ದಾಳಿಂಬೆ ಬೆಳೆ ನಿರ್ವಹಣೆಗೆ ಅವಶ್ಯಕ ಜ್ಞಾನ ಅಗತ್ಯ: ಗುಣವಂತ.ಜೆ

ವಿಜಯ ದರ್ಪಣ ನ್ಯೂಸ್

ಬಿಜ್ಜವರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 13:: ದಾಳಿಂಬೆ ಬೆಳೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಲು ರೈತರಿಗೆ ಅವಶ್ಯಕ ಜ್ಞಾನ ಅಗತ್ಯವಿದ್ದು ವಿಚಾರ ಸಂಕಿರಣ ಕಾರ್ಯಕ್ರಮ ಗಳು ಸಹಾಯವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ದಾಳಿಂಬೆ ಬೆಳೆಯ ಕ್ಷೇತ್ರೋತ್ಸವ ಮತ್ತು ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಊಧ್ಘಾಟಿಸಿ ಅವರು ಮಾತನಾಡಿದರು.

ದಾಳಿಂಬೆ ಬೆಳೆ ನಿರ್ವಹಣೆ ಜ್ಞಾನ ಪಡೆಯಲು ರೈತರಿಗೆ ಸ್ಥಳೀಯವಾಗಿ ವಿಚಾರ ಸಂಕೀರ್ಣ ಕಾರ್ಯಕ್ರಮಗಳು ಆಯೋಜಿಸುವುದರಿಂದ ಹೆಚ್ಚಿನ ಉಪಯೋಗವಾಗುತ್ತದೆ ಎಂದರು.


ಜಿಲ್ಲೆಯಲ್ಲಿ ಶೇಕಡ 18% ರಷ್ಟು ತೋಟಗಾರಿಕೆ ಪ್ರದೇಶವಿದ್ದು, 27.784 ಹೆಕ್ಟೇರ್ ನಲ್ಲಿ ವಿವಿಧ ತೊಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. 378.12 ಹೆಕ್ಟೇರ್ ನಷ್ಟು ದಾಳಿಂಬೆ ಬೆಳೆಯುತ್ತಿದ್ದಾರೆ. ಅದರಲ್ಲಿ 200 ಹೆಕ್ಟೇರ್ ನಷ್ಟು ದೇವನಹಳ್ಳಿ ಯಲ್ಲಿ ದಾಳಿಂಬೆ ಬೆಳೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ವಿಜ್ಞಾನಿ ಡಾ. ಗಿರಿಗೌಡ ಮಂಜುನಾಥ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದಾಳಿಂಬೆ ಬೆಳೆ ಗಿಡ ನಾಟಿ ಮಾಡುವ ವಿಧಾನ, ಗೊಬ್ಬರ ಬಳಕೆ ವಿಧಾನ, ರೋಗ ನಿರ್ವಹಣೆ, ಔಷಧಿ ಸಿಂಪರಣೆ, ನೀರು ನಿರ್ವಹಣೆ, ಕೀಟ ನಿರ್ವಹಣೆ, ಕಟಾವು ವಿಧಾನದ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಹೆಚ್ಚಿನ ಮಾಹಿತಿಗಾಗಿ 9916219697 ಸಂಖ್ಯೆಗೆ ವಾಟ್ಸಾಪ್ ಅಥವಾ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕಂಪನಿಗಳ ರಸಗೊಬ್ಬರ, ಔಷಧಿಗಳು, ಯಂತ್ರೋಪಕರಣಗನ್ನು ಪ್ರದರ್ಶಿಸಿ ರೈತರಿಗೆ ಮಾಹಿತಿ ನೀಡಲಾಯಿತು.


