ಭೂಸ್ವಾಧೀನಕ್ಕೆ ಗುರ್ತಿಸಿರುವ ಭೂಮಿಗಳ ವೀಕ್ಷಣೆಗೆ ಬಂದಿದ್ದ ಕೆಐಎಡಿಬಿ ಅಧಿಕಾರಿಗಳಿಗೆ ರೈತರಿಂದ ತೀವ್ರ ವಿರೋಧ

ವಿಜಯ ದರ್ಪಣ ನ್ಯೂಸ್…

ಭೂಸ್ವಾಧೀನಕ್ಕೆ ಗುರ್ತಿಸಿರುವ ಭೂಮಿಗಳ ವೀಕ್ಷಣೆಗೆ ಬಂದಿದ್ದ ಕೆಐಎಡಿಬಿ ಅಧಿಕಾರಿಗಳಿಗೆ ರೈತರಿಂದ ತೀವ್ರ ವಿರೋಧ


ಶಿಡ್ಲಘಟ್ಟ : ನಾವು ಈಗ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಂದಿಲ್ಲ ಕೆಲ ರೈತರು, ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ ಆದ್ದರಿಂದ ನಾನೇ ಖುದ್ದಾಗಿ ಬಂದು, ರೈತರ ಭೂಮಿಗಳಲ್ಲಿ ಏನೇನು ಬೆಳೆ ಬೆಳೆದಿದ್ದೀರಿ ಎಂದು ಕಣ್ಣಾರೆ ನೋಡಿ, ವರದಿ ಸಲ್ಲಿಸಬೇಕಾಗಿದೆ.ಆದ್ದರಿಂದ ಬಂದಿದ್ದೇವೆ ಎಂದು ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಹೇಳಿದರು.

ನಾನು ಕೆಐಎಡಿಬಿ ಕಚೇರಿಯಲ್ಲಿ ಕುಳಿತು ವರದಿ ಮಾಡಲು ಸಾಧ್ಯವಿಲ್ಲ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯಲ್ಲಿ ಏನೇನು ಬೆಳೆ ಬೆಳೆದಿದ್ದಾರೆ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಯಾವ ರೈತರು, ಭೂಮಿಯನ್ನು ಕೊಡುವುದಕ್ಕೆ ಇಷ್ಟವಿದೆಯೋ ಅಂತಹವರ ಭೂಮಿಯನ್ನಷ್ಟೇ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ ,ರೈತರ ಒಪ್ಪಿಗೆ ಇಲ್ಲದೆ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಈ ವೇಳೆ ಕೆರಳಿದ ರೈತರು, ರೈತರ ಭೂಮಿಯಲ್ಲಿ ಏನೇನು ಬೆಳೆ ಬೆಳೆಯುತ್ತಿದ್ದಾರೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಬೇಕಾದರೆ, ಕಂದಾಯ ಇಲಾಖೆಯವರು ಪ್ರತಿಯೊಂದು ಪಹಣಿಯಲ್ಲೂ ಬೆಳೆ ನಮೂದು ಮಾಡಿರುತ್ತಾರೆ ಅವರಿಂದ ಮಾಹಿತಿ ತರಿಸಿಕೊಳ್ಳಿ ಅದನ್ನು ಬಿಟ್ಟು, ರೈತರು, ಹೊಲಗಳಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆಗಳು ಮಾಡಿಕೊಳ್ಳುವ ಸಮಯದಲ್ಲಿ ಈ ರೀತಿಯಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ೧೩ ಹಳ್ಳಿಗಳ ೨೮೨೩ ಎಕರೆ ಪ್ರದೇಶವನ್ನು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆಯಲ್ಲಿ, ರೈತರ ತೀವ್ರ ವಿರೋಧದ ನಡುವೆಯೂ ಪೊಲೀಸರ ಸರ್ಪಗಾವಲಿನಲ್ಲಿ, ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಅವರು ದೇವಗಾನಹಳ್ಳಿ, ಗೊಲ್ಲಹಳ್ಳಿ, ಕೊಲುಮೆ ಹೊಸೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ ಯಣ್ಣಂಗೂರು, ಅರಿಕೆರೆ, ಸಂಜೀವಪುರ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳಿಗೆ ಪೊಲೀಸ್ ಸರ್ಪಗಾವಲಿನಲ್ಲಿ ತೆರಳಿ, ರೈತರ ಭೂಮಿಗಳನ್ನು ವೀಕ್ಷಣೆ ಮಾಡಿದರು.

ಬಸವಾಪಟ್ಟಣದಲ್ಲಿ ರೈತರ ಜಮೀನುಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಸಮಯದಲ್ಲಿ,ರೈತರು ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಕೊಡುವುದಿಲ್ಲ ಯಾರು ನಿಮಗೆ ಭೂಮಿ ಕೊಡುವುದಾಗಿ ಹೇಳಿದ್ದಾರೋ ಅವರ ಭೂಮಿಗಳಿಗೆ ಹೋಗಿ ವೀಕ್ಷಣೆ ಮಾಡಿಕೊಳ್ಳಿ, ರೈತರ ಅನುಮತಿಯಿಲ್ಲದೆ, ರೈತರ ಭೂಮಿಯ ಬಳಿಗೆ ಬರುವುದಕ್ಕೆ ನಿಮಗೇನು ಅಧಿಕಾರವಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಯಲ್ಲೆ ಪ್ರತಿಭಟನೆ : ಯಣ್ಣಂಗೂರು ಗ್ರಾಮದ ರೈತರ ಜಮೀನುಗಳ ವೀಕ್ಷಣೆಗಾಗಿ ಬಂದು ಅಧಿಕಾರಿಗಳ ತಂಡವನ್ನು ಊರೊಳಗೆ ಬಿಡುವುದಿಲ್ಲವೆಂದು ರೈತರು ಊರ ಬಾಗಿಲಿನಲ್ಲೆ ಅಡ್ಡಗಟ್ಟಿ, ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು. ಪೊಲೀಸರು, ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ರೈತರು ಕೇಳಲಿಲ್ಲ, ಮತ್ತೊಂದು ಕಡೆಯಲ್ಲಿ ನಾವು ಭೂಮಿ ಕೊಡ್ತೇವೆ. ಕಡ್ಡಾಯವಾಗಿ ಸ್ಥಳ ಪರಿಶೀಲನೆಯಾಗಬೇಕು ,ಸ್ಥಳ ಪರಿಶೀಲನೆಯಾಗದೆ ನಾವೂ ಇಲ್ಲಿಂದ ಕದಲುವುದಿಲ್ಲವೆಂದು ಕೆಲವರು ಪಟ್ಟು ಹಿಡಿದು ರಸ್ತೆಯಲ್ಲೆ ಘೋಷಣೆಗಳು ಕೂಗಿದರು, ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಸರ್ಕಲ್ ಇನ್ ಸ್ಪೆಕ್ಟರ್ ಎಂ.ಶ್ರೀನಿವಾಸ್ ಅವರು, ಕೆಐಎಡಿಬಿ ಅಧಿಕಾರಿಗಳನ್ನು ರೈತರ ಪಕ್ಕದಿಂದಲೇ ಕರೆದುಕೊಂಡು ರೈತರ ಜಮೀನುಗಳ ಬಳಿಯ ಹೋದರು ಕೆಲ ಮಹಿಳೆಯರು, ಓಡಿ ಬಂದು ನಮ್ಮೂರಿನ ಒಳಗೆ ನೀವು ಬರಬೇಡಿ ಎಂದು ಅಡ್ಡಿಪಡಿಸಲು ಮುಂದಾದರೂ ಮಹಿಳಾ ಪೊಲೀಸರು ಅವರನ್ನು ತಡೆದರು.

ಕೈ-ಕೈ ಮೀಲಾಯಿಸುವ ಹಂತಕ್ಕೆ ಹೋದ ರೈತರು:
ಬಸವಾಪಟ್ಟಣದಲ್ಲಿ, ವೀಕ್ಷಣೆ ಮಾಡುವ ಸಮಯದಲ್ಲಿ, ನಾವು ಭೂಮಿ ಕೊಡಲು ಸಿದ್ಧರಿದ್ದೇವೆ. ನಮ್ಮ ಭೂಮಿ ಖರೀದಿಸಿ, ನಮಗೆ ಸೂಕ್ತ ಬೆಲೆ ಕೊಡಿ ಎಂದು ಒಂದು ಗುಂಪಿನ ರೈತರು ಹೇಳುತ್ತಿದ್ದಂತೆ, ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ನಡುವೆ ಮಾತಿನಚಕಮಕಿ ಆರಂಭವಾಯಿತು, ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ,ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಅಧಿಕಾರಿಗಳ ತಂಡವನ್ನು ವಾಹನಗಳಿಗೆ ಹತ್ತಿಸಿ, ರೈತರನ್ನು ತಡೆದು, ಗಲಾಟೆಯಾಗದಂತೆ ನೋಡಿಕೊಂಡರು.

ಹರಿಶಿಲ್ಪಾ, ವಿಶೇಷ ಭೂಸ್ವಾಧೀನಾಧಿಕಾರಿ ರೈತರ ತೋಟಗಳಲ್ಲಿ ಏನೇನು ಬೆಳೆ ಬೆಳೆದಿದ್ದಾರೆ ,ಇವೆಲ್ಲಾ ಫಲವತ್ತಾದ ನೀರಾವರಿ ಭೂಮಿ ಹೌದೋ ಅಲ್ಲವೋ ಎನ್ನುವ ಮಾಹಿತಿಗಾಗಿ ಮಾತ್ರವೇ ಬಂದಿದ್ದೇವೆ ಯಾವೊಬ್ಬ ರೈತರ ಜಮೀನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಯಾವ ರೈತರೂ ಗಾಬರಿಯಾಗಬಾರದು ರೈತರೇ ಕೊಡಲು ಮುಂದೆ ಬಂದರೆ ಮಾತ್ರವೇ ಸ್ವಾಧೀನಪಡಿಸಿಕೊಳ್ಳಲಾಗುವುದು.