ಗಣತಿ…

ವಿಜಯ ದರ್ಪಣ ನ್ಯೂಸ್…

ಗಣತಿ…

ಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು, ವಿಷಯ ಕಲೆ ಹಾಕುವುದು ಮುಂತಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಇದೀಗ ಜನಗಣತಿ, ಜಾತಿಗಣತಿ, ಉಪಜಾತಿ ಗಣತಿ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ, ಆರ್ಥಿಕ ಮತ್ತು ಲಿಂಗ ಗಣತಿ ಮುಂತಾದ ಗಣತಿಗಳ ಸರಣಿ ಪ್ರಾರಂಭವಾಗಿದೆ. ಇದು ಮೊದಲಿನಿಂದಲೂ ನಡೆದುಕೊಂಡೆ ಬಂದಿರುವುದು ಆದರೆ ಈಗ ಹೆಚ್ಚಾಗಿ ಚಲಾವಣೆಯಲ್ಲಿದೆ. ಕೆಲವು ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿಗಾಗಿ ಜನಗಣತಿಯು ಅನಿವಾರ್ಯ ಸಹ. ಸರ್ಕಾರ ಎಲ್ಲಾ ರೀತಿಯ ಕ್ರಮಬದ್ಧ ಮತ್ತು ನ್ಯಾಯಯುತ ಆಡಳಿತ ವ್ಯವಸ್ಥೆಗಾಗಿ ಗಣತಿ ಮಾಡಿಸಿ, ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಆ ಮೂಲಕ ಯೋಜನೆ ರೂಪಿಸಲು ಗಣತಿ ಅತ್ಯಾವಶ್ಯಕ.

ಸ್ವಾತಂತ್ರ್ಯ ನಂತರದಲ್ಲಿ ಅನೇಕ ರೀತಿಯ ಗಣತಿಗಳು ನಡೆದಿದೆ. ಆಗೆಲ್ಲಾ ಜನಸಂಖ್ಯೆ ತುಂಬಾ ಕಡಿಮೆ ಇತ್ತು. ಇರುವ ಕೆಲವು ಸರ್ಕಾರಿ ಅಧಿಕಾರಿಗಳನ್ನೇ ಸಂಪನ್ಮೂಲಗಳನ್ನಾಗಿ ಉಪಯೋಗಿಸಿಕೊಂಡು ಗಣತಿ ಮಾಡಲಾಗುತ್ತಿತ್ತು. ಹೆಚ್ಚು ಕಡಿಮೆ ಶೇಕಡಾ 70 ರಿಂದ 90 ರಷ್ಟು ಖಚಿತವಾಗಿರುತ್ತಿತ್ತು. ಆದರೆ ಇಂದು ಜನಸಂಖ್ಯೆ ತುಂಬಾ ತುಂಬಾ ಹೆಚ್ಚಾಗಿದೆ. ತಾಂತ್ರಿಕತೆ ಅಷ್ಟೇ ವೇಗದಲ್ಲಿ ಅಭಿವೃದ್ಧಿ ಹೊಂದಿದ್ದರೂ, ಸಂಪರ್ಕ ಮತ್ತು ಸಂವಹನ ಈ ವಿಷಯದಲ್ಲಿ ಸಾಧ್ಯವಾಗುತ್ತಿಲ್ಲ. ನಿಖರತೆ ಮೂಡುತ್ತಿಲ್ಲ.

