ಒಂದು ಪೆನ್ ಡ್ರೈವ್ ಸುತ್ತಾ….. ….. ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು….

ವಿಜಯ ದರ್ಪಣ ನ್ಯೂಸ್

ಒಂದು ಪೆನ್ ಡ್ರೈವ್ ಸುತ್ತಾ…..

ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು………

ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್ ನ್ಯೂಸ್ ಮಾಡುವುದನ್ನು ಗಮನಿಸಿದ್ದೇವೆ. ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಹಾಸನದಲ್ಲಿ ಕೆಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ/ಬಲವಂತದ ಚಿತ್ರೀಕರಣ/ಆ ಮೂಲಕ ಬ್ಲಾಕ್ ಮೇಲ್/ವಿಕೃತ ಕಾಮ/ಅಧಿಕಾರದ ದರ್ಪ ಮತ್ತು ದುರುಪಯೋಗ/ನಂಬಿಕೆ ದ್ರೋಹ/ಅತ್ಯಾಚಾರ/ವ್ಯಭಿಚಾರ ಮುಂತಾದ ಆರೋಪಿಗಳಿಗೆ ಸಾಕ್ಷಿಯಾಗಬಹುದಾದ ಸಿಡಿ/ ಪೆನ್ ಡ್ರೈವ್ ಗಳು ಹಂಚಿಕೆಯಾಗುತ್ತಿದೆ. ಅದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ……..

ಮೊದಲಿಗೆ ಇಡೀ ಹಾಸನದ ಮಾತ್ರ ಕುತೂಹಲ ಕೆರಳಿಸಿದ್ದ ಆ ವಿಷಯ ಈಗ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಇಷ್ಟು ದೊಡ್ಡ, ವ್ಯಾಪಕ ಮತ್ತು ಗಂಭೀರ ವಿಷಯವನ್ನು ಸುದ್ದಿ ಮಾಧ್ಯಮಗಳು ಸಂಪೂರ್ಣವಾಗಿ ಮರೆಮಾಚಿವೆ. ಯಾವುದೋ ಒತ್ತಡಕ್ಕೋ, ಆಮಿಷಕ್ಕೋ, ಮುಲಾಜಿಗೋ ಬಲಿಯಾಗಿ ಇದನ್ನು ಒಂದು ಸುದ್ದಿಯಾಗಿ ಪ್ರಸಾರ ಮಾಡುತ್ತಲೇ ಇಲ್ಲ. ಅವರ ದೃಷ್ಟಿಯಲ್ಲಿ ಇದೊಂದು ಮೇಘ ಬ್ರೇಕಿಂಗ್ ನ್ಯೂಸ್ ಆಗಬೇಕಿತ್ತು. ಆದರೆ ಬಹುಶಃ ಒಂದು ಚಾನೆಲ್ ಹೊರತುಪಡಿಸಿ, ಸಂಪೂರ್ಣ ರಾಜ್ಯಕ್ಕೆ ವ್ಯಾಪಿಸಿದ ಮೇಲೆ, ಅದೂ ಮೂರು ದಿನಗಳ ನಂತರ ಪ್ರಸಾರ ಮಾಡಿತು. ಇತರರು ಈ ಬಗ್ಗೆ ಮಾತನಾಡಲೇ ಇಲ್ಲ….

