ಎಸ್ ಎಲ್ ಭೈರಪ್ಪ…….
ವಿಜಯ ದರ್ಪಣ ನ್ಯೂಸ್….
ಎಸ್ ಎಲ್ ಭೈರಪ್ಪ…….
ಸಾಹಿತ್ಯದ ಕನ್ನಡಿಯಲ್ಲಿ ನೋಡಬೇಕೇ ?
ಪಂಥಗಳ ಪರಿಧಿಯ ಕನ್ನಡಿಯಲ್ಲಿ ನೋಡಬೇಕೇ ?
ಜೀವಪರ ನಿಲುವಿನ ನಾಗರಿಕ ಸಮಾಜದ ಕನ್ನಡಿಯಲ್ಲಿ ನೋಡಬೇಕೇ ?
ಅನಂತದಲ್ಲಿ ದೃಷ್ಟಿ ಹಾಯಿಸಿಬೇಕೇ ?
ವ್ಯಕ್ತಿ ಹೇಗೆ ಬದುಕಬೇಕೆಂಬುವುದು ಆತನ ವೈಯಕ್ತಿಕ ಸ್ವಾತಂತ್ರ್ಯ. ಆ ಸ್ವಾತಂತ್ರ್ಯದ ಮೂಲ ಆ ವ್ಯಕ್ತಿಯ ಗ್ರಹಿಕೆ. ಆ ಗ್ರಹಿಕೆಗೆ ಮೂಲ ಆ ವ್ಯಕ್ತಿಯ ಒಟ್ಟು ಪರಿಸ್ಥಿತಿ ಮತ್ತು ವ್ಯವಸ್ಥೆ ಹಾಗು ಆತ ಬದುಕಿದ್ದ ಕಾಲಮಾನದ ಪ್ರಭಾವ. ಅದು ಆತನ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ನಿರ್ಧರಿಸುತ್ತದೆ.
ಹಾಗೆಯೇ ಭಾರತೀಯ ಸಾರ್ವಜನಿಕ ಜೀವನದಲ್ಲಿ ಅದೇ ವ್ಯಕ್ತಿಯನ್ನು ಕಾನೂನಿನ ವ್ಯಾಪ್ತಿಯಲ್ಲಿ, ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜವಾಬ್ದಾರಿಯೊಂದಿಗೆ ವಿಮರ್ಶಿಸುವ ಸ್ವಾತಂತ್ರ್ಯವೂ ಪ್ರತಿಯೊಬ್ಬ ನಾಗರಿಕರಿಗೂ ಇದೆ.
ಆಧುನಿಕ ಕನ್ನಡ ಸಾಹಿತ್ಯ ಲೋಕದ ಕೆಲವು ದಿಗ್ಗಜರಲ್ಲಿ ಎಸ್ ಎಲ್ ಭೈರಪ್ಪನವರು ಸಹ ಪ್ರಮುಖರು. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮತ್ತು ಕಾರಣಾಂತರಗಳಿಂದ ಪಡೆಯಲಾಗದ ಎಲ್ಲರಷ್ಟೇ ಇವರಿಗೂ ಪ್ರಾಮುಖ್ಯತೆ ಇದೆ. ಇವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಆದರೆ ಅದಕ್ಕೆ ಸಮನಾದ ಸರಸ್ವತಿ ಸಮ್ಮಾನ್, ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಕಾದಂಬರಿ ಸಾಹಿತ್ಯದಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೈರಪ್ಪನವರದು ಜನಪ್ರಿಯ, ಕಲಾತ್ಮಕ ಮತ್ತು ಸಂವೇದನಾಶೀಲ ಹೆಸರಾಗಿತ್ತು. ಕಾದಂಬರಿ ಪ್ರಕಾರದಲ್ಲಿ ಅಂದಿನ ಸಮಾಜದ ರೀತಿ ನೀತಿಗಳನ್ನು ಹೆಚ್ಚು ಆಕರ್ಷಕವಾಗಿ ಮತ್ತು ಆಳವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸುತ್ತಿದ್ದರು.
