ಪಿಡಿಓ ಆದರ್ಶ ಕುಮಾರ್ ಅಮಾನತ್ತಿಗೆ ದಲಿತ ಸಂಘರ್ಷ ಸಮಿತಿ (ಭೀಮಾಶಕ್ತಿ )ಒತ್ತಾಯ.

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆ ,ಆಗಸ್ಟ್ 17

ಪಿಡಿಓ ಆದರ್ಶ ಕುಮಾರ್ ಅಮಾನತ್ತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಭೀಮಾಶಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಬಳಿ ಸಂಘದ ರಾಜ್ಯ ಸಹ ಕಾರ್ಯದರ್ಶಿ ದಾಸರಬೀದಿ ಮುರಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಅವರು ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಆಗಿ ಕೆಲಸ ಮಾಡಿದ್ದ ಆದರ್ಶ ಕುಮಾರ್ ಅವರು ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗಿನಿಂದಲೂ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿ ಅನುದಾನ ಬಳಕೆಯಲ್ಲಿ ಉದಾಸೀನ ತೋರಿದ್ದಾರೆ, ಪರಿಶಿಷ್ಟರ ಶೇ.25 ಮತ್ತು ವಿಶೇಷಚೇತನರ ಶೇ.5 ಮೀಸಲು ಅನುದಾನವನ್ನು ಬಳಕೆ ಮಾಡದೆ 2022-23 ಹಣಕಾಸು ಯೋಜನೆ ಮುಕ್ತಾಯದ ಹಂತಕ್ಕೆ ಬಂದಿದ್ದರು ಅನುದಾನವನ್ನು ಖಾತೆಯಲ್ಲಿ ಉಳಿಸಿಕೊಂಡು ದಲಿತರಿಗೆ ಮತ್ತು ವಿಶೇಷ ಚೇತನರಿಗೆ ಅನ್ಯಾಯ ಎಸಗಿದ್ದಾರೆ ಮತ್ತು 15ನೇ ಹಣಕಾಸು ಯೋಜನೆಯ 1.40 ಕೋಟಿ ಹಣವನ್ನು ಕೂಡ ಅಭಿವೃದ್ಧಿಗೆ ಬಳಸದೇ ಉಳಿಸಿಕೊಂಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕುಂಠಿತವಾಗಲು ಕಾರಣರಾಗಿದ್ದಾರೆ. ನರೇಗಾ ಕಾಮಗಾರಿಯ ದಿನಗೂಲಿ ಮೊತ್ತವನ್ನು ಖಾಸಗಿ ನೌಕರರ ಹೆಸರಿಗೆ ವರ್ಗಾವಣೆ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಓಝೋನ್ ಅರ್ಬಾನಾ ಬಡಾವಣೆಯ ಎಲ್ಲಾ ರಸ್ತೆಗಳು ಪರಿತ್ಯಾಜನ ಪತ್ರದ ಮೂಲಕ ರಾಜ್ಯಪಾಲರ ಮೂಲಕ ಕನ್ನಮಂಗಲ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರು ಬಡಾವಣೆ ಯಲ್ಲಿರುವ ರಸ್ತೆಗೆ ಓಝೋನ್ ಅರ್ಬಾನಾ ಕಂಪೆನಿಯವರು ಕಾಂಪೌಂಡ್ ಗೋಡೆ ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದ್ದಾರೆ.

ಹೀಗೆ ಪಿಡಿಓ ಆದರ್ಶಕುಮಾರ್ ಹಲವಾರು ರೀತಿಯಲ್ಲಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ದಾಖಲಾತಿಗಳ ಸಮೇತ ಕಳೆದ ಪೆಬ್ರವರಿ ತಿಂಗಳಿಂದಲೂ ಈ ಬಗ್ಗೆ ಪ್ರತಿಭಟಿಸಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ದೂರು ನೀಡಿದ್ದರು ಅವರು ಪಿಡಿಓ ಆದರ್ಶ ಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಈ ಬಗ್ಗೆ ಎರಡು ತಿಂಗಳ ಹಿಂದೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು, ಸಿಇಓ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಗೂ ಮತ್ತೊಮ್ಮೆ ಇಓ ತಾಲೂಕು ಪಂಚಾಯಿತಿ ದೇವನಹಳ್ಳಿ ಇವರುಗಳಿಗೆ ಲೆಕ್ಕಪರಿಶೋಧನಾ ವರದಿ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದರು ಕಳೆದ ಮೂರು ತಿಂಗಳಿನಿಂದ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ನಾಲ್ಕು ಬಾರಿ ದೂರು ನೀಡಿದರು ಇದುವರೆಗೂ ಪಿಡಿಓ ಆದರ್ಶ ಕುಮಾರ್ ಅವರ ಮೇಲೆ ಯಾವುದೇ ಕ್ರಮ ಜರುಗಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ, ಎಂದು ದಲಿತ ಸಂಘರ್ಷ ಸಮಿತಿ ಭೀಮಾಶಕ್ತಿಯ ಆರೋಪಿಸಿದ್ದಾರೆ 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಇತ್ತೀಚೆಗೆ ಬಂದಿರುವ ಅನುರಾಧ ಅವರಿಗೆ ಕನ್ನಮಂಗಲ ಗ್ರಾಮ ಪಂಚಾಯಿತಿ ಪಿಡಿಓ ಆಗಿದ್ದ ಆದರ್ಶ ಕುಮಾರ್ ಅವರ ಕರ್ತವ್ಯ ಲೋಪ, ಉದಾಸೀನತೆ ಮತ್ತು ಅಭಿವೃದ್ಧಿಯ ಬಗೆಗಿನ ನಿರ್ಲಕ್ಷ್ಯ ಧೋರಣೆಯ ಬಗ್ಗೆ ವಿವರಿಸಿ ಸೋಮವಾರ ಮತ್ತೊಂದು ದೂರು ನೀಡಿದ್ದೇವೆ ಸಿಇಓ ಅವರು ಈ ಬಗ್ಗೆ ಪರಿಶೀಲಿಸಿ ಪಿಡಿಓ ವಿರುದ್ಧ ಎಪ್ಐಆರ್ ಮಾಡುವುದಾಗಿ ತಿಳಿಸಿದ್ದಾರೆ ಅದ್ದರಿಂದ ಈಗಲಾದರೂ ಪಿಡಿಓ ಆದರ್ಶ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ ಪರಿಸ್ಥಿತಿ ಮತ್ತೆ ಇದೇ ರೀತಿ ಮುಂದುವರೆದರೆ ಸಂಘಟನೆ ವತಿಯಿಂದ ಬೃಹತ್ ಮಟ್ಟದ ಹೋರಾಟ ರೂಪಿಸುವುದಾಗಿ ದಲಿತ ಸಂಘರ್ಷ ಸಮಿತಿ (ಭೀಮಾಶಕ್ತಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರತ್ನಮ್ಮ, ಚಂದ್ರು, ಸಂತೋಷ, ದೇವರಾಜ್, ಗೋವಿಂದ, ಶಾಮಲ, ಮಂಜುಳ, ಜೈಭೀಮ್ ಸೀನಪ್ಪ ಮುಂತಾದವರು ಹಾಜರಿದ್ದರು.