ಜನವರಿ 15 ರಿಂದ 20 ರವರೆಗೆ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ
ವಿಜಯ ದರ್ಪಣ ನ್ಯೂಸ್…..
ಜನವರಿ 15 ರಿಂದ 20 ರವರೆಗೆ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ

25 ಲಕ್ಷ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ
ತಾಂಡವಪುರ ಜನವರಿ 12 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸುತ್ತೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಉಳ್ಳ ಸುತ್ತೂರು ಜಾತ್ರಾ ಮಹೋತ್ಸವ ಇದೆ ತಿಂಗಳು ಜನವರಿ 15 ರಿಂದ 20 ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದ್ದು ಈ ಜಾತ್ರಾ ಮಹೋತ್ಸವ ಸಾರ್ವಜನಿಕರಿಗೆ ಬರುವಂತ ಭಕ್ತಾದಿಗಳಿಗೆ ಜಾಗೃತಿ ಮೂಡಿಸುವ ಜಾತ್ರೆ ಆಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಮಂಜುನಾಥ್ ಹಾಗೂ ಉದಯಕುಮಾರ್ ಶಿವಕುಮಾರ್ ದಾಸೋಹ ಸಮಿತಿಯ ಕಾರ್ಯದರ್ಶಿ ಬೊಕ್ಕಳ್ಳಿ ಪ್ರೊಫೆಸರ್ ಸುಬ್ಬಪ್ಪ ರವರು ಸುದ್ದಿಗಾರರಿಗೆ ಜಾತ್ರೆ ಮಹೋತ್ಸವ ಕುರಿತು ವಿವರ ನೀಡಿದರು
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸುತ್ತೂರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜ.15ರಿಂದ 20ರವರೆಗೆ ಶ್ರೀಕ್ಷೇತ್ರ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದ್ದು
ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಮೈಸೂರು ಭಾಗದ ಅತಿದೊಡ್ಡ ಜಾತ್ರಾ ಮಹೋತ್ಸವ ಆಗಿದ್ದು, ಐದು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ
ಕಾರ್ಯಕ್ರಮ ವಿವರ:
ಜ.16ರಂದು ಸಾಮೂಹಿಕ ವಿವಾಹ ಮತ್ತು ಹಾಲ್ಟರವಿ ಉತ್ಸವ, 17ರಂದು ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, 18ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷದೀಪೋತ್ಸವ, 19ರಂದು ತೆಪ್ಪೋತ್ಸವ ಹಾಗೂ 20ರಂದು ಅನ್ನಬ್ರಹ್ಮೋತ್ಸವ ನಡೆಯಲಿವೆ. ಇವುಗಳೊಟ್ಟಿಗೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.
* ಹಲವು ಸ್ಪರ್ಧೆಗಳು :
ಜನವರಿ 15 ಗುರುವಾರದಂದು ಗ್ರಾಮೀಣ ಕಲೆ ರಂಗೋಲಿ ಸ್ಪರ್ಧೆ ಏರ್ಪಡಿಸಿದೆ. 15 ಮತ್ತು 16ರಿಂದ ಮೂರು ದಿನ ಸೋಬಾನೆಪದ ಸ್ಪರ್ಧೆ ಆಯೋಜಿಸಲಾಗಿದ್ದು, 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ವಿಶೇಷವಾಗಿ ಈ ವರ್ಷ ಮಹಿಳೆಯರಿಗೆ 18ರಂದು ರಾಗಿ ಬೀಸುವ ಸ್ಪರ್ಧೆ ಏರ್ಪಡಿಸಲಾಗಿದೆ.
* ಭಜನಾ ಮೇಳ :
32ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆಗಳನ್ನು ಈ ಬಾರಿ ಏರ್ಪಡಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 750ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ.