ದೇವನಹಳ್ಳಿ ಹಿರಿಯ ತೋಟಗಾರಿಕೆ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ (ರಾಜ್ಯ ವಲಯ) ಗೋಪಾಲ್, ಬಿಜ್ಜವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲೆಯ ರೈತರು ಹಾಗೂ ರಸಗೊಬ್ಬರ, ಔಷಧಿ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

@@@@@@@@@@@@@@@@@@

ರಾಷ್ಟ್ರೀಯ ನ್ಯಾಷನಲ್ ವಿದ್ಯಾರ್ಥಿವೇತನಕ್ಕಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 13 : ಭಾರತ ಸರ್ಕಾರದ ನಿರ್ದೇಶಕರು, ಸಾಮಾಜಿಕ ನ್ಯಾಯ ಸಚಿವಾಲಯ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆವತಿಯಿಂದ ಪ್ರಿ-ಮೆಟ್ರಿಕ್ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ನವೆಂಬರ್ 30 ರೊಳಗೆ ಹಾಗೂ ಪೋಸ್ಟ್ ಮೆಟ್ರಿಕ್, ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ರ ವರೆಗೆ ದಿನಾಂಕ ನಿಗಧಿಪಡಿಸಲಾಗಿದೆ.

ಅದರಂತೆ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಕಲಚೇತನರು ವ್ಯಾಸಂಗ ಮಾಡುತ್ತಿರುವ ಶಾಲಾ ಕಾಲೇಜುಗಳ ಮೂಲಕ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿ ಆಯಾ ಶಾಲಾ ಕಾಲೇಜುಗಳವರು ಕೇಂದ್ರ ಸರ್ಕಾರದ ಪೋರ್ಟಲ್ ಮೂಲಕ ದಾಖಲಿಸಬೇಕಾಗಿರುತ್ತದೆ. 9 ಮತ್ತು 10 ನೇ ತರಗತಿಯ ವಿಕಲಚೇತನ ವಿದ್ಯಾರ್ಥಿಗಳು NSP Portal ಮೂಲಕ ಅರ್ಜಿ ಸಲ್ಲಿಸಲು ಅನುಕೂಲ ವಾಗುವಂತೆ ಸಂಬಧಪಟ್ಟ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ (ಸಾರ್ವಜನಿಕ ಶಿಕ್ಷಣ ಇಲಾಖೆ) ಇಲಾಖೆಯ ಉಪ ನಿರ್ದೇಶಕರು ಹಾಗೂ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು, ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು, ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರೊಂದಿಗೆ ಸಮನ್ವಯತೆಯನ್ನು ಸಾಧಿಸಿ ಹೆಚ್ಚಿನ ಸಂಖ್ಯೆಯ ವಿಕಲಚೇತನ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ (https://scholarships.gov.in/) ತಾಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿ/ನಿಗಳು ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಅವಧಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ ಎಂದು
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹₹₹######₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಉಚಿತ ಬ್ರೈಲ್ ಕಿಟ್ ವಿತರಣೆಗಾಗಿ ದೃಷ್ಟಿದೋಷ/ಕಣ್ಣಿನ ತೊಂದರೆಯಿರುವ ಅಂಧ ವಿಕಲಚೇತನರಿಂದ ಅರ್ಜಿ ಆಹ್ವಾನ

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 13  : ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿಕಲಚೇತನ ವಿದ್ಯಾರ್ಥಿ/ನಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣವನ್ನು ಹೊಂದಲು ಅನುಕೂಲವಾಗುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಉಚಿತವಾಗಿ ಬ್ರೈಲ್‌ ಕಿಟ್ ನೀಡಲಾಗುವುದು ಅರ್ಜಿ ನಮೂನೆಯನ್ನು ತಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲೂ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲೂ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಅಕ್ಟೋಬರ್ 25ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿದೆ.

ಷರತ್ತುಗಳು

1.ಅಂಧ ವ್ಯಕ್ತಿಗಳು ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದಲ್ಲಿ ಕನಿಷ್ಟ 10 ವರ್ಷಗಳು ವಾಸವಾಗಿರುವ ಬಗ್ಗೆ ತಹಸೀಲ್ದಾರರಿಂದ ವಾಸಸ್ಥಳ ದೃಢೀಕರಣ ಪತ್ರ ಪಡೆದು ಪ್ರತಿ ಸಲ್ಲಿಸುವುದು.

