ಸ್ಪರ್ದೆ……

ವಿಜಯ ದರ್ಪಣ ನ್ಯೂಸ್

ಬೆಂಗಳೂರು ನವೆಂಬರ್ 22

ಸ್ಪರ್ಧೆ…..

ಬೆಳೆಯುತ್ತಾ ಹೋಗುವುದು,
ತುಳಿಯುತ್ತಾ ಹೋಗುವುದು,
ಶ್ರಮ ಪಡುವುದು,
ವಂಚಿಸುವುದು,
ಹೇಗಾದರೂ ಯಶಸ್ವಿಯಾಗುವುದು,
ಪ್ರಾಮಾಣಿಕವಾಗಿ ಯಶಸ್ವಿಯಾಗುವುದು…..

ಜಾಗತೀಕರಣದ ಪರಿಣಾಮ, ಆರ್ಥಿಕ ಉದಾರೀಕರದಿಂದ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಿ ಸುಮಾರು ಮೂವತ್ತು ವರ್ಷಗಳ ನಂತರ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ….

ಸದ್ಯ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಈ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ಕೆಲವು ದೇಶಗಳು ಆರ್ಥಿಕವಾಗಿ ಬಲಿಷ್ಠವಾದರೆ, ಮತ್ತೆ ಕೆಲವು ದಿವಾಳಿಯತ್ತ ಸಾಗುತ್ತಿವೆ. ಇನ್ನೊಂದಿಷ್ಟು ದೇಶಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ……

ಮಾನವೀಯ ಮೌಲ್ಯಗಳು ಪರಿವರ್ತನೆಯಾಗಿ, ಆರ್ಥಿಕ ಮೌಲ್ಯಗಳಾಗಿ ಹಣ ಕೇಂದ್ರೀಕೃತ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಪ್ರಾರಂಭದಲ್ಲಿ ಕೆಲವು ದೇಶಗಳು ಹೆಚ್ಚಿನ ಲಾಭಕ್ಕಾಗಿ ತಮ್ಮ ವ್ಯಾಪಾರ ವಿಸ್ತರಿಸಲು ಗ್ರಾಹಕ ಸಂಸ್ಕೃತಿಯನ್ನು ಬಲಗೊಳಿಸಿದವು. ಕೊಳ್ಳುಬಾಕ ಮನಸ್ಥಿತಿ ಸೃಷ್ಟಿಸಿದವು. ಇದು ಸ್ಪರ್ಧೆ ಎಂಬುದು ವಿವಿಧ ಆಯಾಮ ಪಡೆಯಲು ಕಾರಣವಾಯಿತು……

ವಿಶ್ವದ ಅನೇಕ ಭಾಗಗಳಲ್ಲಿ ಯುದ್ದ, ಘರ್ಷಣೆ, ಆಂತರಿಕ ಕಲಹಗಳು ನಿರಂತರವಾಗಿ ನಡೆಯುತ್ತಲೇ ಇದೆ. ಅದರಲ್ಲಿ ಕೆಲವು ದೇಶಗಳು ನೇರವಾಗಿ ಭಾಗಿಯಾಗಿದ್ದರೆ ಮತ್ತೆ ಕೆಲವು ದೇಶಗಳು ಪರೋಕ್ಷವಾಗಿ ಅದನ್ನು ಪ್ರಚೋದಿಸುತ್ತಿವೆ. ಅದಕ್ಕೆ ಮೂಲ ಕಾರಣವೂ ಸಹ ಬಹುತೇಕ ಆರ್ಥಿಕ ಹಿತಾಸಕ್ತಿಯೇ ಆಗಿದೆ. ವಿರಾಮದ ಅಥವಾ ಶಾಂತಿ ಮಾತುಕತೆಯ ಎಲ್ಲಾ ಬಾಗಿಲುಗಳನ್ನು ಮುಚ್ಚುವಿಕೆಯ ಪ್ರಕ್ರಿಯೆ ಜಾರಿಯಲ್ಲಿದೆ…….