* ವಸ್ತುಪ್ರದರ್ಶನ :
ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರಲಿದೆ. ಈ ವರ್ಷ ವಿಶೇಷಾವಾಗಿ ಕೃತಕ ಬುದ್ಧಿಮತ್ತೆ ಕುರಿತು ಮಾಹಿತಿ ನೀಡಲಾಗುವುದು, ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ದಪಡಿಸಿದ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನವೂ ಇರುತ್ತದೆ. ಎಂದರು

* ಕೃಷಿಯಲ್ಲಿ ನಾವಿನ್ಯತೆ :
ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಕೃಷಿ ವಿಜ್ಞಾನ ಕೇಂದ್ರ ಸಂಶೋಧನೆ ಆಧಾರಿತ ಜ್ಞಾನ ಮತ್ತು ಸಲಹೆ ನೀಡುತ್ತದೆ. ಜೆಎಸ್‌ಎಸ್-ಸ್ಟೆಪ್ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪರಿಣತಿಯನ್ನು ಹಂಚಿಕೊಳ್ಳುತ್ತದೆ. ಮೇಳದ ಅವಧಿಯಲ್ಲಿ ಸಂವಾದಾತ್ಮಕ ಸತ್ರಗಳು, ಉತ್ಪನ್ನ ಪ್ರದರ್ಶನಗಳು ಏರ್ಪಡಿಸಲಿದ್ದು, ತಜ್ಞರು, ವಿಜ್ಞಾನಿಗಳು, ಸ್ಟಾರ್ಟ್ ಅಪ್ ಸಂಸ್ಥೆಗಳ ಸ್ಥಾಪಕರು. ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ವ್ಯಾಪಾರಿಗಳು ತಮ್ಮ ಅನುಭವ ಮತ್ತು ಜ್ಞಾನ ಹಂಚಿಕೊಳ್ಳಲಿದ್ದಾರೆ.
* ಕೃಷಿಮೇಳ :
ಕೃಷಿ ಕ್ಷೇತ್ರದಲ್ಲಿನ ಪ್ರಮುಖ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳನ್ನು ಹಮ್ಮಿಕೊಳ್ಳಲಾಗಿದೆ. 2026 ಅಂತಾರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಘೋಷಣೆ ಮಾಡಿರುವುದರ ಪ್ರಯುಕ್ತ ‘ಮುಂದಿನ ಪೀಳಿಗೆಯ ಕೃಷಿಯಲ್ಲಿ ಮಹಿಳೆಯ ಪಾತ್ರ’ ಶೀರ್ಷಿಕೆಯಡಿ ಈ ವರ್ಷ ಕೃಷಿಮೇಳವನ್ನು ಆಯೋಜಿಸಲಾಗುತ್ತಿದೆ.
ಮೈಸೂರಿನ ಪ್ರಾದೇಶಿಕ ಬೆಳೆಗಾಳದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ಹಾಗೂ ಈರನಗೆರೆ ಬದನೆ ಬೆಳೆಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಬಳ್ಳಿ, ಸಸಿಗಳ ಲೋಕ, ಕಸಿ ಟಮ್ಯಾಟೋ, ಬದನೆ ಬೆಳೆ ಹಾಗೂ ವೈವಿಧ್ಯಮಯ ಪುಪ್ಪ ಪ್ರದರ್ಶನವನ್ನು ಪ್ರಾತ್ಯಕ್ಷಿಕೆ ಸಹಿತ ಏರ್ಪಡಿಸಲಾಗಿದೆ. ಒಂದು ಎಕರೆ ‘ಕೃಷಿ ಬ್ರಹ್ಮಾಂಡ’, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆಕೃಷಿ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕೃಷಿ ಅಭಿವೃದ್ಧಿ ಇಲಾಖೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
* ಕೃಷಿ ವಿಚಾರಸಂಕಿರಣ :
ಜ.18 ಭಾನುವಾರ “ಕೃಷಿಯಲ್ಲಿ ಮಹಿಳೆ : ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ” ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ. ಮಹಿಳೆಯರಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.
