ಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ……..
ವಿಜಯ ದರ್ಪಣ ನ್ಯೂಸ್…..
ಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ……..
ಕೆಲವು ಸಾಮಾನ್ಯ ಉದಾಹರಣೆಗಳು……..
ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ.
ಹಾಗಾದರೆ ಈ ದುಂದು ವೆಚ್ಚ ಹೇಗಾಗುತ್ತದೆ…….
ಮೊದಲನೆಯ ಅತಿಹೆಚ್ಚು ದುಂದು ವೆಚ್ಚ ಸರ್ಕಾರಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ನಮ್ಮ ತೆರಿಗೆಯ ಹಣ ಪೋಲಾಗುತ್ತದೆ.
ಸರ್ಕಾರದ ವತಿಯಿಂದ ಆಗುವ ಯಾವುದೇ ಹೊಸ ಕಟ್ಟಡ, ರಸ್ತೆ, ಭವನ, ಯೋಜನೆ, ಕಾರ್ಯಾಲಯ, ಉದ್ಘಾಟನಾ ಸಭೆ ಸಮಾರಂಭಗಳು ಅದು ಸರ್ಕಾರದ ಕರ್ತವ್ಯದ ಒಂದು ಭಾಗವಾಗಿದ್ದರೂ, ಅದನ್ನು ಸ್ಥಳೀಯವಾಗಿ ಒಂದು ಸಣ್ಣ ಹಣದಲ್ಲಿ ಅವಶ್ಯಕತೆ ಇದ್ದಲ್ಲಿ ಪೂಜೆ ಮಾಡಿ ಮುಗಿಸಬಹುದು. ಆದರೆ ಅದಕ್ಕಾಗಿ ಸರ್ಕಾರ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತದೆ.
ಸರ್ಕಾರದಲ್ಲಿ ಇರುವ ಎಲ್ಲಾ ಇಲಾಖೆಗಳು, ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು, ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಈ ರೀತಿಯ ಅನಾವಶ್ಯಕ ಅದ್ದೂರಿ ಪ್ರಚಾರ ಪ್ರಿಯ ಕಾರ್ಯಕ್ರಮಗಳಿಗೆ ಖಜಾನೆಯ ತೆರಿಗೆ ಹಣ ಖರ್ಚಾದರೆ ಎಷ್ಟಾಗಬಹುದು ಊಹಿಸಿ.
ಕಾರ್ಯಕ್ರಮದ ಗಾತ್ರಕ್ಕೆ ಅನುಗುಣವಾಗಿ ಸಾರಿಗೆ, ಪೆಂಡಾಲ್, ಕುರ್ಚಿ, ಧ್ವನಿವರ್ಧಕ, ಅಲಂಕಾರ, ಊಟ, ಜಾಹೀರಾತು ಫಲಕ ಹೀಗೆ ಎಲ್ಲವೂ ಕೇವಲ ಒಂದು ಸರ್ಕಾರದ ಯೋಜನೆಯ ಶಂಕುಸ್ಥಾಪನೆ ಅಥವಾ ಉದ್ಘಾಟನೆಗೆ ಖರ್ಚಾಗುತ್ತದೆ. ವಾಸ್ತವದಲ್ಲಿ ಕೇವಲ ಒಂದು ಸಾವಿರ ರೂಪಾಯಿಯಲ್ಲಿ ಒಂದು ಕಡ್ಡಿ, ಕರ್ಪೂರ, ಹೂವು ಉಪಯೋಗಿಸಿ ಕಾರ್ಯಕ್ರಮ ಮುಗಿಸಬಹುದು.
ಹಾಗೆಯೇ ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಕೃಷ್ಣ, ತುಂಗೆ, ಕಾವೇರಿ, ಹೇಮಾವತಿ, ಭೀಮಾ ಹೀಗೆ ಅನೇಕ ನದಿಗಳು – ಜಲಾಶಯಗಳು ತುಂಬಿದಾಗ ಮುಖ್ಯಮಂತ್ರಿಗಳು ಅಥವಾ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಬಹಳಷ್ಟು ವೇಳೆ ಹೆಲಿಕಾಪ್ಟರ್ ನಲ್ಲಿ ತೆರಳಿ, ಇಡೀ ಆಡಳಿತ ಯಂತ್ರ ಅಲ್ಲಿ ಹಾಜರಿರುವಂತೆ ಮಾಡಿ ಬಾಗಿನ ನೀಡಲು ಲಕ್ಷಾಂತರ ಹಣ ಬೊಕ್ಕಸದಿಂದ ಖರ್ಚು ಮಾಡುತ್ತಾರೆ. ಎಷ್ಟೊಂದು ಮೂರ್ಖತನ ನೋಡಿ. ಕೆರೆ ತುಂಬುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ. ಸ್ಥಳೀಯವಾಗಿ ಅಲ್ಲಿನ ಅಧಿಕಾರಿ ಅಥವಾ ರೈತರು ಬಾಗಿನ ನೀಡಬಹುದಲ್ಲವೇ…..