ಕಾಲ ಸರಿದಂತೆ ಕ್ರಮೇಣ,
ಪ್ರಗತಿಪರ ಚಿಂತನೆಗಳು, ಎಡಪಂಥೀಯ ಮಾರ್ಕ್ಸ್ ಧೋರಣೆಗಳು, ಅಂಬೇಡ್ಕರ್ ಚಿಂತನೆಯ ಬೆಳಕಲ್ಲಿ ಮೂಡಿದ ಜಾಗೃತ ಮನಸ್ಥಿತಿಗಳು ಭೈರಪ್ಪನವರ ಸಾಹಿತ್ಯವನ್ನು ಗ್ರಹಿಸುವ ರೀತಿ ಬದಲಾಯಿತು. ಅವರ ಸಾಹಿತ್ಯದಲ್ಲಿ ಬಲಪಂಥೀಯ ಧೋರಣೆಗಳು ಹೆಚ್ಚು ಮುನ್ನಲೆಯಲ್ಲಿ ಕಾಣತೊಡಗಿದವು.
ಇಲ್ಲಿ ಮುಖ್ಯವಾಗಿ ಸಾಹಿತ್ಯದ ಕಾಲ, ರೀತಿ ನೀತಿ, ಗ್ರಹಿಕೆಗಳಲ್ಲಿ ಆದ ಬದಲಾವಣೆಗಳನ್ನು ಗಮನಿಸಬೇಕು.
ತೊಂಬತ್ತರ ದಶಕದ ಮೊದಲು ಮತ್ತು ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರದ ಸಾಹಿತ್ಯದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು.
ಕೆಲವು ಉದಾಹರಣೆಗಳನ್ನು ಹೊರತುಪಡಿಸಿ ಭಾರತದ ಹಿಂದಿನ ಸಾಹಿತ್ಯ ಕೆಲವೇ ವರ್ಗಗಳ ಅಕ್ಷರ ಕಲಿತ ಜನರಿಂದ ಮಾತ್ರ ರಚಿಸಲ್ಪಡುತ್ತಿತ್ತು ಮತ್ತು ಅದು ಓದಲು ಬರುವ ಕೆಲವೇ ಜನರಿಗೆ ತಲುಪುತ್ತಿತ್ತು.
ಹೊಟ್ಟೆ ಬಟ್ಟೆಗೆ ಇಡೀ ಜೀವನ ಹೋರಾಟ ಮಾಡುವ ಸಮಯದಲ್ಲಿ ಸಾಹಿತ್ಯ ಯಾರಿಗೂ ಮಹತ್ವವೇ ಆಗಿರಲಿಲ್ಲ.
ಆದರೆ ಜಾಗತೀಕರಣದ ನಂತರ, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ, ಮಾಹಿತಿ ಮತ್ತು ಸಂಪರ್ಕ ಕ್ಷೇತ್ರದ ಕ್ರಾಂತಿಯಿಂದ, ಕಡ್ಡಾಯ ಹಾಗು ಎಲ್ಲರಿಗೂ ಉಚಿತ ಶಿಕ್ಷಣದ ಕ್ರಮದಿಂದ ಸಾಹಿತ್ಯ ಬಹುತೇಕ ಸರ್ವವ್ಯಾಪಿಯಾಯಿತು. ಬರೆಯಲು ಆಗದಿದ್ದರೂ ಕನಿಷ್ಠ ಓದುವ ಬಹುದೊಡ್ಡ ವರ್ಗ ಸೃಷ್ಟಿಯಾಯಿತು.
ಅಷ್ಟೇ ಅಲ್ಲದೆ ಭಾಷಾ ಚಳವಳಿ, ರೈತ ಹೋರಾಟ, ದಲಿತ, ಬಂಡಾಯ, ಮಹಿಳಾ ಸ್ವಾತಂತ್ರ್ಯ, ಆರ್ಥಿಕ ಪರಿಸ್ಥಿತಿಯ ಒಂದಷ್ಟು ಒಳ್ಳೆಯ ಬೆಳವಣಿಗೆ ಎಲ್ಲವೂ ಸೇರಿ ಸಾಮಾನ್ಯ ಜನರು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಗಳು ನಿರ್ಮಾಣವಾದವು.
ಈ ಹಂತದಲ್ಲಿ ಎಡಪಂಥ ಮತ್ತು ಬಲಪಂಥಗಳೆಂಬ ಎರಡು ವಿಚಾರಗಳು ಹೆಚ್ಚು ಚರ್ಚೆಗೆ ಒಳಪಟ್ಟು ಸಮಾಜದ ಎಲ್ಲಾ ವರ್ಗ ಮತ್ತು ಕ್ಷೇತ್ರಗಳನ್ನು ಮಾನಸಿಕವಾಗಿ ಬೇರ್ಪಡಿಸಿದವು.