* ಸಾಮೂಹಿಕ ವಿವಾಹ :
ಜ.16 ಶುಕ್ರವಾರ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿಗಳವರು, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಸಹ ಪಾಲ್ಗೊಳ್ಳಲಿದ್ದಾರೆ. ವಿವಾಹಗಳ ನೋಂದಣಿಗೆ ವ್ಯವಸ್ಥೆ ಮಾಡಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್‌ಗಳನ್ನು ನೀಡಲಾಗುತ್ತದೆ, ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 3360ಕ್ಕೂ ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ಇಲ್ಲಿಯವರೆಗೆ 160ಕ್ಕೂ ಹೆಚ್ಚು ಜೋಡಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಇನ್ನು ಹತ್ತಕ್ಕೂ ಹೆಚ್ಚು ಜೋಡಿ ಬರುವ ನಿರೀಕ್ಷೆ ಇದೆ ಎಂದು ವಿವರ ನೀಡಿದರು
* ಚಿತ್ರಕಲಾ ಸ್ಪರ್ಧೆ:
ಜ.18ರ ಭಾನುವಾರ 1ರಿಂದ 10ನೇ ತರಗತಿಯ ಜೆಎಸ್ಎಸ್ ಸಂಸ್ಥೆಗಳ ಹಾಗೂ ಇತರೆ ಶಾಲೆಗಳ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯಗಳ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
* ಗಾಳಿಪಟ ಸ್ಪರ್ಧೆ :
ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿದೆ.
* ಕಲಾವೈಭವ :
ರಾಜ್ಯ ಹಾಗೂ ಹೊರರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ಬಿಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
* ಕುಸ್ತಿ ಪಂದ್ಯಾವಳಿ :
ಜ.19ರ ಸೋಮವಾರ ರಾಷ್ಟ್ರಮಟ್ಟದ ನಾಡಕುಸ್ತಿ ಪಂದ್ಯ ನಡೆಯಲಿವೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ’ ಪ್ರಶಸ್ತಿ ಹಾಗೂ ಸ್ಥಳೀಯ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ’ ಪ್ರಶಸ್ತಿಗಳನ್ನು ನೀಡಲಾಗುವುದು. ಈ ವರ್ಷದಿಂದ ವಿಶೇಷವಾಗಿ ‘ಸುತ್ತೂರು ಕಿಶೋರ’ ಪ್ರಶಸ್ತಿಯನ್ನು ನಂಜನಗೂಡು ತಾಲ್ಲೂಕಿನವರಿಗೆ ಕೊಡಲಾಗುವುದು.
* ಆರೋಗ್ಯ ತಪಾಸಣಾ ಶಿಬಿರ :
ಜೆಎಸ್‌ಎಸ್ ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಜಾತ್ರಾ ಮಹೋತ್ಸವದ ಎಲ್ಲಾ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
* ದೋಣಿ ವಿಹಾರ : ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿ ದೋಣಿ ವಿಹಾರವನ್ನು ಏರ್ಪಡಿಸಲಾಗಿದೆ.
ಮಲ್ಲಕಂಬ ಪ್ರದರ್ಶನ :
ಸುತ್ತೂರಿನ ಉಚಿತ ವಸತಿ ಶಾಲೆಯ ಮಲ್ಲಕಂಬ ತಂಡದಿಂದ ನಿತ್ಯವು ಶಾಲಾ ಆವರಣದಲ್ಲಿ ಮಲ್ಲಕಂಬ ಪ್ರದರ್ಶನವಿರುತ್ತದೆ. ಮಲ್ಲಕಂಬದ ಮೇಲೆ ವಿವಿಧ ಯೋಗಾಸದ ಭಂಗಿಗಳ ಪ್ರದರ್ಶನ, ಹೆಣ್ಣು ಮಕ್ಕಳು ಹಗ್ಗದ ಮೇಲೆ ಕಸರತ್ತುಗಳನ್ನು ಪ್ರದರ್ಶನ ಮಾಡಲಿದ್ದಾರೆ. ಮಲ್ಲಕಂಬ ಪಟು ಪಿರಮಿಡ್ ನಿರ್ಮಿಸಿ ನೋಡುಗರನ್ನು ಅಚ್ಚರಿಗೊಳಿಸುತ್ತಾರೆ.
