ಮುಖ್ಯಮಂತ್ರಿ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ : ನಡವಳಿಕೆಯಲ್ಲಿ ರಾಮನ ಸಂಸ್ಕೃತಿ ಇರಲಿ

ವಿಜಯ ದರ್ಪಣ ನ್ಯೂಸ್

ಮಂಡ್ಯ :- ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಕೆಳಕ್ಕೆ ಇಳಿಸಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಲ್ಲದೆ ಅಮಾಯಕರ ಮೇಲೆ ಅಮಾನುಷ ದೌರ್ಜನ್ಯ ನಡೆಸಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಎಂದು ಇಟ್ಟುಕೊಂಡರೆ ಸಾಲದು ನಡವಳಿಕೆಯಲ್ಲಿ ರಾಮನ ಸಂಸ್ಕೃತಿ ಇರಬೇಕು ಎಂದು ಜಾತ್ಯತೀತ ಜನತಾದಳದ ಶಾಸಕಾಂಗ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ನಡೆದ ಪಾದಯಾತ್ರೆ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು ಶಾಂತಿಯುತವಾಗಿ ಇತ್ಯರ್ಥ ಮಾಡಬಹುದಾಗಿದ್ದ ವಿಷಯವನ್ನು ಕಾಂಗ್ರೆಸ್ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡು ಅಮಾಯಕ ಮುಗ್ಧ ಜನರ ಮೇಲೆ ದೌರ್ಜನ್ಯ ಮಾಡಿದೆ, ಹನುಮ ಭಕ್ತರ ಮೇಲಿನ ದೌರ್ಜನ್ಯ ಅರಗಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ, ಎಷ್ಟು ದಿನ ನಿಮ್ಮ ಆಟ ನಡೆಯಲಿದೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬ ಜನರ ಭಾವನೆ ಗೌರವಿಸುವ ಹಕ್ಕು ನೀಡಿದ್ದಾರೆ. ಆದರೆ ಸಂಘರ್ಷಕ್ಕೆ ಕಡೆ ಮಾಡಿಕೊಟ್ಟು, ಚಿತಾವಣೆ ನಡೆಸಿ ದೌರ್ಜನ್ಯ ಮಾಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡಿದ್ದೀರಿ, ಹನುಮನ ಕೆಣಕಿ ಲಂಕಾ ದಹನದ ಮೂಲಕ ರಾವಣ ಸಂಹಾರ ಆಗಿದ್ದ ಉದಾಹರಣೆ ಇತಿಹಾಸದಲ್ಲಿದೆ, ಸರ್ಕಾರ ಉದ್ದಟತನದಿಂದ ವರ್ತಿಸಿದ್ದು,ದುರಾಡಳಿತಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗೆ ಕರೆ ಮಾಡಿ ಮುಖಂಡರ ಜೊತೆ ಮಾತುಕತೆ ನಡೆಸಿ ಶಾಂತಿಯುತವಾಗಿ ಇತ್ಯರ್ಥಪಡಿಸಿ ಎಂದು ಹೇಳಿದ್ದೆ ಆದರೆ ಅವರು ಯಾರದೋ ಮರ್ಜಿಗೆ ಒಳಗಾಗಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಇದಕ್ಕೆ ಜಿಲ್ಲಾಡಳಿತವೇ ಕಾರಣ, ಅಧಿಕಾರಿಗಳೇ ಹೊಣೆ,ಈ ತಕ್ಷಣ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಅರ್ಜಿದಾರ ಯೋಗೇಶ್ ಅರ್ಜುನ ಸ್ತಂಭ, ಹನುಮಾನ್ ಧ್ವಜ ಎಂದು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ, ಗೌರಿಶಂಕರ ಸೇವಾ ಟ್ರಸ್ಟ್ ದ್ವಜಸ್ತಂಬ ಎಂದು ನಮೂದಿಸಿದೆ,ಯಾವುದೇ ಮುಚ್ಚಳಿಕೆ ಬರೆದು ಕೊಟ್ಟಿಲ್ಲ,,ದ್ವಜಸ್ತಂಬ ವಿಚಾರದಲ್ಲಿ ಕೆರಗೋಡು ಗ್ರಾಮ ಪಂಚಾಯಿತಿ ನಿರ್ಣಯ ಮಾಡಿದೆ,ಅನಂತರದ ಬೆಳವಣಿಗೆಯಲ್ಲಿ ಗೌರಿಶಂಕರ ಸೇವಾ ಟ್ರಸ್ಟ್ ಮುಚ್ಚಳಿಕೆ ಬರೆದು ಕೊಟ್ಟಿದೆ, ಅನುಮತಿ ಪತ್ರದಲ್ಲಿ ಇಂತಹದೇ ಬಾವುಟ ಹಾರಿಸಬೇಕು ಎಂದು ಶರತ್ತು ವಿಧಿಸಿದ್ದೆವು ಎಂಬುದು ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು, ಅಮಾಯಕರ ಮೇಲೆ ದೌರ್ಜನ್ಯ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, 144 ಸೆಕ್ಷನ್ ಅನ್ವಯ ಹೆರಲಾಗಿರುವ ನಿಷೇಧಾಜ್ಞೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಕ್ಕೆ ಕಾಂಗ್ರೆಸ್ ಗಿಂತ ಎರಡು ಪಟ್ಟು ಹೆಚ್ಚಿನ ಗೌರವ ನೀಡುವುದನ್ನು ಕಲಿತಿದ್ದೇವೆ, ಇದು ರಾಜಕೀಯಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ ಬದಲಿಗೆ ಸಂಸ್ಕೃತಿ ಉಳಿವಿಗೆ ನಡೆಯುತ್ತಿರುವ ಹೋರಾಟ, ಕೆರಗೋಡು ಜನರ ಜೊತೆ ನಾವು ನಿಲ್ಲಲಿದ್ದೇವೆ, ಹನುಮ ಧ್ವಜ ಬರು ಸ್ಥಾಪನೆವರೆಗೂ ನಿರಂತರ ಹೋರಾಟ ನಡೆಯಲಿದೆ, ಜನರು ದಂಗೆ ಎದ್ದರೆ ಯಾವ ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.