭಾವನೆ ಗಟ್ಟಿಯಾದರೂ ಸಾಕು ಸದೃಢ ಭಾರತ ಕಟ್ಟಬಹುದು ಮತ್ತು ಆ ಒಂದು ಸಹೃದಯತೆಯೇ ಇಂದಿನ ಭಾರತದ ಅವಶ್ಯಕತೆಯೂ ಹೌದು. ಜೈ ಭಾರತ್.


– ಎಸ್. ರಾಜೇಂದ್ರಬಾಬು, ಚಿಕ್ಕಬಳ್ಳಾಪುರ