ಒಂದು ವೇಳೆ ತಾಂತ್ರಿಕವಾಗಿ, ನೈತಿಕವಾಗಿ ಅಥವಾ ಕಾನೂನಾತ್ಮಕವಾಗಿ ನ್ಯಾಯಾಲಯದ ನಿಷೇಧವಿದ್ದರು ಸಹ ಇದನ್ನೇ ಪರೋಕ್ಷವಾಗಿ, ಒಂದು ಅಪರಾಧವಾಗಿ, ಯಾರ ಹೆಸರನ್ನು ಪ್ರಸ್ತಾಪಿಸದೆ ಸುದ್ದಿಯಾಗಿ ಪ್ರಸಾರ ಮಾಡಲು ಅವಕಾಶವಿದೆ. ಆ ಪೆನ್ ಡ್ರೈವ್ ದೃಶ್ಯಗಳು ಪ್ರಸಾರ ಮಾಡಲು ಯೋಗ್ಯವಲ್ಲ ನಿಜ. ಆದರೆ ಅದರಲ್ಲಿ ರಾಜ್ಯದ ಪ್ರಖ್ಯಾತ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ, ಅಲ್ಲದೆ ಮಹಿಳೆಯರ ನೇರ ಶೋಷಣೆಯಾಗಿದೆ, ಇಂತಹ ಸಂದರ್ಭದಲ್ಲಿ ಬಹಿರಂಗವಾಗಿ ಅದಕ್ಕೆ ಸಂಬಂಧಪಟ್ಟವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವಾಗ, ಮಾಧ್ಯಮಗಳಲ್ಲಿ ರಾಜಕೀಯ ಮಾತನಾಡುತ್ತಿರುವಾಗ, ಈ ಬಗ್ಗೆ ಅವರನ್ನು ಪ್ರಶ್ನಿಸುವ ಧೈರ್ಯವನ್ನು, ನೈತಿಕತೆಯನ್ನು ಪ್ರದರ್ಶಿಸದೆ ತಮ್ಮ ಮುಖವಾಡವನ್ನು ಬಟಾ ಬಯಲು ಮಾಡಿಕೊಂಡಿದ್ದಾರೆ……

ವಾಸ್ತವವಾಗಿ ಈ ರೀತಿಯ ಖಾಸಗಿ ಸುದ್ದಿಗಳು ಅನಾವಶ್ಯಕವಾಗಿ ಪ್ರಸಾರವಾಗದಿರುವುದೇ ಒಳಿತು. ಆದರೆ ಬೇರೆ ಸಾಮಾನ್ಯ ಜನರಿಗೆ ಅಥವಾ ಮಾಧ್ಯಮಗಳ ವಿರೋಧಿಗಳಿಗೆ ಅಥವಾ ಮಾಧ್ಯಮಗಳ ಅನುಕೂಲಕ್ಕೆ ತಕ್ಕಂತೆ ಇತರರ ವಿಷಯವನ್ನು ಅದು ಖಚಿತಪಡಿಸುವ ಮೊದಲೇ ಪ್ರಸಾರ ಮಾಡುವ ಇವರು ಇದನ್ನು ಏಕೆ ಪ್ರಸಾರ ಮಾಡಲಿಲ್ಲ. ಅಧಿಕೃತವಾಗಿ ರಾಜ್ಯದ ಮಹಿಳಾ ಆಯೋಗ ಹಾಸನದ ಪೊಲೀಸ್ ಮುಖ್ಯಸ್ಥರಿಗೆ ಮತ್ತು ಸರ್ಕಾರಕ್ಕೆ ಈ ಬಗ್ಗೆ ತನಿಖೆ ಮಾಡಲು ಮನವಿ/ಆದೇಶ ನೀಡಿದೆ. ಇಂತಹ ಗಂಭೀರ ವಿಷಯಕ್ಕಾದರೂ ಕನಿಷ್ಠ ಪ್ರಮಾಣದ ಸುದ್ದಿಯನ್ನು ಪ್ರಸಾರ ಮಾಡಬೇಕಿತ್ತಲ್ಲವೇ….

ಇದರಿಂದ ಸಾಮಾನ್ಯ ಜನ, ಮಾಧ್ಯಮಗಳು ಯಾವುದೋ ಆಮಿಷಕ್ಕೆ ಒಳಗಾಗಿವೆ, ಬೇಕಂತಲೇ ಆ ಸುದ್ದಿಯನ್ನು ಪ್ರಸಾರ ಮಾಡುತ್ತಿಲ್ಲ ಎಂದು ಮಾತನಾಡಿಕೊಳ್ಳುವಂತಾಗಿದೆ. ಆದ್ದರಿಂದ ಮಾಧ್ಯಮಗಳ ನೈತಿಕತೆಯನ್ನು ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ ಈ ಮಾರಾಟವಾದ ಮಾಧ್ಯಮಗಳ ಬಗ್ಗೆ ಬಹುತೇಕ ಜನರ ನಂಬಿಕೆ ನಶಿಸಿ ಹೋಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ…..

