‘ಕೊಂಕಣಿ ಸಾಹಿತ್ಯ ಅಕಾಡೆಮಿ’ ಹುದ್ದೆಗಳನ್ನು ಮಾರಾಟ ಮಾಡಬೇಡಿ, ಅರ್ಹರನ್ನೇ ನೇಮಕ ಮಾಡಿ’: ಪತ್ರ ಸೃಷ್ಟಿಸಿದ ಸಂಚಲನ

ವಿಜಯ ದರ್ಪಣ ನ್ಯೂಸ್

‘ಕೊಂಕಣಿ ಸಾಹಿತ್ಯ ಅಕಾಡೆಮಿ’ ಹುದ್ದೆಗಳನ್ನು ಮಾರಾಟ ಮಾಡಬೇಡಿ, ಅರ್ಹರನ್ನೇ ನೇಮಕ ಮಾಡಿ’: ಪತ್ರ ಸೃಷ್ಟಿಸಿದ ಸಂಚಲನ

ಬೆಂಗಳೂರು ಜನವರಿ 06 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ-ಸದಸ್ಯರ ಹುದ್ದೆ ಮಾರಾಟವಾಗುತ್ತಿದೆಯಾ? ಈ ರೀತಿಯ ನಡೆ ರಾಜಕಾರಣಿಗಳ ಹಿಂಬಾಲಕರಿಂದ ನಡೆಯುತ್ತಿದೆಯೇ? ಈ ರೀತಿಯ ಸಂಶಯವೊಂದು ಸಾಮಾಜಿಕ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರ ಪತ್ರದಿಂದ ಬೆಳಕಿಗೆ ಬಂದಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಾಡಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ನೇಮಕ ಮಾಡುವ ಪ್ರಯತ್ನ ರಾಜಕೀಯ ನಾಯಕರಿಂದ ನಡೆಯುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ತುಂಬುವ ಅಕಾಡೆಮಿಗೆ ಸಾರಸ್ವತ ಕ್ಷೇತ್ರಗಳ ಪ್ರಮುಖರನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ಅವರು ಮುಖ್ಯಮಂತ್ರಿ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಬಹು ಭಾಷೆಗಳ ಸಮುದಾಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಹುತೇಕ ಭಾಷೆಗಳ ಕ್ಷೇತ್ರಗಳ ಅಭಿವೃದ್ದಿಗಾಗಿ ಅಕಾಡೆಮಿಗಳನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರ, ಈ ಅಕಾಡೆಮಿಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅನುದಾನದ ಮೊತ್ತವನ್ನು ಹೆಚ್ಚಿಸುವ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಹಿತ್ಯ ಅಕಾಡೆಮಿಗಳಿಗೆ ಅನುಕೂಲ ಕಲ್ಪಿಸಿದೆ. ಆದರೆ ಈ ವ್ಯವಸ್ಥೆಯ ಲಾಭ ಪಡೆಯಲು ರಿಯಲ್ ಎಸ್ಟೇಟ್’ನಂತಹಾ ಉದ್ಯಮ ಕ್ಷೇತ್ರದ ಪ್ರಭಾವಿಗಳು ಮುಂದಾಗಿದ್ದಾರೆಂಬ ಮಾತುಗಳು ಸಾಹಿತ್ಯ ಕ್ಷೇತ್ರದಲ್ಲಿ ಕೇಳಿಬರುತ್ತಿದ್ದು, ಅಂತಹಾ ತಪ್ಪಿಗೆ ಅವಕಾಶ ನೀಎಡಬಾರದೆಂದು ಆಲ್ವಿನ್ ಅವರು ಈ ಪತ್ರದಲ್ಲಿ ಸಲಹೆ ಮಾಡಿದ್ದಾರೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ವಿವಿಧ ಭಾಷಾ ಅಕಾಡೆಮಿಗಳ ರೀತಿಯಲ್ಲೇ, ಕರಾವಳಿ ಮಲೆನಾಡು ಸಹಿತ ರಾಜ್ಯದ ಹಲವೆಡೆ ಇರುವ ಕೊಂಕಣಿ ಭಾಷಾ ಸಾಹಿತ್ಯಾಸಕ್ತರ ಆಕಾಂಕ್ಷೆಗೆ ತಕ್ಕಂತೆಯೇ ಕರ್ನಾಟಕ ರಾಜ್ಯ ಕೊಂಕಣಿ ಆಕಾಡೆಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, ಸಮರ್ಥ ಅಧ್ಯಕ್ಷರ ನೇಮಕವಾಗದಿರುವುದರಿಂದಾಗಿ ಕೊಂಕಣಿ ಆಕಾಡೆಮಿ ತನ್ನ ಆಶೋತ್ತರಗಳನ್ನು ಈಡೇರಿಸಲು ಶಕ್ತವಾಗಿಲ್ಲ ಎಂಬುದು ದುರಾದೃಷ್ಟಕರ ಎಂದು ಅವರು ಸರ್ಕಾರದ ಗಮನಸೆಳೆದಿದ್ದಾರೆ.