ಇಷ್ಟೇ ಅಲ್ಲ, ಪ್ರತಿ ಬಾರಿ ಸರ್ಕಾರ ಬದಲಾದಾಗ ಅವಶ್ಯಕತೆ ಇಲ್ಲದಿದ್ದರೂ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸರ್ಕಾರಿ ಮನೆ ಮತ್ತು ಕಚೇರಿಯ ನವೀಕರಣಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಲೋಕೋಪಯೋಗಿ ಇಲಾಖೆ ಖರ್ಚು ಮಾಡುತ್ತದೆ. ಜೊತೆಗೆ ಮಂತ್ರಿಗಳ – ಅಧಿಕಾರಿಗಳ ಸೋಪು, ಟವೆಲ್ಲು, ರೂಂ ಪ್ರೆಶ್ನರ್, ಪರ್ಪ್ಯೂಮ್, ಕಾಫಿ ಟೀ ಒದಗಿಸಲು ತಟ್ಟೆ ಲೋಟಗಳು, ಖುರ್ಚಿಗಳು ಹೀಗೆ ಮತ್ತೆ ಲಕ್ಷಾಂತರ ರೂಪಾಯಿಗಳ ತೆರಿಗೆ ರೂಪದ ಹಣ ಖರ್ಚಾಗುತ್ತದೆ.
ಇತ್ತೀಚೆಗೆ ಇದಕ್ಕೆ ಒಂದು ನಿದರ್ಶನ ಕಣ್ಣಾರೆ ಕಂಡೆ. ಭಾರತದ ರಾಷ್ಟ್ರಪತಿಗಳು ಕರ್ನಾಟಕಕ್ಕೆ ಭೇಟಿ ನೀಡಿದರು. ಆಗ ಬೆಂಗಳೂರಿಗೂ ಆಗಮಿಸಿದ್ದರು. ಅವರನ್ನು ಸ್ವಾಗತ ಮಾಡಲು ಸ್ವತಃ ಮುಖ್ಯಮಂತ್ರಿ ಮತ್ತು ರಾಜ್ಯಪಾಲರೇ ದೌಡಾಯಿಸುತ್ತಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಕ್ಷಾಂತರ ಬೆಲೆ ಬಾಳುವ ಹೂವಿನ ದಳಗಳಲ್ಲಿ ರಾಷ್ಟ್ರಪತಿ ಅವರಿಗೆ ಸ್ವಾಗತ ಎಂದು ಅನೇಕ ಕಡೆ ರಸ್ತೆಯ ಒಂದು ಭಾಗದಲ್ಲಿ ದುಬಾರಿ ಬೆಲೆಯ ಫಲಕ ಹಾಕಿಸಿದ್ದರು. ದೇಶದ ಪ್ರಥಮ ಪ್ರಜೆ ಅವರು. ಇಡೀ ದೇಶವೇ ಅವರ ಅಡಿಯಲ್ಲಿ ಇರುತ್ತದೆ. ಅವರಿಗೆ ಕನ್ನಡವೂ ಬರುವುದಿಲ್ಲ. ಅತ್ಯಂತ ಭದ್ರತೆಯ ಜೊತೆ ಜೋರಾಗಿ ಸಾಗುವ ಅವರಿಗೆ ಸ್ವಾಗತ ಕಮಾನು ಕಾಣುವುದು ಸಹ ಅನುಮಾನ. ಅಲ್ಲದೆ ಅವರು ಖಾಸಗಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವುದಲ್ಲ. ತಮ್ಮ ಅಧಿಕಾರದ ಕರ್ತವ್ಯದ ಭಾಗವಾಗಿ ರಾಜ್ಯದ ಭೇಟಿ ನೀಡುತ್ತಾರೆ. ಅವರಿಗೆ ಕೇವಲ ಸ್ವಾಗತ ಕೋರಲು ಸಾರ್ವಜನಿಕ ತೆರಿಗೆ ಹಣದ ಲಕ್ಷಾಂತರ ಖರ್ಚು. ಇದು ದುಂದು ವೆಚ್ಚ ಅಲ್ಲವೇ….