ಹಿಂದೆಲ್ಲಾ ಇಡೀ ಊರಿನ, ಬೀದಿಯ ಜನರ ಬಗ್ಗೆ ಸ್ಥಳೀಯರೆಲ್ಲರಿಗೂ ಮಾಹಿತಿ ಇರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಪಕ್ಕದ ಮನೆಯವರ ಬಗ್ಗೆ ಸಹ ನಮಗೆ ಮಾಹಿತಿ ಇರುವುದಿಲ್ಲ ಮತ್ತು ಇತ್ತೀಚಿನ ವರ್ಷಗಳಲ್ಲಿ ಅಪಾರವಾದ ವಲಸೆ ಪ್ರಾರಂಭವಾಗಿ ಯಾರು, ಎಲ್ಲಿ, ಯಾವಾಗ, ಹೇಗೆ ವಾಸಿಸುತ್ತಾರೋ, ಯಾವಾಗ ಅಲ್ಲಿಂದ ಬೇರೆ ಕಡೆ ಹೋಗುತ್ತಾರೋ ಗೊತ್ತೇ ಆಗುವುದಿಲ್ಲ. ಅದರ ಪರಿಣಾಮವೇ ಮತದಾರರ ಪಟ್ಟಿಯೇ ಆಗಿರಲಿ, ಆಹಾರ ಮತ್ತು ನಾಗರಿಕ ಸರಬರಾಜು ಪಡಿತರ ಚೀಟಿಯೇ ಇರಲಿ ಎರಡೆರಡು ಕಡೆ ದಾಖಲಾಗುತ್ತದೆ‌. ನಂತರದಲ್ಲಿ ಬಯೋಮೆಟ್ರಿಕ್ ಮಾಡಿ ಅದನ್ನು ಸಹ ಕಡಿಮೆ ಮಾಡು ಪ್ರಯತ್ನಗಳು ಆಗುತ್ತಿದೆ.

ಗಣತಿಯನ್ನು ಹೇಗೆ ವೈಜ್ಞಾನಿಕವಾಗಿ, ನಿಖರವಾಗಿ, ಸರಳವಾಗಿ, ಸುಲಭವಾಗಿ ಮಾಡಬಹುದು ಎನ್ನುವ ಅನೇಕ ರೀತಿಯ ಚಿಂತನೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಮ್ಮದೊಂದಿಷ್ಟು ಸಲಹೆಗಳು…….

1) ಗಣತಿ ಮಾಡಬೇಕಾದ ವಿಷಯಗಳನ್ನು ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ, ಸರಳವಾಗಿ ಸಾಮಾನ್ಯ ಜನರು ಉತ್ತರಿಸಲು ಸುಲಭವಾಗುವಂತೆ, ಗಣತಿದಾರರು ದಾಖಲು ಮಾಡಿಕೊಳ್ಳಲು ಅನುಕೂಲವಾಗುವಂತೆ ಕ್ರಮಬದ್ಧ ಮಾನದಂಡ ನಿಗದಿಪಡಿಸಿ ಅದನ್ನು ಪಟ್ಟಿ ಮಾಡಿಕೊಳ್ಳಬೇಕು. ಏಕೆಂದರೆ ಬಹಳಷ್ಟು ಗಣತಿಗಳಲ್ಲಿ ಇಲ್ಲಿಯೇ ಎಡವಿರುವುದು ಕಂಡುಬರುತ್ತದೆ.

2) ಗಣತಿಗೆ ಬೇಕಾದ ಸಿಬ್ಬಂದಿಗಳ ಆಯ್ಕೆಯಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕು. ಅವಶ್ಯವಿರುವ ಸಿಬ್ಬಂದಿಯನ್ನು ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲ, ಖಾಸಗಿ ವಲಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವಲಯ ಹಾಗೂ ಅನೇಕ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಪಡೆಯಲೇಬೇಕು. ಏಕೆಂದರೆ ಸರ್ಕಾರಿ ಅಧಿಕಾರಿಗಳನ್ನೇ ಅವಲಂಬಿಸಿದರೆ ಸರ್ಕಾರದ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರ ಕೆಲಸಗಳು ಆಗುವುದಿಲ್ಲ.

3) ಗಣತಿ ಸಿಬ್ಬಂದಿಗೆ ಕನಿಷ್ಠವೆಂದರು ಎರಡು ತಿಂಗಳ ತರಬೇತಿಯನ್ನು ನೀಡಬೇಕು. ಆ ಬಗ್ಗೆ ಇಲ್ಲಿಯವರೆಗಿನ ಅನುಭವದಲ್ಲಿ ಕಂಡುಕೊಂಡಿರಬಹುದಾದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಮುಖ್ಯವಾಗಿ ನೌಕರರನ್ನು ಗುಲಾಮರಂತೆ ದುಡಿಸಿಕೊಳ್ಳದೆ ಅವರ ಇತರ ಸಮಸ್ಯೆಗಳನ್ನು ಆಲಿಸಿ ಗಣತಿಯ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಕೆಲಸ ಮಾಡಿಸಬೇಕು. ಏಕೆಂದರೆ ನಿಜವಾದ ಗಣತಿ ದಾಖಲು ಮಾಡುವವರು ಇವರೇ. ಅವರ ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಇಡೀ ಕೆಲಸದ ಕೇಂದ್ರ ಬಿಂದು.

4) ಅತ್ಯಂತ ಮುಖ್ಯವಾದದ್ದು ಏನೆಂದರೆ, ಗಣತಿ ಮಾಡುವ ವಿಧಾನ ಮತ್ತು ಮನೆ ಮನೆಗೆ ತಲುಪುವ ಕಾರ್ಯತಂತ್ರ. ಅದು ಹೇಗಿರಬೇಕೆಂದರೆ ಕೆಲವು ವರ್ಷಗಳ ಹಿಂದೆ ತೆಲಂಗಾಣ ಸರ್ಕಾರ ಈ ಕ್ರಮ ಕೈಗೊಂಡು ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಅಂದರೆ ಎಲ್ಲಾ ಪೂರ್ವ ತಯಾರಿಯ ನಂತರ ರಾಜ್ಯವನ್ನು ಒಂದು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುವುದು. ಕೋವಿಡ್ ನಂತರ ಲಾಕ್ ಡೌನ್ ಬಗ್ಗೆ ಜನರಿಗೆ ಮಾಹಿತಿ ಇದೆ. ಮೊದಲೇ ಒಂದು ದಿನಾಂಕ ನಿಗದಿಪಡಿಸಿ ತೀರಾ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಬೇಕು. ಆಗ ಬಹುತೇಕ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಯಾವುದೇ ಚಟುವಟಿಕೆ ಇರುವುದಿಲ್ಲ. ಅಂತಹ ದಿನ ತರಬೇತಿ ಹೊಂದಿದ ಗಣತಿದಾರರು ಎಲ್ಲ ಕಡೆ ಹೋಗಿ ತಮಗೆ ಬೇಕಾದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಿ ಬರಬಹುದು.

ಒಂದು ವೇಳೆ ಆ ಭಾನುವಾರ ಸಾಧ್ಯವಾಗದಿದ್ದರೆ ಅದನ್ನು ಮುಂದಿನ ಭಾನುವಾರಕ್ಕೆ ವರ್ಗಾಯಿಸಿ, ಆಗಲೂ ಸಂಪೂರ್ಣ ಲಾಕ್ ಡೌನ್ ಮಾಡಿ ಗಣತಿ ಮಾಡಬಹುದು. ಹೀಗಾದಲ್ಲಿ ಹೆಚ್ಚು ನಿಖರತೆಯು ಸಿಗುತ್ತದೆ, ಸಮಯವೂ ವ್ಯರ್ಥವಾಗುವುದಿಲ್ಲ. ಜನರ ಅನುಕೂಲಕ್ಕಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಈ ಗಣತಿ ನಡೆಯುವುದರಿಂದ ಎರಡು, ಮೂರು ದಿನದ ಲಾಕ್ ಡೌನ್ ಮಾಡುವುದರಿಂದ ಅಂತಹ ದೊಡ್ಡ ದುಷ್ಪರಿಣಾಮ ಬೀರುವುದಿಲ್ಲ.

5) ಖಾಸಗಿ ಮಾಹಿತಿಗಳನ್ನು ಹೊರತುಪಡಿಸಿ ಉಳಿದ ಅಂಕಿ ಅಂಶಗಳನ್ನು ಹೆಚ್ಚು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಆಗ ಯಾವುದೇ ಜಾತಿ, ಜನಾಂಗ, ಸಮುದಾಯ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇರುವುದಿಲ್ಲ.