ಭಾಷಾ ಅಕಾಡೆಮಿಗಳಿಗೆ ಆಯಾ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರನ್ನು ನೇಮಕ ಮಾಡುವುದು ಸಂಪ್ರದಾಯ. ಆಯಾ ಭಾಷೆಗಳ ಸಾಹಿತಿಗಳನ್ನು, ಲೇಖಕರನ್ನು, ಪತ್ರಕರ್ತರನ್ನು, ಶಿಕ್ಷಕರನ್ನು ನೇಮಕ ಮಾಡಿದರೆ ಮಾತ್ರ ಭಾಷಾ ಅಕಾಡೆಮಿಗಳ ಸ್ಥಾಪನೆಯ ಉದ್ದೇಶ ಈಡೇರುತ್ತದೆ ಎಂಬುದು ಸರಳ ಸತ್ಯ. ಆದರೆ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕಳೆದ ಹಲವು ಅವಧಿಗಳಲ್ಲಿ ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದವರಲ್ಲದ ಮಂದಿಯನ್ನು ನೇಮಕ ಮಾಡಲಾಗಿರುತ್ತದೆ. ಕೊಂಕಣಿ ಭಾಷೆಯ ಒಂದಕ್ಷರವನ್ನೂ ಬರೆಯಲು ಅಶಕ್ತರಾಗಿರುವ, ಸರಳವಾಗಿ ಕೊಂಕಣಿ ಓದಲೂ ಬಾರದ ಉದ್ಯಮಿಗಳನ್ನು, ಗುತ್ತಿಗೆದಾರರನ್ನು ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದಾಗಿ ಕೊಂಕಣಿ ಭಾಷಾ ಕ್ಷೇತ್ರಕ್ಕೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊಂಕಣಿಗೆ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದ ಕಾರಣ ಕನ್ನಡ, ದೇವನಾಗರಿ, ರೋಮಿ, ಮಲಯಾಳಂ ಮತ್ತು ಅರಬ್ಬಿ ಲಿಪಿಗಳನ್ನು ಅವಲಂಭಿಸಲಾಗಿದೆ. ಇಂತಹಾ ಪರಿಸ್ಥಿತಿಯಲ್ಲಿ ಕೊಂಕಣಿ ಭಾಷೆ ಸಾಹಿತ್ಯ ಸಂಸ್ಕೃತಿ, ಕಲೆಗಳ ಜಾನಪದ ಕಲೆಗಳ ಬೆಳವಣಿಗಾಗಿ ಅಕಾಡೆಮಿ ಮೂಲಕ ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕಾರ್ಯಾಗಾರ, ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯಕಾರರಿಗೆ, ಸಂಗೀತಗಾರರಿಗೆ ನಾಟಕಕಾರಿಗೆ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನುಮಾಡಬೇಕಾಗುತ್ತದೆ. ಪುಸ್ತಕ, ಪತ್ರಿಕೆ ಪ್ರಕಾಶನ ಮಾಡಬೇಕಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕೊಂಕಣಿ ಸಾಹಿತ್ಯದ ಅರಿವೇ ಇಲ್ಲದ ಉದ್ಯಮಿಗಳನ್ನು, ರಾಜಕೀಯ ನಾಯಕರ ಹಿಂಬಾಲಕರನ್ನು ನೇಮಕ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಹಣ ವ್ಯರ್ಥವಾಗಿರುವುದಲ್ಲದೆ, ಕೊಂಕಣಿ ಭಾಷಾಭಿವೃದ್ದಿಯ ಆಶಯವೂ ಈಡೇರುತ್ತಿಲ್ಲ ಎಂದು ಆಲ್ವಿನ್ ಮೆಂಡೋನ್ಸಾ ಅವರು ಸಿಎಂ ಅವರ ಗಮನಸೆಳೆದಿದ್ದಾರೆ.

