ಕೃಷಿ ಹೊಂಡಗಳಿಗೆ ಸುರಕ್ಷಿತ ಬೇಲಿ ನಿರ್ಮಿಸಿ: ಜೀವ ಹಾನಿ ತಪ್ಪಿಸಿ

ವಿಜಯ ದರ್ಪಣ ನ್ಯೂಸ್…

ಕೃಷಿ ಹೊಂಡಗಳಿಗೆ ಸುರಕ್ಷಿತ ಬೇಲಿ ನಿರ್ಮಿಸಿ:ಜೀವ ಹಾನಿ ತಪ್ಪಿಸಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 16 : ಕೃಷಿ ಇಲಾಖೆಯಡಿ 2014-15 ರಿಂದ ರೈತರು ತಮ್ಮ ಜಮೀನುಗಳಲ್ಲಿ ವೈಯಕ್ತಿಕವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಲು ಅನುಮತಿಸಲಾಗಿದೆ. ಪ್ರಮುಖವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿದ್ದಂತಹ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು, ಮಳೆಬಾರದ ವೇಳೆಯಲ್ಲಿ ಸಂಗ್ರಹಿಸಿದ ನೀರನ್ನು ಬಳಸಿ ಬೆಳೆದಂತಹ ಬೆಳೆಯನ್ನು ಸಂರಕ್ಷಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

ಆದ್ದರಿಂದ ಹಿಡಿದಿಟ್ಟು ಕೊಂಡಿರುವ ನೀರನ್ನು ಉಳಿಸಿಕೊಳ್ಳುವ ಸಲುವಾಗಿ ಕಪ್ಪು ಬಣ್ಣದ ಟಾರ್ಪಾಲಿನ್ ಹೊದಿಕೆ ಬಳಸಲು ಸೂಚಿಸಲಾಗಿರುತ್ತದೆ. ರೈತರು ಸಹ ಹೆಚ್ಚಿನ ಆಸಕ್ತಿಯಿಂದ ಈ ಯೋಜನೆ ಅನುಷ್ಠಾನ ಮಾಡಲು ಸಹಕರಿಸಿದ್ದು ಇದರ ಪ್ರಯೋಜನೆ ಪಡೆದಿರುತ್ತೀರಿ. ಆದರೆ ದುರದೃಷ್ಟವಶಾತ್ ಟಾರ್ಪಾಲಿನ್ ಮೇಲೆ ನುಣುಪಾಗಿರುವುದರಿಂದ, ಕೃಷಿ ಹೊಂಡದಲ್ಲಿರುವ ನೀರಿನಲ್ಲಿ ಇಳಿಯುವಾಗ ಆಯತಪ್ಪಿ ಜಾರಿ ಬಿದ್ದು ಹಲವು ಜೀವಗಳು ಹಾನಿಯಾಗಿರುವುದು ವರದಿಯಾಗಿರುತ್ತದೆ. ರೈತರಿಗೆ ಮಳೆ ನೀರಿನ ಕೊಯ್ಲಿನ ತಂತ್ರಜ್ಞಾನವಾಗಿ ಕೃಷಿ ಹೊಂಡಕ್ಕೆ ಅನುಮತಿಸಲಾಗಿದೆ.

ಆದುದರಿಂದ ರೈತಭಾಂದವರಲ್ಲಿ ಕೃಷಿ ಇಲಾಖೆವತಿಯಿಂದ ಮಾಡುವ ವಿನಂತಿಯೆಂದರೆ ಈಗಾಗಲೇ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ತಪ್ಪದೇ ಕಡ್ಡಾಯವಾಗಿ ತಂತಿಬೇಲಿ/ ಸುರಕ್ಷಿತಬೇಲಿಯನ್ನು ನಿರ್ಮಿಸುವುದು, ಇದರಿಂದ ಏನೂ ಅರಿಯದ ಮೂಕ/ಮುಗ್ಧ ಜೀವಿಗಳನ್ನು ಅಪಾಯದಿಂದ ಪಾರುಮಾಡಬಹುದು. ದಯವಿಟ್ಟು ಎಲ್ಲಾ ರೈತರೂ ಸಹಕರಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.