ಇವು ಕೆಲವು ಉದಾಹರಣೆಗಳು ಮಾತ್ರ. ಪ್ರತಿ ಸರ್ಕಾರಿ ಇಲಾಖೆಯ ಪರ್ಚೇಸ್ ವಿಭಾಗದಲ್ಲಿ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ದುಂದು ವೆಚ್ಚ ನಡೆಯುತ್ತಲೇ ಇರುತ್ತದೆ. ಯಾವುದೇ ಸಾಮಾನ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬೆಲೆ ನಮೂದಿಸುತ್ತಾರೆ. ಅದರ ಜೊತೆ ಭ್ರಷ್ಟಾಚಾರ ಪ್ರತ್ಯೇಕ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಾಜ್ಯದ ಬಜೆಟ್ ಗಾತ್ರ ಸುಮಾರು 4 ಲಕ್ಷ ಕೋಟಿ. ದುಂದು ವೆಚ್ಚ ಸುಮಾರು ಶೇಕಡಾ 20% ಅಂದರೂ 80000 ಕೋಟಿಯಷ್ಟಾಗುತ್ತದೆ.
ಆಸಕ್ತಿದಾಯಕ ವಿಷಯವೆಂದರೆ, ಸರ್ಕಾರದ ಅಬಕಾರಿ ( ಮದ್ಯಪಾನ ) ಆದಾಯ ಪ್ರತಿವರ್ಷ ಸುಮಾರು 40000 ಸಾವಿರ ಕೋಟಿ. ಧೂಮಪಾನ ಬಹುಶಃ 5 ಸಾವಿರ ಕೋಟಿ ಇರಬಹುದು. ಮದ್ಯಪಾನ ಮತ್ತು ಧೂಮಪಾನ ಸಂಪೂರ್ಣ ನಿಷೇಧ ಮಾಡಿದರೆ ಅಂದಾಜು 45000 ಕೋಟಿ ಆದಾಯ ನಷ್ಟವಾಗಬಹುದು. ಸರ್ಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರೆ ಇದು ಒಂದು ದೊಡ್ಡ ಮೊತ್ತವೇ ಅಲ್ಲ. ಜೊತೆಗೆ ಜನರ ಆರೋಗ್ಯ, ಅಪಘಾತ, ಹಿಂಸಾಚಾರ ಗಣನೀಯ ಮಟ್ಟದಲ್ಲಿ ಸುಧಾರಿಸುತ್ತದೆ.
ಅಷ್ಟೇ ಅಲ್ಲ ಎಷ್ಟೋ ವಸ್ತುಗಳ ಬೆಲೆಗಳನ್ನು ಮತ್ತು ತೆರಿಗೆಗಳನ್ನು ಕಡಿಮೆ ಮಾಡಿ ಜನರ ಮೇಲಿನ ಆರ್ಥಿಕ ಒತ್ತಡ ಕಡಿಮೆ ಮಾಡಬಹುದು ಮತ್ತು ಪರೋಕ್ಷವಾಗಿ ಭ್ರಷ್ಟಾಚಾರ ಸಹ ನಿಯಂತ್ರಿಸಬಹುದು. ಇದಕ್ಕಿಂತ ಆಳದಲ್ಲಿ ಇನ್ನೂ ಸಾಕಷ್ಟು ಹಣ ವ್ಯರ್ಥವಾಗುತ್ತದೆ.
ಇದನ್ನು ಉಳಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕಷ್ಟೇ.
ರಾಜಕೀಯ ಪಕ್ಷಗಳಿಗೆ ಸರ್ಕಾರ ಎಂಬುದು ಕೇವಲ ಬಾಡಿಗೆ ಮನೆ ಇದ್ದಂತೆ. ಇರುವಷ್ಟು ದಿನ ಅವರಿಗೆ ಅನುಕೂಲ ಮಾಡಿಕೊಂಡು ಹೋಗುವಾಗ ಕೆಡಿಸಿ ಹೋಗುತ್ತಾರೆ. ಮತ್ತೆ ಇನ್ನೊಬ್ಬರು ಬಾಡಿಗೆಗೆ ಬರುತ್ತಾರೆ. ಮನೆ ಹಾಳಾಗುತ್ತಲೇ ಇರುತ್ತದೆ. ಪ್ರಜೆಗಳೇ ಜಾಗೃತರಾಗಿ ತಮ್ಮ ಸ್ವಂತ ಮನೆಗೆ ತಾವೇ ವಾಸಿಸಲು ಆಯ್ಕೆ ಮಾಡಿಕೊಂಡು ಬರುವವರೆಗೂ………….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068……