ರೈತರು ದೇಶದ ಬೆನ್ನೆಲುಬಾದರೆ ಸಹಕಾರ ಸಂಘಗಳು ರೈತರ ಬೆನ್ನೆಲುಬು: ಸಚಿವ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

ರೈತರು ದೇಶದ ಬೆನ್ನೆಲುಬಾದರೆ ಸಹಕಾರ ಸಂಘಗಳು ರೈತರ ಬೆನ್ನೆಲುಬು: ಸಚಿವ ಮುನಿಯಪ್ಪ

ದೇವನಹಳ್ಳಿ ಬೆಂ.ಗ್ರಾಂ.ಜಿಲ್ಲೆ, ಸೆಪ್ಟೆಂಬರ್ 24 :

ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ, ಔಷಧಿ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸುತ್ತಾ ರೈತರ ಬೆನ್ನೆಲುಬಿಗೆ ಸಹಕಾರ ಸಂಘಗಳು ನಿಂತಿದ್ದು ಸಹಕಾರ ಸಂಘಗಳು ರೈತರ ಬೆನ್ನೆಲುಬು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ಇಂದು ದೇವನಹಳ್ಳಿ ಟೌನ್ ನಲ್ಲಿ ದೇವನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು

ಸಹಕಾರ ಸಂಘಗಳು ರೈತರಿಗೆ ಗೊಬ್ಬರ, ಔಷಧಿ, ಸಾಲಸೌಲಭ್ಯ, ವಿವಿಧ ಸವಲತ್ತುಗಳನ್ನು ಸಕಾಲದಲ್ಲಿ ನೀಡಿ ಅವರ ಅಭಿವೃದ್ಧಿಗೆ ಕಾರಣವಾಗಿದೆ. ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತಿದ್ದು ಸಹಕಾರ ಸಂಘಗಳು ಇನ್ನಷ್ಟು ಬೆಳೆಯಬೇಕು.

ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ಸರ್ಕಾರದಿಂದ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಬಹಳಷ್ಟು ಕೊಡುಗೆ ನೀಡುತ್ತಿದೆ. ಸಹಕಾರ ಸಂಘಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು.

ದೇವನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. ಇದರ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ  ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ  ಈ ಸಂಘವು ರೈತರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

​ಈ ಸಂಘದ ಏಳಿಗೆಯಲ್ಲಿ ಹಿಂದಿನ ಆಡಳಿತ ಮಂಡಳಿ, ಅಧ್ಯಕ್ಷರು, ಮತ್ತು ಸದಸ್ಯರ ಪಾತ್ರ ದೊಡ್ಡದು. ಮುಂದಿನ ದಿನಗಳಲ್ಲಿ ಕೂಡ ರೈತರು ಮತ್ತು ಸಾರ್ವಜನಿಕರು ಈ ಸಂಘದ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿನಂತಿಸಿದರು.

ಸಂಘದ ಅಧ್ಯಕ್ಷ  ಬೂದಿಗೆರೆ ಜಿ  ಮುನಿರಾಜು ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ  ಸಂಘದ ಉಪಾಧ್ಯಕ್ಷ ವೀರಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ ಮುನೇಗೌಡ, ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಆರ್ ಮುನೇಗೌಡ, ಉಪಾಧ್ಯಕ್ಷ ವೆಂಕಟೇಶ್, ದೇವನಹಳ್ಳಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ ,ಉಪಾಧ್ಯಕ್ಷ ಗುಟ್ಟಳ್ಳಿ ರವಿಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರುಗಳಾದ ಮಂಡಿಬೆಲೆ ರಾಜಣ್ಣ, ಕನ್ನಮಂಗಲ ಶ್ರೀರಾಮಣ್ಣ, ಕಾಮೇನಹಳ್ಳಿ ರಮೇಶ್ ,ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ನಿರ್ದೇಶಕ ಚಿಕ್ಕನಹಳ್ಳಿ ಸುಬ್ಬಣ್ಣ , ಬಮೂಲ್ ಮಾಜಿ ನಿರ್ದೇಶಕ ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೋರಮಂಗಲ ವೀರಪ್ಪ, ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು,  ಸಂಘದ ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯಿತಿಗಳು ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ

ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ವತಿಯಿಂದ ನಿರ್ಮಿಸಿರುವ ನೂತನ ವಾಣಿಜ್ಯ ಅಂಗಡಿ ಮಳಿಗೆಗಳ ಸಂಕೀರ್ಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು ಪಂಚಾಯಿತಿಗಳಿಗೆ ಆದಾಯ ಬರುವಂತಹ ಅತ್ಯುತ್ತಮ ಕೆಲಸ ಮಾಡಿದ್ದೀರಿ, ಆದಾಯದ ಸದ್ಬಳಕೆಯಿಂದ ಗ್ರಾಮಗಳಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಪಂಚಾಯಿತಿ ವ್ಯವಸ್ಥೆ, ನರೇಗಾ ಯೋಜನೆ ಜಾರಿಗೆ ತರಲಾಯಿತು. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹಣದ ಸದುಪಯೋಗ ಪಡೆದುಕೊಂಡರೆ ಗ್ರಾಮ, ಜಿಲ್ಲೆ, ರಾಜ್ಯ ದೇಶದ ಅಭಿವೃದ್ಧಿಗೆ ಪೂರಕ. ಪಂಚಾಯಿತಿಗಳಿಗೆ ಬರುವ ಹಣ ಸದ್ಬಳಕೆ ಆಗಬೇಕು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ ಎಂದರು.

ರೈತರು ಕೃಷಿ ಚಟುವಟಿಕೆಗಳೊಂದಿಗೆ ಹಾಲು ಉತ್ಪಾದನೆ, ರೇಷ್ಮೆ ಉತ್ಪಾದನೆಯಲ್ಲಿ ತೊಡಗಬೇಕು. ಹಾಲು ಉತ್ಪಾದನೆಯಿಂದ 15 ದಿನಕ್ಕೆ ಹಣ ಸಿಗುತ್ತದೆ, ರೇಷ್ಮೆ ಉತ್ಪಾದನೆಯಲ್ಲಿ ತಿಂಗಳಿಗೆ ಹಣ ಸಿಗುತ್ತದೆ. ಇವೆರಡೂ ಕೂಡ ಲಾಭದಾಯಕ ಕೆಲಸಗಳು ಎಂದರು.

ವಿಶ್ವನಾಥಪುರ ಪಂಚಾಯಿತಿ ವ್ಯಾಪ್ತಿಯಲ್ಲಿ 9 ನೂತನ ವಾಣಿಜ್ಯ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು 98 ಲಕ್ಷ ವೆಚ್ಚ ಭರಿಸಲಾಗಿದೆ. ಈ ಕಟ್ಟಡಗಳಿಂದ ತಿಂಗಳಿಗೆ ಒಂದು ಲಕ್ಷ ಬಾಡಿಗೆ ಬರುವ ನಿರೀಕ್ಷೆ ಇದೆ ಎಂದು ಇಒ ಶ್ರೀನಾಥ್ ಗೌಡ ಮಾಹಿತಿ ನೀಡಿದರು.

ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ಹತ್ತು ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೈ ಮಾಸ್ಟ್ ದೀಪವನ್ನು ಸಚಿವರು ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ಎನ್ ಅನುರಾಧ, ಬಯಪ ಅಧ್ಯಕ್ಷ ಶಾಂತಕುಮಾರ್, ಜಿ ಪಂ ಮಾಜಿ ಸದಸ್ಯ ಮಂಜುನಾಥ್, ಇಒ ಶ್ರೀನಾಥ್ ಗೌಡ, ತಹಶೀಲ್ದಾರ್ ಅನಿಲ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.