ಈ ಹಿಂದೆ. ಮಂಗಳೂರಿನ ಮಾಂಡ್ ಸೊಭಾಣ್ ಎಂಬ ಸಂಸ್ಥೆಯ ಪದಾಧಿಕಾರಿಗಳನ್ನೇ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಈ ಹಿಂದಿನ ಅಧ್ಯಕ್ಷರ ಪಟ್ಟಿಯನ್ನು ಗಮನಿಸಿದರೆ, ಎರಿಕ್ ಒಝೇರಿಯೊ, ನಾರಾಯಣ ಖಾರ್ವಿ, ರೊಯ್ ಕ್ಯಾಸ್ತಲೀನೊ ಹೀಗೆ ಮಾಂಡ್ ಸೊಭಾಣ್ ಸಂಘಟನೆಯ ಪದಾಧಿಕಾರಿಗಳಾಗಿದ್ದವರನ್ನೇ ನೇಮಿಸಲಾಗಿದೆ. ಈ ಬಾರಿಯೂ ಅದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯನ್ನೇ ನೇಮಕ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೊಂಕಣಿ ಸಾಹಿತ್ಯದ ಬಗ್ಗೆ ಏನೂ ತಿಳಿಯದ ವ್ಯಕ್ತಿಯ ಪರವಾಗಿ ರಾಜಕೀಯ ನಾಯಕರು ಲಾಭಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ ಇದೇ ಅಕಾಡೆಮಿಯ ಅಧ್ಯಕ್ಷರಾಗಿದ್ದ ರೊಯ್ ಕ್ಯಾಸ್ತಲೀನೊ ರವರು ಅಧಿಕಾರದಿಂದ ನಿರ್ಗಮಿಸಿದ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪಕ್ಕೆ ಗುರಿಯಾಗಿ ಅವರ ವಿರುದ್ಧ ಕಾಂಗ್ರೆಸ್ ನಾಯಕರೇ ಆಕ್ರೋಶ ಹೊರಹಾಕಿದ್ದರು. ಹಾಗಾಗಿ ರಾಜಕೀಯ ನಾಯಕರನ್ನೂ ಈ ಅಕಾಡೆಮಿಯಿಂದ ದೂರ ಇಡಬೇಕಿದೆ ಎಂಬುದು ಸಾಹಿತಿಗಳ ಆಗ್ರಹವಾಗಿರುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಪ್ರಸ್ತುತ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರ ನಡೆಸುತ್ತಿರುವ ಸರ್ಕಾರವು, ಇತರ ಭಾಷಾ ಅಕಾಡೆಮಿಗಳಂತೆಯೇ ಕೊಂಕಣಿ ಜನಾಂಗಕ್ಕೆ ಶಕ್ತಿ ತುಂಬುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕೊಂಕಣಿ ಓದು-ಬರಹ ಗೊತ್ತಿರುವ ಶಿಕ್ಷಕರನ್ನು, ಪತ್ರಕರ್ತರರನ್ನು, ಕವಿಗಳನ್ನು, ಸಾಹಿತಿಗಳನ್ನು ಅಥವಾ ಲೇಖಕರ ಸಹಿತ ಕೊಂಕಣಿ ಸಾರಸ್ವತ ಕ್ಷೇತ್ರದವರನ್ನು ಮಾತ್ರ ಅಧ್ಯಕ್ಷ-ಸದಸ್ಯ ಸ್ಥಾನಗಳಿಗೆ ನೇಮಕ ಮಾಡಬೇಕು. ಆ ಮೂಲಕ ರಾಜಕಾರಣಿಗಳ ಹಿಂಬಾಲಕರಿಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ಮಾರಾಟವಾಗುತ್ತಿದೆ ಎಂಬ ಅಪವಾದದಿಂದ ಸರ್ಕಾರ ಹೊರಬರಬೇಕು ಎಂದು ಆಲ್ವಿನ್ ಮೆಂಡೋನ್ಸಾ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ,