ಧರ್ಮಸ್ಥಳದ ಶ್ರೀ ಸಾನ್ನಿಧ್ಯ  ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ 

ವಿಜಯ ದರ್ಪಣ ನ್ಯೂಸ್….

ಧರ್ಮಸ್ಥಳದ ಶ್ರೀ ಸಾನ್ನಿಧ್ಯ  ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ನಿರ್ಮಾಣ ಗೊಂಡಿರುವ ಕ್ಯೂ ಕಾಂಪ್ಲೆಕ್ಸ್ ಕೇವಲ ಕಟ್ಟಡವಲ್ಲ ವೈದ್ಯಕೀಯ ಸೇರಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಶ್ರೀ ಸಾನ್ನಿಧ್ಯ ಎಂಬುದು ಸರ್ವರ ಸಮಾನತೆಯನ್ನು ತೋರಿಸುವ ಬಿಂಬವಾಗಿ ಮೂಡಿಬಂದಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ಭಕ್ತರಿಗೆ ಸುಸಜ್ಜಿತ ಸೌಕರ್ಯವುಳ್ಳ ಸರತಿ ಸಾಲಿನ ವ್ಯವಸ್ಥೆಯ ಶ್ರೀ ಸಾನ್ನಿಧ್ಯ ಸಂಕೀರ್ಣ ಲೋಕಾರ್ಪಣೆ ಮತ್ತು ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಶ್ರೀ ಸಾನ್ನಿಧ್ಯ ದೊಳಗೆ ಆರಾಮದಾಯಕ ಆಸನದ ವ್ಯವಸ್ಥೆ ,ಉಪಹಾರ ,ವೃದ್ಧರು, ಅಂಗವಿಕಲರಿಗೆ, ಮಕ್ಕಳ ಆರೈಕೆ ಕೇಂದ್ರ, ವೈದ್ಯಕೀಯ ನೆರವು ಟಿವಿ ಸಹಿತ ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಿರುವುದು ಧರ್ಮಸ್ಥಳದ ವಿಶೇಷತೆ ಎಂದರು.

ದೇಶವೇ ಮೊದಲ ಆದ್ಯತೆ: ಸಮಾಜ ಏಕೆ ದೃವೀಕರಣ ಆಗುತ್ತಿದೆ .ದೇಶದಲ್ಲಿ ಸಮಗ್ರತೆ ವೈವಿಧ್ಯತೆ ,ಸೌಹಾರ್ದ ಉಳಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಸದ್ಭಾವ ಎಲ್ಲಿಂದ ಬರಬೇಕು. ಭಾರತ ಮಾತೆ ಒಂದೇ ಎಂದಾಗ ಈ ಭಾವನೆ ಬರುತ್ತದೆ .ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಹೇಳಿದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆ ಹತ್ತು ಸಾವಿರ ಆಸನ ವ್ಯವಸ್ಥೆಯುಳ್ಳ ಶ್ರೀ ಸಾನ್ನಿಧ್ಯ ಲೋಕಾರ್ಪಣೆಗೊಂಡಿರುವುದು ಶ್ರೀ ಕ್ಷೇತ್ರಕ್ಕೆ ಹಾಗೂ ಭಕ್ತರಿಗೆ ಸಂತಸ ನೀಡಿದೆ. ದೇವರ ದರ್ಶನಕ್ಕೆ ಭಕ್ತರು ಐದು ಆರು ಘಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ .ಇದಕ್ಕಾಗಿ ಅನೇಕ ಪ್ರಯೋಗಗಳನ್ನು ತಂದವು .ಕೊನೆಗೆ ಶ್ರೀ ಸಾನ್ನಿಧ್ಯದ ಮೂಲಕ ಪ್ರತ್ಯೇಕ ಕ್ಯೂ ಕಾಂಪ್ಲೆಕ್ಸ್ ರಚಿಸಲಾಗಿದೆ. ಭಕ್ತರಿಗೆ ದೇವಸ್ಥಾನದ ಸುತ್ತ 600 ಮೀಟರ್ ಮಾತ್ರ ನಡೆಯಲು ಸಿಗುತ್ತದೆ. ಜೊತೆಗೆ ಹಳೆಯ ಕ್ಯೂ ಕಾಂಪ್ಲೆಕ್ಸ್ ಅನ್ನು ಬಳಸಿಕೊಳ್ಳಲಿದ್ದೇವೆ ಎಂದರು.

ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ: ಗ್ರಾಮೀಣ ಭಾರತ ನಿಜವಾದ ಭಾರತವಾಗಿದ್ದು, ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಾನಾ ಕಾರಣಗಳಿಂದ ಹಿಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರು, ಮೂಲ ಸೌಕರ್ಯ, ಆಟದ ಮೈದಾನ, ಶೌಚ ಗೃಹ ಮತ್ತು ಇತರ ಸೌಲಭ್ಯಗಳ ಕೊರತೆ ಇರುವುದನ್ನ ಗಮನಿಸಿ ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣ ಬಲಪಡಿಸಲು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಹೇಳಿದರು

ಶೈಕ್ಷಣಿಕ ಸಾಧಕರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸುಜ್ಞಾನ ನಿಧಿ ನೀಡಿ ಗೌರವಿಸಿದರು. ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆ ಹೇಮಾವತಿ ವೀರೇಂದ್ರ ಹೆಗಡೆ. ಡಾ. ಸುರೇಶ್ ಧನಕರ್ ಉಪಸ್ಥಿತರಿದ್ದರು