ಹೀಗೆ ಅನೇಕ ರೀತಿಯ ವಿಧಾನಗಳು ಇವೆ. ಆದರೆ ಕೇವಲ ಶಿಕ್ಷಕರು ಅಥವಾ ಸರ್ಕಾರಿ ಅಧಿಕಾರಿಗಳ ಕೊರತೆ ಕಾಡುವ ಸಮಯದಲ್ಲಿ ಅವರಿಗೆ ಈ ಕೆಲಸವನ್ನು ಸಹ ಮತ್ತೆ ಹೆಚ್ಚಾಗಿ ವಹಿಸಿದರೆ ದಿನನಿತ್ಯದ ಕಾರ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈಗಿನಂತೆ ಎರಡು ಮೂರು ತಿಂಗಳ ಕಾಲ ಜನಗಣತಿ ಕಾರ್ಯವನ್ನೇ ನಿರ್ವಹಿಸಿದರೆ ಆಡಳಿತ ವ್ಯವಸ್ಥೆ ಶಿಥಿಲವಾಗುತ್ತದೆ, ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುವ ಸಾಧ್ಯತೆ ಇದೆ. ಅವರಿಗೆ ದಿನ ಭತ್ಯೆ ನೀಡಿದರೆ ಸಾಕಾಗಬಹುದು.

ಇದೇ ರೀತಿ ಇನ್ನೂ ಕೆಲವು ಸರಳ ವಿಧಾನಗಳನ್ನು ಹುಡುಕಿಕೊಂಡು ಕ್ರಮಬದ್ಧಗೊಳಿಸಿದರೆ ಮುಂದೆ ಇದೇ ಮಾರ್ಗಗಳನ್ನು ಅನುಸರಿಸುತ್ತಾ, ಯಾವುದೇ ರೀತಿಯ ಗಣತಿಯನ್ನು ಸುಲಭವಾಗಿ ಮಾಡಬಹುದು. ಮುಖ್ಯವಾಗಿ ಕೃಷಿ ಮತ್ತು ಆಹಾರ ಪದಾರ್ಥಗಳ ಉಪಯೋಗದ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಿದರೆ ಭವಿಷ್ಯದಲ್ಲಿ ಬೆಲೆ ನಿಯಂತ್ರಣ, ಆಹಾರ ವಸ್ತುಗಳ ಮಾರಾಟದಲ್ಲಿ ನಿಯಂತ್ರಣ, ಅದರ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಂತರ ಕಡಿಮೆ ಮಾಡುವುದು, ದಿವ್ಯಾಂಗ ಚೇತನರ ಅನುಕೂಲಕ್ಕಾಗಿ ಯೋಜನೆ ರೂಪಿಸುವುದು, ಬಾಲಕಾರ್ಮಿಕರ ನಿರ್ಮೂಲನೆಗೆ ಕ್ರಮ ಕೈಗೊಳ್ಳುವುದು ಮುಂತಾದ ನಾನಾ ರೀತಿಯ ಯೋಜನೆಗಳ ಅನುಷ್ಠಾನದಲ್ಲಿ ಗಣತಿ ಉಪಯೋಗಕ್ಕೆ ಬರುತ್ತದೆ.

ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ದತ್ತಾಂಶ ಸಂಗ್ರಹ ನಿಖರವಾಗಿದ್ದರೆ ವಿಧಾನಸೌಧದಲ್ಲಿ ಕುಳಿತು ಬೆರಳ ತುದಿಯಲ್ಲಿಯೇ ಎಷ್ಟೋ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆ ನಿಟ್ಟಿನಲ್ಲಿ ಸರ್ಕಾರ ಯೋಚಿಸುವಂತಾಗಲಿ. ಏಕೆಂದರೆ ಅನಾವಶ್ಯಕವಾಗಿ ಗಣತಿಯ ಬಗ್ಗೆ ಗೊಂದಲ ಉಂಟುಮಾಡಿ ಆಡಳಿತ ಯಂತ್ರ ದಾರಿ ತಪ್ಪದಿರಲಿ ಮತ್ತು ಇದರಿಂದಾಗಿ ಅಧಿಕಾರಿಗಳು ನರಕಯಾತನೆ ಅನುಭವಿಸದಿರಲಿ ಎಂಬ ಕಾಳಜಿಯಿಂದ ಮಾತ್ರ ಈ ಸಲಹೆಗಳು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451..Watsapp)
9844013068……