ಕಾಂಗ್ರೇಸ್ – ಕಮ್ಯುನಿಸ್ಟ್ – ಅಂಬೇಡ್ಕರ್ ಚಿಂತನೆಯ ಒಂದು ವರ್ಗ ಮತ್ತು ಸಂಘ ಪರಿವಾರದ ಬೆಂಬಲಿತ ಭಾರತೀಯ ಜನತಾ ಪಕ್ಷ ಎಂಬ ಇನ್ನೊಂದು ವರ್ಗ.
ಪತ್ರಿಕೆ, ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ಪಕ್ಷಗಳು ಇದಕ್ಕೆ ಸಾಕಷ್ಟು ತುಪ್ಪ ಸುರಿದು ಬೆಂಕಿ ಹಚ್ಚಿಯೇ ಬಿಟ್ಟವು.
ಈ ಬೆಂಕಿಯ ಜ್ವಾಲೆಯಲ್ಲಿ ಭೈರಪ್ಪನವರ ಸಾಹಿತ್ಯವನ್ನು ನೋಡಬೇಕಿದೆ.
ಮೊದಲಿಗೆ ಒಬ್ಬ ಸಾಹಿತಿಯಾಗಿ ಮಾತ್ರ ಗುರುತಿಸಿಕೊಂಡಿದ್ದ ಭೈರಪ್ಪನವರು ನಂತರ ನೇರವಾಗಿಯೇ ಬಲಪಂಥೀಯರ ಧೋರಣೆಗಳನ್ನು ಬೆಂಬಲಿಸಿದರು. ನೆಹರು ಗಾಂಧಿ ಪರಿವಾರದ ಪ್ರಬಲ ವಿರೋಧಿಯಾದರು. ಬಹಿರಂಗವಾಗಿ ಹಿಂದುತ್ವದ ಪ್ರಬಲ ಪ್ರತಿಪಾದಕರಾದರು. ಇಸ್ಲಾಂ ಧರ್ಮದ ಆಕ್ರಮಣವನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಸಹಜವಾಗಿಯೇ ಆ ನಂತರ ಅವರ ಹಳೆಯ ಮತ್ತು ಹೊಸ ಎಲ್ಲಾ ಬರಹಗಳು ಅದೇ ದೃಷ್ಟಿಕೋನದಿಂದ ಓದಿಸಿಕೊಳ್ಳತೊಡಗಿದವು.
ಅಲ್ಲಿಗೆ ಬಲಪಂಥದ ಸಮರ್ಥಕರು ಅವರನ್ನು ಕನ್ನಡದ ಅದ್ಭುತ ಶ್ರೇಷ್ಠ ಬರಹಗಾರರು ಎಂತಲೂ, ಎಡಪಂಥೀಯರು ಮಾನವ ವಿರೋಧಿ, ಹಿಂಸೆ ರಕ್ತಪಾತಗಳನ್ನು ಅಕ್ಷರಗಳಲ್ಲಿ ಪ್ರಚೋದಿಸುವ ಸಾಹಿತಿ ಎಂತಲೂ ಗುರುತಿಸತೊಡಗಿದರು.
ಒಮ್ಮೆ ಈ ಹಂತ ತಲುಪಿದ ಮೇಲೆ ಸಾಹಿತ್ಯ ಎಂಬುದು ಎರಡನೇ ದರ್ಜೆಗೆ ಇಳಿದು ಆ ವ್ಯಕ್ತಿಯ ಸಿದ್ದಾಂತಗಳೇ ಮಹತ್ವ ಪಡೆಯುತ್ತವೆ. ಇದು ಸಾಹಿತ್ಯವೂ ಸೇರಿ ಎಲ್ಲಾ ಕ್ಷೇತ್ರಗಳ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ.
ಸಾಮಾನ್ಯವಾಗಿ ಸಾಹಿತ್ಯ ಪ್ರಾಕೃತಿಕ, ಕಾಲ್ಪನಿಕ, ರಮ್ಯತೆ, ಭಾವುಕತೆಯ ಜೊತೆಗೆ ಜೀವಪರ ನಿಲುವುಗಳನ್ನು ಬೆಂಬಲಿಸುತ್ತಾ, ಜೀವ ವಿರೋಧಿ ವಿಚಾರಗಳನ್ನು ಖಂಡಿಸುತ್ತದೆ. ಆದರೆ ಒಮ್ಮೆ ಮನಸ್ಸುಗಳು ಅನುಮಾನದ ಹುತ್ತದೊಳಗೆ ಸೇರಿಕೊಂಡರೆ ಮುಂದಿನ ಎಲ್ಲವೂ ನಿರ್ಧಾರವಾಗುವುದು ಆ ಸಂದರ್ಭದ ನಿಮ್ಮ ಅನುಕೂಲ ಅಥವಾ ಅನಾನುಕೂಲ ವಾತಾವರಣ ಮಾತ್ರ.