ಈ ವಿಷಯದಲ್ಲಿ ಸದ್ಯ ಯಾರೋ ಒಬ್ಬ ವ್ಯಕ್ತಿ ಅಥವಾ ಪಕ್ಷವನ್ನು ಹೊಣೆ ಮಾಡುವುದು ಅಷ್ಟು ಸರಿಯಾದ ನಿರ್ಧಾರವಲ್ಲ. ಸ್ಪಷ್ಟವಾಗಿ ಅದು ಬಯಲಾಗುವವರೆಗೂ ಸಂಯಮ ಪ್ರದರ್ಶಿಸಬೇಕಾಗಿದೆ. ಆದರೆ ಸುದ್ದಿಯನ್ನು ಮಾತ್ರ ಯಾವ ಕಾರಣಕ್ಕೂ ಮರೆಮಾಚಬಾರದು. ಅದು ಪಕ್ಷಪಾತವಾಗುತ್ತದೆ……

ಇದರ ಇನ್ನೊಂದು ಮುಖವೂ ಇದೆ. ಆ ಪೆನ್ ಡ್ರೈವ್ ನಲ್ಲಿ ಕೆಲವು ಮಹಿಳೆಯರ ಮುಖ ಸಮೇತ ದೇಹ ಪ್ರದರ್ಶನ ನಡೆದಿದೆ. ಬಲವಂತವಾಗಿಯೋ, ಭಯದಿಂದಲೋ, ಸ್ವ ಇಚ್ಛೆಯಿಂದಲೋ ಗೊತ್ತಿಲ್ಲ. ಆದರೆ ದಯವಿಟ್ಟು ಈ ವಿಷಯದಲ್ಲಿ ಒಂದು ವೇಳೆ ಆ ಮಹಿಳೆಯರು ನಿಮಗೆ ಪರಿಚಿತರಾಗಿದ್ದರೆ ಅಥವಾ ನೀವು ಅವರನ್ನು ನೋಡಿದ್ದರು ಸಹ ಯಾವುದೇ ಕಾರಣಕ್ಕೂ ನಿಮ್ಮ ಪ್ರತಿಕ್ರಿಯೆ ನಿಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಅಥವಾ ಸ್ವಂತದವರು ಎಂದೇ ಭಾವಿಸಿ ಅದನ್ನು ನಿರ್ಲಕ್ಷ ಮಾಡಿ. ಯಾವ ಕಾರಣಕ್ಕೂ ಆ ಮಹಿಳೆಯನ್ನು ಅಸಭ್ಯವಾಗಿ ಅಥವಾ ಅವಮಾನಕರವಾಗಿ ಅಥವಾ ನಿಂದನಾತ್ಮಕವಾಗಿ ಅಥವಾ ಅಸಹ್ಯಕರವಾಗಿ ಅಥವಾ ವಿಚಿತ್ರವಾಗಿ ನೋಡಬೇಡಿ ಅಥವಾ ಹಾಗೆ ಮಾತನಾಡಬೇಡಿ. ಏಕೆಂದರೆ ಖಂಡಿತವಾಗಲೂ ಇದನ್ನು ಆ ಮಹಿಳೆಯರು ಸಹಿಸಿಕೊಳ್ಳುವುದಿಲ್ಲ. ಅವರು ಬಹುಶಃ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆ ಇದೆ…

ಸಮಾಜದ ಈ ಮೌಲ್ಯಗಳು/ಭ್ರಮೆಗಳು/ನಂಬಿಕೆಗಳು/ದೌರ್ಜನ್ಯಗಳು/ಶೋಷಣೆಗಳು/ಅಸಹಾಯಕತೆ/ಮುಗ್ದತೆ/ಚೆಲ್ಲಾಟಗಳು ಅವರ ಜೀವಕ್ಕೆ ಹಾನಿ ಮಾಡದಿರಲಿ. ಏನೋ ನಡೆಯಬಾರದ ಘಟನೆಗಳು ನಡೆದಿದೆ. ಒಂದು ವೇಳೆ ಅದು ನೈತಿಕವಾಗಿ, ಕಾನೂನಾತ್ಮಕವಾಗಿ ಅಪರಾಧವಾಗಿದ್ದರೆ ಕಾನೂನು ಅವರುಗಳಿಗೆ ಶಿಕ್ಷೆ ನೀಡಲಿ ಅಥವಾ ಯಾರಾದರೂ ಆಮಿಷಕ್ಕೆ, ಒತ್ತಡಕ್ಕೆ, ಶೋಷಣೆಗೆ ಒಳಪಡಿಸಿದ್ದರೆ ಅವರನ್ನು ಶಿಕ್ಷಿಸಲಿ. ಆದರೆ ಅಮಾಯಕರಿಗೆ ಯಾವ ರೀತಿಯೂ ತೊಂದರೆಯಾಗುವುದು ಬೇಡ ಮತ್ತು ನಾವು ತೊಂದರೆ ಕೊಡುವುದು ಬೇಡ…….

ಮಹಿಳೆಯ ಲೈಂಗಿಕ ಶೋಷಣೆ ನಡೆದಾಗ ನಮ್ಮ ಪ್ರತಿಕ್ರಿಯೆಯ ರೀತಿ, ಬಲಿಪಶುಗಳ ಮುಂದೆ ಮೇಲ್ನೋಟಕ್ಕೆ ಅದು ಸಹಜ ಏನು ಆಗಿಲ್ಲ ಎನ್ನುವಂತೆ ವರ್ತಿಸಬೇಕಾಗುತ್ತದೆ. ಮನಸ್ಸಿನೊಳಗಡೆ ಇರುವ ಭಾವನೆಗಳನ್ನು ಬಾಹ್ಯವಾಗಿ ವ್ಯಕ್ತಪಡಿಸಬಾರದು. ಈ ವಿಷಯಗಳಲ್ಲಿ ಕೇವಲ ಮಾಧ್ಯಮ ಮಾತ್ರವಲ್ಲ ಸಮಾಜವು ಸಹ ಹೆಚ್ಚು ಸಂಯಮ, ಸಭ್ಯತೆ ಪ್ರದರ್ಶಿಸಬೇಕಾಗುತ್ತದೆ. ಇಂದಿನ ಮೊಬೈಲ್ ಅಥವಾ ಇತರ ಹಿಡನ್ ಕ್ಯಾಮೆರಾಗಳ ಅಭಿವೃದ್ಧಿಯಿಂದ ಖಾಸಗಿತನಕ್ಕೆ ದೊಡ್ಡ ಪೆಟ್ಟಾಗಿದೆ. ಕೆಟ್ಟವರು, ಕೆಟ್ಟದ್ದು ಅಥವಾ ಬ್ಲಾಕ್ ಮೇಲ್ ರುಗಳಿಗೆ ಇದು ವರವಾದಂತೆ ಒಳ್ಳೆಯವರಿಗೆ ಶಾಪವೂ ಆಗಿದೆ. ಇದನ್ನು ನಿಯಂತ್ರಿಸುವುದು ಕಷ್ಟ. ಹಾಗೆಂದು ಒಳ್ಳೆಯವರು ಭಯದಿಂದ ಪ್ರತಿಕ್ಷಣವೂ ಜೀವನ ನಡೆಸುವುದು ಇನ್ನೂ ಕಷ್ಟ………

ಈ ಘಟನೆಯ ಆಳದಲ್ಲಿ ಇನ್ನೂ ಏನೇನು ತಂತ್ರ, ಕುತಂತ್ರ, ಸ್ವಾರ್ಥ, ವಂಚನೆ, ಪ್ರಚೋದನೆ, ವಿಕೃತ ಅಡಗಿದೆಯೋ ಗೊತ್ತಿಲ್ಲ. ನಮ್ಮ ಪೊಲೀಸ್ ವ್ಯವಸ್ಥೆ ಸಹ ಈ ನಿಟ್ಟಿನಲ್ಲಿ ದಕ್ಷತೆಯಿಂದ, ಪಾರದರ್ಶಕತೆಯಿಂದ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ರಾಜ್ಯದ ಮಾನ ಹರಾಜಾಗುವುದು ಖಚಿತ. ಏಕೆಂದರೆ ಈ ತರದ ಘಟನೆಗಳು ಇನ್ನೂ ಎಲ್ಲೆಲ್ಲಿ ನಡೆದಿದೆಯೋ ಏನೋ…

ಇವುಗಳ ನಡುವೆ ನಾವು ವೈಯಕ್ತಿಕವಾಗಿ ನಮ್ಮ ನಮ್ಮ ಅರಿವಿನ ಪ್ರಜ್ಞೆಯೊಂದಿಗೆ ಬದುಕೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.,
9844013068…….