2.ಎಸ್.ಎಸ್.ಎಲ್.ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಮಾತ್ರ ಬ್ರೈಲ್‌ಕಿಟ್ ನೀಡುವುದು.

3.ಬ್ರೈಲ್‌ಕಿಟ್ ಪಡೆಯುವ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜು /ಸಂಸ್ಥೆಯ ಮಖ್ಯಸ್ಥರಿಂದ ದೃಢೀಕರಣ ಶಿಫಾರಸ್ಸಿನೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು.

4.ಈ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿ ಇರುವುದಿಲ್ಲ.

5.ಸರ್ಕಾರ ನೀಡುವ ಬ್ರೈಲ್‌ಕಿಟ್ ಅನ್ನು ಯಾವುದೇ ಕಾರಣಕ್ಕೆ ಪರಬಾರೆ ಮಾಡಬಾರದು ಮಾಡಿದ್ದು ಕಂಡು ಬಂದಲ್ಲಿ ಅಂತವರ ಮೇಲೆ ಕ್ರಮ ಜರುಗಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

6.ಬ್ರೈಲ್‌ಕಿಟ್ ಅನ್ನು ಪಡೆಯುವ ವಿದ್ಯಾರ್ಥಿಯು ರೂ.100/- ಗಳ ಛಾಪ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡುವುದು.

7.ಬ್ರೈಲ್‌ಕಿಟ್ ಅನ್ನು ಪಡೆಯುವ ವಿದ್ಯಾರ್ಥಿಯು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು.

8.ಈ ಸೌಲಭ್ಯವನ್ನು ಪಡೆಯುವ ವಿಕಲಚೇತನ ವಿದ್ಯಾರ್ಥಿಗಳು ಶೇಕಡ 40% ಕ್ಕಿಂತ ಹೆಚ್ಚು ದೃಷ್ಟಿ ದೋಷವುಳ್ಳವರಾಗಿರಬೇಕು.

9.ಅರ್ಜಿ ಸಲ್ಲಿಸುವ ವಿಕಲಚೇತನ ವಿದ್ಯಾರ್ಥಿಗಳು ವಿಕಲಚೇತನ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಕಾರ್ಡ್ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು.

10.ಬ್ರೈಲ್‌ಕಿಟ್ ಅನ್ನು ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿಯೇ ಉಪಯೋಗಿಸತಕ್ಕದ್ದು.

11.ಬ್ರೈಲ್‌ಕಿಟ್ ಅನ್ನು ಒಂದು ವಿದ್ಯಾರ್ಥಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಬೇರೆ ಇಲಾಖೆಗಳು ಅಥವಾ ಸಂಘ ಸಂಸ್ಥೆಗಳಿಂದ ಲ್ಯಾಪ್ ಟಾಪ್ ಅನ್ನು ಪಡೆದಿದ್ದಲ್ಲಿ ಅಂತಹವರು ಅರ್ಹರಾಗಿರುವುದಿಲ್ಲ.

12.ಬ್ರೈಲ್‌ಕಿಟ್ ಅನ್ನು ಸ್ವೀಕರಿಸಿರುವ ಅರ್ಜಿಗಳ ಜೇಷ್ಠತೆ ಅನುಸಾರ ವಿತರಿಸಲಾಗುವುದು.

ನಿಯತ ಕಾಲಿತ ವಿದ್ಯಾರ್ಥಿಗಳು ಮಾತ್ರ ಮೇಲಿನ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ವಿಕಲಚೇತನರ ಸಹಾಯವಾಣಿ ಸಂಖ್ಯೆ 080-29787441 ಗೆ ಕರೆ ಮಾಡಬಹುದು ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ನಂ.03 ನೆಲಮಹಡಿ ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಳಾಸವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್‌.ಎಂ ಅವರು‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.