ಒಬ್ಬ ಕಾದಂಬರಿಕಾರ ತನ್ನ ಭಾವನೆಗಳನ್ನು ಕಲ್ಪನಾ ರೂಪದಲ್ಲಿ ಯಾವ ರೀತಿ ಬೇಕಾದರೂ ಪ್ರಕಟಿಸಬಹುದು. ಅದು ಅವರಿಗಿರುವ ಸ್ವಾತಂತ್ರ್ಯ. ಅದು ಒಳ್ಳೆಯದೋ, ಕೆಟ್ಟದ್ದೋ, ವಿಕೃತವೋ ಆತನಿಗೆ ಬಿಟ್ಟದ್ದು. ಆದರೆ ಅದನ್ನು ಓದಿ ಆ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸುವ ಸ್ವಾತಂತ್ರ್ಯ ಓದುಗರಿಗೂ ಇದೆ. ಇದು ಭೈರಪ್ಪನವರೂ ಸೇರಿ ಎಲ್ಲರಿಗೂ ಅನ್ವಯಿಸುತ್ತದೆ.
ಇತ್ತೀಚೆಗೆ ಕೆಲವು ಬಲಪಂಥೀಯ ವಿಚಾರವಾದಿಗಳ ಬಳಿ ಮಾತನಾಡಿದಾಗ ಅವರು ಹೇಳಿದ್ದು ಎಡಪಂಥೀಯರು ಹಿಂಸಾವಾದಿಗಳು, ತುಂಬಾ ಕ್ರೂರಿಗಳು, ರಕ್ತಪೀಪಾಸುಗಳು ಎಂದು ಇತಿಹಾಸದ ಕೆಲವು ಘಟನೆಗಳನ್ನು ಉದಾಹರಿಸಿದರು. ಅದೇ ರೀತಿ ಎಡಪಂಥೀಯರ ಬಳಿ ಮಾತನಾಡಿದಾಗ ಉದಾಹರಣೆ ಮತ್ತು ಸಾಕ್ಷ್ಯಗಳ ಸಮೇತ ಬಲಪಂಥೀಯರ ಅಮಾನವೀಯ ಕೃತ್ಯಗಳನ್ನು ಹೇಳಿದರು.
ಅಂದರೆ ಎಲ್ಲೋ ನಮ್ಮ ನಡುವೆ ಸಂಪರ್ಕದ ಕೊರತೆ ತುಂಬಾ ಇದೆ. ಸಂಪರ್ಕ ಕ್ರಾಂತಿ ತಾಂತ್ರಿಕವಾಗಿ ನಮ್ಮನ್ನು ಒಂದು ಗೂಡಿಸಿದರೆ ಮಾನಸಿಕವಾಗಿ ನಮ್ಮನ್ನು ದೂರ ಮಾಡುತ್ತಿದೆ.
ಸಾಹಿತ್ಯ ಕೇವಲ ಸಾಹಿತ್ಯವಷ್ಟೇ, ಅದಕ್ಕೆ ಯಾವುದೇ ಪಂಥಗಳ ಹಂಗಿಲ್ಲ ಎಂದು ಭೈರಪ್ಪನವರ ಹೇಳುತ್ತಾರೆ. ಆದರೆ ಸಾಮಾಜಿಕ ಹೊಣೆಗಾರಿಕೆ ಇಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದು ಅವರ ವಿರೋಧಿಗಳು ಹೇಳುತ್ತಾರೆ.
ಈ ಎಲ್ಲಾ ವಿಚಾರ ಒತ್ತಡ ಗೊಂದಲಗಳ ಮಧ್ಯೆ ನಾವು ನಮ್ಮ ಮೆದುಳಿನ ಸಾಮರ್ಥ್ಯದ ಆಧಾರದ ಮೇಲೆ ಸಾಹಿತ್ಯ, ಸಮಾಜ ಸೇರಿ ಎಲ್ಲವನ್ನೂ ಗ್ರಹಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಅದು ಒಂದಷ್ಟು ಜೀವಪರವಾಗಿರಲಿ ಎಂದು ಆಶಿಸುತ್ತಾ……
ಬದುಕುತ್ತಾ ಹೋಗಿ,
ಬದುಕೇ ನಿರ್ಧರಿಸುತ್ತದೆ
ನೀವು ಯಾರೆಂದು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068……