ದೇಸಿ ಆಟಗಳು :
ಜ.17ರ ಶನಿವಾರ ಗ್ರಾಮೀಣ ಪುರುಷರಿಗೆ ಮತ್ತು 18ರ ಭಾನುವಾರ ಗ್ರಾಮೀಣ ಮಹಿಳೆಯರಿಗೆ ಹಾಗೂ ಜೆಎಸ್ಎಸ್ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 17ರ ಶನಿವಾರದಿಂದ 19ರ ಸೋಮವಾರದವರೆಗೆ ಸ್ಪರ್ಧೆಗಳು ನಡೆಯಲಿವೆ.
ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿಮನೆ, ಆಣೆಕಲ್ಲು, ಚದುರಂಗ, ಬುಗುರಿ, ಚೌಕಬಾರ, 50 ಕೆಜಿ ಭಾರದ ಚೀಲ ಹೊತ್ತುಕೊಂಡು ಓಡುವುದು, ಕಲ್ಲುಗುಂಡು ಎತ್ತುವುದು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವುದು ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
* 55ನೇ ದನಗಳ ಪರಿಶೆ :
ದನಗಳ ಜಾತ್ರೆಯನ್ನು ಕಳೆದ 54 ವರ್ಷಗಳಿಂದಲೂ ಏರ್ಪಡಿಸಲಾಗುತ್ತಿದೆ. ರೈತಬಾಂಧವರು ಎತ್ತು, ಹಸು, ಹೋರಿಗಳನ್ನು ಕೊಂಡುಕೊಳ್ಳಲು ಹಾಗೂ ಮಾರಾಟ ಮಾಡಲು ಅವಕಾಶವಿರುತ್ತದೆ. ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು. ಚುಚ್ಚುಮದ್ದು ಮತ್ತು ಜಂತುಹುಳು ನಿವಾರಕ ಔಷಧಿಯನ್ನು ಉಚಿತವಾಗಿ ನೀಡಲಾಗುತ್ತದೆ. ಉತ್ತಮ ರಾಸುಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.
* ತೆಪ್ಪೋತ್ಸವ :
ಈ ವರ್ಷದ ಜಾತ್ರೆಯಲ್ಲಿ ವಿಶೇಷವಾದ ನೂತನ ತೆಪ್ಪವನ್ನು ಸಿದ್ಧಪಡಿಸಲಾಗಿದೆ. ತೆಪ್ಪದ ಸುತ್ತಲೂ 16 ನಂದಿಗಳನ್ನು ಸ್ಥಾಪಿಸಲಾಗಿದೆ. ಆಕರ್ಷಕ ವಿನ್ಯಾಸದ 8 ಕಂಬಗಳು ಹಾಗೂ ಚಿತ್ರಗಳನ್ನು ಒಳಗೊಂಡ ಭವ್ಯವಾದ ಮಂಟಪವಿದೆ. ಮೋಟಾರ್ ಚಾಲಿತ ಈ ತೆಪ್ಪಕ್ಕೆ ವಿಶೇಷವಾದ ದೀಪಾಲಂಕಾರವಿದೆ. ಬಾಣಬಿರುಸುಗಳ ಹಿನ್ನೆಲೆಯಲ್ಲಿ ತೆಪ್ಪೋತ್ಸವವು ನೋಡುಗರ ಕಣ್ಮನಸೆಳೆಯಲಿದೆ. ಎಂದು ಮಂಜುನಾಥ್ ರವರು ವಿವರಿಸಿದರು
ಕಪಿಲಾರತಿ :
ಜ.19ರ ಸೋಮವಾರ ತೆಪ್ಪೋತ್ಸವದಂದು ಕಪಿಲಾರತಿ ಏರ್ಪಡಿಸಲಾಗಿದೆ.