ಇದನ್ನು ಹೊರತುಪಡಿಸಿ ಸಹ ಸ್ಪರ್ಧೆ ನಿಜವಾದ ಮನುಷ್ಯತ್ವವನ್ನೇ ನಾಶ ಮಾಡಿದೆ. ಉದಾಹರಣೆಗೆ ಒಂದು ಕ್ರೀಡಾ ಸ್ಪರ್ಧೆಯಲ್ಲಿ ಭಾರತ ಬಹುತೇಕ ಗೆಲುವಿನ ಸಮೀಪ ಬಂದು ಅತ್ಯುತ್ತಮ ಎನ್ನಬಹುದಾದ ಎರಡನೇ ಸ್ಥಾನ ಪಡೆಯಿತು. ಆದರೂ ಬಹಳಷ್ಟು ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಇದು ಮಹಾನ್ ಸೋಲು ಎಂಬಂತೆ ದುಃಖ ವ್ಯಕ್ತಪಡಿಸಿದರು. ಸುದ್ದಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚಾಗಿ ಪ್ರಚಾರ ನೀಡಿದವು. ಆದರೆ ಅದೇ ಸಮಯದಲ್ಲಿ ಉತ್ತರಕಾಂಡ ರಾಜ್ಯದಲ್ಲಿ ಸುರಂಗ ಮಾರ್ಗದ ಕೆಲಸದ ಸಂದರ್ಭದಲ್ಲಿ ಭೂಕುಸಿತ ಉಂಟಾಗಿ ಈಗಲೂ ಸುಮಾರು 41 ಜನ ಕಳೆದ ಹತ್ತು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆ ಬಗ್ಗೆ ಕ್ರಿಕೆಟ್ ಸೋಲಿಗೆ ವ್ಯಕ್ತವಾದ ನೋವಿನ‌ ಸ್ವಲ್ಪ ಭಾಗವೂ ವ್ಯಕ್ತವಾಗಲಿಲ್ಲ. ಭಕ್ತಿ ಪ್ರದರ್ಶನದ ಪೂಜೆ ಪುನಸ್ಕಾರಗಳು, ಹೋಮ ಹವನಗಳು ಕ್ರಿಕೆಟ್ಗೆ ನಡೆದಷ್ಟು ಆ ಜೀವಿಗಳ ಉಳಿವಿಗಾಗಿ ನಡೆಯುತ್ತಿಲ್ಲ…..

ಅದರ ಅರ್ಥ ಇಡೀ ಸಮಾಜ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದೆ. ಸಮಚಿತ್ತದ ಮನೋಭಾವ ಉಳಿಸಿಕೊಳ್ಳುತ್ತಿಲ್ಲ. ಸಮಷ್ಟಿ ಪ್ರಜ್ಞೆ ಮಾಯವಾಗಿದೆ. ನಿಜವಾದ ಸಾಂತ್ವಾನ ಬೇಕಾಗಿರುವುದು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾಗಿ ಅಪಾಯದಲ್ಲಿ ಸಿಲುಕಿರುವ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೇ ಹೊರತು ಕ್ರೀಡಾ ಸ್ಪರ್ಧೆಯ ಸಹಜ ಫಲಿತಾಂಶ ಹೊಮ್ಮಿ ದ್ವೀತಿಯ ಸ್ಥಾನ ಪಡೆದವರಿಗಲ್ಲ……

ಸ್ಪರ್ಧೆಯ ದುಷ್ಪರಿಣಾಮಗಳೇ ಇದು. ಗೆಲುವೊಂದೇ ಮುಖ್ಯ ಎಂಬ ಮನಸ್ಥಿತಿ ಮತ್ತೆಲ್ಲವನ್ನು ಮರೆಸುತ್ತದೆ……

ಮುಕ್ತ ಮಾರುಕಟ್ಟೆಯ ಲಾಭ ಪಡೆದ ಕೆಲವು ‌ದೇಶಗಳು ಈಗ ಇತರ ಜನಸಂಖ್ಯೆ ಹೆಚ್ಚಿರುವ ದೇಶಗಳು ತಮ್ಮ ಸಾಮರ್ಥ್ಯ ವೃದ್ದಿಸಿಕೊಂಡು ಸ್ಪರ್ಧೆ ನೀಡಲು ಪ್ರಾರಂಭಿಸಿದ ಮೇಲೆ ಬಿಲದೊಳಗೆ ಅಡಗಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ನಮ್ಮ ದೇಶ ಮೊದಲು ಎನ್ನುವ ತಂತ್ರ ಅಳವಡಿಸಿಕೊಳ್ಳುತ್ತಿವೆ. ಇವುಗಳಿಗೆ ನೀತಿ ನಿಯಮಗಳಿಗಿಂತ ತಮ್ಮ ವೈಯಕ್ತಿಕ ಲಾಭವೇ ಮುಖ್ಯ…..

ಇದೇ ಸ್ಪರ್ಧೆಗಳು ಕೇವಲ ಮನುಷ್ಯ ಸಂಬಂಧಗಳನ್ನು ಮಾತ್ರವಲ್ಲ ಇಡೀ ಪ್ರಾಕೃತಿಕ ಪರಿಸರವನ್ನು ಹಾಳು ಮಾಡುತ್ತಿದೆ. ಜಾಗತಿಕ ತಾಪಮಾನ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿ ಋತುಮಾನಗಳೇ ಬದಲಾಗುತ್ತಿದೆ. ದೆಹಲಿ ಸೇರಿ ವಿಶ್ವದ ಅನೇಕ ನಗರಗಳು ವಾಸಿಸಲು ಯೋಗ್ಯವಾಗಿ ಉಳಿಯುತ್ತಿಲ್ಲ. ಭೂ ಸುರಂಗಗಳ ಮತ್ತು ಗಣಿಗಾರಿಕೆಯ ದುರಂತಗಳು ಬಡ ಕಾರ್ಮಿಕರ ಜೀವಗಳನ್ನು ನಿರಂತರವಾಗಿ ಕೊಲ್ಲುತ್ತಿವೆ……

ಸ್ಪರ್ಧೆ ಎಂಬುದು ಬದುಕಿನ ಗುಣಮಟ್ಟದ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಾಗಿ ಉಳಿಯದೆ ಮಾನವ ಬದುಕಿನ ವಿನಾಶದ ಪ್ರಕ್ರಿಯೆಯಾಗಿರುವುದು ಆಧುನಿಕ ಜಗತ್ತಿನ ದುರಂತ….

ಆರೋಗ್ಯಕರ ಸ್ಪರ್ಧೆ ಎಂಬುದು ಕೇವಲ ಬಾಯಿ ಮಾತಾಗಿದೆ. ಪ್ರತಿಯೊಬ್ಬರಿಗೂ ಗೆಲುವೇ ಮುಖ್ಯ. ಇಡೀ ದೇಶದ ಜನ, ಭೂಮಿ ನಾಶವಾದರು ಚಿಂತೆ ಇಲ್ಲ, ಕುಟುಂಬ ಬೀದಿಗೆ ಬಿದ್ದರು ಪರವಾಗಿಲ್ಲ, ಮಾನ ಮರ್ಯಾದೆ ಹರಾಜಾದರೂ ಯೋಚಿಸುವುದಿಲ್ಲ ಒಟ್ಟಿನಲ್ಲಿ ಗೆಲ್ಲಬೇಕು. ಅದೇ ಸ್ಪರ್ಧೆ……

ಸ್ಪರ್ಧೆಯ ಬಗ್ಗೆ ವಿಶ್ವದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದ ಆರ್ಥಿಕ ವಿಭಾಗ ಪ್ರಕಟಿಸುವ ಪತ್ರಿಕೆಯ ಅಂಕಣದಲ್ಲಿ ಬಹಳ ಹಿಂದೆ ವ್ಯಕ್ತಪಡಿಸಿದ ಈ ರೀತಿಯ ಕೆಲವು ಅಭಿಪ್ರಾಯಗಳು ಇಂದು ನಿಜವಾಗುತ್ತಿರುವುದಕ್ಕೆ ನಾವುಗಳು ಸಾಕ್ಷಿಯಾಗಿದ್ದೇವೆ. ಮನುಷ್ಯನ ಜೀವಕ್ಕಿಂತ ಕ್ರೀಡೆಯ ಸೋಲು ಸಮಾಜವನ್ನು ಕಲಕುವ ವಾತಾವರಣದಲ್ಲಿ ನಾವು ನೀವು…..

ದಯವಿಟ್ಟು ಇನ್ನು ಮುಂದಾದರು ನಾವುಗಳು ನಮ್ಮ ನಮ್ಮ ಮಟ್ಟದಲ್ಲಿ ಮಾನವೀಯ ಸಂಬಂಧಗಳನ್ನು ಉಳಿಸುವ ಬೆಳೆಸುವ ಪ್ರಯತ್ನ ಮಾಡೋಣ. ಸ್ಪರ್ಧೆ ನಮ್ಮನ್ನು ಸಂಪೂರ್ಣ ನಾಶ ಮಾಡುವ ಮುನ್ನ. ಕ್ರಿಕೆಟ್ ಗಿಂತ ಬಡ ಕಾರ್ಮಿಕರ ಜೀವ ರಕ್ಷಣೆಯ ಬಗ್ಗೆ ಕಾಳಜಿ ವಹಿಸೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………