ಕಳ್ಳತನ ಮಾಡಿ ಅಮೇಲೆ ತಪ್ಪಾಯ್ತು ಎಂದರೆ ಹೇಗೆ…
ವಿಜಯ ದರ್ಪಣ ನ್ಯೂಸ್…
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಚ್ ಡಿ ಕೆ ವಾಗ್ದಾಳಿ
ಕಳ್ಳತನ ಮಾಡಿ ಅಮೇಲೆ ತಪ್ಪಾಯ್ತು ಎಂದರೆ ಹೇಗೆ…
ನವದೆಹಲಿ :ಮುಖ್ಯಮಂತ್ರಿ ಧರ್ಮಪತ್ನಿ ಮುಡಾದ 14 ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇದು ಹೇಗಿದೆ ಎಂದರೆ, ‘ಕಳ್ಳತನ ಮಾಡಿ ಅಮೇಲೆ ತಪ್ಪಾಯಿತು’ ಎಂದು ಹೇಳಿದಂತಾಯಿತು ಎಂದು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಧರ್ಮಪತ್ನಿ ನನಗೂ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟಿಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಯಾವಾಗಲೂ ಹಿಟ್ ಆ್ಯಂಡ್ ರನ್ ಎಂದು ಹೇಳುತ್ತಾರೆ. ಹಾಗಾದರೆ ಇವರೇನು? ಯೂಟರ್ನಾ? ಎಂದು ಕೇಳಿದ್ದಾರೆ. ಸೋಮವಾರ ರಾತ್ರಿ ಏಕಾಏಕಿ ಪತ್ರ ಬರೆದು ನಿವೇಶನಗಳು ಬೇಡ, ವಾಪಸ್ ಮಾಡುತ್ತಿದ್ದೇನೆ ಎಂದಿದ್ದಾರೆ. ಮನೆ, ಚಿನ್ನ, ಒಡವೆ ಯಾವುದರ ಮೇಲೆಯೂ ಮಮತೆ ಇಲ್ಲ. ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಹೇಳಿಕೊಂಡಿದ್ದಾರೆ. ನಾನು ಆ ಹೆಣ್ಣುಮಗಳ ಬಗ್ಗೆ ಮಾತನಾಡಲ್ಲ. ಆದರೆ ಅದೇನೋ ಕಪ್ಪು ಚುಕ್ಕೆ ಇಲ್ಲದ ರಾಜಕೀಯ ಮಾಡಿದ್ದಾರಂತೆ ಸಿದ್ದರಾಮಯ್ಯನವರು. ಆ ಹೆಣ್ಣು ಮಗಳು ತಮ್ಮ ಪತಿಯ ಗಮನಕ್ಕೆ ಇಲ್ಲದಂತೆಯೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣ ಮಾತ್ರವಲ್ಲ. ಸಿಎಂ ಸಿದ್ದರಾಮಯ್ಯ ಇನ್ನೂ ಹಲವು ಅಕ್ರಮಗಳನ್ನು ಎಸಗಿದ್ದಾರೆ. ಮೈಸೂರಿನಲ್ಲಿ ಭೂಮಿ ಮೇಲೆ, ಚಿನ್ನದ ಮೇಲೆ ವ್ಯಾಮೋಹ ಇಲ್ಲ ಎನ್ನುತ್ತಾರೆ ಅವರ ಶ್ರೀಮತಿಯವರು, ಈ ಹಿಂದೆ ಏನೆಲ್ಲ ಮಾಡಿದ್ದಾರೆ, ವೈಟ್ನರ್ ಹಾಕಿ ಎಲ್ಲ ಮುಗಿದೋಯ್ತು ಎಂದುಕೊಂಡಿದ್ದರು, ಈಗ ಇಲ್ಲಿಗೆ ಬಂದಿದ್ದಾರೆ ಎಂದ ಕುಮಾರಸ್ವಾಮಿ, 14 ಸೈಟ್ ಕೇಸ್ ಕಥೆ ಒಂದಾದರೆ ಮತ್ತೊಂದು ಹಳೆಯ ಕೇಸ್ ಇದೆ. ಆ ಪ್ರಕರಣ ಕುತ್ತಿಗೆಗೆ ಬಂದಾಗ 1 ಕೋಟಿ ರೂ.ಗೆ ಮಾರಾಟ ಮಾಡಿಕೊಂಡರು. ಚುನಾವಣಾ ಸಾಲಕ್ಕಾಗಿ ಅದನ್ನು ಮಾರಾಟ ಮಾಡಲಾಯಿತು ಎಂದು ಕಥೆ ಕಟ್ಟಿದ್ದರಲ್ಲ, ಆ ನಿವೇಶನ ಎಲ್ಲಿಂದ ಬಂದಿತ್ತು? ಸ್ವಲ್ಪ ಹೇಳುವಿರಾ ಎಂದು ಸವಾಲು ಹಾಕಿದರು.
ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು
ಡಿನೋಟಿಫಿಕೇಷನ್ ಮಾಡಿಸಿಕೊಂಡು ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿಯೂ ಸಿದ್ದರಾಮಯ್ಯ ಮೊದಲ ಆರೋಪಿ. ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಾಕಿ ರಿಲೀಫ್ ಪಡೆದುಕೊಂಡರು. ಅದು 14 ಸೈಟ್ ಗಿಂತ ದೊಡ್ಡ ಹಗರಣ. ಊರಿಗೆ ಬುದ್ದಿ ಹೇಳೂರು ಇಲ್ಲಿ ಏನೇನು ಮಾಡಿದ್ದಿರಿ, ಸತ್ಯ ಹೇಳಿ, ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂದು ಕುಟುಕಿದರು. ಜೈಲಿಗೆ ಕಳಿಸಲು ಯತ್ನ: ಹಿಂದೆ ಸಿದ್ದರಾಮಯ್ಯರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಈಗಿರುವ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ. ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಅಂದರೆ ಅವರು ನನ್ನ ಜೈಲಿಗೆ ಕಳುಹಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್‌ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಜಾಮೀನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಅದಕ್ಕಾಗಿ ಜಾಮೀನು ಪಡೆದಿದ್ದೇನೆ. ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. 80 ಕೋಟಿ ರೂ. ಗುಳುಂ ಮಾಡಿರೋ ಪ್ರಕರಣದಲ್ಲಿ ಏನಾಯಿತು? ಎಸ್‌ಐಟಿ ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದೆ. ನಾನು ಯಾವುದೇ ಅಧಿಕಾರಿಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್‌ಗೆ ಲೀಕ್ ಮಾಡಿರುವ ಹಿನ್ನೆಲೆಯಲ್ಲಿ ನಾನು ಪ್ರಶ್ನೆ ಮಾಡಿದ್ದು ಎಂದು ಅವರು ವಿವರಿಸಿದರು.