* ಸಾಂಸ್ಕೃತಿಕ ಮೇಳ :
ಜೆಎಸ್‌ಎಸ್ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಭರತನಾಟ್ಯ ಸಾಮೂಹಿಕ ನೃತ್ಯ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆ ಮುಂತಾದ ಸುಮಾರು 400ಕ್ಕೂ ಹೆಚ್ಚು ಕಾರ್ಯಕ್ರಮಗಳಿರುತ್ತವೆ.
* ಸಾಂಸ್ಕೃತಿಕ ಕಾರ್ಯಕ್ರಮಗಳು : ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತವೆ. ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ಪ್ರತಿದಿನ ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ವಸ್ತುಪ್ರದರ್ಶನ ಆವರಣದಲ್ಲಿ ಪ್ರತಿದಿನ ಸಂಜೆ 7ರಿಂದ 9ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹೊರಗಿನ ಕಲಾವಿದರು ನೀಡುತ್ತಾರೆ.
ಕಲಾತಂಡಗಳಿಂದ ಪ್ರದರ್ಶನ :
ರಾಜ್ಯದ ವಿವಿಧ ಕಲಾತಂಡಗಳ ವರ್ಣರಂಜಿತ ಕಲಾಪ್ರದರ್ಶನಗಳು. ಜಾತ್ರೆಯ ಮೊದಲ ದಿನದಿಂದ ಕೊನೆಯವರೆಗೂ ಇರುತ್ತವೆ.

* ರಸಪ್ರಶ್ನೆ ಸ್ಪರ್ಧೆ :
16 ಶುಕ್ರವಾರದಂದು ಹನ್ನೆರಡನೆಯ ಶತಮಾನದ ಶರಣ-ಶರಣೆಯರು ಹಾಗೂ ವಚನಗಳು – ವಿಷಯ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ.
ಪ್ರಸಾದ ವ್ಯವಸ್ಥೆ : ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತಾದಿಗಳಿಗೆ ಪ್ರತಿನಿತ್ಯವೂ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ.
* ಪ್ರಭಾತ್ ಪೇರಿ :
ಜ.15 ರಿಂದ 20 ರವರೆಗೆ ಪ್ರತಿದಿನ ಬೆಳಗ್ಗೆ ಮೇಗಳಾಪುರ-ಮಾಧವಗೆರೆ, ಸುತ್ತೂರು, ಕೀಳನಪುರ, ಹದಿನಾರು, ಹೊಸಕೋಟೆ ಮತ್ತು ಡಣನಾಯಕಪುರ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ಇರುತ್ತದೆ. ನಂತರ ಒಬ್ಬ ಶ್ರೀಗಳು ಧ್ವಜಾರೋಹಣ ನೆರವೇರಿಸುತ್ತಾರೆ. ಮತ್ತೊಬ್ಬರು ಧರ್ಮಸಂದೇಶ ನೀಡುತ್ತಾರೆ.
* ಲಿಂಗದೀಕ್ಷೆ:
ಶಿವದೀಕ್ಷೆ – ಲಿಂಗದೀಕ್ಷೆ ಪಡೆಯಲಿಚ್ಛಿಸುವವರು ಜ.16ರ ಶುಕ್ರವಾರ ಸಂಜೆಯೊಳಗೆ ಶ್ರೀಕ್ಷೇತ್ರದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಈ ಬಾರಿಯ ಜಾತ್ರೆ ಮಹೋತ್ಸವದಲ್ಲಿ ಆರೋಗ್ಯ ಕೃಷಿ ಕಲೆ ನಾಡಕೃಸ್ತಿ ಮಹಿಳೆಯರಿಗೆ ವಿಶೇಷ ಜಾಗೃತಿ ಸೇರಿದಂತೆ ನಂಜನಗೂಡು ರಸಬಾಳೆ ಮೈಸೂರು ವೀಳ್ಯದೆಲೆ ಸೇರಿದಂತೆ ವಿವಿಧ ದೇಶ ತಳಿಗಳಿಗೆ ಹೆಚ್ಚು ಉತ್ತು ನೀಡಲಾಗಿದ್ದು ಈ ಜಾತ್ರಾ ಮಹೋತ್ಸವಕ್ಕೆ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು
