ದೇಶದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳು ಬೆನ್ನೆಲುಬು:ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…..

ದೇಶದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳು ಬೆನ್ನೆಲುಬು:ಸಚಿವ ಕೆ.ಹೆಚ್ ಮುನಿಯಪ್ಪ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜುಲೈ, 29: ದೇಶಕ್ಕೆ ಅನ್ನದಾತರು ಬೆನ್ನೆಲುಬಾದರೆ ದೇಶದ ಆರ್ಥಿಕ ಅಭಿವೃದ್ಧಿಗೆ ಕೈಗಾರಿಕೆಗಳು ಬೆನ್ನೆಲುಬು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಎಂ.ಎಸ್.ಎಂ.ಇ ಪ್ರಗತಿ ವೇಗವರ್ಧನೆ ಯೋಜನೆ ಅಡಿಯಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ತಂತ್ರಜ್ಞಾನ ಚಿಕಿತ್ಸಾಲಯ – ಏರೋಸ್ಪೇಸ್ ಕ್ಲಸ್ಟರ್ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು

ನಮ್ಮ ದೇಶದಲ್ಲಿ ಕೈಗಾರಿಕೀಕರಣದಿಂದ ದೇಶದ ಆರ್ಥಿಕ ಅಭಿವೃದ್ಧಿ ಆಗುತ್ತಿದೆ. ಅದೇ ರೀತಿ ಜನರ ತಲಾದಾಯ ಹೆಚ್ಚುತ್ತಿದೆ. ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಇಡೀ ದೇಶದಾದ್ಯಂತ ಸುಮಾರು 20 ಟೆಕ್ನಾಲಜಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದೆ, ಹತ್ತನೇ ತರಗತಿ ಉತ್ತೀರ್ಣರಾದವರಿಂದ ಉನ್ನತ ಶಿಕ್ಷಣ ಪಡೆದವರಿಗೆ ಅವರ ಶೈಕ್ಷಣಿಕ ಮಟ್ಟದ ಆಧಾರದ ಮೇಲೆ ಅಥವಾ ಅವರಿಗೆ ಅನುಕೂಲವಾಗುವ ತರಬೇತಿಯನ್ನು ನೀಡಲಾಗುತ್ತಿತ್ತು. ಅದರಲ್ಲಿ ಸುಮಾರು ಶೇ.85% ಅಭ್ಯರ್ಥಿಗಳಿಗೆ ಕೆಲಸ ದೊರೆತಿದೆ.

ಇಂಡಿಯನ್ ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ನಮ್ಮ ದೇಶವು ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಈ ರೀತಿಯ ಕಾರ್ಯಗಾರವಾಗಲಿ ಅಥವಾ ನಮ್ಮ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸಹ ಬಳಸಿಕೊಳ್ಳಬೇಕು, ಅದರಲ್ಲೂ ಯುವಕರ ಭವಿಷ್ಯ ಉಜ್ವಲವಾಗಲು ನಾವು ಸದಾ ಶ್ರಮಿಸುತ್ತೇವೆ ಎಂದರು.

ಕೈಗಾರಿಕಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಗೆ ತಿಳಿಸಿ ಪರಿಹರಿಸಲಾಗುವುದು. ಕೈಗಾರಿಕಾ ಕೇಂದ್ರಗಳು ಅಭಿವೃದ್ಧಿ ಆದರೆ ದೇಶದ ಆರ್ಥಿಕ ಪರಿಸ್ಥಿತಿ ಬೆಳೆಯುತ್ತದೆ. ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳನ್ನು ಅಥವಾ ನೇರವಾಗಿ ನನ್ನನು ಸಂಪರ್ಕಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಹೆಚ್ಚು ಅಭಿವೃದ್ಧಿ ಆಗುತ್ತಿದೆ. ಮುಂದಿನ 20 ವರ್ಷಗಳವರೆಗೆ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಪೂರೈಕೆ ಆಗಬೇಕಿದೆ. ಹೀಗಾಗಿ ಮುಂದಿನ ಯೋಜನೆಗೆ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಮಾತನಾಡಿ, ಕರ್ನಾಟಕದಲ್ಲಿ ಕೈಗಾರಿಕೆಗಳು ಹೆಚ್ಚಿನ ಮಟ್ಟದಲ್ಲಿ ಬೆಳೆದು ನಿಂತಿವೆ ಇದರ ಜೊತೆಯಲ್ಲಿ ಸಣ್ಣ ಉದ್ದಿಮೆಗಳು ಹೆಚ್ಚು ಬೆಳೆದು ಉದ್ಯೋಗಗಳು ಹೆಚ್ಚಾಗಲಿ, ಉದ್ಯೋಗಗಳನ್ನು ಸೃಷ್ಟಿ ಮಾಡುವ ಉದ್ಯಮಗಳ ಉತ್ತೇಜನ ನೀಡುವುದರ ಮೂಲಕ ನಿರುದ್ಯೋಗ ನಿವಾರಣೆಗೆ ಉತ್ತೇಜಿಸುತ್ತದೆ. ಸಣ್ಣ ಉದ್ದಮೆ ಮತ್ತು ಕೈಗಾರಿಕೆಗಳಲ್ಲಿ ತೊಂದರೆಯಾದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಲು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾ. ಯೋ. ಅ. ಪ್ರಾ. ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ನಾರಾಯಣ ಸ್ವಾಮಿ, ವಿಶ್ವನಾಥಪುರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ವೆಂಕಟಮ್ಮ, ಉಪಾಧ್ಯಕ್ಷಕರು ಮಂಗಳಮ್ಮ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನರೇಂದ್ರ ಬಾಬು ಎನ್, ಉಪನಿರ್ದೇಶಕಿ ಪುಷ್ಪಲತಾ, ದಾಬಸ್ ಪೇಟೆ ಕೈಗಾರಿಕ ಸಂಘದ ಅಧ್ಯಕ್ಷರು ಎಸ್.ಕಂಟಪ್ಪ, ಸ್ಥಳೀಯ ಮುಖಂಡರು ಹಾಗೂ ಕೈಗಾರಿಕಾ ಉದ್ಯಮಿಗಳು ಉಪಸ್ಥಿತರಿದ್ದರು.