ಪ್ರಧಾನಮಂತ್ರಿ ಉಜ್ವಲ ಸ್ಕೀಮ್‌ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

ವಿಜಯ ದರ್ಪಣ ನ್ಯೂಸ್

ನವದೆಹಲಿ: ಬಡತನ ರೇಖೆಯಲ್ಲಿರುವ ನಿವಾಸಿಗಳಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಎಲ್‌ ಪಿಜಿ ಸಿಲಿಂಡರ್‌ ಗೆ ಹೆಚ್ಚುವರಿಯಾಗಿ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ (ಅಕ್ಟೋಬರ್‌ 04) ಅನುಮೋದನೆ ನೀಡಿದೆ. ಇದರೊಂದಿಗೆ ಉಜ್ವಲ ಯೋಜನೆಯ ಫಲಾನುಭವಿಗಳ ಸಬ್ಸಿಡಿ 300 ರೂಪಾಯಿಗೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉಜ್ವಲ ಯೋಜನೆ ಫಲಾನುಭವಿಗಳು ಇದೀಗ ಎಲ್‌ ಪಿಜಿ ಸಿಲಿಂಡರ್‌ ಗೆ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ. ಈ ಮೊದಲು 200 ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ಇದರೊಂದಿಗೆ ಉಜ್ವಲಾ ಫಲಾನುಭವಿಗಳ ಗ್ಯಾಸ್‌ ಸಿಲಿಂಡರ್‌ ಗೆ ಒಟ್ಟು 500 ರೂಪಾಯಿ ಇಳಿಕೆಯಾದಂತಾಗಿದೆ.

ಇನ್ಮುಂದೆ ಉಜ್ವಲಾ ಫಲಾನುಭವಿಗಳು ಎಲ್‌ ಪಿಜಿ ಸಿಲಿಂಡರ್‌ ಅನ್ನು 603 ರೂಪಾಯಿಗೆ ಖರೀದಿಸಬಹುದಾಗಿದೆ. 2024ರ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಸಬ್ಸಿಡಿ ಏರಿಸುವ ಮೂಲಕ ಕಡಿಮೆ ಆದಾಯ ಇರುವ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಿದಂತಾಗಿದೆ ಎಂದು ವರದಿ ತಿಳಿಸಿದೆ.